ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ಐತಿಹಾಸಿಕ ತಾಣಗಳು

Last Updated 13 ಸೆಪ್ಟೆಂಬರ್ 2017, 8:34 IST
ಅಕ್ಷರ ಗಾತ್ರ

ಅರಸೀಕೆರೆ: ಜಿಲ್ಲೆಯಲ್ಲಿ ಎತ್ತ ನೋಡಿದರೂ ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಿಸಿರುವ ಶಿಲ್ಪಕಲೆಯ ದೇವಾಲಯಗಳು, ಕೋಟೆ, ಕೊತ್ತಲಗಳು, ಜೈನ ಬಸದಿಗಳು, ನದಿ–ಝರಿ, ತೊರೆ, ಗುಡ್ಡ–ಬೆಟ್ಟಗಳು ಕಂಡು ಬರುತ್ತವೆ.

ಶ್ರವಣಬೆಳಗೊಳ, ಬೇಲೂರು, ಹಳೇಬೀಡಿನಲ್ಲಿ ಹೊಯ್ಸಳ ಅರಸರು ನಿರ್ಮಿಸಿರುವ ಶಿಲ್ಪಕಲೆಯ ದೇವಾಲಯ ವೀಕ್ಷಿಸಲು ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿನ ಶಿಲ್ಪಕಲೆಯ ದೇವಾಲಯಗಳು ಸಮರ್ಪಕ ನಿರ್ವಹಣೆ ಇಲ್ಲದೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗಿ ಹೋಗುತ್ತಿವೆ.

ಅರಸೀಕೆರೆ ಶಿವಾಲಯ, ಕಸ್ತೂರ ಬಾ ಶಿಬಿರ, ನಗರದ ಹುಳಿಯಾರು ರಸ್ತೆ ಬದಿಯಿರುವ ಜೈನ ಬಸದಿ, ಅಮರಗಿರಿ ಮಾಲೇಕಲ್‌ ತಿರುಪತಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯ, ಹಾರನಹಳ್ಳಿ ಚನ್ನಕೇಶವ ಮತ್ತು ಸೋಮೇಶ್ವರ ದೇವಾಲಯ, ಜಾವಗಲ್‌ ಲಕ್ಷ್ಮೀ ನರಸಿಂಹ ಸ್ವಾಮಿ, ಅರಕೆರೆಯ ಕೇಶವ ದೇವಾಲಯ, ಹುಲ್ಲೇಕೆರೆ ಚನ್ನಕೇಶವ ಸ್ವಾಮಿ, ಬೆಟ್ಟದಪುರ ರಂಗನಾಥ ಸ್ವಾಮಿ ದೇವಾಲಯಗಳು, ಮಾಡಾಳು ಶ್ರೀ ಸ್ವರ್ಣಗೌರಿ ದೇವಿ ಯಾದಾಪುರ ಜೇನುಕಲ್‌ ಸಿದ್ದೇಶ್ವರ ಸ್ವಾಮಿ ಸ್ಥಳಗಳು ಅಭಿವೃದ್ಧಿ ಹೊಂದದ ಕಾರಣ ನಿರೀಕ್ಷಿಸಿದಷ್ಟು ಪ್ರವಾಸಿಗರು ಬರುತ್ತಿಲ್ಲ ಎಂಬ ಕೊರಗು ಸಾರ್ವಜನಿಕರಲ್ಲಿ ಇದೆ.

ಜಿಲ್ಲಾಡಳಿತದಿಂದ ಪ್ರವಾಸಿ ಸ್ಥಳಗಳ ಮಾಹಿತಿಯನ್ನೊಳಗೊಂಡ ನಾಮಫಲಕಗಳನ್ನು ಅಳವಡಿಸಿದ್ದರೂ ಸ್ಪಷ್ಟವಾಗಿ ಕಾಣುವುದಿಲ್ಲ. ಅನೇಕ ಕಡೆ ಕುಡಿಯಲು ನೀರಿಲ್ಲ, ಶೌಚಾಲಯಗಳಿಲ್ಲ, ವಿದ್ಯುತ್‌ ಇರುವುದಿಲ್ಲ. ಪ್ರವಾಸೋದ್ಯಮ ವಿಷಯದಲ್ಲಿ ಅರಸೀಕೆರೆ ತೀರಾ ಹಿಂದುಳಿದಿದೆ. ಹೊಯ್ಸಳ ಅರಸರು ನಿರ್ಮಿಸಿರುವ ಅತ್ಯುತ್ತಮ ಶಿಲ್ಪ ಕಲಾಕೃತಿ ಯನ್ನೊಳಗೊಂಡ ದೇವಾಲಯ ಗಳ ಕುರಿತು ಮಾಹಿತಿಗಳು ಸಾರ್ವಜನಿಕರಿಗೆ ಸರಿಯಾಗಿ ತಲುಪುತ್ತಿಲ್ಲ.

ಜಿಲ್ಲಾಧಿಕಾರಿ ಆದೇಶದಂತೆ ತಾಲ್ಲೂಕಿನ ಪ್ರವಾಸಿ ಸ್ಥಳಗಳ ಬಗ್ಗೆ ಚಿತ್ರೀಕರಣ ನಡೆಸಿ ಸ್ಪಷ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ದೊರೆಯುವಂತೆ ಮಾಡಿದರೆ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಕಾಣಬಹುದು.

ಪ್ರವಾಸಿ ಸ್ಥಳಗಳಲ್ಲಿ ದೇವಾಲಯಗಳ ಸ್ಮಾರಕಗಳ ಕುರಿತು ಸಾಕ್ಷ್ಯಚಿತ್ರ ಮಾಡಿ ಪ್ರವಾಸಿಗರಿಗೆ ತೋರಿಸಿದರೆ ಸರಿಯಾದ ಮಾಹಿತಿ ಸಿಗುತ್ತದೆ ಮತ್ತು ಸ್ಥಳದ ಅರಿವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಎಚ್‌.ಎನ್‌. ನಾಗೇಂದ್ರ ಆಗ್ರಹಿಸಿದರು.

ಅರಸೀಕೆರೆ ನಗರದ ಶಿವಾಲಯ ಪ್ರಾಚ್ಯವಸ್ತು ಇಲಾಖೆಗೆ ಒಳಪಟ್ಟಿದ್ದು, ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ ಅಲ್ಲಿ ಒಬ್ಬ ದೇವಾಲಯ ಇತಿಹಾಸ ತಿಳಿಸುವ ಮಾರ್ಗದರ್ಶಿ ಕೂಡ ಇದ್ದಾರೆ ಎಂದು ತಹಶೀಲ್ದಾರ್‌ ಎನ್‌.ವಿ. ನಟೇಶ್‌ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT