ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ಶಕ್ತಿ ಚಾಲಿತ ಕಾರು ತಯಾರಿಸಿದ ಎಂಐಟಿ ವಿದ್ಯಾರ್ಥಿಗಳು

Last Updated 13 ಸೆಪ್ಟೆಂಬರ್ 2017, 9:58 IST
ಅಕ್ಷರ ಗಾತ್ರ

ಉಡುಪಿ: ಸೌರ ಶಕ್ತಿಯಿಂದ ಸಂಚರಿಸುವ ಕಾರನ್ನು ‘ಸೊಲಾರ್‌ಮೊಬಿಲ್‌’ ಹೆಸರಿನ ವಿದ್ಯಾರ್ಥಿಗಳ ತಂಡ ತಯಾರಿಸಿದೆ ಎಂದು ಮಣಿಪಾಲ್ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಡಾ. ಜಿ.ಕೆ. ಪ್ರಭು ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್‌.ಎಸ್. ಬಲ್ಲಾಳ್ ಅವರು ಇದೇ 14ರಂದು ಕಾರನ್ನು ಅನಾವರಣಗೊಳಿಸುವರು. ಇಬ್ಬರು ಕುಳಿತುಕೊಳ್ಳಲು ಅವಕಾಶ ಇರುವ ಎಲೆಕ್ಟ್ರಿಕಲ್‌ ಹಾಗೂ ಸೋಲಾರ್ ಕಾರುಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ.

ಆದರೆ ನಮ್ಮ ವಿದ್ಯಾರ್ಥಿಗಳು ನಾಲ್ವರು ಕುಳಿತುಕೊಳ್ಳು ಅವಕಾಶ ಇರುವ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಸೌರ ಶಕ್ತಿಯಿಂದ ಒಮ್ಮೆ ಬ್ಯಾಟರಿ ಚಾರ್ಜ್ ಆದರೆ ಸುಮಾರು 100 ಕಿ.ಮೀ ಸಂಚರಿಸಲಿದೆ. ಕಾರಿನ ಗರಿಷ್ಠ ವೇಗ 80 ಕಿ.ಮೀ ಎಂದು ಮಾಹಿತಿ ನೀಡಿದರು.

ಸೋಲಾರ್ ಫಲಕ ಹಾಗೂ ಬ್ಯಾಟರಿ ಬೆಲೆ ದುಬಾರಿ ಇರುವುದರಿಂದ ಕಾರಿನ ವೆಚ್ಚ ಸುಮಾರು ₹35 ಲಕ್ಷ ರೂಪಾಯಿ ಆಗುತ್ತದೆ. ಭಾರಿ ಸಂಖ್ಯೆಯಲ್ಲಿ ಇಂತಹ ಕಾರುಗಳನ್ನು ಉತ್ಪಾದಿಸಿದರೆ ವೆಚ್ಚ ಕಡಿಮೆಯಾಗಲಿದೆ. ಸೋಲಾರ್ ಫಲಕಗಳನ್ನು ಬಾಡಿಯಲ್ಲಿಯೇ ಅಳವಡಿಸಿದರೆ ವಿನ್ಯಾಸ ಇನ್ನಷ್ಟು ಆಕರ್ಷಕವಾಗಿರುತ್ತದೆ. ಮಳೆಗಾಲದಲ್ಲಿ ವಿದ್ಯುತ್‌ನಿಂದ ಬ್ಯಾಟರಿ ಚಾರ್ಜ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಎಂಜಿನಿಯರ್ಸ್ ಡೇ: ಎಂಜಿನಿಯರ್ ದಿನಾಚರಣೆಯನ್ನು ಇದೇ 15ರಂದು ಆಚರಿಸಲಾಗುವುದು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಎವರೆಸ್ಟ್ ಸಮೂಹದ ಅಮಿತ್ ಕಪೂರ್ ಅವರು ಉಪಸ್ಥಿತರಿರುವರು.

ಎಂಐಟಿ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಅಂದು ಎಲ್ಲರಿಗೂ ಕ್ಯಾಂಪಸ್‌ಗೆ ಮುಕ್ತ ಪ್ರವೇಶ ನೀಡಲಾಗುವುದು. ಕೆಲವರು ಕಾಲೇಜುಗಳಿಗೂ ಪತ್ರ ಬರೆದು ಕ್ಯಾಂಪಸ್ ವೀಕ್ಷಿಸುವಂತೆ ಆಹ್ವಾನ ನೀಡಲಾಗಿದೆ ಎಂದು ಪ್ರಭು ಮಾಹಿತಿ ನೀಡಿದರು. ಪ್ರೊ. ಬಾಲಕೃಷ್ಣ ಮದ್ದೋಡಿ, ಡಾ. ಕೆ. ಜಗನ್ನಾಥ್‌, ಡಾ. ಸೋಮಶೇಖರ್ ಭಟ್‌, ಪ್ರೊ. ಗಣೇಶ್ ಕುಡ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT