ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಸ್ಟ್‌ ಆಫ್‌ ಚೆರ‍್ರಿ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದೃಷ್ಟಿ ಚಾಚಿದಷ್ಟೂ ದೂರ ಬೋಳು ಬೋಳಾಗಿ ಕಾಣುವ ಗುಡ್ಡಗಳು, ಅದರ ಒಡಲ ಕೆದಕಿ ಮತ್ತೊಂದು ಬದಿಗೆ ಮಣ್ಣ ಸುರಿವ ಬೃಹತ್ ಯಂತ್ರಗಳು, ಬಯಲಿನ ಮಹತ್ತಿನಲ್ಲಿ ಇರುವೆಯಷ್ಟೇ ಕಿಂಚಿತ್ ಆಗಿ ಕಾಣುವ ಮನುಷ್ಯರು, ಗುಡ್ಡಗಳ ಬೈತಲೆ ತೆಗೆದಂತೆ ಸವೆದಿರುವ ಕಚ್ಚಾ ರಸ್ತೆಯಲ್ಲಿ ಆಗೀಗ ಸೇನೆಯ ಕವಾಯತಿನ ಸದ್ದೂ ಕೇಳುವುದು...

ಆ ದಾರಿಯ ಯಾವುದೋ ತುದಿಯ ಬದಿಯಲ್ಲೊಂದು ಮರವಿದೆ. ಅದರ ಬುಡದಲ್ಲಿ ಅವನು ಒಂದು ಗುಂಡಿ ತೋಡಿದ್ದಾನೆ... ತಾನೊಬ್ಬ ಮಲಗಲು ಅನುವಾಗುವಷ್ಟು! ಮೇಲಿಂದ ಮಣ್ಣೆಳೆದರೆ ದೇಹ ಮುಚ್ಚಿಹೋಗುವಷ್ಟು!!

ಹೌದು, ಅವನು ತನ್ನ ಸಮಾಧಿಗೆ ತಾನೇ ಜಾಗ ಸಜ್ಜುಗೊಳಿಸಿದ್ದಾನೆ. ಅವನಿಗೆ ಬದುಕು ಸಾಕೆನಿಸಿದೆ. ಎಲ್ಲ ನೋವಿಗೊಂದು ಅಂತ್ಯ ಹಾಡಬೇಕೆನಿಸಿದೆ. ಆದರೆ ಅಬ್ಬೇಪಾರಿಯಾಗಿ ಸಾಯುವುದು ಬೇಕಿಲ್ಲ. ಗೌರವಯುತವಾದ ಸಾವು ಮತ್ತು ತನ್ನ ಪಾರ್ಥಿವ ಶರೀರಕ್ಕೊಂದು ತಕ್ಕ ಸಂಸ್ಕಾರ ಬೇಕು ಎನ್ನುವುದು ಅವನ ಅಭಿಲಾಷೆ. ಅದಕ್ಕಾಗಿಯೇ ಅವನು ಕಂಡಕಂಡವರನ್ನೆಲ್ಲ ಕರೆದು ಕೇಳುತ್ತಾನೆ.

‘ನಾಳೆ ಬೆಳಿಗ್ಗೆ ಆರು ಗಂಟೆಗೆ ಆ ಮರದ ಬಳಿಗೆ ಬನ್ನಿ. ನನ್ನ ಹೆಸರ ಎರಡು ಸಲ ಕೂಗಿ. ನಾನು ಪ್ರತಿಕ್ರಿಯೆ ನೀಡಿದರೆ, ಗುಂಡಿಯಿಂದ ನನ್ನ ಎತ್ತಿ. ಇಲ್ಲದಿದ್ದರೆ ನನ್ನ ದೇಹವನ್ನು ಮಣ್ಣಿಂದ ಮುಚ್ಚಿ ಹೋಗಿ’. ಈ ಕೆಲಸಕ್ಕೆ ಅವನು ಕೈತುಂಬ ಹಣ ಕೊಡಲೂ ಸಿದ್ಧನಿದ್ದಾನೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳಹೊರಟವನ ಸಹಾಯಕ್ಕೆ ಯಾರೂ ಸಿಗುವುದಿಲ್ಲ.

ಇಂಥದ್ದೊಂದು ವಿಚಿತ್ರ ಕಥನದ ಮೂಲಕ ಕಾಡುವ, ಕಲುಕುವ ಸಿನಿಮಾ ‘ಟೇಸ್ಟ್ ಆಫ್ ಚೆರ‍್ರಿ’. ಇದರ ನಿರ್ಮಾಪಕ ಮತ್ತು ನಿರ್ದೇಶಕ ಅಬ್ಬಾಸ್ ಕಿರೋಸ್ತಮಿ. ಕಿರೋಸ್ತಮಿ ಇರಾನ್‌ ದೇಶದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಿರ್ದೇಶಕ. ಕವಿ ಕೂಡ ಹೌದು. ಅವನ ಸಿನಿಮಾಗಳಲ್ಲಿಯೂ -ಶ್ರೇಷ್ಠಕಾವ್ಯದಲ್ಲಷ್ಟೇ ಕಾಣಸಿಗುವ- ಧ್ವನಿಶಕ್ತಿಯಿಂದ, ಕಾವ್ಯಶಿಲ್ಪದಿಂದ, ಬದುಕಿನ ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ದಿಟ್ಟತನದಿಂದ ಮೈಗೂಡಿರುತ್ತವೆ. ಟೇಸ್ಟ್ ಆಫ್ ಚೆರ‍್ರಿ ಸಹ ಇದಕ್ಕೆ ಅತ್ಯುತ್ತಮ ಉದಾಹರಣೆ.

ಚಿತ್ರದ ಬಹುತೇಕ ಭಾಗ ನಾಯಕನ ಕಾರಿನಲ್ಲಿಯೇ ನಡೆಯುತ್ತದೆ. ಕ್ಲೋಸ್‌ ಅಪ್ ಮತ್ತು ಲಾಂಗ್‌ ಶಾಟ್‌ಗಳ ಮೂಲಕವೇ ಎದುರಿಗೆ ಹೇಳುವ ಕಥೆಯ ಮೂಲಕವೇ ಅದರಾಚೆಗೆ ಇನ್ನೊಂದು ಜಗತ್ತನ್ನೂ ಪಾಸಿಂಗ್‌ ರೆಫೆರೆನ್ಸ್‌ ರೀತಿಯಲ್ಲಿ ನಿರ್ದೇಶಕ ಕಾಣಿಸುತ್ತಾ ಹೋಗುತ್ತಾನೆ. ಸಾವನ್ನು ತಾನೇ ಅರಸಿಕೊಂಡು ಹೋಗುವ ವ್ಯಕ್ತಿಯ ಉದ್ದೇಶದ ಬಗ್ಗೆ ತೆಳುವಾದ ವ್ಯಂಗ್ಯವೂ ಈ ಚಿತ್ರದಲ್ಲಿದೆ.

ಯಾವ ರೀತಿಯ ಹಿನ್ನೆಲೆ ಸಂಗೀತವನ್ನೂ ಬಳಸದಿರುವುದೇ ಈ ಕಥನಕ್ಕೊಂದು ಘನತೆಯನ್ನೂ ಕೊಟ್ಟಿದೆ. ಸಾಧ್ಯವಿದ್ದಷ್ಟೂ ಸರಳವಾಗಿ ಸತ್ಯಕ್ಕೆ ಮುಖಾಮುಖಿಯಾಗುವ ಬಗೆಯದು.

ಕಿರೋಸ್ತಮಿ ಯಾವ ಹಂತದಲ್ಲಿಯೂ ಸಿನಿಮಾದೊಳಗೆ ಪ್ರೇಕ್ಷಕನನ್ನು ಮೈಮರೆಯಲು ಬಿಡುವುದಿಲ್ಲ. ತಾನು ಸಿನಿಮಾ ನೋಡುತ್ತಿದ್ದೇನೆ ಎಂಬ ಎಚ್ಚರ ಪ್ರೇಕ್ಷಕನಲ್ಲಿ ಇರಬೇಕು ಎಂಬ ಅವನ ನಂಬಿಕೆ ಈ ಸಿನಿಮಾದಲ್ಲಿಯೂ ಎದ್ದು ಕಾಣುತ್ತದೆ.

ಕೊನೆಯಲ್ಲಿಯೂ ತನ್ನ ಗೋರಿಯಲ್ಲಿ ತಾನೇ ಮಲಗಿಕೊಳ್ಳುವ ಭಾವತೀವ್ರ ದೃಶ್ಯದಲ್ಲಿ ಅವನು ಸಿನಿಮಾ ಮುಗಿಸಿಬಿಡುವುದಿಲ್ಲ.ಅದರ ನಂತರ ನಿರ್ದೇಶಕ ಕಿರೋಸ್ತಮಿ ಮತ್ತು ಅವನ ತಂಡ ಚಿತ್ರೀಕರಣದಲ್ಲಿ ತೊಡಗಿರುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ.

‘ಟೇಸ್ಟ್‌ ಆಫ್‌ ಚೆರ‍್ರಿ’ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ goo.gl/vVufMi ಕೊಂಡಿ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT