ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದ ಬೆನ್ನು ಹತ್ತಿ...

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶಾಲೆಯಲ್ಲಿ ಅಧ್ಯಾಪಕರು ಕೇಳುವ ಪ್ರಶ್ನೆಗಳಿಗೆಲ್ಲಾ ತಟ್ಟನೆ ಉತ್ತರ ಹೇಳುವ ಸಹನಾಳಿಗೆ ಪರೀಕ್ಷೆಯಲ್ಲಿ ಬರುವ ಅಂಕಗಳು ಮಾತ್ರ ಅಷ್ಟಕ್ಕಷ್ಟೇ! ಕಾರಣವಿಷ್ಟೇ, ಅದು ಪರೀಕ್ಷೆಯ ಬಗ್ಗೆ ಆಕೆಗಿರುವ ಭಯ! ಸಹನಾ ಚುರುಕಾದ, ಬುದ್ಧಿವಂತ ಹುಡುಗಿ. ಆದರೆ ಪರೀಕ್ಷೆಯ ಹೆಸರು ಕೇಳುತ್ತಿದ್ದಂತೆಯೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ "ಪರೀಕ್ಷೆಯ ಭಯ" ಆಕೆಯನ್ನು ಆವರಿಸಿಕೊಂಡು ಬಿಟ್ಟಿತ್ತು. ಇದು ಸಹನಾ ಒಬ್ಬಳ ಕಥೆಯಲ್ಲ. ಬಹಳಷ್ಟು ವಿದ್ಯಾರ್ಥಿಗಳಿಗೆ ಈ ರೀತಿಯಾದ ಪರೀಕ್ಷೆಯ ಭಯವಿರುತ್ತದೆ. ಎಷ್ಟೋ ಮಕ್ಕಳು ಕಷ್ಟಪಟ್ಟು ಓದಿಯೂ ಒಳ್ಳೆಯ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಓದುವಾಗ ಎಲ್ಲವೂ ನೆನಪಿನಲ್ಲಿರುತ್ತದೆ. ಪರೀಕ್ಷಾ ಕೇಂದ್ರಕ್ಕೆ ಹೋಗಿ, ಪ್ರಶ್ನಪತ್ರಿಕೆ ತೆರೆದೊಡನೆ ಶೂನ್ಯತೆ ಆವರಿಸಿಬಿಡುತ್ತದೆ. ಓದಿದ್ದೆಲ್ಲಾ ಸ್ಮೃತಿಪಟಲದಿಂದ ಅಳಿಸಿಹೋಗುತ್ತದೆ. ಎಷ್ಟೇ ಪ್ರಯತ್ನಪಟ್ಟು ಓದಿದ್ದರೂ ’ಹೆದರಿಕೆ’ ಎಂಬ ಭೂತ ಬೆನ್ನು ಬಿದ್ದಿದ್ದರೆ, ಏನೂ ಪ್ರಯೋಜನವಾಗುವುದಿಲ್ಲ.

ಕೆಲವು ಪೋಷಕರು ಮಕ್ಕಳ ಈ ಭಯವನ್ನು ತಿಳಿದಿರುತ್ತಾರೆ. ಮತ್ತೆ ಕೆಲವರು ಇದರ ಅರಿವಿಲ್ಲದೆಯೇ, ಮಕ್ಕಳನ್ನು ಮತ್ತಷ್ಟು ಓದುವಂತೆ ಒತ್ತಡವನ್ನು ಹೇರುತ್ತಾರೆ. ದಯವಿಟ್ಟು ಎಲ್ಲಾ ಪೋಷಕರು ಗಮನಿಸಿ. ಓದುವ ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಭಯದ ಛಾಯೆ ಇದೆಯೇ ಎಂಬುದನ್ನು ಮೊದಲು ಪತ್ತೆ ಹಚ್ಚಿ, ಅದಕ್ಕೆ ಸರಿಯಾದ ಪರಿಹಾರವನ್ನು ಸೂಚಿಸಿ ಬಗೆಹರಿಸಿ. ಈ ಪರೀಕ್ಷೆ ಎಂಬ ಭಯದ ಭೀತಿಯನ್ನು ಹೋಗಲಾಡಿಸುವುದು ಹೇಗೆ? ಇದಕ್ಕೆ ಉತ್ತರ ಪ್ರತಿಯೊಬ್ಬರಿಗೂ ನಿಮ್ಮ ನಿಮ್ಮಲ್ಲೇ ಇದೆ. ಯಾವುದೇ ವಿಷಯವಾಗಿರಲೀ, ಯಾವುದರ ಬಗ್ಗೆ ಅಂಜಿಕೆ ಇದೆಯೋ ಅದರ ಬಗ್ಗೆ ಭಯದ ಬದಲಿಗೆ ಪ್ರೀತಿಯನ್ನು, ಅಪೇಕ್ಷೆಯನ್ನು, ಬಯಕೆಯನ್ನು, ಹಂಬಲವನ್ನು ಬೆಳೆಸಿಕೊಳ್ಳಿ.

ಪರೀಕ್ಷೆಯಲ್ಲಿ ಬರೆಯುವಾಗ ಎಲ್ಲವೂ ಮರೆತು ಹೋಗುತ್ತದೆಂದರೆ, ಆ ರೀತಿ ಯೋಚಿಸುವುದನ್ನು ಬದಲಿಸಿಕೊಳ್ಳಿ. ಭಯದ ಬದಲು, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುತ್ತೇನೆಂದು ದಿನಕ್ಕೆ ಹಲವಾರು ಬಾರಿ ನಿಮಗೆ ನೀವೇ ಹೇಳಿಕೊಳ್ಳಿ. ಭಯವನ್ನು ಗೆಲ್ಲಿ! ಈ ತೆರನಾದ ಹೆದರಿಕೆಗಳೆಲ್ಲಾ ಮನಸ್ಸಿನಲ್ಲಿ ಪುನರಾವರ್ತಿತವಾಗಿ ಆಳವಾಗಿ ಬೇರೂರಿರುತ್ತವೆ. ಒಮ್ಮಿಂದೊಮ್ಮೆಗೆ ಹೋಗುವುದಿಲ್ಲ. ನಮಗೆ ತಿಳಿಯದಂತೆ ಭಯದ ಬೀಜವನ್ನು ಮನಸ್ಸಿನಲ್ಲಿ ನೆಟ್ಟು, ಅದನ್ನು ದಿನಕ್ಕೆ ಹಲವು ಬಾರಿ ನೆನಪಿನ ಪೋಷಣೆಯನ್ನಿತ್ತು ಬೆಳೆಸಿ, ಹೆಮ್ಮರವನ್ನಾಗಿಸಿಕೊಂಡಿರುತ್ತೇವೆ. ಹಾಗೆಯೇ ಈ ಭಯದ ವಿರುದ್ಧ ಹೋರಾಡುವ ಆತ್ಮಸ್ಥೈರ್ಯದ ಬೀಜವನ್ನು ಮನಸ್ಸಿನಲ್ಲಿ ನೆಟ್ಟು ಪೋಷಿಸಿದರೆ, ಯಶಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸತತ ಅಭ್ಯಾಸದಿಂದ ಏನನ್ನಾದರೂ ಸಾಧಿಸಲು ಸಾಧ್ಯ.

ಭಯದ ವಿರುದ್ಧ ಹೋರಾಡುವ ಮನಃಸ್ಥಿತಿಯನ್ನು ಮೊದಲು ಬೆಳೆಸಿಕೊಳ್ಳಬೇಕು. ನಮ್ಮ ನಂಬಿಕೆ ನಮ್ಮ ಸುಪ್ತ ಮನಸ್ಸಿನ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತದೆ. ಭಯವೇ ನಮ್ಮ ನಂಬಿಕೆಯಾದರೆ, ನಮ್ಮ ಮನಸ್ಸು ಅದನ್ನೇ ನಂಬುತ್ತದೆ ಹಾಗೂ ಅದನ್ನೇ ಕಾರ್ಯರೂಪಕ್ಕೆ ತರುತ್ತದೆ. ಭಯದ ಬದಲು ಯಶಸ್ಸಿನ ಮೇಲೆ ಭರವಸೆ ಇರಲಿ. ಆ ಭರವಸೆಯ ಬುನಾದಿಯ ಮೇಲೆ ಮನಸ್ಸು ಮಹಲನ್ನು ಕಟ್ಟುತ್ತದೆ. ನಮ್ಮ ಯೋಚನೆ ನಮ್ಮನ್ನು ವಿಚಲಿತಗೊಳಿಸುವಂತೆ ಬೇರೇನೂ ನಮ್ಮನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ. ನಮ್ಮ ಮನಸ್ಸಿಗೆ ನಾವು ಕೊಡುವ ಸಲಹೆಗಳಿಗೆ ಇರುವ ಬಲ, ಸಾಮರ್ಥ್ಯ ಬೇರೆಯವರು ಕೊಡುವ ಸಲಹೆಗಳಿಗೆ, ವಿವರಣೆಗಳಿಗೆ ಇರುವುದಿಲ್ಲ.

ಮಕ್ಕಳಿಗೆ ಈ ಪರೀಕ್ಷೆಯ ಭಯ ಇರುವಂತೆಯೇ ಬಹಳಷ್ಟು ಜನರಿಗೆ ವಿಧ ವಿಧವಾದ ಹೆದರಿಕೆಗಳಿರುತ್ತವೆ. ಇದಕ್ಕೆ ವಯಸ್ಸಿನ ಅಂತರವಿರುವುದಿಲ್ಲ. ಮಕ್ಕಳಿಂದ ಹಿಡಿದು ವಯೋವೃದ್ಧರವರೆವಿಗೂ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಭಯ ಇದ್ದೇ ಇರುತ್ತದೆ. ಕೆಲವರಿಗೆ ಲಿಫ್ಟ್‌ನಲ್ಲಿ ಹೋಗುವುದೆಂದರೆ ಭಯ. ಮತ್ತೆ ಕೆಲವರಿಗೆ ನೀರಿನ ಭಯ, ಕತ್ತಲೆಯ ಭಯ, ಎತ್ತರದ ಭಯ, ಬೆಳಕಿನ ಭಯ, ಬೇರೊಬ್ಬರ ಎದುರಿಗೆ ಮಾತನಾಡುವ ಭಯ! ಆಶ್ಚರ್ಯವಾಗುತ್ತಿದೆಯಲ್ಲವೇ? ಹೌದು, ಇವೆಲ್ಲಾ ಮನಸ್ಸಿನ ಮೂಲೆಯಲ್ಲಿ ಹುದುಗಿರುವ ನಕಾರಾತ್ಮಕ ಚಿಂತನೆಗಳು.

ನಮ್ಮ ಮನಸ್ಸು ಸ್ಮರಣಶಕ್ತಿಯ ದಾಸ್ತಾನು ಕೇಂದ್ರ. ನಾವು ಕೇಳಿದ್ದು, ನೋಡಿದ್ದು, ಮುಖ್ಯವಾಗಿ ಯೋಚಿಸುವುದು ಎಲ್ಲವೂ ಇಲ್ಲಿ ಶೇಖರಣೆಯಾಗುತ್ತಾ ಹೋಗುತ್ತದೆ. ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆಯೋ ಅದು ಕಾರ್ಯರೂಪಕ್ಕೆ ಬರುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದ ಮಾತೊಂದು ಇಲ್ಲಿ ಪ್ರಸ್ತುತ. ವ್ಯಕ್ತಿಯೊಬ್ಬ ಕೆಲಸದ ನಿಮಿತ್ತ ಪರವೂರಿಗೆ ಹೊರಟಿದ್ದ. ಬಟ್ಟೆ-ಬರೆಯ ಜೊತೆಗೆ ತಲೆನೋವು ಬಂದರೆ ಎಂದುಕೊಂಡು, ಕೆಲವು ಮಾತ್ರೆಗಳನ್ನೂ ಜೊತೆಗೆ ತೆಗೆದುಕೊಂಡ.

ಅಂದರೆ ಹೋಗುವಾಗಲೇ ತಲೆನೋವು ಅವನ ಮನಸ್ಸಿನಲ್ಲಿ ಅಡಿಯಿಟ್ಟಿತ್ತು. ಪರವೂರು ತಲುಪುವ ಮೊದಲೇ ತಲೆನೋವು ಅವನನ್ನು ಬಾಧಿಸಲು ಶುರುಮಾಡಿತ್ತು. ತಲೆನೋವಿನ ಬಗ್ಗೆ ಆತ ಚಿಂತಿಸದಿದ್ದರೆ ಅದು ಬರುತ್ತಿತ್ತೋ ಇಲ್ಲವೋ, ಆದರೆ ಅದನ್ನು ತಾನಾಗೇ ಬರಮಾಡಿಕೊಂಡ ವಿಷಯ ಮಾತ್ರ ಆತನಿಗೆ ತಿಳಿಯಲಿಲ್ಲ. ಹೀಗೆ ನಾವು ಹೆಚ್ಚಾಗಿ ಯೋಚಿಸುವ ವಿಷಯ ಕಾರ್ಯರೂಪಕ್ಕೆ ಬರುತ್ತದೆ. ಆದರೆ ಚಿಂತನೆಯಲ್ಲಿ ಇಬ್ಬಂದಿತನವಿರಬಾರದು.

ಭಯದಿಂದ, ಅರೆಬರೆ ಮನಸ್ಸಿನಿಂದ ಕೆಲಸ ಆಗುತ್ತದೋ ಇಲ್ಲವೋ ಎನ್ನುವ ಸಂಶಯದಿಂದ ಮಾಡಿದ ಕೆಲಸ ಖಂಡಿತಾ ಫಲ ಕೊಡುವುದಿಲ್ಲ. ಒಮ್ಮನಸ್ಸಿನಿಂದ ಯೋಚಿಸಿದರೆ ಮಾತ್ರ ಫಲ ಕಟ್ಟಿಟ್ಟ ಬುತ್ತಿ. ಏಕಾಗ್ರತೆಯಿಲ್ಲದೆ ಮಾಡಿದ ಯಾವ ಕೆಲಸವೂ ಪೂರ್ಣವಾಗುವುದಿಲ್ಲ.

ಹಾಗಾದರೆ ಈ ಭಯವನ್ನು ಗೆಲ್ಲುವ ಬಗೆ ಹೇಗೆ? ಬನ್ನಿ ನೋಡೋಣ. ಯಾವುದೇ ರೀತಿಯ ಭಯವನ್ನು ಗೆಲ್ಲಲು ಸರಳವಾದ ಕಾರ್ಯವಿಧಾನವಿದೆ. ಪ್ರಯತ್ನಿಸಿ ನೋಡಿ ಭಯವನ್ನು ಗೆಲ್ಲಿ. ಪ್ರತಿದಿನ ಕನಿಷ್ಠ ಪಕ್ಷ ಐದರಿಂದ ಹತ್ತು ನಿಮಿಷ ಇದಕ್ಕಾಗಿ ಮೀಸಲಿಡಿ. ಇಲ್ಲಿಯೂ ಫಲಿತಾಂಶದ ಬಗ್ಗೆ ನಿಮ್ಮ ಯೋಚನೆ ಸಕಾರಾತ್ಮಕವಾಗಿರಲಿ. ಉದಾಹರಣೆಗೆ ನಿಮಗೆ ಕತ್ತಲಿನ ಭಯವಿದ್ದರೆ, ಕಣ್ಣು ಮುಚ್ಚಿ ಕುಳಿತಲ್ಲೇ ನೀವು ಕತ್ತಲೆಯ ಕೋಣೆಯನ್ನು ಪ್ರವೇಶಿಸಿದಂತೆ ಕಲ್ಪನೆ ಮಾಡಿಕೊಳ್ಳಿ.

ಹಾಗೆಂದು ಕೊಂಡ ತಕ್ಷಣ ಭಯವಾದರೆ ಕಣ್ಣುಬಿಡಿ! ಮತ್ತೆ ಮತ್ತೆ ಪ್ರಯತ್ನಿಸಿ. ದಿನ ಕಳೆದಂತೆ ಕಲ್ಪನೆಯ ಕತ್ತಲೆಗೆ ನೀವು ಹೊಂದಿಕೊಂಡಿರುತ್ತೀರಿ. ಕಲ್ಪನೆಯಲ್ಲೇ ಕತ್ತಲೆಯ ಕೋಣೆಯಲ್ಲಿ ಕುಳಿತಿರುವಂತೆ ಭಾವಿಸಿಕೊಳ್ಳಿ. ಕೆಲವು ದಿನಗಳ ನಂತರ ನಿಮ್ಮನ್ನೇ ನೀವು ನಂಬದಿರುವಷ್ಟರ ಮಟ್ಟಿಗೆ ಬದಲಾಗಿರುತ್ತೀರಿ. ಆ ಕತ್ತಲೆಯ ಭಯವನ್ನು ಮೆಟ್ಟಿ ನಿಂತಿರುತ್ತೀರಿ. ಬಹಳ ಸರಳವಾದ ಕೌಶಲವಲ್ಲವೇ? ಪ್ರಯತ್ನಿಸಿ ನೋಡಿ. ಒಂದೆರಡು ದಿನಕ್ಕೆ ಆಗುವ ಕೆಲಸವಲ್ಲ. ಅಭ್ಯಾಸ ಇಲ್ಲಿ ಬಹಳ ಮುಖ್ಯ! ಪ್ರಪಂಚವನ್ನೇ ಅರಿಯದ ಸಣ್ಣ ಮಗುವೊಂದನ್ನು ಗಮನಿಸಿ. ಅದಕ್ಕೆ ಹೆಚ್ಚು ಪಾಲು ಭಯದ ಅರಿವಿರುವುದಿಲ್ಲ. ಹುಟ್ಟಿದಾಗಿನಿಂದ ಮನುಷ್ಯನಿಗೆ ಇರುವ ನಿಜವಾದ ಭಯಗಳು ಎರಡೇ! ಒಂದು ಬೀಳುವ ಭಯ ಮತ್ತೊಂದು ಶಬ್ದದ ಭಯ. ನಿಸ್ಸಂದೇಹವಾಗಿ ಹಾಗೂ ಸಹಜವಾಗಿ ದೊಡ್ಡವರಾಗುತ್ತಿದ್ದಂತೆಯೇ ಸಾವಿನ ಭಯ ಎಲ್ಲರನ್ನೂ ಕಾಡುವಂತಹದ್ದೇ.

ಇವನ್ನು ಬಿಟ್ಟರೆ ಉಳಿದೆಲ್ಲಾ ಭಯಗಳೂ ಮಾನವನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು, ಸಂದರ್ಭಗಳು ಹಾಗೂ ವಸ್ತುಗಳಿಂದ ಉದ್ಭವವಾದವುಗಳು. ಮನುಷ್ಯನ ಅತಿದೊಡ್ಡ ಶತ್ರುವೆಂದರೆ ಭಯ. ಅಪಜಯ, ಕಾಯಿಲೆ, ಅಪ್ರಮಾಣಿಕತೆ ಇವೆಲ್ಲಾ ಭಯದ ಮಿತ್ರರು! ಹೆದರಿಕೆ ಇದ್ದಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ. ಕೆಲವು ನಿರಾಶಾವಾದಿಗಳು ಜೀವನದಲ್ಲಿ ಯಶಸ್ಸಿನ ಮುಖವನ್ನೇ ನೋಡಿರುವುದಿಲ್ಲ. ಕಾರಣ ಜಯದ ಬಗ್ಗೆ ಅವರಿಗಿರುವ ಭಯ! ಬದುಕಿನಲ್ಲಿ ಯಾವಾಗಲೂ ಆಶಾವಾದಿಗಳಾಗಿರಬೇಕು. ಆ ಆಶಾವಾದವೇ ಏನಿಲ್ಲದಿದ್ದರೂ, ಬದುಕೆಂಬ ಬಂಡಿಯನ್ನು ಮುಂದೆ ಮುಂದೆ ತಳ್ಳುತ್ತದೆ. ‌

ನಡೆದು ಹೋದ ಘಟನೆಗಳನ್ನು ನೆನೆದು ಭವಿಷ್ಯದ ಬಗ್ಗೆ ಭಯಪಟ್ಟರೆ, ವರ್ತಮಾನ ಹಾಳಾಗಿ ಹೋಗುತ್ತದೆ. ಭಯದ ಬಗ್ಗೆಯೇ ಚಿಂತಿಸುತ್ತಿದ್ದರೆ ಅದರಿಂದ ಮುಕ್ತಿ ಸಿಗುವುದಿಲ್ಲ. ಮನೆಯಿಂದ ಹೊರಗೆ ಹೊರಟಾಗ, ಯಾರಾದರೂ ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಕೇಳಿದರೆ, ಹೊರಟ ಕೆಲಸ ಪೂರ್ಣವಾಗುವುದಿಲ್ಲ ಎನ್ನುವ ನಂಬಿಕೆ ಬಹಳಷ್ಟು ಜನರಲ್ಲಿ ಇದೆ. ಕಾರಣ, ಯಾರಾದರೂ ಆ ರೀತಿ ಕೇಳಿದ ತಕ್ಷಣ ನಮ್ಮ ಮನಸ್ಸು ಕೆಲಸವಾಗುತ್ತದೋ ಇಲ್ಲವೋ ಎನ್ನುವ ನೆನಗುದಿಗೆ ಬೀಳುತ್ತದೆ. ಮನಸ್ಸು ’ಆಗುತ್ತದೆ’ ಹಾಗೂ ’ಇಲ್ಲ’ ಎನ್ನುವ ಇಬ್ಬಂದಿತನಕ್ಕೆ ಸಿಲುಕಿ ಏಕಾಗ್ರತೆಯನ್ನು ಕಳೆದುಕೊಳ್ಳುತ್ತದೆ.

ಏಕಾಗ್ರತೆಯಿಲ್ಲದ ಮೇಲೆ ಯಾವ ಕೆಲಸ ತಾನೇ ಪೂರ್ಣವಾದೀತು? ಇದೊಂದು ಹಿಂದಿನಿಂದ ಬಂದಿರುವ ನಂಬಿಕೆ ಅಷ್ಟೆ. ಮೂಢನಂಬಿಕೆಯ ಮತ್ತೊಂದು ಮುಖವೇ ಅಂಜಿಕೆ. ಭಯವೂ ಒಂದು ನಂಬಿಕೆಯೇ ತಾನೇ? ಭಯವನ್ನು ಮೆಟ್ಟಿ ನಿಂತರೆ ಮೂಢತೆಯನ್ನು ತೊಲಗಿಸಬಹುದು. ಭಯ ನಮ್ಮ ಕನಸುಗಳನ್ನು ನಾಶಗೊಳಿಸಿದಂತೆ, ಜೀವನದಲ್ಲಿ ಬರುವ ಸೋಲುಗಳು ನಮ್ಮ ಕನಸುಗಳನ್ನು ಛಿದ್ರಗೊಳಿಸಲಾರವು. ಸೋಲೇ ಗೆಲುವಿನ ಮೆಟ್ಟಿಲು. ಸೋಲಿಗೆ ಭಯದ ಲೇಪನ ಬೇಡ. ಸೋಲುತ್ತೇನೆಂಬ ಭಯದ ಬಗ್ಗೆ ಭಯವನ್ನು ಬಿಡಬೇಕು! ‘ದಿಗಿಲು’ ಎನ್ನುವುದರ ಅಸ್ತಿತ್ವವೇ ಇಲ್ಲ. ಅದು ಇರುವುದು ನಮ್ಮ ಮನದ ಯೋಚನೆಗಳಲ್ಲಿ. ಚಿಂತನೆಗಳು ಕಾಲ್ಪನಿಕ. ಕಲ್ಪನೆ ಅವರವರ ಇಚ್ಛೆಗೆ ಸಂಬಂಧಪಟ್ಟ ವಿಷಯ. ನಾವು ಏನನ್ನು ಕಲ್ಪಿಸಿಕೊಳ್ಳುತ್ತೇವೆಯೋ ಅದರ ಬಗ್ಗೆಯೇ ಯೋಚಿಸುತ್ತೇವೆ. ಅದು ನಮ್ಮ ವರ್ತಮಾನವನ್ನು ಆಳುತ್ತದೆ. ಒಳ್ಳೆಯದನ್ನು ಕಲ್ಪಿಸಿಕೊಳ್ಳಿ. ಆಗ ಒಳ್ಳೆಯ ಯೋಚನೆಗಳು ಬರುತ್ತವೆ ಹಾಗೂ ಒಳ್ಳೆಯದೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT