ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ಮಾತೇ ಅಂತಿಮ

Last Updated 13 ಸೆಪ್ಟೆಂಬರ್ 2017, 9:09 IST
ಅಕ್ಷರ ಗಾತ್ರ

ತುಮಕೂರು: ‘ವೀರಶೈವ–ಲಿಂಗಾಯತರಲ್ಲಿ ಯಾವುದೇ ಭೇದ–ಭಾವ ಇಲ್ಲ ಎಂದು ಸಿದ್ದಗಂಗಾ ಮಠಾಧೀಶ ಶಿವಕುಮಾರ ಸ್ವಾಮಿ ಹೇಳಿದ್ದು, ಅವರ ಮಾತೇ ಸಮುದಾಯಕ್ಕೆ ಅಂತಿಮ ತೀರ್ಪು’ ಎಂದು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ  ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದರು.

’ಲಿಂಗಾಯತ ಧರ್ಮ ಸ್ಥಾಪನೆ ಹೋರಾಟಕ್ಕೆ ಶಿವಕುಮಾರ ಸ್ವಾಮೀಜಿ ಅವರು ಆಶೀರ್ವದಿಸಿದ್ದಾರೆ’ ಎಂಬ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಕಾರಣ ಶ್ರೀಗಳನ್ನು ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಹಿರಿಯ ಉಪಾಧ್ಯಕ್ಷ ಎನ್‌. ತಿಪ್ಪಣ್ಣ ಅವರೊಂದಿಗೆ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಗಳೊಂದಿಗೆ ತಂಡವು ಸುಮಾರು ಅರ್ಧ ತಾಸು ಚರ್ಚಿಸಿತು. ಈ ವೇಳೆ ಮಾಧ್ಯಮದವರಗೆ ಅವಕಾಶ ಇರಲಿಲ್ಲ.

‘ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಸಮುದಾಯದ ಜನರಲ್ಲಿ ಮೂರು ತಿಂಗಳಿನಿಂದ ಗೊಂದಲಗಳು ಉಂಟಾಗಿವೆ. ಆ ಗೊಂದಲ ನಿವಾರಣೆಗಾಗಿ ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ.  ಅವರ ಹೇಳಿಕೆಗೆ ತಲೆಬಾಗಿ ಅದರಂತೆ ಮಹಾಸಭೆಯು ಮುಂದುವರೆಯಲಿದೆ’ ಎಂದರು.

‘ಸಮುದಾಯದ ಎಲ್ಲ ಮುಖಂಡರಿಗೂ ಆಹ್ವಾನ ನೀಡಿ ಮಹಾಸಭಾದ ಸಭೆ ನಡೆಸಲಾಗುವುದು. ಅಲ್ಲಿ ಚರ್ಚೆ ನಡೆಸಿ ಎಲ್ಲರೂ ಒಂದುಗೂಡಿ ಮುಂದುವರೆಯಲಿದ್ದೇವೆ. ಸ್ನೇಹಿತ ಎಂ.ಬಿ.ಪಾಟೀಲ ನಮ್ಮವರೇ ಆಗಿದ್ದಾರೆ. ಅವರನ್ನು ಕೂಡಿಕೊಂಡು ಚರ್ಚೆ ಮಾಡುತ್ತೇವೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.\

‘ಪ್ರತ್ಯೇಕ ಧರ್ಮ ಸ್ಥಾಪನೆ ವಿಚಾರಕ್ಕೂ, ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿ ಅವರಿಗೆ ವೀರಶೈವ–ಲಿಂಗಾಯತ ಧರ್ಮದ ಪ್ರಸ್ತಾವನೆ ನೀಡಿದ್ದೆವು. ಅವರು ಕೂಡ ಎಲ್ಲರೂ ಒಂದಾಗಿ ಬಂದು ಮನವಿ ಸಲ್ಲಿಸಿದರೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ’ ಎಂದರು.

‘ ವೀರಶೈವ ಎಂದು ಮುಂದುವರೆದರೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದಿಲ್ಲ. ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಎಂದು ಕೆಲವರಿಗೆ ಭಯವಿದೆ. ಇದರಿಂದಾಗಿ ಲಿಂಗಾಯತವೇ ಪ್ರತ್ಯೇಕ ಬೇಕೆಂದು ಕೇಳುತ್ತಿದ್ದಾರೆ. ಆದರೆ ಇದು ಸರಿ ಅಲ್ಲ’ ಎಂದರು.

ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಮಾತನಾಡಿ, ‘ಮಹಾಸಭಾ ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುವುದು ರೂಢಿಯಾಗಿದೆ. ವೀರಶೈವ–ಲಿಂಗಾಯತ ಒಂದೇ ಎನ್ನುವ ಮೂಲಕ ಕಳೆದ ಮೂರ್ನಾಲ್ಕು ತಿಂಗಳಿನಿಂದ ನಡೆಯುತ್ತಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಗೊಂದಲಗಳಿಗೆ ಶ್ರೀಗಳು ತೆರೆ ಎಳೆದಿದ್ದಾರೆ. ಅದರಂತೆಯೇ ಮಹಾಸಭೆ ತೀರ್ಮಾನ ಕೈಗೊಳ್ಳಲಿದೆ’ ಎಂದರು.

ಮಹಾಸಭಾ ಉಪಾಧ್ಯಕ್ಷ ಎನ್‌.ತಿಪ್ಪಣ್ಣ ಮಾತನಾಡಿ, ‘2012ರಲ್ಲಿ ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವನೆ ಸಲ್ಲಿಸುವಾಗ ಬಹುತೇಕ ಸಮುದಾಯದ ಎಲ್ಲ ಮುಖಂಡರು ಸಹಿ ಮಾಡಿದ್ದರು. ಆಗ ಅವರಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ಆದರೆ ಈಗ ಕೆಲವರು ವೀರಶೈವ–ಲಿಂಗಾಯತ ಬೇರೆ ಬೇರೆ ಎಂದು ಹೇಳುತ್ತಿದ್ದಾರೆ’ ಎಂದರು. ಮಹಾಸಭಾದ ಪದಾಧಿಕಾರಿಗಳಾದ ಗಣೇಶ್‌, ಚಿದಾನಂದಮೂರ್ತಿ, ಜಯಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT