ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿ ಅಜ್ಜಿ ನಮ್ಮಜ್ಜಿ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರೀತಿಯ ಅಜ್ಜಿ,
ನಿನಗೆ ಎಂಬತ್ತರ ಇಳಿ ವಯಸ್ಸು. ಕನ್ನಡಕ ಹಾಕಿಕೊಂಡು ಕಾಪಿರೈಟ್‍ನಲ್ಲಿ ‘ಶ್ರೀರಾಮ’ ತಲ್ಲೀನಳಾಗಿ ಬರೆಯುತ್ತ, ಸೋಫಾ ಮೇಲೆ ಕುಳಿತಿರುವ ನೀನು ಈಗಲೂ ನಮ್ಮ ಕಣ್ಣಿಗೆ ಕಟ್ಟುತ್ತಿದ್ದೀಯ. ಹೀಗೆ ಇಲ್ಲೇ ಸಾಗರಕ್ಕೆ ಹೋಗಿಬರುತ್ತೇನೆ ಎಂದು ಹೇಳಿ ವಾಪಾಸ್ ಬರಲೇ ಇಲ್ಲ. ಎಲ್ಲಿ ಹೋದೆ ಅಜ್ಜಿ?

ಎಷ್ಟೋ ಲಕ್ಷ ಶ್ರೀರಾಮ ನಾಮ ಬರೆಯುವ ಪಣತೊಟ್ಟಿದ್ದೆ ನೀನು. ಇನ್ನೂ ಆ ಲೆಕ್ಕ ಚುಕ್ತ ಆಗಿಲ್ಲ. ಹಾಗೆ ಬರೆಯುವುದರ ಪುಣ್ಯ-ಪಾಪಗಳ ಲೆಕ್ಕಾಚಾರದಲ್ಲಿ ವೈಯಕ್ತಿಕವಾಗಿ ನಂಬಿಕೆ ಇಲ್ಲ ನನಗೆ. ಆದರೂ, ಹಿಡಿದ ಕಾರ್ಯ ಮುಗಿಸುವ ನಿನ್ನ ಗುಣ ಮೆಚ್ಚಿದ್ದೆ ನಾನು. ಅಕ್ಷರ ಸಹ ನೀಟಾಗಿರಬೇಕೆಂದು, ಶ್ರದ್ಧೆಯೊಂದಿಗೆ ಬರೆಯುತ್ತಿದ್ದೆ. ಪೆನ್ನಿನ ಮುಚ್ಚಳ ಸಹಿತ ಹಾಕಿಲ್ಲ ನೀನು.

ನಿನ್ನದು ಹೋರಾಟದ ಬದುಕು. ಸಣ್ಣ ವಯಸ್ಸಿಗೆ ಮದುವೆ ಆಗಿ, 15 ವರ್ಷಕ್ಕೆ ಹಡೆದು, 27ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡೆ. ಇಡೀ ಸಂಸಾರದ ಜವಾಬ್ದಾರಿ ನಿನ್ನ ಹೆಗಲಿಗೆ. ಆರು ಮಕ್ಕಳು ನಿನಗೆ. ಜಮೀನು ಸಮಸ್ಯೆ ಮಕ್ಕಳನ್ನು ಓದಿಸಬೇಕು, ಬದುಕು ಕಟ್ಟಿಕೊಳ್ಳಬೇಕು ಹೀಗೆ ನಾನಾ ಸಮಸ್ಯೆಗಳ ನಡುವೆ ನಿನ್ನ ಮಾನವೀಯ ನಡತೆ. ಕಾಯುತ್ತಿದ್ದೇವೆ ನಿನ್ನ ಬರುವಿಕೆಗೆ.

ಬಹಳ ಕಷ್ಟದ ದಿನಗಳವು. ಒಪ್ಪತ್ತಿನ ಊಟಕ್ಕೂ ಸಂಕಟ. ಸಾಗರಕ್ಕೆ ಹತ್ತಿರವಾಗಿದ್ದರಿಂದ ನೆಂಟರಿಷ್ಟರು, ಪರಿಚಯಸ್ಥರು ಹೀಗೆ ಎಲ್ಲರಿಗೂ ತಂಗುದಾಣ ಶಿರೂರು (ನಿನ್ನ ಮನೆ). ಯಾರೊಬ್ಬರನ್ನೂ ಖಾಲಿ ಹೊಟ್ಟೆಯಲ್ಲಿ ಕಳುಹಿಸಲಿಲ್ಲ ನೀನು. ಈಗಲೂ ಮನೆಯಲ್ಲಿ ನೆಂಟರಿದ್ದಾರೆ.

ನೀನು ಅದ್ಭುತ ಪಾಕ ಪ್ರವೀಣೆ. ನಮಗೆಲ್ಲಾ ನಿನ್ನ ಕೈರುಚಿ ಬಲು ಇಷ್ಟವಾಗಿತ್ತು. ‘ಅಜ್ಜಿ ಇದು ಮಾಡು, ಆದು ಮಾಡು’ ಎಂದು ಪೀಡಿಸುತ್ತಿದ್ದೆವು. ನಾವು ಮಾಡು ಎಂದರೆ ಎಂದೂ ಬೇಸರಿಸಿಕೊಂಡವಳಲ್ಲ ನೀನು. ಎಂಬತ್ತರ ವರ್ಷದಲ್ಲೂ ಅಡುಗೆ ಮಾಡಿ ಬಡಿಸುತ್ತಿದ್ದೆ. ನೀನು ಎಡಗೈಯಲ್ಲಿ ಒಗ್ಗರಣೆ ಹಾಕಿದರೂ ಅದರ ಸ್ವಾದವೇ ಬೇರೆ. ಬುತ್ತಿಯನ್ನ ತಿನ್ನುವ ಆಸೆಯಾಗಿದೆ ಅಜ್ಜಿ.

ನಿನ್ನಲ್ಲಿ ಒಬ್ಬ ನಾಟಿ ವೈದ್ಯೆ ಇದ್ದಳು. ಔಷಧದ ಭಂಡಾರವೇ ನಿನ್ನಲ್ಲಿತ್ತು. ನೂರಾರು ಮಂದಿಯನ್ನು ಗುಣಪಡಿಸಿದ್ದೀಯ ನೀನು. ಅದಕ್ಕಾಗಿ ಹೊಗಳಿಕೆಯನ್ನು ಪಡೆದಿದ್ದೀಯಾ. ಈಗಲೂ ನಿನ್ನಿಂದ ಗುಣಮುಖರಾದವರು ನಿನ್ನನ್ನು ನೆನೆಸಿಕೊಳ್ಳುತ್ತಿದ್ದಾರೆ. ಹಾಗೆ, ಮನೆಗೆ ಹುಷಾರಿಲ್ಲ ಎಂತ ನಿನ್ನ ಹುಡುಕಿಕೊಂಡು ಜನ ಬಂದಿದ್ದಾರೆ. ಎಲ್ಲಿ ಹೋದೆ ನೀನು.

ರಾಜಕೀಯ ಸಂಗತಿಗಳಲ್ಲೂ ಬಲು ಆಸಕ್ತಿ ಹೊಂದಿದವಳು ನೀನು. ದೇಶದ ಪ್ರತಿಯೊಂದು ಆಗು-ಹೋಗಿಗೂ ನಿನ್ನ ನಿಲುವು ತಾಳುತ್ತಿದ್ದೆ. ಇಂದಿರಾಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ಜಮೀನು ಗಲಾಟೆಯ ವಿಷಯದಲ್ಲಿ ಪತ್ರ ಬರೆದಿದ್ದೆ ಮತ್ತು ಇಂದಿರಾ ಅವರು ಉತ್ತರವನ್ನೂ ನೀಡಿದ್ದರು ಎಂದು ಹೇಳಿದ್ದೆ. ಇತ್ತೀಚೆಗೆ ಮೋದಿಯವರಿಗೆ ನಿನ್ನ ಅಭಿಪ್ರಾಯವನ್ನು ಸಂದೇಶದ ಮೂಲಕ ಕಳುಹಿಸಿದ್ದೆ. ಇನ್ನೇನು ಉತ್ತರ ಬರಬಹುದು ಬೇಗ ಬಾ.

ನಿನ್ನ ಮಕ್ಕಳು, ಮೊಮ್ಮಕ್ಕಳು ದೇಶಕ್ಕೆ ಸಮಸ್ಯೆ ಉಂಟು ಮಾಡಬಾರದು, ಸಮಾಜಮುಖಿಯಾಗಿಬೇಕು, ಹತ್ತು ಜನಕ್ಕೆ ಉಪಕಾರಿಯಾಗಿರಬೇಕು ಎಂದು ಆಸೆಪಟ್ಟು ಅದರಂತೆಯೇ ಸಾಕಿದವಳು ನೀನು.

ನನ್ನ ಅಣ್ಣ ಅಂದರೆ ನಿನ್ನ ಮೊಮ್ಮಗ ಮತ್ತು ಆತನ ಸ್ನೇಹಿತರು ನಡೆಸುತ್ತಿರುವ ಎನ್‍ಜಿಓಗೆ ನಾನು ಸೇರಿಕೊಳ್ಳುತ್ತೇನೆ ಎಂದಿದ್ದೆ. ಹೀಗೆ ಹೇಳಿ ಈಗ ಇಲ್ಲವಾದರೆ ಹೇಗೆ?

ಅಜ್ಜಿ ನೀನು ಉತ್ಸಾಹದ ಚಿಲುಮೆ. ನಿನ್ನ ಮೊಮ್ಮಕ್ಕಳಾದ ನಮಗೂ ಇಷ್ಟೊಂದು ಜೀವನೋತ್ಸಾಹ ಕಡಿಮೆಯೇ ಎನ್ನುವಂತೆ ಬದುಕಿದ್ದೆ ನೀನು. ದಿನವೂ ಕಲಿಕೆ, ದಿನವೂ ಹೊಸತನದ ತುಡಿತದೊಂದಿಗೆ ಬದುಕುತ್ತಿದ್ದೆ. ಸದಾ ಒಂದಿಲ್ಲೊಂದು ಪುಸ್ತಕ ಓದುತ್ತಿದ್ದೆ. ಆ ಉತ್ಸಾಹದ ಹೆಜ್ಜೆ, ಸ್ಫೂರ್ತಿದಾಯಕ ಮಾತುಗಳು, ಕತೆಗಳು ಎಲ್ಲವೂ ಬರಿದಾಗಿವೆ; ಬತ್ತಿವೆ. ಬೇಗ ಬಂದುಬಿಡು.

ಇಂತಿ, ನಿನ್ನ ಮೊಮ್ಮಗಳು
ಸುಕೃತಾ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT