ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ರಾಗಿಯೇ ಪ್ರಮುಖ ಬೆಳೆ!

Last Updated 13 ಸೆಪ್ಟೆಂಬರ್ 2017, 9:43 IST
ಅಕ್ಷರ ಗಾತ್ರ

ಬೀರೂರು: ಮೂರು ವರ್ಷಗಳಿಂದ ಆಗಸಕ್ಕೆ ಮುಖ ಮಾಡಿ ನಿರೀಕ್ಷೆಯ ಲ್ಲಿಯೇ ಕಳೆದು ಹೋದ ರೈತರ ಬದುಕಿಗೆ ಈ ಬಾರಿ ರಾಗಿ ಬೆಳೆಯ ಮೂಲಕ ಮತ್ತೆ ಸುಗ್ಗಿ ಆರಂಭವಾಗುವ ಲಕ್ಷಣಗಳಿವೆ. ವರುಣನ ಕೃಪೆ ತೋರಿದರೆ ದೀಪಾವಳಿಯ ಬೆಳಕು ರೈತರ ಮೊಗದಲ್ಲಿ ಮಿನುಗುವ ಸಾಧ್ಯತೆ ಇದೆ.

ಎರಡು ವರ್ಷಗಳಿಂದ ತಾಲ್ಲೂಕಿನಾದ್ಯಂತ ಕುಡಿಯುವ ನೀರು, ಜಾನು ವಾರುಗಳಿಗೆ ಮೇವು ಕೂಡಾ ಸುಲಭವಾಗಿ ಲಭ್ಯವಾಗದೆ ಜಿಲ್ಲಾಡಳಿತ ಮೇವು ಬ್ಯಾಂಕ್‌ ಮತ್ತು ಗೋಶಾಲೆ ಆರಂಭಿಸಿತ್ತು. ಅಂತರ್ಜಲ ಕಣ್ಮರೆಯಾಗಿ ರೈತರು ದೇವಗಂಗೆ(ಮಳೆ)ಗೇ ಮೊರೆ ಹೋಗಬೇಕಾದ ಸ್ಥಿತಿ ಇಂದಿಗೂ ಇದೆ.

ಇಂತಹ ಸಂದರ್ಭದಲ್ಲಿ ಕಡೂರು ತಾಲ್ಲೂಕಿನಾದ್ಯಂತ ಸೆಪ್ಟೆಂಬರ್‌ ತಿಂಗಳಿನಲ್ಲಿ ಮೋಡಬಿತ್ತನೆಯ ಫಲವೋ, ಪ್ರಕೃತಿಯ ವರವೋ ಸುರಿದ ಮಳೆ ಬಳಲಿ ನಿಂತಿದ್ದ ರಾಗಿ ಮೊದಲಾದ ಬೆಳೆಗಳಿಗೆ ಜೀವ ತುಂಬಿ ಈ ಬಾರಿಯ ರೈತರ ಜೇಬಿಗೆ ಕಾಸು, ಹೊಟ್ಟೆಗೆ ಹಿಟ್ಟು ಮತ್ತು ಜಾನುವಾರುಗಳಿಗೆ ಮೇವು ಲಭಿಸುವ ಭರವಸೆ ಮೂಡಿದೆ.

ಕಡೂರು ತಾಲ್ಲೂಕಿನಲ್ಲಿ ತೋಟ ಗಾರಿಕೆ ಬೆಳೆಯಲ್ಲಿ ತೆಂಗು ಮತ್ತು ಕೃಷಿ ಬೆಳೆಯಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಮೆಕ್ಕೆಜೋಳ ಮತ್ತು ರಾಗಿ ಬೆಳೆಗೇ ಅಗ್ರಸ್ಥಾನ. ಪ್ರಕೃತಿಯ ಅವಕೃಪೆಗೆ ತುತ್ತಾಗಿ ತೆಂಗುಬೆಳೆ ಇಡೀ ತಾಲ್ಲೂಕಿನಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ಎದುರಾಗಿದ್ದರೆ, ಮುಂಗಾರು ವೈಫಲ್ಯದ ಕಾರಣ ಮೆಕ್ಕಜೋಳ ಬಿತ್ತಿದ ರೈತರು ಚಿಗುರದ ಬೆಳೆ ಅಳಿಸಿ ರಾಗಿ, ಹಿಂಗಾರು ಜೋಳ ಬಿತ್ತನೆಗೆ ಮೊರೆ ಹೋಗಿದ್ದಾರೆ.

ರಾಗಿಯೂ ಬಿತ್ತನೆಯಾದ ಸಂದರ್ಭದಲ್ಲಿ ಅಲ್ಪಸ್ವಲ್ಪ ಮಳೆ ಸುರಿದು ಬೆಳೆ ಎದ್ದು ನಿಂತಿತ್ತು. ಆದರೆ, ಸಕಾಲದಲ್ಲಿ ಮಳೆಯಾಗದೆ ಎಲ್ಲಿ ಒಣಗುವುದೋ ಎನ್ನುವ ಆತಂಕವೂ ಎದುರಾಗಿತ್ತು. ಆದರೆ, ಕಳೆದ ವಾರ ಸುರಿದ ಮಳೆ ರೈತರ ಆತಂಕ ದೂರ ಮಾಡಿ ಭರವಸೆಯನ್ನಂತೂ ಮೂಡಿಸಿದೆ. ಸೆಪ್ಟೆಂಬರ್‌ ಎರಡನೇ ವಾರ ನಂತರ ಇನ್ನು ಒಂದೆರಡು ಬಾರಿ ಉತ್ತಮ ಮಳೆಯಾದರೆ ರಾಗಿಬೆಳೆ ರೈತರ ಕಣ ಸೇರುವುದು ನಿಶ್ಚಿತ.

ಕಡೂರು ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಈರುಳ್ಳಿ, ಆಲೂಗೆಡ್ಡೆ, ಟೊಮೆಟೋ ಹೊರತು ಪಡಿಸಿ 69,095 ಹೆಕ್ಟೇರ್‌ ಕೃಷಿಯೋಗ್ಯ ಭೂಮಿ ಇದೆ. ಇದರಲ್ಲಿ ಕೃಷಿ ಇಲಾಖೆ ಪ್ರಕಾರ ಈವರೆಗೆ 59ಸಾವಿರ ಹೆಕ್ಟೇರ್‌ ಬಿತ್ತನೆಯಾಗಿದೆ. ರಾಗಿ ಬಿತ್ತನೆಯ ಗುರಿ 31.500 ಹೆಕ್ಟೇರ್‌ ಇತ್ತು. ಆದರೆ ಗುರಿಮೀರಿ 35ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನಿರೀಕ್ಷೆ ಹುಟ್ಟಿಸಿದ್ದ ಮೆಕ್ಕೆಜೋಳ 12ಸಾವಿರ ಹೆಕ್ಟೇರ್‌ ಬದಲಾಗಿ ಕೇವಲ 5ಸಾವಿರ ಹೆಕ್ಟೇರ್‌ ಬಿತ್ತನೆಯಾಗಿದೆ. ಶೇಂಗಾ 2,800 ಹೆಕ್ಟೇರ್‌ ಬಿತ್ತನೆಯಾದರೆ, ಸೂರ್ಯಕಾಂತಿ ನಿರೀಕ್ಷೆಗಿಂತ ಅರ್ಧಭಾಗ ಬಿತ್ತನೆ ( 1,730 ಹೆಕ್ಟೇರ್‌) ಆಗಿದೆ.

ಸದ್ಯ ಸೆಪ್ಟೆಂಬರ್‌ ಎರಡನೇ ವಾರದ ಮಳೆ ಆಧರಿಸಿ ಮಾಲದಂಡೆ (ಹಿಂಗಾರು) ಜೋಳ, ಕಡಲೆ ಬೆಳೆ ಬಿತ್ತನೆಗೆ ಇನ್ನೂ ಒಂದು ವಾರ ಉತ್ತಮ ವಾತಾವರಣವಿದ್ದು, ಕೃಷಿ ಇಲಾಖೆ ವತಿಯಿಂದ ಸಹಾಯಧನ ( ಸಾಮಾನ್ಯ ವರ್ಗ ಶೇ 50, ಪರಿಶಿಷ್ಟರಿಗೆ ಶೇ 75) ದರದಲ್ಲಿ ಹೆಕ್ಟೇರ್‌ಗೆ ಮೂರು ಕಿಲೋನ ಮೂರು ಪಾಕೆಟ್‌ ವಿತರಿಸಲಾಗುತ್ತಿದೆ.

ತಾಲ್ಲೂಕಿನಲ್ಲಿ 11ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಇರಿಸಿಕೊಳ್ಳಲಾಗಿದೆ. ಈ ಮೂಲಕ ಕೊರತೆಯಾಗಿರುವ 10ಸಾವಿರ ಹೆಕ್ಟೇರ್‌ ಬಿತ್ತನೆ ಪೂರೈಸುವ ಮೂಲಕ ಗುರಿ ತಲುಪುವ ಅಂದಾಜು ಕೃಷಿ ಇಲಾಖೆಯದ್ದಾಗಿದೆ. ಅಗತ್ಯಕ್ಕೆ ತಕ್ಕ ಬಿತ್ತನೆ ಬೀಜ ಲಭ್ಯವಿದೆ. ಕಡಲೆಕಾಳು ಇನ್ನಷ್ಟೇ ಲಭ್ಯವಾಗಬೇಕಿದೆ ಎನ್ನುತ್ತಾರೆ ಮಾಹಿತಿ ನೀಡಿದ ಕೃಷಿ ಅಧಿಕಾರಿ ಚಂದ್ರಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT