ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರಿಗೆ 8 ತಿಂಗಳಿಂದ ವೇತನ ಇಲ್ಲ

Last Updated 13 ಸೆಪ್ಟೆಂಬರ್ 2017, 7:04 IST
ಅಕ್ಷರ ಗಾತ್ರ

ಬೀದರ್: ಹೈದರಾಬಾದ್‌ ಕರ್ನಾಟಕದ ಬೀದರ್‌, ಅಫಜಲಪುರ ಹಾಗೂ ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಎಂಟು ತಿಂಗಳಿಂದ ವೇತನ ಇಲ್ಲದೆ ಪರದಾಡುತ್ತಿದ್ದಾರೆ. ಬೀದರ್‌ನ ನೌಬಾದ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 82 ಉಪನ್ಯಾಸಕರ ಪೈಕಿ 60 ಜನ ಅತಿಥಿ ಉಪನ್ಯಾಸಕರೇ ಇದ್ದಾರೆ. 22 ಕಾಯಂ ಉಪನ್ಯಾಸಕರಿಗೆ ವೇತನ ಬಂದಿದೆ.

ಆದರೆ ಅತಿಥಿ ಉಪನ್ಯಾಸಕರು ಮಾತ್ರ ವೇತನ ದೊರೆಯದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. 2015–2016ರ ಏಪ್ರಿಲ್‌ ಹಾಗೂ ಮೇ, 2017ರ ಜನವರಿಯಿಂದ ಈವರೆಗೂ ಅತಿಥಿ ಉಪನ್ಯಾಸಕರ ವೇತನ ಕೊಟ್ಟಿಲ್ಲ. ಈ ಕುರಿತು ಪ್ರಾಚಾರ್ಯರಿಗೂ ಮನವಿ ಸಲ್ಲಿಸಲಾಗಿದೆ. ಆದರೆ, ನಮ್ಮ ನೋವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಕಾಲೇಜಿನ ಅತಿಥಿ ಉಪನ್ಯಾಸಕರು ಗೋಳಿಡುತ್ತಾರೆ.


‘ನೌಬಾದ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಿಲ್ಲೆಯ ಅತಿದೊಡ್ಡ ಪದವಿ ಕಾಲೇಜು ಆಗಿದೆ. ಇಲ್ಲಿ 1,500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪಾಠ ಮಾಡುವುದನ್ನು ನಿಲ್ಲಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಹೀಗಾಗಿ ನೋವು ನುಂಗಿ ಪಾಠ ಮಾಡುತ್ತಿದ್ದೇವೆ’ ಎಂದು ಕಾಲೇಜಿನ ಅತಿಥಿ ಉಪನ್ಯಾಸಕ ಶಾಂತಕುಮಾರ ಹೇಳುತ್ತಾರೆ.

‘2015–2016ರಲ್ಲಿ ಬಾಕಿ ಉಳಿದ ಎರಡು ತಿಂಗಳ ವೇತನವನ್ನು ಒಂದು ತಿಂಗಳಲ್ಲಿ ಪಾವತಿ ಮಾಡಲಾಗುವುದು. 2016–2017 ಸಾಲಿನ ₹ 21.60 ಲಕ್ಷ ವೇತನ ಬಾಕಿ ಇದೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರ ಹಿಂದಿನ ಬಾಕಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ’ ಎನ್ನುತ್ತಾರೆ ಪ್ರಾಚಾರ್ಯ ಮನೋಹರ ಭಕ್ಕಾಳೆ.

‘ಈ ಮೊದಲು ಅತಿಥಿ ಉಪನ್ಯಾಸಕರಿಗೆ ಖಜಾನೆ– 1ರ ಮೂಲಕ ಅಂದರೆ ಕಾಲೇಜಿಗೆ ಹಣ ಬಂದ ನಂತರ ಅವರಿಗೆ ಅಕೌಂಟ್‌ ಪೇ ಚೆಕ್‌ ಕೊಡುತ್ತಿದ್ದೇವು. ಈಗ ಖಜಾನೆ–2ರ ಮೂಲಕ ನೇರವಾಗಿ ಉಪನ್ಯಾಸಕರ ಖಾತೆಗೆ ಹಣ ಜಮಾ ಆಗುತ್ತಿದೆ. ಮೂರು ಜಿಲ್ಲೆಗಳ ಅತಿಥಿ ಉಪನ್ಯಾಸಕರ ಹೆಸರು ಸೇರಿಸುವಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ವಿಳಂಬವಾಗಿದೆ’ ಎಂದು ಹೇಳುತ್ತಾರೆ.

‘ಹಿಂದಿನ ಪ್ರಾಚಾರ್ಯರು ಸರಿಯಾಗಿ ಲೆಕ್ಕಪತ್ರ ಕೊಡಬೇಕಿದೆ. ನಾನು ಔರಾದ್‌ ಪದವಿ ಕಾಲೇಜಿನಿಂದ ಮೇ 19ರಂದು ಬೀದರ್‌ ಕಾಲೇಜಿಗೆ ವರ್ಗವಾಗಿ ಬಂದಿದ್ದೇನೆ. ಅತಿಥಿ ಉಪನ್ಯಾಸಕರ ಎಂಟು ತಿಂಗಳ ವೇತನ ಬಿಡುಗಡೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಲು ಕಾಲೇಜಿನ ಉಪನ್ಯಾಸಕರೊಬ್ಬರನ್ನು ಬೆಂಗಳೂರಿಗೆ ಕಳಿಸಿದ್ದೇನೆ. ಆದಷ್ಟು ಬೇಗ ಅವರಿಗೆ ವೇತನ ಕೊಡಿಸಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ.

‘ತಾಂತ್ರಿಕ ಕಾರಣಗಳಿಂದಾಗಿ ಮೂರು ಪದವಿ ಕಾಲೇಜುಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಕಲಬುರ್ಗಿಯ ಸಹಾಯಕ ನಿರ್ದೇಶಕರು ಹಾಗೂ ಬಳ್ಳಾರಿಯ ಪದವಿ ಕಾಲೇಜಿನ ಕಚೇರಿ ಅಧೀಕ್ಷಕರು ಬೆಂಗಳೂರಿಗೆ ತೆರಳಿ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲಿ ಸಮಸ್ಯೆ ಪರಿಹಾರ ಆಗಲಿದೆ’ ಎಂದು ಉನ್ನತ ಶಿಕ್ಷಣ ಇಲಾಖೆಯ ಕಲಬುರ್ಗಿ ಜಂಟಿ ನಿರ್ದೇಶಕ ಸಿ.ಪಿ.ಬೊಮ್ಮನಪಾಡು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT