ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲುಂಟು ಊರಿನ ವಿದ್ಯುತ್‌ ಮೂಲ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದು ಊರಿಗೆ ನೀರಿನ ಮೂಲವಾಗಿ ಕೊಳವೆಬಾವಿ, ಕೆರೆ, ಹಳ್ಳ, ನದಿ ಇರುವಂತೆ ವಿದ್ಯುತ್‌ ಶಕ್ತಿಗೂ ಸ್ಥಳೀಯ ಮೂಲ ಇದ್ದರೆ ಹೇಗೆ? ಇಂತಹ ಕಲ್ಪನೆಯನ್ನು ಸಾಕಾರಗೊಳಿಸಬೇಕು, ಗ್ರಾಮಗಳ ಪ್ರತಿಮನೆಯಲ್ಲಿ ಬೆಳಕು ಸದಾಕಾಲ ಇರಬೇಕೆಂಬ ಕನಸು ಹೊತ್ತು ಹಾಗೆ ವಿದ್ಯುತ್‌ ಉತ್ಪಾದಿಸಿಕೊಡುವ ಯಂತ್ರವನ್ನು ರೂಪಿಸುವ ಪ್ರಯೋಗದಲ್ಲಿ ತೊಡಗಿದ್ದಾರೆ ಗದಗ ಜಿಲ್ಲೆ ಮೆಣಸಗಿ ಗ್ರಾಂದ ಬಸವರಾಜ ಈರಪ್ಪ ಬಡಿಗೇರ್‌.

ಏನಿದು ಯಂತ್ರ: ಚಿಕ್ಕಂದಿನಿಂದಲೂ ಯಂತ್ರೋಪಕರಣಗಳ ಬಗ್ಗೆ ತೀವ್ರ ಕುತೂಹಲಿಯಾಗಿರುವ ಬಸವರಾಜ, ಗ್ರಾಮವೊಂದಕ್ಕೆ ಬೇಕಾದ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸಬಹುದಾದ ಯಂತ್ರದ ವಿನ್ಯಾಸವನ್ನು ಸಿದ್ಧಪಡಿಸಿದ್ದಾರೆ.

ಆ ಯಂತ್ರದ ಕುರಿತು ಅವರಿಗೆ ಕೇಳಿದಾಗ ‘12X8 ಅಡಿ ಅಳತೆಯ ಮಂಚದಾಕಾರದ ಯಂತ್ರ ಇದಾಗೈತ್ರಿ. ಇದರೊಳಗ ವಿವಿಧ ಅಳತೆಗಳ ಗೇರ್‌ ಚಕ್ರಗಳು, 800 ಕೆ.ಜಿ. ತೂಗುವ 6 ಅಡಿ ವ್ಯಾಸದ ಮೂರು ಚಕ್ರಗಳು, 50 ಕೆ.ವಿ.ಸಾಮರ್ಥ್ಯದ ಜನರೇಟರ್‌, 10 ಎಚ್‌.ಪಿ. ಸಾಮರ್ಥ್ಯದ ಮೋಟಾರ್‌ ಮತ್ತು ಸ್ವಿಚ್‌ ಬೋರ್ಡ್‌ಗಳನ್ನು ಸಮಂಜಸವಾಗಿ ಜೋಡಿಸಬೇಕ್ರಿ’ ಎಂದು ಅದರ ವಿನ್ಯಾಸದ ಕುರಿತು ವಿವರಿಸುತ್ತಾರೆ.

‘ಒಂದು ಬದಿಯಲ್ಲಿನ ಹ್ಯಾಂಡಲ್‌ ಅನ್ನು 5ರಿಂದ 10 ನಿಮಿಷ ತಿರ್‌ಗಿಸ್‌ಬೇಕ್ರಿ, ಆಗ ಬೃಹದಾಕಾರದ ಭಾರದ ಚಕ್ರಗಳು ತಿರುಗ್ತಾವ್ರಿ, ಅದರಿಂದ ಜನರೇಟರ್‌ನಲ್ಲಿ ವಿದ್ಯುತ್‌ ಶಕ್ತಿ ಉತ್ಪಾದನೆ ಆಗತೈತ್ರಿ. ಉತ್ಪಾದಿಸಿದ ಶಕ್ತಿಯ ಒಂದು ಭಾಗವನ್ನು ಬಳಸಿಕೊಂಡು ಯಂತ್ರದಲ್ಲಿನ ಮೋಟಾರ್‌ ಚಾಲೂ ಆಗ್ತೈತ್ರಿ, ಆಗ ದೊಡ್ಡ ಚಕ್ರಗಳು ಸ್ವಯಂಚಾಲಿತವಾಗಿ ತಿರುಗ್ತಾವ್ರಿ. ಇದರಿಂದ ನಿರಂತರವಾಗಿ ವಿದ್ಯುತ್‌ ಶಕ್ತಿ ಉತ್ಪಾದನೆ ಆಗ್ತೈತ್ರಿ’ ಎಂದು ಶಕ್ತಿ ಉತ್ಪಾದನೆಯ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿದರು.

ತಮ್ಮ ಜಿಲ್ಲೆಯಲ್ಲಿ ವಿದ್ಯುತ್‌ ವ್ಯತ್ಯಯದಿಂದಾಗಿ ಕೊಳವೆಬಾವಿಗಳ ಸ್ಥಗಿತಗೊಂಡು ಬೆಳೆ ಒಣಗುವುದು, ಲೋಡ್‌ ಶೆಡ್ಡಿಂಗ್‌ನಿಂದಾಗಿ ವಿದ್ಯಾರ್ಥಿಗಳ ರಾತ್ರಿ ಓದಿಗೆ ಅಡಚಣೆ ಆಗುವುದನ್ನು ಬಸವರಾಜ ಗಮನಿಸುತ್ತಿದ್ದರಂತೆ. ವಿದ್ಯುತ್‌ ಉತ್ಪಾದನೆಯಲ್ಲಿ ಜನರೇ ಸ್ವಾವಲಂಬನೆ ಸಾಧಿಸಬೇಕು ಎಂಬ ಚಿಂತನೆ ಅವರಲ್ಲಿ ಮೊಳಕೆಯೊಡಿಯಿತಂತೆ. ಅದರ ಫಲವಾಗಿ ಈ ಯಂತ್ರದ ವಿನ್ಯಾಸ ರೂಪಗೊಂಡಿದೆ.

‘ಈ ಯಂತ್ರಕ್ಕೆ ನೀರಿನ ರಭಸ, ಗಾಳಿಯ ಒತ್ತಡ, ಸೂರ್ಯನ ಶಾಖ, ಪೆಟ್ರೊಲ್‌–ಡೀಸೆಲ್‌ಗಳು ಬೇಕಿಲ್ರಿ. ಹಾಗಾಗಿ ಎಲ್ಲ ಕಾಲಕ್ಕೂ, ಎಂಥದ್ದೇ ಹವಾಮಾನದಲ್ಲೂ ಯಂತ್ರ ಓಡ್ತೈತ್ರಿ. ಅದರಿಂದ ನಿರಂತರ ಶಕ್ತಿ ಉತ್ಪಾದನೆ ಆಗ್ತೈತ್ರಿ. ಈ ವಿನ್ಯಾಸದ ಯಂತ್ರ ಸ್ಥಾಪಿಸಿದರೆ, ಪ್ರತಿ ನಿಮಿಷಕ್ಕೆ 33 ಕೆ.ವಿ. ವಿದ್ಯುತ್‌ ಉತ್ಪಾದನೆ ಆಗುತ್ರಿ. ಅದರಲ್ಲಿ ಅಂದಾಜು ಶೇ 3ರಷ್ಟು ವಿದ್ಯುತ್‌ ಮೋಟಾರ್‌ ಚಾಲೂ ಸ್ಥಿತಿಯಲ್ಲಿರಲು ಬಳಕೆ ಆಗ್ತೈತ್ರಿ. ಉಳಿದ ಶಕ್ತಿಯಿಂದ ಹಳ್ಳಿಯಲ್ಲಿನ ಸಾವಿರಕ್ಕೂ ಹೆಚ್ಚು ಬಲ್ಬ್‌ಗಳನ್ನು ಉರಿಸಬಹುದು, ವಿದ್ಯುತ್‌ಚಾಲಿತ ಗೃಹೋಪಯೋಗಿ ಸಲಕರಣೆಗಳು, ಅಲ್ಲದೆ ಪಂಪ್‌ಸೆಟ್‌ಗಳನ್ನು ನಡೆಸಬಹುದು’ ಎಂದು ಹೇಳಿದರು.

ಗ್ರಾಮೀಣ ಸಂಶೋಧಕ: ಬಸವರಾಜ ಒಮ್ಮೆ ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಸ್ವಯಂಚಾಲಿತವಾಗಿ ವಾದ್ಯಗಳನ್ನು ನುಡಿಸುವ ಯಂತ್ರವನ್ನು ನೋಡಿದರಂತೆ. ಆ ಯಂತ್ರದ ಮಾದರಿಯನ್ನು ಇರಿಸಿಕೊಂಡು ತಾವೂ 12 ಮಂಗಳವಾದ್ಯಗಳನ್ನು ನುಡಿಸುವ ಯಂತ್ರವನ್ನು ರೂಪಿಸಿದರಂತೆ. ಆ ಯಂತ್ರದ ಕುರಿತ ತಿಳಿದ ಬೆಂಗಳೂರಿನ ಗಾಂಧಿ ಕೃಷಿವಿಜ್ಞಾನ ಕೇಂದ್ರದ ಪ್ರಾಧ್ಯಾಪಕರೊಬ್ಬರು, ‘ಯಂತ್ರ ರೂಪಣೆಯ ನಿನ್ನ ಪ್ರತಿಭೆ ಮತ್ತು ಕೌಶಲಗಳನ್ನು ಕೃಷಿ ಯಂತ್ರೋಪಕರಣಗಳ ತಯಾರಿಕೆಗೆ ಬಳಸು. ಅದರಿಂದ ಆದಾಯ ಮತ್ತು ಪ್ರಸಿದ್ಧಿ ಎರಡೂ ಸಿಗುತ್ತದೆ’ ಎಂದು ಸಲಹೆ ನೀಡಿದರಂತೆ.

ಅವರ ಮಾತಿನಂತೆ ಬಸವರಾಜ ಜಮೀನನ್ನು ಹದಗೊಳಿಸುವ ಯಂತ್ರ (ಕುಂಠಿ), ಒಕ್ಕಣೆಯಂತ್ರ, ಸ್ವಯಂಚಾಲಿತವಾಗಿ ಕಸ ತೆಗೆಯುವ, ಬೀಜಬಿತ್ತನೆ ಮಾಡುವ ಯಂತ್ರ ಮತ್ತು ತೆಂಗಿನ ಮರದಿಂದ ಕಾಯಿಗಳನ್ನು ಇಳಿಸುವ ವಿದ್ಯುತ್‌ ಯಂತ್ರ ಮತ್ತು ಲಾಡುಗಳನ್ನು ಪ್ರಸಾದ ರೂಪದಲ್ಲಿ ವಿತರಣೆ ಮಾಡುವ ಗಣೇಶ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡುತ್ತ ಮತ್ತು ಅವುಗಳನ್ನು ರಿಪೇರಿ ಮಾಡುತ್ತಿದ್ದಾರೆ. ಇದರಿಂದ ಅವರ ಜೀವನೋಪಾಯಕ್ಕೆ ಆದಾಯವೂ ಬರತೊಡಗಿದೆ.

ಬಡಿಗೇರ್‌ ಅವರು ಐಟಿಐನಲ್ಲಿ ಡೀಸೆಲ್‌ ಮೆಕ್ಯಾನಿಕ್‌ ಕೋರ್ಸ್ ಮಾಡಿದ್ದಾರೆ. ಅಪ್ಪ ಈರಪ್ಪ ಮತ್ತು ಅಮ್ಮ ಪಾರ್ವತಮ್ಮ ಮತ್ತು ಹಿರಿಯಣ್ಣನೊಂದಿಗೆ ವಾಸವಿರುವ ಇವರಿಗೆ ಊರಲ್ಲಿ ಎರಡು ಎಕರೆ ಜಮೀನಿದೆ. ಬಸವರಾಜ ಯಂತ್ರಗಳ ತಯಾರಿಕೆಯಲ್ಲಿ ತೊಡಗಿದಾಗ, ಅಣ್ಣ ಹೊಲದ ಒಕ್ಕಲುತನ ನೋಡಿಕೊಳ್ಳುತ್ತಾರೆ. ಇನ್ನೂ ಅವಿವಾಹಿತ ಆಗಿರುವ 40ರ ಹರೆಯದ ಬಸವರಾಜ ಅವರಿಗೆ ತಮ್ಮ ಮದುವೆ ಮನೆಯ ಆಲಂಕಾರಿಕ ವಿದ್ಯುತ್‌ದೀಪಗಳನ್ನು ತಾವೇ ವಿನ್ಯಾಸಗೊಳಿಸಿದ ವಿದ್ಯುತ್‌ ಉತ್ಪಾದನಾ ಯಂತ್ರದಿಂದ ಉರಿಸಬೇಕೆಂಬ ಮಹದಾಸೆ.

ಬಸವರಾಜ ತಯಾರಿಸಿರುವ ಕೃಷಿ ಯಂತ್ರೋಪಕರಣಗಳು ರೋಣ, ನರಗುಂದ, ಬಾದಾಮಿ, ಹುನಗುಂದ ತಾಲ್ಲೂಕುಗಳು ಸೇರಿದಂತೆ ರಾಜ್ಯದ ವಿವಿಧ ಊರುಗಳ ಹೊಲಗಳಲ್ಲಿ ಉಳುಮೆ ಕೆಲಸಕ್ಕೆ ಬಳಕೆಯಾಗುತ್ತಿವೆ. ಇವರ ಕೈಯಲ್ಲಿ ರೂಪಿತಗೊಂಡ ನಗಾರಿ, ಗಂಟೆ, ಜಾಗಟೆ, ಶಹನಾಯಿ, ತಾಳ, ಡಮರು, ಶಂಖ, ಕಹಳೆ, ಡೊಳ್ಳನ್ನು ಒಳಗೊಂಡ ವಾದ್ಯಯಂತ್ರಗಳು 30ಕ್ಕೂ ಹೆಚ್ಚು ದೇವಾಲಯಗಳಲ್ಲಿ ಸುಮಧುರ ನಾದವನ್ನು ಹೊರಡಿಸುತ್ತಿವೆ.

ಸಹಾಯಧನ ಬೇಕಿದೆ: ವಿದ್ಯುತ್‌ ಉತ್ಪಾದನೆಯ ಬೃಹತ್‌ ಜಲಾಗಾರಗಳು, ಶಾಖೋತ್ಪನ್ನ ಕೇಂದ್ರಗಳು, ಗಾಳಿಯಂತ್ರಗಳು, ಸೌರವಿದ್ಯುತ್‌ ಪಾರ್ಕ್‌ಗಳ ಮೇಲಿನ ಅವಲಂಬನೆ ಕಡಿಮೆ ಆಗಬೇಕು. ರಾಜ್ಯದ ಪ್ರತಿಹಳ್ಳಿಯಲ್ಲೂ ಸ್ವಯಂಚಾಲಿತವಾಗಿ ವಿದ್ಯುತ್‌ ಉತ್ಪಾದಿಸುವ ಯಂತ್ರಗಳು ಸ್ಥಾಪನೆಗೊಳ್ಳಬೇಕೆಂಬ ಮಹತ್ವಕಾಂಕ್ಷೆ ಬಸವರಾಜ್‌ ಅವರಿಗಿದೆ. ತಾವು ತಯಾರಿಸಿದ ನಕ್ಷೆಯನ್ನು ಯಂತ್ರವಾಗಿಸಲು ಬೇಕಾದ ಸರಿಸುಮಾರು ₹ 30 ಲಕ್ಷದಷ್ಟು ಮೊತ್ತ ಸಂಗ್ರಹಿಸಲು ಸರ್ಕಾರ ಇಲಾಖೆಗಳ ಬಾಗಿಲು ತಟ್ಟುತ್ತಾ ಮೆಟ್ಟು ಸವೆಸಿದ್ದಾರೆ, ಸಚಿವರ ಮನೆಗಳ ಕದಗಳನ್ನೂ ತಟ್ಟುತ್ತಿದ್ದಾರೆ. ಆದರೆ, ನೆರವಿನ ಹಸ್ತಗಳು ಅದೃಷ್ಟದ ಕದವಿನ್ನೂ ತೆರೆಯುತ್ತಿಲ್ಲ.

‘ಈ ನಕ್ಷೆ ಯಂತ್ರವಾಗುವುದು ಕಷ್ಟ’
‘ಇಷ್ಟು ಸರಳವಾದ ಸಂಶೋಧನೆಯಲ್ಲಿ ವಿದ್ಯುತ್‌ಶಕ್ತಿಯನ್ನು ಉತ್ಪಾದಿಸುವಂತಿದ್ದರೆ ಇದನ್ನು ವಿಜ್ಞಾನಿಗಳು ಯಾವತ್ತೋ ಜಾರಿಗೆ ತರುತ್ತಿದ್ದರು. ವಿದ್ಯುತ್‌ ಉತ್ಪಾದನೆಗೆ ಅಗತ್ಯವಾಗಿ ಬೇಕಾದ ಬಾಹ್ಯಶಕ್ತಿಯ ಮೂಲ ಇಲ್ಲಿಲ್ಲ. ಅಲ್ಲದೆ ನೂರಾರು ಕೆ.ಜಿ.ತೂಗುವ ಚಕ್ರಗಳನ್ನು ಆರಂಭದಲ್ಲಿ ಕೈಯಿಂದ ತಿರುಗಿಸುವುದು ಸುಲಭವಲ್ಲ. ಈ ನಕ್ಷೆಯಲ್ಲಿರುವಂತೆ ಯಂತ್ರವನ್ನು ತಯಾರಿಸಲು ಸಾಧ್ಯವಿಲ್ಲ’ ಎಂಬುದು ಎಲೆಕ್ಟ್ರಿಕಲ್‌ ಎಂಜಿನಿಯರ್‌ ಲಕ್ಷ್ಮೀಪತಿ ಅವರ ಮಾತು.

‘ಒಂದುವೇಳೆ ಈ ಯಂತ್ರದಿಂದ 33 ಕೆ.ವಿ.ಯಷ್ಟು ವಿದ್ಯುತ್‌ ಉತ್ಪಾದನೆ ಆದರೂ, ಅದರಲ್ಲಿನ 7 ಕೆ.ವಿ. ಮೋಟಾರ್‌ ಓಡಲು ಬೇಕಾಗುತ್ತದೆ. ಈ ನಕ್ಷೆಯ ಚಿಕ್ಕ ಘಟಕವನ್ನು ನಿರ್ಮಿಸಿ ಯಶಸ್ವಿಯಾದರೆ, ತದನಂತರ ಬೃಹತ್‌ ಯಂತ್ರರಚನೆಗೆ ಮುಂದಾಗುವುದು ಒಳ್ಳೆಯದು’ ಎನ್ನುತ್ತಾರೆ ಅವರು.
ಸಂಪರ್ಕಕ್ಕೆ: 9901172876.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT