ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ಬೇಡಿಕೆ ಇನ್ನೂ ಅರಣ್ಯರೋದನ..!

Last Updated 13 ಸೆಪ್ಟೆಂಬರ್ 2017, 5:52 IST
ಅಕ್ಷರ ಗಾತ್ರ

ವಿಜಯಪುರ: ಒಂದೂವರೆ ದಶಕದ ಹೋರಾಟಕ್ಕೆ ಮನ್ನಣೆ ದೊರಕದಾಗಿದೆ. ಆಲಮೇಲ ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಹಳ್ಳಿಗಳ ಜನರ ಕೂಗು ಅರಣ್ಯರೋದನವಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಐತಿಹಾಸಿಕ ಆಲಮೇಲ ಪಟ್ಟಣವನ್ನು ಕೇಂದ್ರಸ್ಥಾನವನ್ನಾಗಿಸಿಕೊಂಡು, ಇಂಡಿ ತಾಲ್ಲೂಕಿನ 26 ಹಳ್ಳಿಗಳು, ಸಿಂದಗಿ ತಾಲ್ಲೂಕಿನ 46 ಹಳ್ಳಿಗಳನ್ನು ಸೇರ್ಪಡೆ ಮಾಡಿ ಆಲಮೇಲ ತಾಲ್ಲೂಕು ಘೋಷಿಸಬೇಕು ಎಂಬ ಬೇಡಿಕೆಗೆ ರಾಜ್ಯ ಸರ್ಕಾರ ಮನ್ನಣೆ ನೀಡದಿರುವುದು ಈ ಭಾಗದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

‘ಆಲಮೇಲ ಪಟ್ಟಣ ಪಂಚಾಯ್ತಿಯಾಗಿ ಎರಡು ವರ್ಷದ ಹಿಂದೆ ಮೇಲ್ದರ್ಜೆಗೇರಿದೆ. ಬಹು ವರ್ಷಗಳಿಂದ ಉಪ ತಹಶೀಲ್ದಾರ್ ಕಚೇರಿ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೀಜ ಸಂಶೋಧನಾ ಕೇಂದ್ರವೂ ಇಲ್ಲಿದೆ.

ಮೂರು ಪದವಿ ಕಾಲೇಜುಗಳು, ನಾಲ್ಕು ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಏಳು ಪ್ರೌಢಶಾಲೆಗಳು ಪಟ್ಟಣದಲ್ಲಿವೆ. 50ಕ್ಕೂ ಹೆಚ್ಚು ಹಳ್ಳಿಗಳಿಗೆ ಆಲಮೇಲ ಕೇಂದ್ರ ಸ್ಥಾನ. ವ್ಯಾಪಾರ–ವಹಿವಾಟು ಮೊದಲಿನಿಂದಲೂ ಬಿರುಸಿನಿಂದ ನಡೆದಿದೆ.

ಇಂಡಿ ತಾಲ್ಲೂಕಿನ ನಾದ ಕೆ.ಡಿ. ಗ್ರಾಮದ ಜಮಖಂಡಿ ಶುಗರ್ಸ್‌, ಆಲಮೇಲದ ಕೆಪಿಆರ್‌ ಶುಗರ್ಸ್ ಸೇರಿದಂತೆ ಮಲಘಾಣದ ಮನಾಲಿ ಶುಗರ್ಸ್‌ ಸಕ್ಕರೆ ಕಾರ್ಖಾನೆಗಳಿಗೆ ಆಲಮೇಲವೇ ಕೇಂದ್ರ ಸ್ಥಾನ. ತಾಲ್ಲೂಕು ಕೇಂದ್ರವಾಗುವ ಸಕಲ ಸೌಲಭ್ಯ, ಅರ್ಹತೆ ಹೊಂದಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಾವು ವಂಚಿತರಾಗಿದ್ದೇವೆ’ ಎಂದು ಆಲಮೇಲ ಪಟ್ಟಣ ಪಂಚಾಯ್ತಿ ಸದಸ್ಯ ಸಾಧಿಕ್‌ ಸುಂಬಡ ತಿಳಿಸಿದರು.

ಹೋರಾಟದ ಹಿನ್ನೆಲೆ: ‘ಆಲಮೇಲ ತಾಲ್ಲೂಕು ಕೇಂದ್ರ ಸ್ಥಾನಮಾನಕ್ಕಾಗಿ 2003ರ ಮಾರ್ಚ್‌ನಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಆಗಿನ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಿದ್ದರಾಮ ಪಾಟೀಲ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷರಾಗಿದ್ದರೆ, ಜಿಲ್ಲಾ ಪಂಚಾಯ್ತಿ ಸದಸ್ಯ, ಹಾಲಿ ಶಾಸಕ ರಮೇಶ ಭೂಸನೂರ ಉಪಾಧ್ಯಕ್ಷರಾಗಿದ್ದರು.
ಸುತ್ತಮುತ್ತಲ 50ಕ್ಕೂ ಹಳ್ಳಿಗಳ ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. 60 ದಿನ ಸತತವಾಗಿ ಆಲಮೇಲ ಪಟ್ಟಣದಲ್ಲಿ ಧರಣಿ ನಡೆಯಿತು. ಸಾರಿಗೆ ಸಂಸ್ಥೆಯ ಬಸ್‌ ಸುಡುವ ಮೂಲಕ ಹೋರಾಟ ತೀವ್ರ ಸ್ವರೂಪ ಪಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಜನರನ್ನು ಆಲಮೇಲ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿ ವಿಜಯಪುರದ ದರ್ಗಾ ಜೈಲಿಗಟ್ಟಿದ್ದರು. ಏಳೆಂಟು ವರ್ಷ ಪ್ರಕರಣ ನ್ಯಾಯಾಲಯದಲ್ಲಿ ನಡೆಯಿತು. ಊರಿಂದ ಬುತ್ತಿ ಕಟ್ಟಿಕೊಂಡು ಅಲೆದಾಡಿದೆವು. ಇದರಿಂದ ಹೋರಾಟದ ಕಾವು ತಗ್ಗಿತು. ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ರಮೇಶ ಭೂಸನೂರ 2008ರಲ್ಲಿ ಶಾಸಕರಾಗಿ ಆಯ್ಕೆಯಾದರು.

ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ 2013ರ ಬಜೆಟ್‌ನಲ್ಲಿ ಹೊಸ ತಾಲ್ಲೂಕು ಘೋಷಿಸಿದರು. ಈ ಪಟ್ಟಿಯಲ್ಲಿ ಆಲಮೇಲ ಕೈಬಿಟ್ಟಿದ್ದಕ್ಕೆ ಹೋರಾಟ ನಡೆದವು. ಕೆಲ ದಿನದ ಬಳಿಕ ನಿಷ್ಕ್ರಿಯವಾದವು.

2015ರಲ್ಲಿ ಆಲಮೇಲ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿದ ಸಂದರ್ಭ ತಾಲ್ಲೂಕು ಕೇಂದ್ರದ ಕನಸು ಮತ್ತೆ ಚಿಗುರಿತು. ಆದರೆ 2017ರ ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಿಸಿದ ತಾಲ್ಲೂಕುಗಳ ಪಟ್ಟಿಯಲ್ಲೂ ಆಲಮೇಲ ಸ್ಥಾನ ಪಡೆದಿರಲಿಲ್ಲ.

ಇದು ಹೋರಾಟ ಮತ್ತೆ ಕಾವು ಪಡೆಯಲು ಕಾರಣವಾಯ್ತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದ್ದರು. ಆದರೆ ಇದೀಗ ವಾರದ ಹಿಂದೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆಲಮೇಲ ತಾಲ್ಲೂಕು ಕೇಂದ್ರದ ಸ್ಥಾನಮಾನದಿಂದ ವಂಚಿತಗೊಂಡಿದ್ದಕ್ಕೆ ಹೋರಾಟ ಬಿರುಸು ಪಡೆದಿದೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಚಿಂತನೆ ಈ ಭಾಗದ ಗ್ರಾಮಸ್ಥರಲ್ಲಿ, ತಾಲ್ಲೂಕು ಕೇಂದ್ರದಿಂದ ವಂಚಿತಗೊಂಡ ಜನರಲ್ಲಿ ಬಲವಾಗಿ ಬೇರೂರಲಾರಂಭಿಸಿದೆ’ ಎಂದು ಹೋರಾಟದ ಚಿತ್ರಣವನ್ನು ತಾಲ್ಲೂಕು ಹೋರಾಟ ಸಮಿತಿಯ ಶಿವಾನಂದ ಮಾರ್ಸನಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಎಂ ಬಳಿಗೆ ನಿಯೋಗ ನಾಳೆ
‘ಆಲಮೇಲ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಈ ಭಾಗದ ಜನಪ್ರತಿನಿಧಿಗಳು, ಗಣ್ಯರು, ಹೋರಾಟಗಾರರು, ವರ್ತಕರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರ ನ್ನೊಳಗೊಂಡ ಆಲಮೇಲ ತಾಲ್ಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳ ನಿಯೋಗ, ಗುರುವಾರ (ಸೆ 14) ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ’ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.

* * 

ಬಿಜ್ಜಳರ ಕಾಲದ ಐತಿಹಾಸಿಕ ಪಟ್ಟಣ.  ಇಂದಿಗೂ ಪ್ರಮುಖ ವ್ಯಾಪಾರಿ ಸ್ಥಳ. 2003ರಿಂದಲೂ ಹೋರಾಟ ಬೆಂಬಲಿಸುತ್ತಿರುವೆ. ಮುಂದೆಯೂ ಬೆಂಬಲ ನೀಡುವೆ
ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ
ವಿರಕ್ತ ಮಠ, ಆಲಮೇಲ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT