ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದ: ವೇದಾಂತದ ತಾರುಣ್ಯಮೂರ್ತಿ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವೇದಾಂತ ಅಥವಾ ಅಧ್ಯಾತ್ಮ ಅಥವಾ ಫಿಲಾಸಫಿ ಅಥವಾ ತತ್ತ್ವಶಾಸ್ತ್ರ. ಈ ಪದಗಳು ಬಹುಪಾಲು ಯುವಜನತೆಗೆ ಹಾಸ್ಯಕ್ಕೆ ವಸ್ತು. ಅವರ ಪಾಲಕ–ಪೋಷಕರಿಗೆ ಭಯಕ್ಕೆ ವಸ್ತು. ಈ ಹಾಸ್ಯಕ್ಕೂ ಭಯಕ್ಕೂ ಮೂಲಕಾರಣ ಮಾತ್ರ ಒಂದೇ.

‘ವೇದಾಂತ ನಮ್ಮ ವಯಸ್ಸಿನವರಿಗೆ ಬೇಕಾಗಿಲ್ಲ; ಅದು ಅಸ್ಪೃಶ್ಯ. ವಯಸ್ಸಾದವರಿಗೆ ಕಾಲ ಕಳೆಯಲು ಅದು ಬೇಕಷ್ಟೆ.’ ಇದು ಯುವಜನತೆಯ ನಿಲುವು.

‘ಓದಿ, ಸಂಪಾದನೆ ಮಾಡಿ, ಚೆನ್ನಾಗಿ ಬದುಕಬೇಕಾದ ವಯಸ್ಸಿನ ನಮ್ಮ ಮಕ್ಕಳಿಗೆ ವೇದಾಂತ ಏಕಾದರೂ ಬೇಕು?’ ಇದು ಹಿರಿಯರ ನಿಲುವು.

ಸ್ವಾಮಿ ವಿವೇಕಾನಂದ ಬಾಹ್ಯಪ್ರಪಂಚಕ್ಕೆ ಹೆಚ್ಚು ಪರಿಚಿತವಾದದ್ದು ಷಿಕಾಗೋದಲ್ಲಿ ಅವರು ಮಾಡಿದ ಉಪನ್ಯಾಸದಿಂದ ಎನ್ನಬಹುದು. ಸರ್ವಧರ್ಮ ಸಮ್ಮೇಳನದ ಆ ಉಪನ್ಯಾಸಕ್ಕೆ ಈಗ 125 ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ವೇದಾಂತಕ್ಕೂ ತಾರುಣ್ಯಕ್ಕೂ ಇರುವ ನಂಟನ್ನು ಕುರಿತು ಮನನ ಮಾಡಬಹುದು ಎನಿಸುತ್ತದೆ.

ವೇದಾಂತದ ಸ್ವರೂಪದ ರೂಪಕವಾಗಿಯೇ ಸ್ವಾಮಿ ವಿವೇಕಾನಂದರು ನಮಗೆ ಒದಗುತ್ತಾರೆ. ಎಂದರೆ ವೇದಾಂತದ ತಾರುಣ್ಯವೇ ಮೂರ್ತರೂಪವನ್ನು ತಾಳಿ ‘ಸ್ವಾಮಿ ವಿವೇಕಾನಂದ’ ಎಂಬ ವ್ಯಕ್ತಿತ್ವವನ್ನು ಪಡೆಯಿತು ಎಂದರೆ ಅದೇನು ದುಡುಕಿನ ಮಾತಾಗದೆನ್ನಿ! ಅವರು ಅಧ್ಯಾತ್ಮ ಪ್ರಪಂಚದಲ್ಲಿ ಮಾಡಿದ ಅಗಾಧ ಕಾರ್ಯ ಈ ಮಾತಿಗೆ ಸಾಕ್ಷ್ಯವಾಗಿದೆ. ಅಷ್ಟೆಲ್ಲ ಸಾಧನೆಯನ್ನು ಮಾಡಿ ಅವರು ಭೌತಿಕ ಶರೀರವನ್ನು ತ್ಯಜಿಸಿದಾಗ ಅವರ ವಯಸ್ಸು ನಲವತ್ತನ್ನು ಮುಟ್ಟಿರಲಿಲ್ಲ. ಈ ಅರ್ಥದಲ್ಲೂ ಅವರು ವೇದಾಂತದ ತರುಣರೇ ಹೌದು.

ಆಧುನಿಕ ಭಾರತದ ಆಧ್ಯಾತ್ಮಿಕತೆಗೇ ಯೌವನದ ಕಸುವನ್ನೂ ಕಾಂತಿಯನ್ನೂ ಒದಗಿಸಿದ ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೇ ಸಲ್ಲಬೇಕು. ‘ನಾವು ಬಲಶಾಲಿಯಾಗಲು ಬಂದಿರುವ ಒಂದು ವಿಶಾಲ ವ್ಯಾಯಾಮಶಾಲೆಯೇ ಜಗತ್ತು’ ಎಂದು ಅವರು ಯುವಕರಿಗೆ ಒಗ್ಗುವ ಪರಿಭಾಷೆಯಲ್ಲಿ ಜಗತ್ತನ್ನು ಕಾಣಿಸಿದರು. ಪ್ರಾಚೀನ ಉಪನಿಷತ್ತಿನ ಸಂದೇಶವನ್ನು ‘ಏಳಿ! ಎದ್ದೇಳಿ!! ಗುರಿ ಮುಟ್ಟುವ ತನಕ ನಿಲ್ಲದಿರಿ!!!’ – ಎಂದು ನಮ್ಮ ಕಾಲಧರ್ಮದ ವ್ಯಾಕರಣದ ಮೂಲಕ ಅರ್ಥೈಸಿದರು.

‘ನರೇಂದ್ರ’ ಎಂಬ ತರುಣ ‘ಸ್ವಾಮಿ ವಿವೇಕಾನಂದ’ ಆದದ್ದು ಕೂಡ ಯುವಕರಿಗೆ ಮಾರ್ಗದರ್ಶಕವಾಗಿದೆ. ಯಾವುದನ್ನೂ ಪರೀಕ್ಷಿಸದೆಯೇ ನಂಬಬಾರದು; ಅನುಭವಕ್ಕೆ ಒದಗಿದ ಅರಿವನ್ನು ನಿರಾಕರಿಸಬಾರದು – ಎಂಬ ಅಧ್ಯಾತ್ಮಸೂತ್ರಕ್ಕೆ ನಿದರ್ಶನವಾಗಿದೆ ಈ ‘ಪರಿವರ್ತನೆ’. ಅಧ್ಯಾತ್ಮ ಎಂದರೆ ಜೀವನದಿಂದ ಓಡಿಹೋಗುವುದಲ್ಲ; ಸೇವೆ–ತ್ಯಾಗ–ಸಾಧನೆಗಳ ಮೂಲಕ ಅರ್ಥ ಕಂಡುಕೊಳ್ಳುವ ಅರಿವಿನ ಆಲಯವೇ ಜೀವನ ಎಂದು ಅವರು ಉಪದೇಶವನ್ನಷ್ಟೆ ನೀಡಿದವರಲ್ಲ; ಅದರಂತೆ ಬದುಕಿ ‘ಅಧ್ಯಾತ್ಮ’ ಎಂಬುದಕ್ಕೆ ನಡೆದಾಡುವ ‘ಅರ್ಥಕೋಶ’ ಆದವರು ಅವರು. ಬಡತನ, ಅನಾರೋಗ್ಯ, ನಿಂದನೆ– ಇಂಥ ಯಾವ ಅಡ್ಡಿಗಳೂ ನಮ್ಮ ಗುರಿಗೆ ಅಡ್ಡವಾಗಲು ನಾವು ಅವಕಾಶವನ್ನೇ ಕೊಡದಂತೆ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಕ್ರಿಯಾಶೀಲತತ್ತ್ವಕ್ಕೇ ಚೇತನವಾಗಿದ್ದರು.

ವೇದಾಂತ/ಅಧ್ಯಾತ್ಮ – ಎಂದರೆ ನಮ್ಮ ಒಳಗಿರುವ ಚೇತನವನ್ನು ನಾವೇ ಕಂಡುಕೊಳ್ಳುವುದು. ಈ ಸಾಕ್ಷಾತ್ಕಾರ ಬೇಕಾಗಿರುವುದೇ ಯೌವನದಲ್ಲಿ. ಬದುಕು ನಿರ್ಮಾಣವಾಗುವುದೇ ಈ ಕಾಲಘಟ್ಟದಲ್ಲಿ. ನಮ್ಮ ಗುರಿಯನ್ನು ನಿರ್ಧರಿಸಿಕೊಳ್ಳುವ ಸಮಯವೂ ಇದೇ. ಆ ಗುರಿಯನ್ನು ತಲುಪಲು ಬೇಕಾದ ಶಕ್ತಿಯನ್ನು ಗಳಿಸಿಕೊಳ್ಳುವ ಕುಶಲತೆ ನಮಗೆ ಒದಗಬೇಕು. ಹೀಗೆ ನಮಗೆ ಬೇಕಾದ ಶಕ್ತಿ ನಮ್ಮಲ್ಲಿಯೇ ಇದೆ; ಅದನ್ನು ಬೇರೆಲ್ಲೋ ಹುಡುಕಬೇಕಿಲ್ಲ ಎಂಬ ಅರಿವು ನಮಗೆ ಈ ಸಮಯದಲ್ಲಿ ಒದಗಬೇಕು.

ನಮ್ಮ ಬದುಕು ‘ನಾನು, ನನ್ನದು’ ಎಂಬ ಸ್ವಾರ್ಥದಿಂದ ಸಂಕುಚಿತಗೊಳ್ಳಬಾರದು; ಜಗತ್ತಿನ ಒಳಿತಿಗಾಗಿ ನಮ್ಮ ವ್ಯಕ್ತಿತ್ವವನ್ನು ಹಿಗ್ಗಿಸಿಕೊಳ್ಳಬೇಕು. ಇಂಥ ಅರಿವನ್ನೂ ಆದರ್ಶವನ್ನೂ ಸ್ವಾಮಿ ವಿವೇಕಾನಂದರ ಜೀವನ–ಸಂದೇಶಗಳು ಯುವಜನತೆಗೆ ನೀಡುವಂಥದ್ದು.

ಸ್ವಾಮೀಜಿಯವರ ಜನ್ಮದಿನವನ್ನು ‘ಯುವದಿನ’ವನ್ನಾಗಿ ಆಚರಿಸುತ್ತಿರುವ ತಾತ್ಪರ್ಯವಾದರೂ ಇದೇ ಹೌದೆನ್ನಿ! ಹೀಗಾಗಿ ಜೀವನಕ್ಕೆ ಬೆಳಕನ್ನೂ ಬಲವನ್ನೂ ಸೊಗಸನ್ನೂ ತುಂಬಿ ಕೊಡುವುದೇ ವೇದಾಂತ. ಅದರ ವಿಗ್ರಹವಾಗಿ ಸದಾ ದಿಕ್ಸೂಚಿಯಾಗಿದ್ದಾರೆ, ಸ್ವಾಮಿ ವಿವೇಕಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT