ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೊಳಗಿನ ಛಲವೇ ಒತ್ತಡ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒತ್ತಡ ಎನ್ನುವುದು ಪ್ರತಿ ಕ್ಷೇತ್ರದಲ್ಲೂ ಇದೆ. ಎಲ್ಲರೂ ಒಂದಲ್ಲ ಒಂದು ರೀತಿ ಒತ್ತಡದಿಂದಲೇ ಬದುಕುತ್ತಿರುತ್ತಾರೆ, ಕ್ರೀಡಾ ವಿಭಾಗದಲ್ಲೂ ಒತ್ತಡವಿದೆ. ನಾವು ಪ್ರತಿ ಬಾರಿ ಆಟ ಆಡುವಾಗ ಗೆಲ್ಲಲೇಬೇಕು ಎಂಬ ಛಲದಿಂದ ಮಾನಸಿಕ ಒತ್ತಡದಿಂದಲೇ ಆಡುತ್ತೇವೆ. ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಾಗ ನಮ್ಮ ದೇಶವನ್ನು ಪ್ರತಿನಿಧಿಸುತ್ತೇವೆ ಎಂಬ ಭಾವನೆ ಇರುತ್ತದೆ. ಆಗ ಹೇಗಾದರೂ ಮಾಡಿ ದೇಶವನ್ನು ಗೆಲ್ಲಿಸಬೇಕು ಎಂಬ ಒತ್ತಡ ಮನಸ್ಸಿನಲ್ಲಿರುತ್ತದೆ.

ನಾನು ಒತ್ತಡವನ್ನು ಎರಡು ರೀತಿಯಲ್ಲಿ ನೋಡುತ್ತೇನೆ. ಮೊದಲನೆಯದು ನಮ್ಮೊಳಗೆ ಇರುವ ಒತ್ತಡ, ಇನ್ನೊಂದು ಬೇರೆಯವರಿಂದ ಬರುವ ಒತ್ತಡ. ನಾನು ಯಾವಾಗಲೂ ನನ್ನೊಳಗೆ ಇರುವ ಒತ್ತಡಕ್ಕೆ ಮೊದಲು ಪ್ರಾಶ್ತಸ್ಯ ನೀಡುತ್ತೇನೆ. ಕಾರಣ ನನ್ನೊಳಗಿನ ಒತ್ತಡವೇ ನನ್ನನ್ನು ಗೆಲ್ಲುವಂತೆ ಪ್ರೇರೆಪಿಸುವುದು. ನಾನು ಪ್ರತಿ ಬಾರಿ ಈಜುವಾಗಲೂ ದೇಶ ಹಾಗೂ ರಾಜ್ಯದ ಹೆಸರು ಉಳಿಸಬೇಕು ಎಂಬ ಒತ್ತಡದಿಂದಲೇ ಈಜುತ್ತೇನೆ. ಅಲ್ಲದೇ ಈಜುವುದು ನನ್ನ ಹವ್ಯಾಸ; ಅದು ಎಂದಿಗೂ ನನಗೆ ಒತ್ತಡ ಎನ್ನಿಸಿರಲಿಲ್ಲ.

ಹೊರಗಿನ ಒತ್ತಡ ಎಂದರೆ ನನ್ನ ಕೋಚ್‌, ತಂದೆ–ತಾಯಿ. ಆದರೆ ಅವರು ಯಾರೂ ನನ್ನ ಮೇಲೆ ಒತ್ತಡ ಹೇರುತ್ತಿರಲಿಲ್ಲ. ಬದಲಾಗಿ ನನಗೆ ಪ್ರೋತ್ಸಾಹ ನೀಡುತ್ತಿದ್ದರು. ನೀನು ಗೆಲ್ಲುತ್ತೀಯ ಎಂದು ಆತ್ಮವಿಶ್ವಾಸ ತುಂಬುತ್ತಿದ್ದರು. ಆದರೆ ನಾನು ಸೋತರೆ ಅವರಿಗೆ ನೋವಾಗುತ್ತದೆ ಎಂಬ ಒತ್ತಡ ನನ್ನನ್ನು ಕಾಡುತ್ತಿತ್ತು. ಹಾಗಾಗಿ ಅದು ಹೊರಗಿನ ಒತ್ತಡ. ಆದರೆ ಪ್ರತಿ ಬಾರಿ ಒತ್ತಡ ಬಂದಾಗಲೂ ಮನಸ್ಸು ಕೊನೆಯ ಕ್ಷಣದಲ್ಲಿ ಏನು ಹೇಳುತ್ತದೋ ಅದನ್ನೇ ಮಾಡುತ್ತೇನೆ.

ಕ್ರೀಡಾಕ್ಷೇತ್ರದಲ್ಲಿ ಯಾವ ರೀತಿ ಹಾಗೂ ಹೇಗೆ ಪ್ರದರ್ಶನ ನೀಡುತ್ತೇವೆ ಮತ್ತು ಎಷ್ಟು ಒಳ್ಳೆಯ ಪ್ರದರ್ಶನ ನೀಡುತ್ತೇವೆ ಎನ್ನುವುದೇ ಮುಖ್ಯ. ಕ್ರೀಡಾಕ್ಷೇತ್ರದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕು. ಆದರೆ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಹಲವಾರು ಬಾರಿ ಅಪಘಾತಗಳಾಗುತ್ತವೆ. ಎಷ್ಟೋ ಬಾರಿ ಗಂಭೀರ ಗಾಯಗಳೇ ಆಗುತ್ತವೆ. ಆ ಸಮಯದಲ್ಲೆಲ್ಲಾ ನಾವು ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆಗೆಲ್ಲಾ ದೈಹಿಕ ಹಾಗೂ ಮಾನಸಿಕ – ಎರಡು ವಿಧದಲ್ಲಿ ಒತ್ತಡವಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾನಸಿಕ ನೋವೇ ಒತ್ತಡವಾಗಿ ಪರಿವರ್ತನೆಯಾಗಬಹುದು. ಯಾವುದೇ ಸ್ವರ್ಧೆಯಾಗಲಿ ಗೆಲ್ಲುತ್ತೇವೆ, ಸೋಲುತ್ತೇವೆ – ಎನ್ನುವುದಕ್ಕಿಂತ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎನ್ನುವ ಖುಷಿ ಇರುತ್ತದೆ. ದೇಶದ ಪ್ರತಿನಿಧಿಯಾಗಿದ್ದಾಗ ಗೆಲ್ಲಲೇಬೇಕು ಎಂಬ ಮಾನಸಿಕ ಒತ್ತಡ ಪ್ರತಿಯೊಬ್ಬ ಕ್ರೀಡಾಪಟುವಿನಲ್ಲೂ ಇರುತ್ತದೆ.

2014ರಲ್ಲಿ ನಾನು ಪೀಕ್‌ನಲ್ಲಿದ್ದೆ. ಆಗ ಕಾಮನ್‌ವೆಲ್ತ್ ಗೇಮ್ಸ್ ನಡೆಯುತ್ತಿತ್ತು, ನನಗೆ ಅವಕಾಶ ಸಿಕ್ಕರೂ ಭಾಗವಹಿಸಲಾಗಲಿಲ್ಲ. ಕಾರಣ ನನಗೆ ಅಪಘಾತವಾಗಿ ಶಸ್ತ್ರಚಿಕಿತ್ಸೆಯಾಗಿತ್ತು. ಅದಾದ ನಾಲ್ಕೇ ತಿಂಗಳಲ್ಲಿ ಏಪ್ಯನ್ ಗೇಮ್ಸ್ ಇತ್ತು. ಅದಕ್ಕೆ ನಾನು ತಯಾರಾಗಲೇಬೇಕಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವಾಗಲೂ ತುಂಬಾ ಒತ್ತಡವಿತ್ತು. ಸ್ಪರ್ಧೆಯ ಹಿಂದಿನ ಮೂರು ದಿನವೂ ಆಸ್ಪತ್ರೆಯಲ್ಲಿದ್ದೆ. 4ನೇ ದಿನ ಸ್ಪರ್ಧೆ ಇತ್ತು. ಆದರೂ ಛಲ ಬಿಡದೇ ಭಾಗವಹಿಸಿದ್ದೆ. ಅದು ರಿಲೇ. ಉಳಿದ ಮೂವರು ಸ್ಪರ್ಧಿಗಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿದ್ದರು. ನಾನು ಶೇ.80ರಷ್ಟು ಸುಧಾರಿಸಿದ್ದೆ. ಆದರೆ ದೇಶಕ್ಕಾಗಿ ಆಡಬೇಕು ಎಂಬ ಛಲದಿಂದ ನೀರಿಗೆ ಧುಮುಕಿದ್ದೆ. ಆಗ ನಾವು ಕಂಚಿನ ಪದಕ ಪಡೆದಿದ್ದೆವು.

ನನ್ನ ಮನಸ್ಸಿಗೆ ತೀವ್ರ ಒತ್ತಡ ಅನ್ನಿಸಿದಾಗ ನಾನು ಸಂಗೀತ ಕೇಳುತ್ತೇನೆ. ಒತ್ತಡ ಅದಷ್ಟೇ ತೀವ್ರತರವಾಗಿರಲಿ ಅಥವಾ ನಿಧಾನಗತಿಯಲ್ಲಿರಲಿ, ಮಧುರ ಹಾಗೂ ಶಾಂತವಾಗಿರುವ ಸಂಗೀತ ಕೇಳುತ್ತೇನೆ. ಸಂಗೀತ ಕೇಳುತ್ತಾ ಕೇಳುತ್ತಾ ನಾನು ವಾಸ್ತವವನ್ನು ಮರೆತು ಅದರೊಳಗೆ ಕಳೆದು ಹೋಗುತ್ತೇನೆ. ಮನಸ್ಸಿಗೆ ಒತ್ತಡವಾಗುತ್ತಿದೆ ಎಂದು ಅನ್ನಿಸಿದ ತಕ್ಷಣ ಸಂಗೀತಕ್ಕೆ ಕಿವಿ ಒಡ್ಡುತ್ತೇನೆ; ಆಗ ಮನಸ್ಸು ತಿಳಿಯಾಗುತ್ತದೆ.

ಬೆಂಗಳೂರು ನಾನು ಹುಟ್ಟಿ ಬೆಳೆದ ನಗರ. ಇಲ್ಲಿ ಯಾವಾಗಲೂ ಒತ್ತಡದ ಜೀವನವೇ ಇರುತ್ತದೆ. ನಮ್ಮ ತಂದೆ–ತಾಯಿ ಹೇಳುವಂತೆ ಮೊದಲೆಲ್ಲಾ ಬೆಂಗಳೂರಿನಲ್ಲಿ 200ರಿಂದ 300 ಅಡಿಗೊಂದು ಮನೆಯಿತ್ತು. ಆದರೆ ಈಗ ಹಾಗಿಲ್ಲ, ಬೆಂಗಳೂರು ಬದಲಾಗಿದೆ. ಇಲ್ಲಿ ಜನಸಂಖ್ಯೆ ಹೆಚ್ಚಿದೆ. ವಲಸಿಗರು ಹೆಚ್ಚುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಒತ್ತಡದ ಜೀವನ ಹೆಚ್ಚುತ್ತಿದೆ. ಹಾಗೆಯೇ ಆ ಒತ್ತಡವನ್ನು ಸಂಭಾಳಿಸಿಕೊಂಡು ಮುನ್ನುಗ್ಗುವುದೂ ಬದುಕಿನ ಭಾಗವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT