ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನುಮುಂದೆ ಇ–ವಾಹನಗಳ ದುನಿಯಾ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಜಗತ್ತಿನ ಮಾಲಿನ್ಯ ನಗರಗಳಲ್ಲಿ ನಾಲ್ಕು ನಗರಗಳು ಭಾರತದಲ್ಲೇ ಇವೆ. ಮಾಲಿನ್ಯವನ್ನು ಕಡಿಮೆ ಮಾಡುವ ಕ್ರಮಗಳಲ್ಲಿ ವಿದ್ಯುತ್‌ ಚಾಲಿತ (ಎಲೆಕ್ಟ್ರಿಕ್‌) ವಾಹನಗಳ ಬಳಕೆ ಮಾಡುವುದೂ ಒಂದಾಗಿದೆ.

2019ರ ಮಧ್ಯದ ಹೊತ್ತಿಗೆ ದೇಶದಲ್ಲಿ ವಿದ್ಯುತ್ತಿನಿಂದ ಓಡುವ ಹತ್ತು ಲಕ್ಷ ಆಟೊಗಳು ಹಾಗೂ ಹತ್ತು ಸಾವಿರ ಬಸ್‌ಗಳು ರಸ್ತೆಗೆ ಇಳಿಯುವಂತೆ ನೋಡಿಕೊಳ್ಳಲು ಪ್ರಯತ್ನಗಳು ಬಲು ಜೋರಾಗಿ ನಡೆದಿವೆ.

2030ರ ವೇಳೆಗೆ ದೇಶದ ಎಲ್ಲ ವಾಹನಗಳು ವಿದ್ಯುತ್ತಿನಿಂದಲೇ ಓಡಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿರುವ ಸರ್ಕಾರ ಅದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ಎಷ್ಟು ಉತ್ಸುಕವಾಗಿದೆ ಎಂದರೆ ಮುಂದಿನ ಎಂಟು ತಿಂಗಳಲ್ಲಿ ನವದೆಹಲಿಯಲ್ಲೇ ಹತ್ತು ಸಾವಿರ ವಿದ್ಯುತ್‌ ಚಾಲಿತ ಕಾರುಗಳು (ಇ–ಕಾರ್‌) ರಸ್ತೆಗಿಳಿಯಲಿವೆ.

ಇ–ಕಾರ್‌ಗಳ ಸಗಟು ಉತ್ಪಾದನೆಗೆ ಟಾಟಾ ಮೋಟಾರ್ಸ್‌, ಹುಂಡೈ, ನಿಸ್ಸಾನ್‌, ರೆನೊ, ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಅಂಡ್‌ ಮಹೀಂದ್ರಾ ಕಂಪೆನಿಗಳು ಮುಂದೆ ಬಂದಿವೆ.

ಏನೇನು ಪ್ರೋತ್ಸಾಹ?: ಇ–ವಾಹನಗಳಿಗೆ ತುಂಬಾ ಕಡಿಮೆ ತೆರಿಗೆ ಆಕರಿಸಲು ನಿರ್ಧರಿಸಿರುವ ಸರ್ಕಾರ, ಅವುಗಳಿಗೆ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸಲು ಉದ್ದೇಶಿಸಿದೆ. ವಾಹನಗಳ ಬ್ಯಾಟರಿ ಖಾಲಿಯಾದರೆ ತುಂಬಿಸಿಕೊಳ್ಳಲು ರಸ್ತೆ ಪಕ್ಕದಲ್ಲಿ ಚಾರ್ಜರ್‌ಗಳ ವ್ಯವಸ್ಥೆ ಆಗಬೇಕಿರುವುದು ತುರ್ತು ಅಗತ್ಯವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ನಾಲ್ಕು ಸಾವಿರ ಚಾರ್ಜರ್‌ಗಳ ಸ್ಥಾಪನೆಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ.

ದೇಶದಾದ್ಯಂತ ಸುಮಾರು 56 ಸಾವಿರ ಪೆಟ್ರೋಲ್‌ ಬಂಕ್‌ಗಳಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಹಂತ–ಹಂತವಾಗಿ ಅವುಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಹೆಚ್ಚಿಸುವುದು ಇಂಧನ ಇಲಾಖೆಯು ಹಾಕಿಕೊಂಡ ಯೋಜನೆಯಾಗಿದೆ.

‘ಜನ ಇ–ವಾಹನಗಳನ್ನೇ ಬಳಸುವತ್ತ ಚಿತ್ತ ಹರಿಸುವಂತೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ನಾಲ್ಕು ಸಾವಿರ ಚಾರ್ಜಿಂಗ್‌ ಪಾಯಿಂಟ್‌ಗಳು ಎನ್‌ಸಿಆರ್‌ನಲ್ಲಿ ಸ್ಥಾಪನೆಯಾದರೆ, ರಾಜಧಾನಿಯಲ್ಲಿ ಇ–ವಾಹನ ಬಳಸಲು ಯಾವುದೇ ತೊಂದರೆ ಇರುವುದಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಇ–ಆಟೊಗಳ ಉತ್ಪಾದನೆಗೆ ಪೂರಕವಾದ ನೀತಿಯನ್ನು ವರ್ಷಾಂತ್ಯದ ವೇಳೆಗೆ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ವರ್ಷ ಇ–ಬಸ್‌ಗಳ ಖರೀದಿಗೆ ಉತ್ತೇಜನ ನೀಡಲಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಇ–ವಾಹನಗಳ ಬಳಕೆ ಹೆಚ್ಚಿದಂತೆ ಅವುಗಳ ದರ ತಗ್ಗಲಿದೆ. ಮುಂದಿನ 3–4 ವರ್ಷಗಳಲ್ಲಿ ಈ ಕ್ಷೇತ್ರ ಬಹುದೊಡ್ಡ ಕ್ರಾಂತಿಯನ್ನೇ ಕಾಣಲಿದೆ’ ಎಂದು ವಿವರಿಸುತ್ತಾರೆ ಕೇಂದ್ರ ಇಂಧನ ಸಚಿವರಿಗೆ ಸಲಹೆಗಾರ ಅಶೋಕ್‌ ಝುಂಜನ್‌ವಾಲಾ. ಸದ್ಯ ಲಕ್ಸುರಿ ಹಾಗೂ ಹೈಬ್ರಿಡ್‌ ಕಾರುಗಳಿಗೆ ಶೇ 43 ತೆರಿಗೆ ಇದೆ. ಅದೇ ಇ–ಕಾರುಗಳಿಗೆ ಶೇ 12ರಷ್ಟು ಜಿಎಸ್‌ಟಿ ನಿಗದಿ ಮಾಡಲಾಗಿದ್ದು, ಯಾವುದೇ ಸೆಸ್‌ ಇಲ್ಲ. ಇದರಿಂದ ವಿದ್ಯುತ್‌ ಚಾಲಿತ ಕಾರುಗಳ ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ ಎಂಬ ನಿರೀಕ್ಷೆಯಿದೆ.

ದೇಶದಲ್ಲಿ ಪ್ರತಿವರ್ಷ ಸರಾಸರಿ 2.5 ಕೋಟಿ ವಾಹನಗಳ ಉತ್ಪಾದನೆ ಮಾಡಲಾಗುತ್ತಿದೆ. ಅವುಗಳಲ್ಲಿ ಶೇ 99ರಷ್ಟು ಪೆಟ್ರೋಲ್‌ ಇಲ್ಲವೆ ಡೀಸೆಲ್‌ ಚಾಲಿತ ಎಂಜಿನ್‌ಗಳನ್ನು ಹೊಂದಿವೆ. ಸದ್ಯ ಶೇ 1ರಷ್ಟಿರುವ ವಿದ್ಯುತ್‌ ವಾಹನಗಳ ಉತ್ಪಾದನೆಯನ್ನು ಇನ್ನು 13 ವರ್ಷಗಳಲ್ಲಿ ಶೇಕಡಾ ನೂರಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ.

ಈ ಪರಿವರ್ತನೆಗೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಅಗತ್ಯವಾಗಿದೆ. ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆಗೆ ಬೇಕಾಗುವ ಮಾನವ ಸಂಪನ್ಮೂಲ ಕಡಿಮೆ. ಇದರಿಂದ ಉದ್ಯೋಗಗಳು ಕಡಿತಗೊಳ್ಳುವ ಭೀತಿಯೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT