ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಅಂತ್ಯಗೊಳಿಸಿದ ಅನ್ನದಾತರು

Last Updated 13 ಸೆಪ್ಟೆಂಬರ್ 2017, 5:33 IST
ಅಕ್ಷರ ಗಾತ್ರ

ನವಲಗುಂದ: ಹೋರಾಟಗಾರರ ವಿವಿಧ ಬೇಡಿಕೆಗಳನ್ನು ಶುಕ್ರವಾರದ ಒಳಗಾಗಿ ಈಡೇರಿಸುವ ಭರವಸೆ ನೀಡಿದ ಉಪವಿಭಾಗಾಧಿಕಾರಿ ಅವರ ಆಶ್ವಾಸನೆಯ ಮೇರೆಗೆ ನವಲಗುಂದದ ಪಕ್ಷಾತೀತ ಹೋರಾಟ ಸಮಿತಿ ಸದಸ್ಯರು ಮಂಗಳವಾರ ರಾತ್ರಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು. ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಆರು ರೈತರ ಆರೋಗ್ಯದಲ್ಲಿ ಮಂಗಳವಾರ ತೀವ್ರ ಏರುಪೇರು ಕಂಡುಬಂತು.

ತಪಾಸಣೆ ನಡೆಸಿದ ವೈದ್ಯರು ನಿತ್ರಾಣಗೊಂಡಿದ್ದ ಹೋರಾಟಗಾರರಿಗೆ ಡ್ರಿಪ್ಸ್(ಸಲೈನ್‌) ಹಾಕಿದರು. ಕುಟುಂಬದವರ ಮನವಿಗೂ ಹೋರಾಟಗಾರರು ಜಗ್ಗಲಿಲ್ಲ. ಪಟ್ಟಣಕ್ಕೆ ಭೇಟಿ ನೀಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ ಹಾಗೂ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಹೋರಾಟ ಹಿಂಪಡೆಯುವಂತೆ ಮನವಿ ಮಾಡಿಕೊಂಡರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್‌, ‘ನಿಮ್ಮ ಹೋರಾಟಕ್ಕೆ ಹಿಂದೆಯೂ ಬೆಂಬಲ ನೀಡಿದ್ದೆವು, ಮುಂದೆಯೂ ನೀಡುತ್ತೇವೆ. ನವಲಗುಂದದಲ್ಲಿ ಹೋರಾಟ ನಡೆಸಿದರೆ ಸರ್ಕಾರಕ್ಕೆ ಕೇಳಿಸದು. ಬೆಂಗಳೂರಿಗೆ ಬನ್ನಿ, ಅಲ್ಲಿ ಹೋರಾಟ ಮಾಡೋಣ. ರೈತರಿಗೆ ಸಾಯುವಂಥ ಪರಿಸ್ಥಿತಿ ಬಂದಿಲ್ಲ. ಹೋರಾಟ ಮೂಲಕವೇ ನಮ್ಮ ಹಕ್ಕನ್ನು ಪಡೆಯೋಣ’ ಎಂದರು.

ನಂತರ ಪಕ್ಷಾತೀತ ಹೋರಾಟ ಸಮಿತಿಯ ಸದಸ್ಯರು ಸಂಜೆ 7ಕ್ಕೆ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದರು. ಸರ್ಕಾರದ ಪರವಾಗಿ ಬಂದಿದ್ದ ಉಪವಿಭಾಗಾಧಿಕಾರಿ ಅವರು ನೀಡುವ ಭರವಸೆಯ ಮೇಲೆ ಸತ್ಯಾಗ್ರಹ ಅಂತ್ಯಗೊಳಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಟ್ಟು ಹಿಡಿದರು.

ನಂತರ ಮಾತನಾಡಿದ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ‘ಬೆಣ್ಣಿಹಳ್ಳ ಪರಿಹಾರ, ಪೊಲೀಸರ ದೌರ್ಜನ್ಯ ಪ್ರಕರಣಕ್ಕೆ ಒಳಗಾದವರಿಗೆ ಪರಿಹಾರ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ಹಿಂಪಡೆಯುವುದು, ಬೆಳೆ ವಿಮೆ ವಿತರಣೆ ಕುರಿತಂತೆ ಶುಕ್ರವಾರದ ಒಳಗೆ ಕಡತ ಪರಿಶೀಲಿಸಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೈತರು, ‘ಶುಕ್ರವಾರದ ನಂತರವೂ ಬೇಡಿಕೆ ಈಡೇ ರದಿದ್ದರೆ ಆಮರಣ ಹೋರಾಟ ಮುಂದುವರಿಸುವುದಾಗಿ’ ಕಟ್ಟುನಿಟ್ಟಿನ ಸಂದೇಶ ನೀಡಿ ಉಪವಾಸ ಅಂತ್ಯಗೊಳಿಸಿದರು.

ಉಪವಾಸ ನಡೆಸಿ ನಿತ್ರಾಣಗೊಂಡಿದ್ದ ಶಿವಪ್ಪ ಸಂಗಟಿ, ರವಿ ಪಾಟೀಲ, ಬೆನ್ನಪ್ಪ ಕುರಹಟ್ಟಿ, ಯಲ್ಲಪ್ಪ ದಾಡಿಬಾವಿ, ಹುಸೇನ್‌ಸಾಬ್‌ ನದಾಫ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ಉಪವಾಸ ಹಿಂಪಡೆಯಲು ನಿರಾಕರಿಸಿದ ಸಂಗಪ್ಪ ನಿಡವಣಿ:  ಎಲ್ಲರ ತೀರ್ಮಾನದಂತೆ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಉಪವಾಸ ನಿರತ ಸಂಗಪ್ಪನಿಗೆ ಎಳೆನೀರು ಕೊಡಲು ಮುಂದಾದಾಗ, ‘ನಾನು ಸತ್ತರೂ ಪರವಾಗಿಲ್ಲ ಹೋರಾಟ ಹಿಂಪಡೆಯುವುದಿಲ್ಲ, ವಿನಾಕಾರಣ ನನ್ನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಎಸ್.ಐ ಮಹಾದೇವ ಯಲಿಗಾರ ಮೇಲಿಂದ ಮೇಲೆ ಕಿರುಕುಳ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

* * 

ರೈತರ ವಿವಿಧ ಬೇಡಿಕೆಗಳ ಕುರಿತು  ಶುಕ್ರವಾರದ ಒಳಗೆ ಕಡತ ಪರಿಶೀಲಿಸಿ ಇತ್ಯರ್ಥ ಮಾಡಲು ಯತ್ನಿಸಲಾಗುವುದು
ಮಹೇಶ ಕರ್ಜಗಿ
ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT