ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದಲ್ಲೇ ಉಳಿದ ಕೆಎಟಿ ಪೀಠ!

Last Updated 13 ಸೆಪ್ಟೆಂಬರ್ 2017, 6:23 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಪೀಠ ಇನ್ನೂ ಕಾಗದದಲ್ಲಿಯೇ ಉಳಿದಿದೆ. ಪೀಠ ಸ್ಥಾಪಿಸುವುದಾಗಿ ಘೋಷಿಸಿ ಎರಡು ವರ್ಷಗಳಾದರೂ ನಿರೀಕ್ಷಿತ ವೇಗದಲ್ಲಿ ಅನುಷ್ಠಾನ ಕಾರ್ಯ ನಡೆದಿಲ್ಲ. ಜಾಗ ಗೊತ್ತು ಮಾಡುವ ಕಾರ್ಯವೂ ಸೇರಿದಂತೆ ಕಚೇರಿ ಸ್ಥಾಪನೆ, ಪೀಠೋಪಕರಣಗಳ ಅಳವಡಿಕೆ, ಕೋರ್ಟ್‌ ಹಾಲ್‌ ಸಿದ್ಧತೆ ಯಾವುದೂ ಇದುವರೆಗೂ ಆಗಿಲ್ಲ. ನ್ಯಾಯಮೂರ್ತಿ ನೇಮಕ ಪ್ರಕ್ರಿಯೆಯೂ ಅಂತಿಮಗೊಂಡಿಲ್ಲ.

ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರು ತಮ್ಮ ಸೇವಾ ವ್ಯಾಜ್ಯಗಳ ವಿಚಾರಣೆಗಾಗಿ ಬೆಂಗಳೂರಿಗೇ ಹೋಗಬೇಕಾದ ಸ್ಥಿತಿ ಇದೆ. ಅದನ್ನು ತಪ್ಪಿಸಿ, ಸಮಯ ಹಾಗೂ ಹಣದ ಉಳಿತಾಯಕ್ಕೆ ಸಹಾಯವಾಗಬಲ್ಲ ಈ ಪೀಠ ಯಾವಾಗ ಕಾರ್ಯಾರಂಭ ಮಾಡುತ್ತದೆ ಎನ್ನುವುದು ಇನ್ನೂ ಅನಿಶ್ಚಿತವಾಗಿದೆ.

ಉತ್ತರ ಕರ್ನಾಟಕದವರಿಗೆ ವರ: ಪೀಠದ ವ್ಯಾಪ್ತಿಗೆ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಸೇರಿಸಲಾಗಿದೆ. ಪೀಠ ಕಾರ್ಯಾರಂಭ ಮಾಡಿದರೆ ಸಾವಿರಾರು ವ್ಯಾಜ್ಯಗಳು ಇಲ್ಲಿಗೇ ವರ್ಗವಾಗುವ ಸಾಧ್ಯತೆ ಇದೆ. ಈ ಭಾಗದ ಸೇವಾ ವ್ಯಾಜ್ಯಗಳನ್ನು ರಾಜ್ಯ ಸರಕಾರಿ ನೌಕರರು ಇಲ್ಲಿನ ಪೀಠದಲ್ಲೇ ದಾಖಲಿಸಿ, ನ್ಯಾಯ ಪಡೆದುಕೊಳ್ಳಬಹುದಾಗಿದೆ.

ಹೋರಾಟದ ಫಲ: ಕೆಎಟಿ ಪೀಠಕ್ಕಾಗಿ ಆಗ್ರಹಿಸಿ 2014ರ ನವೆಂಬರ್‌ನಲ್ಲಿ ವಕೀಲರು ಹಾಗೂ ವಿವಿಧ ಸಂಘ– ಸಂಸ್ಥೆಗಳ ಸದಸ್ಯರು ನಡೆಸಿದ್ದ ಆಮರಣ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಬೆಳಗಾವಿ ಬಂದ್‌ಗೂ ಕರೆ ನೀಡಲಾಗಿತ್ತು. ತೀವ್ರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಪೀಠ ಸ್ಥಾಪನೆಯ ಘೋಷಣೆ ಮಾಡಿತ್ತು.

2015ರ ವಿಧಾನಮಂಡಲ ಅಧಿವೇಶನ ವೇಳೆ ಕಂದಾಯ ಮತ್ತು ಕಾನೂನು ಸಚಿವರೂ ಕೆಎಟಿಗೆ ಜಾಗ ಮಂಜೂರು ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. 2016ರ ಮಾರ್ಚ್‌ 30ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ, ಸುವರ್ಣ ವಿಧಾನಸೌಧದ ನೆಲಮಹಡಿ ಒದಗಿಸುವಂತೆ ಮನವಿ ಮಾಡಿದ್ದರು. ನ್ಯಾಯಮಂಡಳಿ ಅಧ್ಯಕ್ಷ ಭಕ್ತವತ್ಸಲ ಕೂಡ ಇಲ್ಲಿಗೆ ಭೇಟಿ ನೀಡಿ ವೀಕ್ಷಿಸಿದ್ದರು. ಇದಾಗಿ ತಿಂಗಳುಗಳೇ ಉರುಳಿವೆ.

ಅಂತಿಮವಾಗಿಲ್ಲ: ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ‘ನ್ಯಾಯಮಂಡಳಿ ಅಧಿಕಾರಿಗಳು ಭೇಟಿ ನೀಡಿ, ಕೆಲವು ಬಾಡಿಗೆ ಕಟ್ಟಡಗಳನ್ನು ವೀಕ್ಷಿಸಿದ್ದಾರೆ. ಸುವರ್ಣ ಸೌಧದಲ್ಲಿರುವ ನೆಲಮಹಡಿಯನ್ನೂ ತೋರಿಸಿದ್ದೇವೆ. ಅಧ್ಯಕ್ಷರೂ ನೋಡಿ ಹೋಗಿದ್ದಾರೆ. ಆದರೆ, ಯಾವುದೂ ಅಂತಿಮಗೊಂಡಿಲ್ಲ’ ಎಂದು ತಿಳಿಸಿದರು.

‘ನಗರದ ಹೃದಯ ಭಾಗದಲ್ಲಿನ ಎರಡು ಎಕರೆ ಸರ್ಕಾರಿ ಜಾಗವನ್ನು ನ್ಯಾಯಮಂಡಳಿಯವರು ಕೇಳಿದ್ದಾರೆ. ಆದರೆ, ಇಲ್ಲಿ ಲಭ್ಯವಿಲ್ಲ. ಹೊರವಲಯದಲ್ಲಿ ಲಭ್ಯವಿರುವ ಜಾಗಗಳನ್ನು ತೋರಿಸಲಾಗಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಅವರಿಗೆ ಬಿಟ್ಟಿದ್ದು. ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ಪೀಠ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT