ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬೀದಿಗಿಳಿದ ಬಡಾವಣೆ ನಿವಾಸಿಗಳು

Last Updated 13 ಸೆಪ್ಟೆಂಬರ್ 2017, 8:27 IST
ಅಕ್ಷರ ಗಾತ್ರ

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಭ್ರಮರಾಂಬ ಬಡಾವಣೆ ನಿವಾಸಿಗಳು ಮತ್ತು ಶಂಕರಪುರ ನಾಗರಿಕ ಹಿತರಕ್ಷಣಾ ಸಮಿತಿಯ ಸದಸ್ಯರು ಮಂಗಳವಾರವೂ ಧರಣಿ ನಡೆಸಿದರು. ನಗರದ ಗಣಪತಿ ದೇವಸ್ಥಾನದ ಮುಂಭಾಗ ಸಮಾವೇಶಗೊಂಡ ಬಡಾವಣೆಗಳ ನಿವಾಸಿಗಳು ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ತೆರಳಿದರು. ವಿವಿಧ ಸಂಘಟನೆಗಳ ಸದಸ್ಯರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ನಗರಸಭೆ ಆಯುಕ್ತರು, ಶಾಸಕರು, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆಯಂತಹ ಮೂಲಸೌಕರ್ಯಗಳ ಕೊರತೆ ವಿರುದ್ಧ ಶುಕ್ರವಾರ ನಿವಾಸಿಗಳು ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದ್ದರು.

ಇದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಈ ವೇಳೆ ಪೊಲೀಸರು 20 ಮಂದಿಯನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಧರಣಿ ನಡೆಸಿ ಪೊಲೀಸರ ಕ್ರಮವನ್ನು ಖಂಡಿಸಿದರು. ಒಂದು ಗಂಟೆ ಕುಳಿತ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಒತ್ತಾಯಿಸಿದರು.

ಆದರೆ, ಸಭೆ ನಡೆಸುತ್ತಿದ್ದರಿಂದ ಜಿಲ್ಲಾಧಿಕಾರಿ ಬರಲಿಲ್ಲ. ಇದರಿಂದ ಸಿಟ್ಟಿಗೆದ್ದ ಜನರು ಕಟ್ಟಡದ ಒಳನುಗ್ಗಲು ಮುಂದಾದರು. ಬಳಿಕ, ಕಟ್ಟಡದ ಮೆಟ್ಟಿಲ ಮೇಲೆಯೇ ಧರಣಿ ಕುಳಿತರು. ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ನಗರಸಭೆ ಆಯುಕ್ತ ಎಂ.ರಾಜಣ್ಣ, ತಹಶೀಲ್ದಾರ್‌ಪುರಂದರ ಧರಣಿ ನಿರತರ ಸಮಾಧಾನಪಡಿಸಲು ಮುಂದಾದರು.

ಸಿ.ಎಂ. ವಿರುದ್ಧ ಸಿಟ್ಟು: ‘ನಗರದ ವಾರ್ಡ್‌ಗಳ ರಸ್ತೆಗಳು ಕಿತ್ತು ಹೋಗಿವೆ. ಕೆಸರಿನಲ್ಲಿ ಓಡಾಡುವ ಸ್ಥಿತಿ ಇದೆ. ಕೆಲವರು ಬಿದ್ದಿದ್ದಾರೆ. ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಬೀದಿ ದೀಪಗಳಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಕೇಂದ್ರಕ್ಕೆ ಆರೇಳು ಬಾರಿ ಬಂದಿದ್ದಾಗಿ ಹೇಳಿಕೊಳ್ಳುತ್ತಾರೆ. ಬಂದು ಗುದ್ದಲಿಪೂಜೆ ಮಾಡಿ ಹೋಗುತ್ತಾರೆ. ಆದರೆ, ಒಂದು ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಭರವಸೆ: ಮನವಿ ಸ್ವೀಕರಿಸಿದ ಎಡಿಸಿ ಕೆ.ಎಂ. ಗಾಯತ್ರಿ ಶೀಘ್ರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಪೌರಾಯುಕ್ತ ಎಂ.ರಾಜಣ್ಣ, ವಿಎಚ್‌ಪಿ ಶಾಲೆಯಿಂದ ಕುಲುಮೆ ರಸ್ತೆವರೆಗೆ ಡಾಂಬರೀಕರಣ ಆಗಲಿದೆ. ಎರಡು ಮೂರು ದಿನದಲ್ಲಿ ಕಾಮಗಾರಿ ಆರಂಭವಾಗಲಿದೆ. ರಿಸೀವಿಂಗ್‌ ಚೇಂಬರ್‌ಗಳ ಅಳವಡಿಕೆ ಕಾರ್ಯ ಬಾಕಿ ಇದೆ. ಅದು ಪೂರ್ಣಗೊಳ್ಳುತ್ತಿದ್ದಂತೆಯೇ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು.

‘ಯುಜಿಡಿ ಕಾಮಗಾರಿ ವೇಳೆ ಪೈಪ್‌ಲೈನ್‌ ತುಂಡಾಗಿದೆ 15 ದಿನದಲ್ಲಿ ಹೊಸ ಪೈಪ್‌ಲೈನ್‌ ಸಂಪರ್ಕದಲ್ಲಿ ನೀರು ಪೂರೈಸುತ್ತೇವೆ’ ಎಂದು ಹೇಳಿದದರು. 15 ದಿನದಲ್ಲಿ ಕೆಲಸ ನಡೆಯಬೇಕು. ಇಲ್ಲದಿದ್ದರೆ, ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆಯಲಾಯಿತು.

ಚುಡಾ ಮಾಜಿ ಅಧ್ಯಕ್ಷ ಬಾಲ ಸುಬ್ರಮಣ್ಯ, ಮುಖಂಡರಾದ ಜಿ.ಎಂ. ಗಾಡ್ಕರ್‌, ಹೆಬ್ಬಸೂರು ಬಸವಣ್ಣ, ಆಲೂರು ಮಲ್ಲು, ವಾಜಪೇಯಿ ಸುರೇಶ್‌, ಮಹದೇವಸ್ವಾಮಿ, ಕ್ವಾಲಿಟಿ ನವೀನ್‌, ನಿವಾಸಿಗಳಾದ ಅನಂತಪ್ರಸಾದ್‌, ಮಣಿಕಂಠ, ಕಲ್ಯಾಣಿ, ಸುಧಾ, ವಸುಧಾ, ಗೌರಿ ಹಾಗೂ ಇತರ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT