ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಿಂದ ಮನೆ ಮನೆಗೆ ಕಾಂಗ್ರೆಸ್‌: ಮಾಣಿಕಂ

Last Updated 13 ಸೆಪ್ಟೆಂಬರ್ 2017, 6:32 IST
ಅಕ್ಷರ ಗಾತ್ರ

ಕಾರವಾರ: ‘ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ರಾಜ್ಯದಾದ್ಯಂತ ಇದೇ 23ರಿಂದ ಮನೆ ಮನೆಗೆ ಕಾಂಗ್ರೆಸ್‌ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಲಾಗುವುದು’ ಎಂದು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಠಾಕೂರ್‌ ಹೇಳಿದರು. ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರವಾರ–ಅಂಕೋಲಾ ಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ಬೂತ್‌ ಸಮಿತಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘ಚುನಾವಣೆಯಲ್ಲಿ ಗೆಲ್ಲಲು ಪ್ರತಿಯೊಂದು ಗ್ರಾಮಗಳಲ್ಲಿಯೂ ಬೂತ್‌ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಅದರಂತೆಯೇ ಶಾಸಕರ ಉಸ್ತುವಾರಿಯಲ್ಲಿ ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಲಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿಯುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ‘ಹಳ್ಳಿಯಿಂದ ದಿಲ್ಲಿ ತನಕ ಸಂಘಟನೆ ಬಲಪಡಿಸಬೇಕು. ಸಂಘಟನೆ ಭದ್ರವಿದ್ದರೆ ತಳಮಟ್ಟದಲ್ಲಿರುವ ಜನರಿಗೂ ಸರ್ಕಾರದ ಪ್ರತಿಯೊಂದು ಕಾರ್ಯಕ್ರಮವನ್ನು ತಲುಪಿಸಲು ಸಾಧ್ಯ. ಕರ್ನಾಟಕದ ಇತಿಹಾಸದಲ್ಲಿ ಸಿದ್ದರಾಮಯ್ಯನವರ ಸರ್ಕಾರದ ಆಡಳಿತದ ಅವಧಿಯನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ದೇಶದಲ್ಲಿಯೇ ಪ್ರಥಮ ಬಾರಿಗೆ ಈ ಪ್ರಯತ್ನ ನಡೆಸಲಾಗುತ್ತಿದೆ.

ಸಿದ್ದರಾಮಯ್ಯನವರ ಭಾಗ್ಯಗಳಿಂದಾಗಿ ಬಡವರ ಭಾಗ್ಯ ತೆರೆದುಕೊಂಡಿದೆ. ಸ್ತ್ರೀಶಕ್ತಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ, ರೈತರಿಗೆ ₹ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕಾಳಿ, ಅಘನಾಶಿನಿ ಹಾಗೂ ಶರಾವತಿ ನದಿಗಳ ಅಂಚಿನ ಗ್ರಾಮದ ಜನರಿಗೆ ಅನುಕೂಲವಾಗಲೆಂದು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾಗಿದ್ದು, ಟೆಂಡರ್‌ ಸಹ ಆಗಿದೆ. ನೋಟು ರದ್ಧತಿಯಿಂದ ರಾಷ್ಟ್ರದ ಜಿಡಿಪಿ ದರ ಶೇ 2ರಷ್ಟು ಕುಸಿದಿದೆ. ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ 2 ಕೋಟಿ ಮಂದಿಗೆ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರಿಂದ 2 ಲಕ್ಷ ಮಂದಿಗೆ ಕೂಡ ಉದ್ಯೋಗ ನೀಡಲು ಆಗಿಲ್ಲ’ ಎಂದು ದೂರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ಮಾತನಾಡಿ, ‘ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ನ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಆದರೆ ಇದರಲ್ಲಿ ಒಬ್ಬನೇ ಒಬ್ಬ ಬಿಜೆಪಿಗನಿದ್ದರೆ ಹೇಳಲಿ. ವಿಭಿನ್ನತೆಯಲ್ಲಿ ಏಕತೆ ತೋರಿದ ಪಕ್ಷವೆಂದರೆ ಅದು ಕಾಂಗ್ರೆಸ್’ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ಕೆಎಫ್‌ಡಿಸಿ ಅಧ್ಯಕ್ಷ ರಾಜೇಂದ್ರ ನಾಯ್ಕ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಅಂಕೋಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಾಂಡುರಂಗ, ಕೆಪಿಸಿಸಿ ಕಾರ್ಯದರ್ಶಿ ವಿ.ಎಸ್‌.ಆರಾಧ್ಯ, ಮುಖಂಡ ರಮಾನಂದ ನಾಯಕ ಹಾಜರಿದ್ದರು.
ಕದ್ರಾದಿಂದ ಬೈಕ್‌ ರ್‌್ಯಾಲಿಕಾರವಾರ ತಾಲ್ಲೂಕಿನ ಕದ್ರಾದಿಂದ ನಗರದವರೆಗೆ ಬೈಕ್‌ ರ್‍್ಯಾಲಿ ನಡೆಯಿತು. ಸುಮಾರು ಸುಮಾರು 500ಕ್ಕೂ ಅಧಿಕ ಬೈಕ್‌ಗಳಲ್ಲಿ ಕಾರ್ಯಕರ್ತರು ಸಮಾವೇಶಕ್ಕೆ ಬಂದಿದ್ದರು. ಶಾಸಕ ಸತೀಶ್ ಸೈಲ್, ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ್‌ ಕೂಡ ಕಾರಿನಲ್ಲಿ ತೆರಳಿ ಸಾಥ್ ನೀಡಿದರು. ದಾರಿಯು ದ್ದಕ್ಕೂ ಕಾರ್ಯಕರ್ತರು ಕಾಂಗ್ರೆಸ್‌ ಹಾಗೂ ಸತೀಶ್‌ ಸೈಲ್‌ ಪರ ಘೋಷಣೆ ಕೂಗಿದರು.

ಶಕ್ತಿ ಪ್ರದರ್ಶನ
ಸಮಾವೇಶಕ್ಕೆ ಶಾಸಕ ಸತೀಶ್‌ ಸೈಲ್‌ ಹೆಚ್ಚಿನ ಜನರನ್ನು ಕರೆತರುವ ಮೂಲಕ ಹಿರಿಯ ನಾಯಕರ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಅಂಕೋಲಾದಿಂದ ಸುಮಾರು 20ಕ್ಕೂ ಅಧಿಕ ಟೆಂಪೊಗಳಲ್ಲಿ ಜನರು ಬಂದಿದ್ದರು. ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಸಭಾಂಗಣದಲ್ಲಿ ಸ್ಥಳವಿಲ್ಲದೇ ಹೊರಭಾಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಕೈಗಾ ಎನ್‌ಪಿಸಿಐಎಲ್‌ ಸಿಎಸ್‌ಆರ್‌ ಯೋಜನೆಯಡಿ ಶಾಲಾ ಮಕ್ಕಳ ಅನುಕೂಲಕ್ಕೆ ನೀಡಲಾಗಿದ್ದ ‘ವಿದ್ಯಾವಾಹಿನಿ’ ಟೆಂಪೊ ಟ್ರಾವೆಲ್‌ದಲ್ಲೂ ಕಾರ್ಯಕರ್ತರನ್ನು ಕರೆತರಲಾಗಿತ್ತು.

ಕಾರ್ಯಕರ್ತರಿಗೆ ಮಾಂಸದೂಟ
ಕಾರ್ಯಕರ್ತರಿಗೆ ಸಭಾಂಗಣದ ಕೆಳಭಾಗದಲ್ಲಿ ಮಾಂಸದೂಟದ ವ್ಯವಸ್ಥೆ ಮಾಡಲಾಗಿತ್ತು. ಬಿರಿಯಾನಿ, ಚಿಕನ್‌ ಕಬಾಬ್‌ ಹಾಗೂ ಮೊಟ್ಟೆಯನ್ನು ನೀಡಲಾಯಿತು. ಕಾರ್ಯಕರ್ತರು ಊಟಕ್ಕೆ ಮುಗಿಬಿದ್ದಿದ್ದರು. ಪೊಲೀಸರು ಒಬ್ಬೊಬ್ಬರನ್ನು ಬಿಡುವ ಮೂಲಕ ಗುಂಪನ್ನು ನಿಯಂತ್ರಿಸಿದರು.

ದೇಶಪಾಂಡೆ ಸಿಡಿಮಿಡಿ
ಬೈಕ್‌ ರ್‍್ಯಾಲಿ ಜತೆ ಶಾಸಕ ಸತೀಶ್‌ ಸೈಲ್‌ ಅವರು ಸಮಾವೇಶಕ್ಕೆ ಸುಮಾರು 2 ತಾಸು ತಡವಾಗಿ ಬಂದರು. ಈ ಸಂದರ್ಭದಲ್ಲಿ ಸೈಲ್‌ ಬೆಂಬಲಿಗರು ಜೋರಾದ ದನಿಯಲ್ಲಿ ಘೋಷಣೆ ಕೂಗುತ್ತಿದ್ದರು. ಇದಕ್ಕೆ ಸಿಡಿಮಿಡಿಗೊಂಡ ಸಚಿವ ಆರ್‌.ವಿ.ದೇಶಪಾಂಡೆ, ‘ಈಗಾಗಲೇ ಕಾರ್ಯಕ್ರಮ ತಡವಾಗಿದೆ. ಇನ್ನು ಭಟ್ಕಳಕ್ಕೂ ತೆರಳಬೇಕು. ಇದಕ್ಕೆ ಎಲ್ಲರೂ ಅವಕಾಶ ಮಾಡಿಕೊಡಬೇಕು’ ಎಂದು ಕೋರಿದರು.

ಸಮಾವೇಶದಲ್ಲಿ ಗದ್ದಲ
ವೇದಿಕೆಯಲ್ಲಿ ಶಾಸಕ ಸತೀಶ್‌ ಸೈಲ್‌ ಅವರಿಗೆ ಮಾತನಾಡಲು ಅವಕಾಶ ನೀಡಿದಾಗ ಕೆಪಿಸಿಸಿ ಕಾರ್ಯದರ್ಶಿ ಗೋಪಾಲ ನಾಯಕ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ, ಮೊದಲು ಗೋಪಾಲ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ವಿಷಯವಾಗಿ ಎರಡು ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಕೆಲಹೊತ್ತು ಗೊಂದಲ ಸೃಷ್ಟಿಯಾಯಿತು.

ಸತೀಶ್‌ ಸೈಲ್‌ ಮಾತನಾಡಿ, ‘ಕಾರ್ಯಕ್ರಮದ ಯಶಸ್ವಿಗೆ ಹಾಗೂ ನನಗೆ ಬೆಂಬಲ ನೀಡಿದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದ’ ಎಂದು ತಿಳಿಸಿದರು. ಬಳಿಕ ಮಾತನಾಡಿದ ಗೋಪಾಲ ನಾಯಕ, ‘ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ. ಪಕ್ಷದಲ್ಲಿ ಯಾರೇ ಅಭ್ಯರ್ಥಿಯಾಗಿ ನಿಂತರೂ ಎಲ್ಲರೂ ಬೆಂಬಲಿಸಬೇಕು’ ಎಂದು ಕರೆ ನೀಡಿದರು.

ಸಿಟ್ಟಿಗೆದ್ದ ಸೈಲ್‌ ಬೆಂಬಲಿಗರು ಏಕಾಏಕಿ ಜಗಳಿಕ್ಕಿಳಿದರು. ಈ ವೇಳೆ ಡಿವೈಎಸ್ಪಿ ಪ್ರಮೋದ್‌ರಾವ್ ನೇತೃತ್ವದಲ್ಲಿ ಪೊಲೀಸರು ಎರಡೂ ಕಡೆಯ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಸತೀಶ್‌ ಸೈಲ್‌, ‘ನಮ್ಮಲ್ಲಿ ಬಣ ರಾಜಕೀಯ ಇಲ್ಲ. ಕಾರ್ಯಕ್ರಮ ಚೆನ್ನಾಗಿ ನಡೆದಿದೆ’ ಎಂದಷ್ಟೇ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT