ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ಮೇಲೆ ನಿರ್ಬಂಧ ಹೇರಿದ ವಿಶ್ವಸಂಸ್ಥೆ

Last Updated 12 ಸೆಪ್ಟೆಂಬರ್ 2017, 19:31 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಉತ್ತರ ಕೊರಿಯಾ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರುವ ಅಮೆರಿಕದ ನಿರ್ಣಯವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಯನ್ನು ತಡೆಯುವ ಉದ್ದೇಶದಿಂದ ತೈಲ ಆಮದು ಹಾಗೂ ಜವಳಿ ರಫ್ತು ಮೇಲೆ ಕಠಿಣ ನಿರ್ಬಂಧ ಹೇರಲಾಗಿದೆ.

ಈ ತನಕ ಹೇರಲಾಗಿರುವ ನಿರ್ಬಂಧಗಳಲ್ಲಿಯೇ ಇದು ಹೆಚ್ಚು ಕಠಿಣವಾದದ್ದಾಗಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಆಗಿರುವ ನಿಕ್ಕಿ ಹ್ಯಾಲೆ ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 3ರಂದು ಉತ್ತರ ಕೊರಿಯಾ ನಡೆಸಿದ ಆರನೇ ಹಾಗೂ ಅತಿ ದೊಡ್ಡಮಟ್ಟದ ಅಣ್ವಸ್ತ್ರ ಪರೀಕ್ಷೆಗೆ ಪ್ರತಿಯಾಗಿ ಈ ನಿರ್ಬಂಧ ವಿಧಿಸಲಾಗಿದೆ.

ಉತ್ತರ ಕೊರಿಯಾದ ತೈಲ ಆಮದು ಸಂಪೂರ್ಣವಾಗಿ ನಿಷೇಧಿಸುವುದು ಸೇರಿದಂತೆ ಇನ್ನಷ್ಟು ಕಠಿಣ ನಿರ್ಬಂಧ ಹೇರುವಂತೆ ಅಮೆರಿಕ ಈ ಮೊದಲು ಪ್ರಸ್ತಾಪ ಸಲ್ಲಿಸಿತ್ತು. ಆದರೆ ಉತ್ತರ ಕೊರಿಯಾದ ಮಿತ್ರ ರಾಷ್ಟ್ರಗಳಾಗಿರುವ ರಷ್ಯಾ ಹಾಗೂ ಚೀನಾ ಈ ಕ್ರಮಗಳನ್ನು ತಗ್ಗಿಸಲು ಒಪ್ಪಿಗೆ ಸೂಚಿಸಿದ ಬಳಿಕವಷ್ಟೆ ನಿರ್ಬಂಧ ಹೇರುವ ಕ್ರಮ ಅಂಗೀಕಾರಗೊಂಡಿತು.‌

ಅಣ್ವಸ್ತ್ರ ತಯಾರಿಕೆ ಹಾಗೂ ಪರೀಕ್ಷೆ ನಡೆಸಲು ಉತ್ತರ ಕೊರಿಯಾಗೆ ತೈಲವೇ ‘ಜೀವದ್ರವ್ಯ’ ಆಗಿದೆ. ಈ ನಿರ್ಬಂಧದಿಂದಾಗಿ, ಉತ್ತರ ಕೊರಿಯಾಗೆ ರಫ್ತಾಗುತ್ತಿದ್ದ ತೈಲದ ಶೇ 30ರಷ್ಟು ‍ಪ್ರಮಾಣ ಕಡಿತಗೊಳಿಸಲಾಗಿದೆ.

‘ಎಲ್ಲಾ ದೇಶಗಳು ಸಹ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಮಾತ್ರ, ಅಣ್ವಸ್ತ್ರ ಪರೀಕ್ಷೆ ನಡೆಸುವ ಉತ್ತರ ಕೊರಿಯಾದ ಸಾಮರ್ಥ್ಯ ತಗ್ಗಿಸಲು ಸಾಧ್ಯ’ ಎಂದು ಹ್ಯಾಲೆ ಹೇಳಿದ್ದಾರೆ.

ಶೇ 90 ರಫ್ತು ನಿಷೇಧ: ಹೊಸದಾಗಿ ಹೇರಿರುವ ನಿರ್ಬಂಧ ಹಾಗೂ ಕಳೆದ ತಿಂಗಳು ಹೇರಲಾಗಿರುವ ನಿರ್ಬಂಧವನ್ನು ಒಟ್ಟಾಗಿ ಪರಿಗಣಿಸಿದಾಗ, ಉತ್ತರ ಕೊರಿಯಾದ ಶೇ 90ರಷ್ಟು ರಫ್ತು ಪ್ರಮಾಣ ಸಂಪೂರ್ಣವಾಗಿ ನಿಷೇಧಕ್ಕೊಳಗಾಗುತ್ತದೆ. ವಾರ್ಷಿಕ ಆದಾಯದಲ್ಲಿ ಅಂದಾಜು ₹3202 ಕೋಟಿ ನಷ್ಟ ಆಗುತ್ತದೆ.

**

ಅಣ್ವಸ್ತ್ರ ಪರೀಕ್ಷೆ ಸ್ಥಗಿತಕ್ಕೆ ಕ್ರಮ

‘ಅಣ್ವಸ್ತ್ರ ಹೊಂದಿರುವ ಉತ್ತರ ಕೊರಿಯಾವನ್ನು ವಿಶ್ವ ಎಂದಿಗೂ ಅಂಗೀಕರಿಸುವುದಿಲ್ಲ. ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಪರೀಕ್ಷೆಯನ್ನು ಸ್ಥಗಿತಗೊಳಿಸದೆ ಇದ್ದಲ್ಲಿ, ಅದನ್ನು ಸ್ಥಗಿತಗೊಳಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎನ್ನುವುದನ್ನು ತಿಳಿಸುತ್ತಿದ್ದೇವೆ. ಈ ನಿರ್ಣಯದಿಂದ ನೈಸರ್ಗಿಕ ಅನಿಲ ಹಾಗೂ ಪೆಟ್ರೋಲಿಯಂಗೆ ಪರ್ಯಾಯವಾಗಿ ಬಳಕೆ ಮಾಡುವ ತೈಲದ ಇತರೆ ಉಪತ್ಪನ್ನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ’ ಎಂದು ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.

‘ಸರಿಯಾದ ಕೆಲಸ ಮಾಡುವಂತೆ ನಾವು ಉತ್ತರ ಕೊರಿಯಾಗೆ ಹೇಳುತ್ತಲೇ ಇದ್ದೇವೆ. ಇನ್ನುಮುಂದೆ ಉತ್ತರ ಕೊರಿಯಾಗೆ ತಪ್ಪು ಕೆಲಸ ಮಾಡುವ ಸಾಮರ್ಥ್ಯವೇ ಇಲ್ಲದಂತೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯ ಸಹ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT