ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 6.61 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ: ಸಚಿವ

Last Updated 13 ಸೆಪ್ಟೆಂಬರ್ 2017, 7:19 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಸಿಂಪಿ ಲಿಂಗಣ್ಣ ಮತ್ತು ಸಾಲಾರ್‌ಜಂಗ್‌ ರಸ್ತೆಯನ್ನು ಒಟ್ಟು ₹ 6.61 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ಇಲ್ಲಿ ಸಿಂಪಿ ಲಿಂಗಣ್ಣ ಮತ್ತು ಸಾಲಾರ್‌ಜಂಗ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಂಗಳವಾರ ಅವರು ಮಾತನಾಡಿದರು.

’ಹೈದರಾಬಾದ್‌- ಕರ್ನಾಟಕ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆ ಅಡಿ ಈ ಕಾಮಗಾರಿ ನಡೆಸಲಾಗುತ್ತಿದೆ. 6 ತಿಂಗಳ ಒಳಗೆ ಕಾಮಗಾರಿ ಮುಗಿಸಲು ಕಾಲಮಿತಿ ನಿಗದಿಪಡಿಸಲಾಗಿದೆ' ಎಂದು ಅವರು ಹೇಳಿದರು.

'ರಸ್ತೆಯ ಗುಣಮಟ್ಟ ಕಾಪಾಡುವುದು ಅತ್ಯವಶ್ಯಕ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಜಾಗೃತಿ ವಹಿಸಬೇಕು. ರಸ್ತೆಗಳು ಹಾಳಾಗಲು ಅಲಕ್ಷ್ಯವೇ ಕಾರಣ. ಗುಣಮಟ್ಟದ ಕಾಮಗಾರಿ ನಡೆಸಿದಲ್ಲಿ 50 ವರ್ಷ ಕಾಲ ರಸ್ತೆಯು ಬಾಳಿಕೆ ಬರುತ್ತದೆ' ಎಂದರು.

'ರಾಜಕಾರಣಿಗಳನ್ನು ಭ್ರಷ್ಟಾಚಾರಿಗಳು ಅನ್ನುವುದು ತಪ್ಪು. ಅಲಕ್ಷ್ಯದಿಂದ ಭ್ರಷ್ಟಾಚಾರ ನಡೆಯುತ್ತದೆ. ರಾಜಕಾರಣಿಗಳು ಮತ್ತು ಜನರು ಸರಿ ಇದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ' ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, 'ಸಂಚಾರ ದಟ್ಟಣೆ ನಿಯಂತ್ರಿಸುವ ದೃಷ್ಟಿಯಲ್ಲಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ನಗರದ ಗಂಜ್‌ನಿಂದ ಗಡಿಯಾರ ಕಂಬದವರೆಗೆ ₹ 12 ಕೋಟಿ ವೆಚ್ಚದ ಕಾಂಕ್ರಿಟ್‌ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಒಟ್ಟಾರೆ ನಗರದಲ್ಲಿ ₹ 72 ಕೋಟಿ ವೆಚ್ಚದ ಕಾಂಕ್ರಿಟ್‌ ರಸ್ತೆ ನಿರ್ಮಿಸಲು ಮಂಜೂರಾತಿ ದೊರೆತಿದೆ' ಎಂದರು.

'ಆಶ್ರಯ ಯೋಜನೆ ಅಡಿ ಜಿಲ್ಲೆಯ 1,200 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. 800 ಜನರಿಗೆ ಇನ್ನು 3 ತಿಂಗಳಲ್ಲಿ ನಿವೇಶನ ನೀಡಲಾಗುವುದು. ಇದಕ್ಕಾಗಿ ಈಗಾಗಲೇ 21 ಎಕರೆ ಭೂಮಿ ಖರೀದಿಸಲಾಗಿದೆ. 3 ಸಾವಿರ ನಿವೇಶನ ಹಂಚಿಕೆ ಗುರಿ ಇದೆ. ₹ 1.20 ಕೋಟಿ ವೆಚ್ಚದಲ್ಲಿ ನಗರದಲ್ಲಿ ಸದ್ಭಾವನಾ ಮಂಟಪ ನಿರ್ಮಾಣಕ್ಕೆ, ರೂ 3 ಕೋಟಿ ಮೌಲಾನಾ ಅಬ್ದುಲ್‌ ಕಲಾಂ ಶಾಲೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ' ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ್‌ ಖಾದ್ರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಉಪಾಧ್ಯಕ್ಷೆ ಮೀನಾಕ್ಷಮ್ಮ, ಗುತ್ತಿಗೆದಾರ ಸುರೇಶ್‌ ಭೂಮರಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌, ಗವಿಸಿದ್ದಪ್ಪ ಚಿನ್ನೂರ, ಮುತ್ತುರಾಜ ಕುಷ್ಟಗಿ, ಶಕುಂತಲಾ ಹುಡೇಜಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT