ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ ತಾಲ್ಲೂಕು ರಚನೆ ಬೇಡಿಕೆಗೆ ಬೆಂಬಲ

Last Updated 13 ಸೆಪ್ಟೆಂಬರ್ 2017, 6:06 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ತಾಲ್ಲೂಕು ರಚನೆಗೆ ನಡೆಸುತ್ತಿರುವ ಧರಣಿಯಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಗಳ ಮುಖಂಡರು, ದಲಿತ ಸಂಘಟನೆ, ರೈತ ಸಂಘಟನೆ, ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ವ್ಯಾಪಕವಾಗಿ ಬೆಂಬಲ ವ್ಯಕ್ತವಾಯಿತು.

ಧರಣಿಯಲ್ಲಿ ಭಾಗವಹಿಸಿದ ಕಲ್ಲೋಳಿಯ ಈರಪ್ಪ ಬೆಳಕೂಡ ಮಾತನಾಡಿ ,‘ಮೂಡಲಗಿ ತಾಲ್ಲೂಕು ರಚನೆಗೆ ಎಲ್ಲ ಆಯೋಗಗಳ ವರದಿಯಲ್ಲಿ ಉಲ್ಲೇಖವಾಗಿದ್ದು, ಕೊನೆ ಗಳಿಗೆಯಲ್ಲಿ ಕೈಬಿಟ್ಟಿದ್ದು ನಂಬಿಕೆ ದ್ರೋಹವಾಗಿದೆ’ ಎಂದರು.

ಗೋಕಾಕ ತಾಲ್ಲೂಕಿನಲ್ಲಿ ಮೂಡಲಗಿ ಜೊತೆಗೆ ಕೌಜಲಗಿ ತಾಲ್ಲೂಕಾದರೆ ಯಾರದೂ ತಕರಾರಿಲ್ಲ. ಆದರೆ ಎರಡು ಬಜೆಟ್‌ದಲ್ಲಿ ಅನುಮೋದನೆ­ಗೊಂಡಿ­ರುವ ಮೂಡಲಗಿಯನ್ನು ಕೈಬಿಟ್ಟಿರು­ವುದು ಅತ್ಯಂತ ನೋವಿನ ಸಂಗತಿ ಎಂದರು.

ಮೂಡಲಗಿ ತಾಲ್ಲೂಕಿಗೆ ಆಡಳಿತಾತ್ಮಕ ಅನುಮತಿ ದೊರೆಯುವ­ವರೆಗೆ ಹೋರಾಟ ನಿಲ್ಲುವುದಿಲ್ಲ. ಇದು ಅಚಲವಾದದ್ದು ಎಂದು ಹೇಳಿದರು.ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೋಮವಾರ ಹೋರಾಟ ವೇದಿಕೆಯಲ್ಲಿ ಪ್ರತಿಜ್ಞೆ ಮಾಡಿದಂತೆ ಮೂಡಲಗಿ ತಾಲ್ಲೂಕಿಗೆ ಆಡಳಿತಾತ್ಮಕ ಅನುಮತಿ ಆದೇಶವನ್ನು ಜನರಿಗೆ ತಂದು ತೋರಿಸುವ ಮೂಲಕ ವೇದಿಕೆ ಹತ್ತಲಿ ಎಂದು ಸವಾಲು ಹಾಕಿದರು.

ಬಿಜೆಪಿ ಮುಖಂಡ ಅಶೋಕ ಪೂಜೇರಿ ಮಾತನಾಡಿ, ಮೂಡಲಗಿ ಜನರು ಹೋರಾಟ, ಧರಣಿ ಮಾಡು­ತ್ತಿರುವುದು ದುರ್ದೈವದ ಸಂಗತಿ. ದೇವರು ಕೊಟ್ಟರೂ ಪೂಜಾರಿ ಕೊಡ­ಲಿಲ್ಲ ಎನ್ನುವ ರೀತಿ ಜನರ ಹತಾಶೆಗೆ ಒಳಗಾಗುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಮೂಡಲಗಿ ಜೊತೆಗೆ ಇನ್ನೆರಡು ತಾಲ್ಲೂಕು ಮಾಡಿದರು ನಮ್ಮದೇನೂ ಅಭ್ಯಂತರವಿಲ್ಲ. ಮೊದಲು ಆಗಿರುವ ತಾಲ್ಲೂಕು ರಚನೆ ಆಗಲಿ ಎಂದರು.

ಬಿಜೆಪಿ ಮುಖಂಡ ಈರಪ್ಪ ಕಡಾಡಿ, ಕಾಂಗ್ರೆಸ್‌ ಮುಖಂಡ ರಮೇಶ ಉಟಗಿ, ಭೀಮಶಿ ಹಂದಿಗುಂದ, ಎಸ್.ಆರ್. ಸೋನವಾಲಕರ, ಡಿ.ಬಿ. ಪಾಟೀಲ, ರಾಜಾಪುರದ ಹಿಟ್ಟಣಗಿ, ಕಲ್ಲೋಳಿಯ ಲಕ್ಕಪ್ಪ ಸವಸುದ್ದಿ, ಡಾ. ಅನಿಲ್‌ ಪಾಟೀಲ, ಉಮೇಶ ಬೆಳಕೂಡ ಸೇರಿದಂತೆ ಅನೇಕ ಗಣ್ಯರು ತಾಲ್ಲೂಕು ರಚನೆಯನ್ನು ಸಮರ್ಥಿಸಿಕೊಂಡು ಮಾತನಾಡಿದರು.
ಕಮಲದಿನ್ನಿಯ ಶಿವರಡ್ಡಿ ಹುಚರಡ್ಡಿ, ಮಹೇಶ ಕೌಜಲಗಿ, ಡಾ. ಸಂಜಯ ಶಿಂಧಿಹಟ್ಟಿ, ನಾಗಪ್ಪ ಹೊಸಟ್ಟಿ, ಶ್ರೀಮಂತ ಲಠ್ಠೆ, ಶಿವಾನಂದ ಗಾಡವಿ, ಈರಣ್ಣ ಕೊಣ್ಣೂರ ಹಾಗೂ ವೈದ್ಯರು, ವಕೀಲರು, ವ್ಯಾಪಾರಸ್ಥರು ಭಾಗವಹಿಸಿದ್ದರು.

‘ತಾಲ್ಲೂಕಿಗೆ ಇಟ್ನಾಳ ಸೇರಲಿ’
ರಾಯಬಾಗ ತಾಲ್ಲೂಕಿನ ಇಟ್ನಾಳ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸಹಿತ ಎಲ್ಲ ಸದಸ್ಯರು ಇಟ್ನಾಳ ಗ್ರಾಮವನ್ನು  ಮೂಡಲಗಿ ತಾಲ್ಲೂಕಿಗೆ ಸೇರಿಸಬೇಕು ಎಂದು ಒತ್ತಾಯಿಸುವ ಮನವಿ ಕೊಟ್ಟಿದ್ದಾರೆ. ರಾಯಬಾಗ ಕೇಂದ್ರ ಸ್ಥಳವು ಇಟ್ನಾಳದಿಂದ 30 ಕಿ.ಮಿ. ಅಂತರ­ವಿದ್ದು, ಮೂಡಲಗಿ ಕೇವಲ 6 ಕಿ.ಮಿ. ಇದೆ. ಮೂಡಲಗಿಯನ್ನು ಕೂಡಲೇ ತಾಲ್ಲೂಕು ಮಾಡಿ ಇಟ್ನಾಳ ಸೇರಿಸ­ಬೇಕು ಎಂದು ಮನವಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT