ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಯೋಜನೆ: ₹ 128 ಕೋಟಿ ಮಂಜೂರು

Last Updated 13 ಸೆಪ್ಟೆಂಬರ್ 2017, 8:55 IST
ಅಕ್ಷರ ಗಾತ್ರ

ಮೇಲುಕೋಟೆ: ಜಕ್ಕನಹಳ್ಳಿ ಮತ್ತು ಸುತ್ತಮುತ್ತ 40 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹ 128 ಕೋಟಿ ಮಂಜೂರಾಗಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.

ಅವರು ಜಕ್ಕನಹಳ್ಳಿಯಲ್ಲಿ ಹೇಮಾವತಿ ವಸತಿಗೃಹ ಮತ್ತು ಸುತ್ತಲ ಸ್ಥಳವನ್ನು ವಿವಿಧ ಇಲಾಖೆಗಳಿಗೆ ಸರ್ಕಾರದ ಆದೇಶದಂತೆ ವರ್ಗಾಯಿಸುವುದಕ್ಕಾಗಿ ತಾಲ್ಲೂಕುಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೇಲುಕೋಟೆಗೆ ಸಮರ್ಪಕ ನೀರು ಪೂರೈಕೆಯಾಗದೇ ತೊಂದರೆಯಾಗುತ್ತಿದ್ದ ಕಾರಣ ಅದಕ್ಕೆ ಬದಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

‘ಜಕ್ಕನಹಳ್ಳಿಯಲ್ಲಿ ಹೇಮಾವತಿ ವಸತಿಗೃಹಗಳಿದ್ದ 5.60 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯಕೇಂದ್ರ ಹಾಗೂ ಪೊಲೀಸ್ ಚೌಕಿ, ಸಂತೆ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರು ಮಾಡಿದೆ ಈ ಸ್ಥಳ ಕೊಡುಗೆ ಜಮೀನಾಗಿದ್ದು, ಯಾರಿಗೆ ಸೇರಿದ್ದೆಂದೇ ತಿಳಿದಿರಲಿಲ್ಲ. ಆದರೆ, ನೀರಾವರಿ ಇಲಾಖೆ ಈ ಸ್ಥಳದಲ್ಲಿ ಕಛೇರಿ ಮತ್ತು ವಸತಿಗೃಹ ನಿರ್ಮಿಸಿತ್ತು. ಯೋಜನೆ ಮುಗಿದಿದ್ದರೂ ಇತರ ಜನೋಪಯೋಗಿ ಕಾರ್ಯಕ್ಕೆ ಬಳಕೆ ಮಾಡಲು ಸರ್ಕಾರದ ಆದೇಶದ ತೊಡಕಿತ್ತು. ಈ ಕಾರಣ ನಾನು ಸಲ್ಲಿಸಿದ ಪ್ರಸ್ತಾವ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡಿದೆ’ ಎಂದರು.

ಇಲ್ಲಿ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯಕೇಂದ್ರ ಹಾಗೂ ಪೊಲೀಸ್ ಹೊರಠಾಣೆ ಆರಂಭಿಸಲು ಸ್ಥಳ ಮಂಜೂರಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ‘ಹೇಮಾವತಿ ವಸತಿಗೃಹಗಳ ಸ್ಥಳದಲ್ಲಿ ನಡೆಯುತ್ತಿದ್ದ ಸಂತೆ ನಡೆಯಲು ದೇವರಾಜ ಮಾರುಕಟ್ಟೆಯಂಥ ವ್ಯವಸ್ಥೆ ಮಾಡಿ ಅನುಕೂಲ ಕಲ್ಪಿಸಲಾಗುತ್ತದೆ. ವಸತಿಗೃಹಗಳನ್ನು ಸಹ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಮಾಡಲು ಮುಜರಾಯಿ ಇಲಾಖೆಗೆ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ಕಾರ್ಯವೂ ಶೀಘ್ರ ನಡೆಯಲಿದೆ’ ಎಂದರು.

ಸೆ. 18ರಂದು ಬೆಳಿಗ್ಗೆ 10.30ಕ್ಕೆ ರೈತ ಸಂಪರ್ಕ ಕೇಂದ್ರದ ಬಳಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ನಾಗರಿಕರು ಭಾಗವಹಿಸಿ ಸಲಹೆ ನೀಡಬಹುದು ಎಂದರು.
ಪಾಂಡವಪುರದಲ್ಲಿ ಸೆ. 22ರಂದು ನಡೆಯುವ ರೈತ ರ‍್ಯಾಲಿ ಮತ್ತು ಸಮಾವೇಶಕ್ಕೆ ಮೇಲುಕೋಟೆ ಹೋಬಳಿ ಹಾಗೂ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಂದ ಹೆಚ್ಚಿನ ರೈತರು ಬರಬೇಕು ಎಂದು ಮನವಿ ಮಾಡಿದರು.

ಪಾಂಡವಪುರ ತಹಶೀಲ್ದಾರ್ ಹನುಮಂತರಾಯಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಶಾಲತಾ, ಮೇಲುಕೋಟೆ ದೇವಾಲಯದ ಸ್ಥಾನೀಕ ಶ್ರೀನಿವಾಸ ನರಸಿಂಹನ್ ಗುರೂಜಿ, ರೈತ ಮುಖಂಡರಾದ ಹೊಸಕೋಟೆ ವಿಜಯಕುಮಾರ್, ಅಮೃತಿ ರಾಜಶೇಖರ್, ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜೆ.ಪಿ ಶಿವಶಂಕರ್. ಕೆ.ಟಿ.ಗೋವಿಂದೇಗೌಡ, ಉದ್ಯಮಿ ಪರಮೇಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT