ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಗಳಿಗೆ ಗುಂಡುಗಳಿಂದ ಉತ್ತರ ನೀಡಲಾಗದು

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಕ್ಯಾಪ್ಟನ್‌ ಗೋಪಿನಾಥ್‌

**

ಅರೆಗಳಿಗೆಯೊಳಗೆ, ಹುಚ್ಚು ಆವೇಶದಲ್ಲಿ ಜೀವವೊಂದರ ಹರಣವಾಗಿಬಿಟ್ಟಿತು. ಪ್ರಜ್ಞಾವಂತ ಮನಸ್ಸಿನ ಬೆಳಕನ್ನು ನಂದಿಸಲಾಯಿತು. ಚಲನಶೀಲ, ಉತ್ಸಾಹಪೂರ್ಣ, ತೆಳ್ಳನೆಯ ಕಾಯದ ಮಹಿಳೆಯನ್ನು ಅಪರಿಚಿತ ದಾಳಿಕೋರರು ಗುಂಡೇಟುಗಳಿಂದ ನೆಲಕ್ಕುರುಳಿಸಿದರು. ಹೀಗೆ ಹತ್ಯೆಗೀಡಾದ ಗೌರಿ ಲಂಕೇಶ್ ಅನಿಯಂತ್ರಿತ ಹಾಗೂ ದಾರ್ಷ್ಟ್ಯ ಸ್ವಭಾವ ಹೊಂದಿದ್ದರು. ಜತೆಗೆ ಬಡವರು ಮತ್ತು ಕಡೆಗಣನೆಗೆ ಒಳಗಾದ ಸಮುದಾಯದವರ ಏಳ್ಗೆಗಾಗಿ ಹೋರಾಡುತ್ತಲೇ ಬಲಪಂಥೀಯ ಮತಾಂಧರು ಮತ್ತು ತೀವ್ರವಾದಿಗಳಿಗೆ ನಿರಂತರವಾಗಿ ಕುಂದದ ಉತ್ಸಾಹದೊಂದಿಗೆ ಸವಾಲೆಸೆಯುತ್ತಾ ಮುಖಾಮುಖಿಯಾಗಿದ್ದರು. ನಕ್ಸಲರ ಪರವಾಗಿ ಕುಡುಗೋಲು ಹಿಡಿದು ಎಡಪಂಥೀಯ ವಿದ್ಯಾರ್ಥಿ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಕಮ್ಯುನಿಸ್ಟ್ ಅಲ್ಲದ ಆಕೆ ಸಮಾಜವಾದವನ್ನೇ ಉಸಿರಾಡುವ ಬೆಂಕಿಚೆಂಡಾಗಿದ್ದರು; ಪತ್ರಕರ್ತೆ ಮತ್ತು ಕಾರ್ಯಕರ್ತೆಯಾಗಿದ್ದರು. ಇದು ಆಕೆಯ ಸಾರ್ವಜನಿಕ ವ್ಯಕ್ತಿತ್ವ. ವೈಯಕ್ತಿಕವಾಗಿ ಆಕೆ ಒಬ್ಬ ಕಾಳಜಿಯುಳ್ಳ, ಮಾನವೀಯವಾದ ಹಾಗೂ ಪ್ರೀತಿಗಾಗಿ ಬದುಕುತ್ತಿದ್ದ ಜೀವವಾಗಿದ್ದರು.

ಹೇಗೆ ನೋಡಿದರೂ ಈ ಹತ್ಯೆಯನ್ನು ಅಪರಿಚಿತರಾದ, ಹೇಡಿಗಳಾದ, ಅನಾಮಧೇಯರಾದ ಬಾಡಿಗೆ ಗೂಂಡಾಗಳು (ಸುಪಾರಿ ಹಂತಕರು) ಎಸಗಿರುವಂತೆ ತೋರುತ್ತಿದೆ. ನಿವೃತ್ತ ಐ.ಪಿ.ಎಸ್‌. ಅಧಿಕಾರಿ ಗೋಪಾಲ ಹೊಸೂರ್ ಅವರು ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ, ತಾತ್ವಿಕ ವಿರೋಧಿಗಳ ಆಣತಿಯ ಮೇರೆಗೆ ಈ ಹತ್ಯೆ ನಡೆದಿರಬಹುದು ಅಥವಾ ಆಕೆಯ ಖಾಸಗಿ ಜೀವನಕ್ಕೆ ಸಂಬಂಧಿಸಿದವರಿಂದ ಅಥವಾ ವೃತ್ತಿಗೆ ಸಂಬಂಧಿಸಿದವರಿಂದ ಅಥವಾ ವ್ಯವಹಾರದ ವಿಷಯದಲ್ಲಿ ನಡೆದಿರಬಹುದು. ಇದೇ ಸಂದರ್ಭದಲ್ಲಿ ಹೊಸೂರ್ ಅವರನ್ನು ಡಾ. ಕಲಬುರ್ಗಿ ಅವರ ಹತ್ಯೆ ಕುರಿತು ಕೇಳಿದಾಗ, ಈ ಸಂಬಂಧ ಹಂತಕರ ವಿಷಯದಲ್ಲಿ ಇದುವರೆಗೆ ಯಾವ ಸುಳಿವನ್ನೂ ಕಲೆಹಾಕದಿರುವುದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ ಎಂದೂ ಅಭಿಪ್ರಾಯಪಟ್ಟರು. ಗೌರಿ ಅವರು ಟ್ಯಾಬ್ಲಾಯ್ಡ್‌ ಒಂದರ ಪತ್ರಕರ್ತೆಯಾದ್ದರಿಂದ, ಸಮಾಜದ ಹಲವು ಜನವರ್ಗಗಳ ಗಮನಸೆಳೆದ ಬಂಡಾಯಗಾರ್ತಿಯಾದ್ದರಿಂದ, ಕಲಬುರ್ಗಿ ಸೇರಿದಂತೆ ಇತ್ತೀಚೆಗೆ ರಾಷ್ಟ್ರದಲ್ಲಿ ನಡೆದಿರುವ ಬುದ್ಧಿಜೀವಿಗಳು ಹಾಗೂ ವಿಚಾರವಾದಿಗಳ ಹತ್ಯೆಗೆ ಸಾಮ್ಯತೆ ಇದ್ದುದರಿಂದ ಈ ಹತ್ಯೆಯು ಇಡೀ ರಾಷ್ಟ್ರದ ಗಮನ ಸೆಳೆಯಿತು. ಹೀಗಾಗಿ ಅನೇಕರು ಆಪಾದಿಸುತ್ತಿರುವಂತೆ, ಈ ಹತ್ಯೆಯ ಹಿಂದಿರಬಹುದಾದ ಬಲಪಂಥೀಯ ಮೂಲಭೂತವಾದಿಗಳನ್ನು ಪತ್ತೆಹಚ್ಚಿ ಬಂಧಿಸುವ ಅಥವಾ ನಿಜವಾದ ಹತ್ಯೆಕೋರರನ್ನು ಬಂಧಿಸಿ ಈ ಅನುಮಾನಗಳಿಗೆ ತೆರೆಯೆಳೆಯುವ ಜವಾಬ್ದಾರಿ ನೇರವಾಗಿ ಸರ್ಕಾರದ್ದಾಗಿದೆ.

ಯಾವುದೋ ಕ್ಷಣದಲ್ಲಿ ನಿಂದನೆಗೆ ಒಳಗಾಗಿಯೋ, ಅಪಮಾನಕ್ಕೆ ಈಡಾಗಿಯೋ, ಮತ್ಸರದಿಂದಲೋ, ಕೋಪೋದ್ರಿಕ್ತವಾಗಿಯೋ, ಭಾವೋನ್ಮಾದದಲ್ಲೋ ಆವೇಶಕ್ಕೆ ತುತ್ತಾಗಿ, ಎದುರಿಗಿರುವ ತಮಗಾಗದವರನ್ನು ಕೈಯಿಂದ ಹೊಡೆದೋ ಅಥವಾ ಆ ಕ್ಷಣದಲ್ಲಿ ಕೈಗೆ ಸಿಕ್ಕ ಚಾಕುವಿನಿಂದ ತಿವಿದೋ ಅಥವಾ ಬಂದೂಕಿನಿಂದ ಗುಂಡು ಹಾರಿಸಿಯೋ ಕೊಲ್ಲುವ ಉದಾಹರಣೆಗಳಿವೆ. ಈ ಆವೇಶದ ಹುಚ್ಚಿಗೆ ಒಂದಿಷ್ಟಾದರೂ ಅರ್ಥ ಇದೆ. ಪೂರ್ವಯೋಜಿತ ಕೊಲೆ ಪ್ರಕರಣಗಳಿಗೆ ಹೋಲಿಸಿದರೆ ಇಂತಹ ಅಪರಾಧಗಳನ್ನು ಅನೇಕ ರಾಷ್ಟ್ರಗಳಲ್ಲಿ ನ್ಯಾಯಾಲಯಗಳು ಕೂಡ ಸ್ವಲ್ಪ ಉದಾರ ದೃಷ್ಟಿಯಿಂದಲೇ ನೋಡುತ್ತವೆ. ಮೇಲೆ ಹೇಳಿದವುಗಳೆಲ್ಲಾ ಆ ಕ್ಷಣದ ಭಾವೋನ್ಮಾದದ ಆವೇಶದಲ್ಲಿ ಘಟಿಸುವ ಅಪರಾಧಗಳು. ಆದರೆ ಯಾರೋ ಒಬ್ಬರು ತಾತ್ವಿಕ ಭಿನ್ನಾಭಿಪ್ರಾಯ ಹೊಂದಿದ್ದಾರೆಂದು ಅವರನ್ನು ದ್ವೇಷದಲ್ಲಿ ಯೋಜಿತವಾಗಿ ಹತ್ಯೆ ಮಾಡುವುದು ಅಥವಾ ಬಾಡಿಗೆ ಹಂತಕರ ಮೂಲಕ ಹತ್ಯೆ ಮಾಡಿಸುವುದು ಅತ್ಯಂತ ಕ್ರೂರ. ಇದನ್ನು ಯೋಚಿಸಿದರೇ ಬೆನ್ನುಹುರಿಯುದ್ದಕ್ಕೂ ಛಿಲ್ ಎನ್ನುತ್ತದೆ. ಇಂತಹ ಹತ್ಯೆಯನ್ನು ಯಾವ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾಗದು.

'ನಾನು ನನ್ನ ನಂಬಿಕೆಗಳಿಗಾಗಿ ಯಾವತ್ತೂ ಸಾಯುವುದಿಲ್ಲ. ಹೀಗಾಗಿದ್ದೇ ಆದರೆ ನಾನು ತಪ್ಪಿತಸ್ಥನಾಗುವ ಸಾಧ್ಯತೆ ಇರುತ್ತದೆ' ಎಂದರು ಹೆಸರಾಂತ ಲೇಖಕ ಬರ್ಟಂಡ್‌ ರಸಲ್. ಇದನ್ನೇ ಮತ್ತೊಂದು ರೀತಿ ಹೇಳುವುದಾದರೆ, 'ಯಾರನ್ನೇ ಆಗಲಿ ಅವರ ನಂಬಿಕೆಗಳು ಅಥವಾ ಅವರು ಪ್ರಚುರಪಡಿಸುವ ಸಿದ್ಧಾಂತ ನಿಮ್ಮದಕ್ಕಿಂತ ಭಿನ್ನ ಎಂಬ ಕಾರಣಕ್ಕಾಗಿ ಹತ್ಯೆ ಮಾಡಬಾರದು. ಏಕೆಂದರೆ ಹೀಗೆ ಮಾಡುವ ನೀವೇ ತಪ್ಪಿತಸ್ಥರಿರಬಹುದು' ಎನ್ನಬಹುದು. ಇದನ್ನು ಸಮರ್ಥನೀಯ ಎನ್ನುವುದಾದರೆ ಅದೇ ತರ್ಕವನ್ನು ಮುಂದಿಟ್ಟುಕೊಂಡು ಬೇರೊಬ್ಬರು ನಿಮ್ಮನ್ನೂ ಹತ್ಯೆ ಮಾಡಬಹುದು. ಒಂದು ವೇಳೆ ಸಮಾಜದಲ್ಲಿ ಅಸಂಖ್ಯಾತರಿರುವ ಹುಸಿ ಧರ್ಮನಿರಪೇಕ್ಷವಾದಿಗಳನ್ನು ಹತ್ಯೆ ಮಾಡಬಹುದು ಎನ್ನುವುದಾದರೆ, ದಿನೇ ದಿನೇ ಹೆಚ್ಚುತ್ತಿರುವ ಹುಸಿ ಹಿಂದುತ್ವ ಪ್ರಚಾರಕರನ್ನೂ ಹತ್ಯೆ ಮಾಡಬಹುದಾಗಿದೆ. ಈ ಎರಡೂ ನಮೂನೆಯ ಜನರು ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಸಾಮಾನ್ಯ ಜನರ ಜೀವನದೊಂದಿಗೆ ಚೆಲ್ಲಾಟವಾಡುವವರೇ. ಆದರೆ ಇಂತಹ ತಿರುಚಿದ ತರ್ಕಗಳಿಂದ ಬದುಕು ನಡೆಯುವುದಿಲ್ಲ. ಅನೇಕ ರಾಜರು, ಸರ್ವಾಧಿಕಾರಿಗಳು ಹಾಗೂ ಅವರ ನಿರಂಕುಶ ಆಡಳಿತಗಳು ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದವರನ್ನು ಅಥವಾ ಸ್ವತಂತ್ರ ಮನೋಭಾವ ಪ್ರದರ್ಶಿಸಿದವರನ್ನು ಕೊಂದ ನಿದರ್ಶನಗಳಿಗೆ ಲೆಕ್ಕವಿಲ್ಲ. ಇಂತಹವರನ್ನು ಸಾರ್ವಜನಿಕವಾಗಿ ನೇಣಿಗೇರಿಸಲಾಗುತ್ತಿತ್ತು ಇಲ್ಲವೇ ಸಾಮೂಹಿಕ ನರಹತ್ಯೆಗೆ ಒಳಪಡಿಸಲಾಗುತ್ತಿತ್ತು. ಆದರೆ ಈಗ ಪ್ರಜಾತಾಂತ್ರಿಕ, ಸಾಮಾಜಿಕ ಸಮತೆಯನ್ನು ಆಶಿಸುವ ಹಾಗೂ ಮುಕ್ತ ಸಮಾಜದಲ್ಲಿ ಬದುಕಲು ಹಂಬಲಿಸುವ ನಾವು ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳದೆ ಗತ್ಯಂತರವಿಲ್ಲ.

ಗೌರಿ ಅತಿರೇಕದ ನಿಲುವುಗಳನ್ನು ಹೊಂದಿದ್ದರು. ಆಕೆ ಬಳಸುತ್ತಿದ್ದ ಭಾಷೆ ಯಾವಾಗಲೂ ನಯವಂತಿಕೆಯಿಂದ ಕೂಡಿರುತ್ತಿರಲಿಲ್ಲ, ಸರಿ. ಹಲವು ಸಲ ಆಕ್ರಮಣಕಾರಿಯಾಗಿಯೂ, ಪ್ರಚೋದನಕಾರಿಯಾಗಿಯೂ ಇರುತ್ತಿತ್ತು. ಕೆಲವೊಮ್ಮೆ ಇತರರನ್ನು ಟೀಕಿಸುವಾಗ ಅಥವಾ ಸಾಚಾತನವನ್ನು ಬಹಿರಂಗಪಡಿಸುವಾಗ ಅದು ಅನಗತ್ಯವಾಗಿ ಕಠಿಣವೂ, ಅಹಿತಕರವೂ ಆಗಿರುತ್ತಿತ್ತು. ಅದನ್ನೇ ಅವರು ಇನ್ನಷ್ಟು ಸೌಜನ್ಯಯುತ ಭಾಷೆಯ ಮೂಲಕ ಮತ್ತಷ್ಟು ನಾಗರಿಕ ರೀತಿಯಲ್ಲಿ ವ್ಯಕ್ತಪಡಿಸಬಹುದಿತ್ತು. ಆದರೆ ಇದೇ ಮಾತು ಇತರ ಮುಸ್ಲಿಂ ಮತ್ತು ಹಿಂದೂ ತೀವ್ರವಾದಿಗಳಿಗೂ ಅನ್ವಯಿಸುತ್ತದೆ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಅನೇಕ ನಾಯಕರು ಎನ್ನಿಸಿಕೊಂಡವರಿಗೂ ಅನ್ವಯಿಸುತ್ತದೆ ಎಂಬುದನ್ನು ಮರೆಯಬಾರದು. ಬೇರೊಬ್ಬ ವ್ಯಕ್ತಿಯ ಮನೋಧೋರಣೆ ನಮಗೆ ಪಥ್ಯವಲ್ಲ ಎಂಬ ಕಾರಣಕ್ಕೆ ನಮಗೆ ಆ ವ್ಯಕ್ತಿಯನ್ನು ಕೊಲ್ಲಲು ಪರವಾನಗಿ ಸಿಕ್ಕಿಬಿಡುತ್ತದೇನು? ಗೌರಿ ಇತ್ತೀಚೆಗೆ ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆಯನ್ನು ಬೆಂಬಲಿಸುತ್ತಿದ್ದರು. ಇದು ಹಲವು ಹಿಂದೂ ಬಲಪಂಥೀಯ ಮುಖಂಡರು ಹಾಗೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಹಿಂದೂ ಧರ್ಮ ಹಿಂದೆ ಕೂಡ ಇಂತಹ ಸಂಘರ್ಷ, ಸವಾಲುಗಳಿಗೆ ಮುಖಾಮುಖಿ ಆಗಿರುವುದನ್ನು ನೆನಪಿನಲ್ಲಿಡಬೇಕು. 'ಸಂಪ್ರದಾಯ ವಿರೋಧಿಗಳು, ಬಂಡಾಯಗಾರರು, ಧರ್ಮವನ್ನೇ ಅನುಮಾನಿಸುವವರು, ನಾಸ್ತಿಕರು ಅಥವಾ ಆಕ್ರಮಣಕಾರಿ ಮತಧರ್ಮಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹಾಗೂ ಅದಕ್ಕೆ ಪ್ರತಿರೋಧ ಒಡ್ಡುವ ಬಲ ತನಗಿರುವುದನ್ನು ಅದು ಹಿಂದಿನಿಂದಲೂ ಶ್ರುತಪಡಿಸುತ್ತಲೇ ಬಂದಿದೆ' ಎಂದು ಲೇಖಕ ಆಕ್ಟೇವಿಯಾ ಪಾಜ್‍ನೇ ವಿಶ್ಲೇಷಿಸಿರುವುದನ್ನು ನಾವು ಗಮನಿಸಬೇಕು.

ಈ ಧರ್ಮವು ತನ್ನ ವೈವಿಧ್ಯಮಯ, ಶ್ರೀಮಂತವಾದ ಬಹುತ್ವದ ತೆಕ್ಕೆಯೊಳಗೆ ಇವೆಲ್ಲವನ್ನೂ ಒಳಗೊಂಡಿದೆ. ಭಾರತ ನಾಡಿನಲ್ಲಿ ಜನ್ಮತಳೆದ ಸಿಖ್, ಬೌದ್ಧ ಮತ್ತು ಜೈನ ಧರ್ಮಗಳನ್ನೆಲ್ಲಾ ಸ್ಥಾಪಿಸಿದ್ದು ಮೂಲತಃ ಹಿಂದೂ ಧರ್ಮೀಯರಾದ ಬಂಡಾಯಗಾರರೇ. ಅಂತಹ ಬುದ್ಧನನ್ನು ಕೂಡ ಹಲವು ಹಿಂದೂ ದೇಗುಲಗಳಲ್ಲಿ ಇತರ ದೇವರುಗಳೊಟ್ಟಿಗೆ ಪೂಜಿಸಲಾಗುತ್ತದೆ. ಲಿಂಗಾಯತ ಮತವನ್ನು ಸ್ಥಾಪಿಸಿದ ಸಮಾಜ ಸುಧಾರಕ, ತತ್ವಜ್ಞಾನಿ ಬಸವೇಶ್ವರ ಅಥವಾ ಬಸವಣ್ಣ ಕೂಡ ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಒಬ್ಬ ಬ್ರಾಹ್ಮಣನೇ. ಹೀಗಾಗಿ ಅವರು ಪ್ರತ್ಯೇಕ ಧರ್ಮ ಹೊಂದಲು ಬಯಸುವುದಾದರೆ ಹಿಂದೂಗಳು ಅದರಿಂದ ಅಭದ್ರತೆಗೆ ಒಳಗಾಗಬೇಕಾದ ಪ್ರಮೇಯವೇನೂ ಇಲ್ಲ. ಹಿಂದುತ್ವವು ಅಪಾರ ಸಹಾನುಭೂತಿಯುಳ್ಳ ಹಾಗೂ ಇಡೀ ಬ್ರಹ್ಮಾಂಡವನ್ನೇ ಸಮಷ್ಟಿ ಪ್ರಜ್ಞೆಯಿಂದ ನೋಡುವ ಉದಾರವಾದಿ ಧರ್ಮವಾಗಿದೆ. ಗೌರಿ ಇತರರನ್ನು ಟೀಕಿಸುವಾಗ ಕೆಲವೊಮ್ಮೆ ಎಲ್ಲೆ ಮೀರಿರಬಹುದು; ಕೆಲವೊಮ್ಮೆ ಪಕ್ಷಪಾತ ಅಥವಾ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ನಡೆದುಕೊಂಡಿರಲೂಬಹುದು. ಬಲಪಂಥೀಯರೆಡೆಗೆ ಪೂರ್ವಗ್ರಹ ಹೊಂದಿದ್ದ ಅವರು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಹಾಗೂ ಎಡಪಂಥೀಯರ ದೌರ್ಜನ್ಯಗಳಿಗೆ, ಕೇರಳದಲ್ಲಿ ಎಡಪಂಥೀಯ ಮೈತ್ರಿ ಸರ್ಕಾರದಿಂದ ನಡೆಯುತ್ತಿರುವ ಕೊಲೆಗಳ ಬಗ್ಗೆ ಅಥವಾ ನಕ್ಸಲರಿಂದ ನಡೆಯುವ ಮುಗ್ಧರ ಹತ್ಯೆ ಬಗ್ಗೆ ಚಕಾರ ಎತ್ತುವುದಿಲ್ಲ ಎಂಬ ಟೀಕೆಗಳೂ ಇದ್ದವು. ಆದರೆ ಇದ್ಯಾವುದೂ ಆಕೆಯ ಹತ್ಯೆಯನ್ನು ಸಮರ್ಥಿಸಲಾರದು. ಹಿಂದೂ ಧರ್ಮ ಸಾರುವ ಸಹಿಷ್ಣುತೆ ಮತ್ತು ಅಹಿಂಸೆಯ ತತ್ವಗಳಿಗೆ ಇದು ಕಳಂಕ ಅಂಟಿಸಿದಂತೆಯೇ.

ಹಿಂದೂ ಧರ್ಮಕ್ಕೆ ಸೇರಿದ ಎಲ್ಲಾ ಧಾರ್ಮಿಕ ಪ್ರಮುಖರು ಹಾಗೂ ಸಂಘಟನೆಗಳ ಪ್ರಮುಖರೆಲ್ಲಾ ಮುಕ್ತವಾಗಿ ಹಾಗೂ ಘಂಟಾಘೋಷವಾಗಿ ಹತ್ಯೆಯನ್ನು ಖಂಡಿಸುವ ಜತೆಗೆ ಅಸಹಿಷ್ಣುತೆ ಎಂಬ ವಿಷದ ವಿರುದ್ಧ ಧ್ವನಿ ಎತ್ತಬೇಕಿದೆ. ಇದೇ ರೀತಿ ಮುಸ್ಲಿಂ ಮೌಲ್ವಿಗಳು ಮತ್ತು ಆ ಸಮುದಾಯದ ವಿವಿಧ ಕ್ಷೇತ್ರಗಳ ನಾಯಕರು ಮುಂದೆ ಬಂದು ಇಸ್ಲಾಂ ಭಯೋತ್ಪಾದಕ ಸಂಘಟನೆಗಳಿಂದ ಆಗುತ್ತಿರುವ ಹತ್ಯೆಗಳನ್ನು ಖಂಡಿಸಬೇಕು. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಇಂತಹ ಹತ್ಯೆಯನ್ನು ಖಂಡಿಸಿರಬಹುದು. ಆದರೆ ಬಹುತೇಕರು ಈ ಬಗ್ಗೆ ಮೌನವಾಗಿಯೇ ಇದ್ದಾರೆ. ಅವರು ಈಗ ಸ್ಪಷ್ಟವಾದ ನಿಲುವು ತಳೆಯಬೇಕು. ಇವರೆಲ್ಲಾ ಮಾನವೀಯವಾದ, ಬಹುತ್ವಕ್ಕೆ ಪೂರಕವಾದ, ಮುಕ್ತ ಸಮಾಜದ ಪರವಾಗಿ ಇದ್ದಾರೋ ಅಥವಾ ಜಗತ್ತಿನ ಬಗ್ಗೆ ಭಿನ್ನ ದೃಷ್ಟಿಕೋನ ಹೊಂದಿದವರನ್ನು ಕೊಲ್ಲುವ ಮತಾಂಧರು ಅಥವಾ ಮೂಲಭೂತವಾದಿಗಳ ಪರ ಇದ್ದಾರೋ ಎಂಬ ಸಂಶಯಕ್ಕೆ ಎಡೆಮಾಡಿಕೊಡದಂತೆ ಸ್ಪಷ್ಟ ನಿಲುವು ತಳೆಯಬೇಕು.

ನಾಸ್ತಿಕವಾದಿಯಾದ ಆಲ್ಬರ್ಟ್ ಕಾಮುನನ್ನು 1948ರಲ್ಲಿ ಕ್ರೈಸ್ತರ ಧಾರ್ಮಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಲು ಕರೆಸಿದಾಗ ಅವನು ಭಾವುಕವಾಗಿ ಹೀಗೆ ಹೇಳಿದ- ’ನಮಗೀಗ ಸ್ಪಷ್ಟವಾಗಿ ಮಾತನಾಡಿ ಸಮಸ್ಯೆಗಳನ್ನು ತಿಳಿಗೊಳಿಸಲು ಕಟಿಬದ್ಧರಾದವರ ತಂಡ ಬೇಕಾಗಿದೆ. ಜಗತ್ತಿಗೆ ಇಂದು ನಿಜವಾದ ಸಂವಾದ ಬೇಕಾಗಿದೆ. ಯಾರು ಎಂತಹ ಸಂದರ್ಭದಲ್ಲೂ ತಮ್ಮತನ ಉಳಿಸಿಕೊಂಡು ತೆರೆದ ಮನಸ್ಸಿನಿಂದ ಮಾತನಾಡುವರೋ ಅಂಥವರೊಂದಿಗೆ ಮಾತ್ರ ಸಂವಾದ ಸಾಧ್ಯ. ಸ್ಪೇನ್‍ನ ಬಿಷಪ್‍ನೊಬ್ಬ ರಾಜಕೀಯ ಹತ್ಯೆಗಳನ್ನು ಆಶೀರ್ವದಿಸುವುದಾದರೆ, ಆ ಕ್ಷಣದಿಂದಲೇ ಆತನ ಬಿಷಪ್ ಪಟ್ಟ ಛಿದ್ರವಾಗುತ್ತದೆ. ಅಷ್ಟೇ ಅಲ್ಲ ಆತ ಕ್ರೈಸ್ತನೂ ಆಗಿರುವುದಿಲ್ಲ; ಮೊತ್ತಮೊದಲಿಗೆ ಮನುಷ್ಯನೂ ಆಗಿರುವುದಿಲ್ಲ. ಆತ ಒಂದು ನಾಯಿಗೆ ಸಮನಾಗುತ್ತಾನೆ... ಹಾಗಾದಾಗ ಕ್ರೈಸ್ತರು ಬದುಕುತ್ತಾರೆ. ಆದರೆ ಕ್ರೈಸ್ತತ್ವ ಎಂಬುದು ಸತ್ತುಹೋಗುತ್ತದೆ'.

ದುರುದ್ದೇಶದ ವದಂತಿಗಳು ಹಾಗೂ ಹುಸಿ ಸುದ್ದಿಗಳು ದೇಶವನ್ನು ವ್ಯಾಪಿಸಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣದೊಂದಿಗೆ ಕೊಚ್ಚಿಹೋಗುತ್ತಿದ್ದಾರೆ. ಕೇಂದ್ರದ ಆಡಳಿತಾರೂಢ ಪಕ್ಷ ಹಾಗೂ ರಾಜ್ಯ ಸರ್ಕಾರದ ಪಕ್ಷಗಳ ರಾಜಕೀಯ ಸಿದ್ಧಾಂತಗಳು ಹಾಗೂ ಎಡ-ಬಲಗಳ ಸಿದ್ಧಾಂತಗಳಿಂದ ನಲುಗಿ ಹೋಗಿದ್ದಾರೆ.

ಗೌರಿ ಹಾಗೂ ಅಂತಹುದೇ ಇತರ ಹತ್ಯೆಗಳು ಎರಡು ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು ಈ ಬಗ್ಗೆ ಸಿಬಿಐ ಅಥವಾ ಕೇಂದ್ರ ಗುಪ್ತದಳದಂತಹ ಸಂಸ್ಥೆಗಳ ಸಂಘಟಿತ ಕಾರ್ಯಾಚರಣೆ ಅಗತ್ಯ. ಆದರೆ ಪೊಲೀಸ್ ಮತ್ತು ರಾಜ್ಯ ಗುಪ್ತದಳ, ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದರೆ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಎಂಬ ಅಪವಾದಗಳಿಗೆ ಗುರಿಯಾಗಿರುವುದು ನಮ್ಮ ಕಾಲದ ದುರಂತ. ಇವೆರಡೂ ಪರಸ್ಪರ ನಂಬುವುದು, ಈ ಸಂಸ್ಥೆಗಳ ಬಗೆಗೆ ಜನರ ಮನಸ್ಸಿನಿಂದ ದೂರವಾಗಿರುವ ವಿಶ್ವಾಸಾರ್ಹತೆಯನ್ನು ಪುನಃ ಮೂಡಿಸುವುದೇ ಇದಕ್ಕೆ ಉತ್ತರವಾಗಬಹುದಾಗಿದೆ.

ಎಡಪಂಥ ಮತ್ತು ಬಲಪಂಥಗಳಲ್ಲಿ ಹಂಚಿಹೋಗಿರುವ ರಾಜಕೀಯ, ಸಾಮಾಜಿಕ ಮತ್ತು ಬೌದ್ಧಿಕ ಕ್ಷೇತ್ರಗಳ ನಾಯಕರು ಸಂಕುಚಿತ ಗಡಿಗಳನ್ನು ಮೀರಿ ಎಲ್ಲರ ಹಿತ ಬಯಸುವ, ಮುಕ್ತ ಹಾಗೂ ಸ್ವತಂತ್ರ ಸಮಾಜವನ್ನು ಸೃಷ್ಟಿಸಬೇಕಿದೆ. ದ್ವೇಷ, ಅಪನಂಬಿಕೆ, ಮತಾಂಧತೆಯ ವಿಷ ತಾರಕಕ್ಕೇರಿ ಇಡೀ ರಾಷ್ಟ್ರವನ್ನು ವಿಧ್ವಂಸಗೊಳಿಸುವ ಮುನ್ನ ಈ ಕೆಲಸ ಆಗಬೇಕಾಗಿದೆ.

ನಮ್ಮೆಲ್ಲರ ಪ್ರೀತಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 'ಕಿತಾಬ್ ಕಾ ಜವಾಬ್, ಕಿತಾಬ್ ಸೇ ಹೋತಾ ಹೈ' ಎಂಬ ಮಾತನ್ನು ನೆನಪಿಸಿಕೊಳ್ಳುವುದು ಸೂಕ್ತ. ಹೌದು, ಪುಸ್ತಕಗಳಿಗೆ ಗುಂಡುಗಳಿಂದ ಉತ್ತರ ನೀಡಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT