ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಾಗಿದ್ದರೂ ಅನುದಾನ ಬಳಕೆ ಅಷ್ಟಕ್ಕಷ್ಟೇ!

Last Updated 13 ಸೆಪ್ಟೆಂಬರ್ 2017, 5:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರು ಸಮುದಾಯ ಭವನಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಎಲ್ಲ ಅನುದಾನ ಬಳಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ನಾಲ್ಕು ವರ್ಷಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ. ಗ್ರಾಮಗಳ ದೇವಸ್ಥಾನ, ಮಸೀದಿಗಳ ಹತ್ತಿರದ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ನಾಲ್ಕು ವರ್ಷಗಳಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆಗಾಗಿ ನಾಲ್ಕು ವರ್ಷಗಳಲ್ಲಿ ₹37 ಲಕ್ಷ ಅನುದಾನವನ್ನು ನೀಡಿದ್ದಾರೆ.

ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕಾಗಿ ₹ 8 ಲಕ್ಷ ಬಿಡುಗಡೆ ಮಾಡಿದ್ದು, ಅದು ಕಾರ್ಯಾರಂಭ ಮಾಡಿದೆ. ಸಮುದಾಯ ಭವನದ ಕಾಮಗಾರಿಗಳಿಗೆ ನೀಡಿದ ಅನುದಾನ ಸಾಲದ್ದರಿಂದ ಸಾಕಷ್ಟು ಸಮುದಾಯ ಭವನಗಳ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅವುಗಳಿಗೆ ಮತ್ತೆ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.

ರಸ್ತೆ ಅಭಿವೃದ್ಧಿ, ಶಾಲಾ ಕೊಠಡಿ ನಿರ್ಮಾಣ, ಗರಡಿ ಮನೆ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಹೆಚ್ಚಿನ ಕಾಮಗಾರಿಗಳನ್ನು ವಹಿಸಲಾಗಿದೆ.

2013–14ರಲ್ಲಿ ₹2 ಕೋಟಿ ಅನುದಾನ ಬಿಡುಗಡೆಯಾಗಿದೆ. ₹1.84 ಕೋಟಿಗೆ ಮಂಜೂರಾತಿ ಪತ್ರ ನೀಡಲಾಗಿದ್ದು, ₹1.68 ಕೋಟಿ ಖರ್ಚಾಗಿದೆ. ಇನ್ನು ₹32 ಲಕ್ಷ ಖರ್ಚಾಗಬೇಕಿದೆ. ಇದೇ ವರ್ಷ 56 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 39 ಪೂರ್ಣಗೊಂಡಿವೆ. 17 ಕಾಮಗಾರಿಗಳು ಬಾಕಿ ಉಳಿದಿವೆ.

2014–15ರಲ್ಲಿ ₹2 ಕೋಟಿ ಅನುದಾನ ಮಂಜೂರಾಗಿದೆ. ₹ 1.88 ಕೋಟಿಗೆ ಮಂಜೂರಾತಿ ಪತ್ರ ನೀಡಲಾಗಿದೆ. ₹1.74 ಕೋಟಿ ಖರ್ಚಾಗಿದೆ. ₹26 ಲಕ್ಷ ಬಾಕಿ ಉಳಿದಿದೆ. ಒಟ್ಟು 46 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 30 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಇನ್ನೂ 16 ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ.

2015–16ರಲ್ಲಿ ₹2 ಕೋಟಿ ಮಂಜೂರಾಗಿದ್ದು, ₹1.54 ಕೋಟಿಗೆ ಮಂಜೂರಾತ್ರಿ ಪತ್ರ ನೀಡಲಾಗಿದೆ. ₹1.28 ಕೋಟಿ ಖರ್ಚಾಗಿದ್ದು, ₹72 ಲಕ್ಷ ಬಾಕಿ ಉಳಿದಿದೆ. ಒಟ್ಟು 35 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೇವಲ ಒಂಬತ್ತು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ.

2016–17ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, ₹1.54 ಕೋಟಿ ಮಂಜೂರಾತಿ ಪತ್ರ ನೀಡಿದ್ದಾರೆ. ₹1.16 ಕೋಟಿ ಖರ್ಚಾಗಿದ್ದು, ₹ 84 ಲಕ್ಷ ಬಾಕಿ ಉಳಿದಿದೆ. 33 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೇವಲ ಒಂದು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಕೆಲವು ಕಾಮಗಾರಿಗಳಿಗೆ ಇನ್ನೂ ಅಂದಾಜು ಪತ್ರಿಕೆಯನ್ನೇ ಸಲ್ಲಿಸಿಲ್ಲ. ₹2.13 ಕೋಟಿ ಅನುದಾನಕ್ಕೆ ಶಾಸಕರು ಮಂಜೂರಾತಿಯನ್ನೇ ನೀಡಿಲ್ಲ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ಸಚಿವ ವಿನಯ ಕುಲಕರ್ಣಿ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT