ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮತೃಪ್ತಿಯ ಕೆಲಸ

Last Updated 21 ಸೆಪ್ಟೆಂಬರ್ 2017, 7:32 IST
ಅಕ್ಷರ ಗಾತ್ರ

ಸರ್ಕಾರಿ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಐಎಎಸ್‌ ಅಧಿಕಾರಿಯಾಗಿರುವ ಗ್ರಾಮೀಣ ಪ್ರತಿಭೆ ರೋಹಿಣಿ ಬಾಜಿಬಾಖರೆ ಅವರ ಕಥೆ ಇದು

ರೋಹಿಣಿ ಮಹಾರಾಷ್ಟ್ರದ ಸೊಲ್ಲಾಪುರದವರು. ಇವರ ತಂದೆ ರೈತ ಕಾರ್ಮಿಕರು. ಬಡತನದಲ್ಲಿ ಬೆಳೆದ ರೋಹಿಣಿ, ಚಿಕ್ಕವಯಸ್ಸಿನಲ್ಲೇ ದೇಶದಲ್ಲಿನ ಬಡತನವನ್ನು ನಿರ್ಮೂಲನೆ ಮಾಡಬೇಕು ಎಂಬ ಕನಸು ಕಂಡಿದ್ದರು. ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದಿದ್ದ ಇವರು ಎಂಜಿನಿಯರಿಂಗ್‌ ಪದವಿಯನ್ನು ಸರ್ಕಾರಿ ಕಾಲೇಜಿನಿಂದಲೇ ಪಡೆದರು. ಬಳಿಕ ಕೇಂದ್ರ ಲೋಕಸೇವಾ ಆಯೋಗದ ನಾಗರೀಕ ಸೇವಾ ಪರೀಕ್ಷೆಗೆ ಕುಳಿತರು.

ಕಠಿಣ ಪರಿಶ್ರಮದೊಂದಿಗೆ ಮೂರು ವರ್ಷಗಳ ನಿರಂತರ ಅಧ್ಯಯನ ಮಾಡಿದರು. ಇದರ ಫಲವಾಗಿ ನಾಗರೀಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾದರು.

ಮೊದಲ ವರ್ಷದಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ಪಾಸು ಮಾಡಲು ಸಾಧ್ಯವಾಗಿರಲಿಲ್ಲ. ಹಾಗೆಂದು ಎದೆಗುಂದಲಿಲ್ಲ. ಮತ್ತೆ ಪರೀಕ್ಷೆಗೆ ತಯಾರಿ ನಡೆಸಿದರು. ಎರಡನೇ ವರ್ಷದಲ್ಲಿ ಸಂದರ್ಶನ ಎದುರಿಸಿದರಾದರೂ ಯಶಸ್ವಿಯಾಗಲಿಲ್ಲ. ಮತ್ತೆ ಮೂರನೇ ವರ್ಷ ಪರೀಕ್ಷೆಗೆ ಕುಳಿತು ಯಶಸ್ವಿಯಾದರು. ರೋಹಿಣಿ ಯಾವುದೇ ಕೋಚಿಂಗ್‌ ಪಡೆಯದೇ ಸ್ವತಃ ಓದಿಕೊಂಡು ಯಶಸ್ವಿಯಾಗಿದ್ದು ವಿಶೇಷ.

ಪ್ರಸ್ತುತ ತಮಿಳುನಾಡಿನ ಸೇಲಂನ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಜಿಲ್ಲೆಯ ಮೊಟ್ಟ ಮೊದಲ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೂ ರೋಹಿಣಿ ಪಾತ್ರರಾಗಿದ್ದಾರೆ.

*


ಅನೂಜ್‌ ರಕ್ಯಾನ್‌
ಕೆಲಸ ಇಲ್ಲದೆ ಅಡುಗೆ ಮನೆಯಲ್ಲಿ ಜ್ಯೂಸ್‌ ಮಾಡಿಕೊಂಡು ಇರುತ್ತಿದ್ದ ಅನೂಜ್‌ ರಕ್ಯಾನ್‌ ಇಂದು 250 ಕೋಟಿ ರೂಪಾಯಿ ವಹಿವಾಟು ನಡೆಸುವ ಕಂಪೆನಿಯ ಮಾಲೀಕರಾಗಿದ್ದಾರೆ.

34ರ ಹರೆಯದ ಈ ಯುವಕನಿಗೆ ಇದು ಸಾಧ್ಯವಾಗಿದ್ದು ಹೇಗೆ ಎಂಬುದರ ಸ್ಫೂರ್ತಿದಾಯಕ ಕಥೆ ಇದು. ಅನೂಜ್‌ ಮುಂಬೈ ನಿವಾಸಿ. ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಜ್ಯೂಸ್ ಉದ್ಯಮಕ್ಕೆ ಚಾಲನೆ ನೀಡಿದ ಅನೂಜ್‌ ಆರಂಭದಲ್ಲಿ  ಕಬ್ಬಿನ ಹಾಲು ಮತ್ತು ಕಿತ್ತಳೆ ಜ್ಯೂಸ್‌ ತಯಾರಿಸಿದರು. ಇದಕ್ಕೆ ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ಮುಂದಾದರು.

2014ರಲ್ಲಿ ‘ರಾ ಪ್ರಸ್ಸೆರಿ’ ಎಂಬ ಜ್ಯೂಸ್‌ ತಯಾರಿಕಾ ಕಂಪೆನಿ ಸ್ಥಾಪನೆ ಮಾಡಿದರು. ರೂ 5 ಕೋಟಿ ರೂಪಾಯಿ ಬಂಡವಾಳದೊಂದಿಗೆ ಆರಂಭವಾದ ಈ ಕಂಪೆನಿ ಇಂದು 250 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.

ಸುಮಾರು 30ಕ್ಕೂ ಹೆಚ್ಚು ಜ್ಯೂಸ್‌ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. 

*


ಮೇಘನಾ ಡಬ್ಬರ್‌
ಅತಿ ಕಿರಿಯ ವಯಸ್ಸಿಗೆ ಹಿರಿದಾದ ಸಾಧನೆ ಮಾಡಿರುವ ಮೇಘನಾ ಡಬ್ಬರ್‌ ಅವರ ಕಥೆ ಇದು. ಅನಾಥ ಮತ್ತು ಬಡ ಮಕ್ಕಳನ್ನು ದತ್ತು ಪಡೆದು ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ‘ಮೇಕ್‌ ದಿ ವರ್ಲ್ಡ್‌ ವಂಡರ್‌ಫುಲ್‌’ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ.

ಮೇಘನಾ ಆಂಧ್ರಪ್ರದೇಶದ ಗುಂಟೂರಿನವರು. ಹೈದರಾಬಾದಿನಲ್ಲಿ ವ್ಯಾಸಂಗ ಮಾಡುವಾಗ ಹಾಸ್ಟೆಲ್‌ನಲ್ಲಿ ಅನಾಥ ಮಕ್ಕಳನ್ನು ಸಾಕುತ್ತಿದ್ದರು. ವಿದ್ಯಾಭ್ಯಾಸ ಮುಗಿದ ಬಳಿಕ ‘ಮೇಕ್‌ ದಿ ವರ್ಲ್ಡ್‌ ವಂಡರ್‌ಫುಲ್‌’ ಸಂಸ್ಥೆಯಲ್ಲಿ ನಿರತರಾಗಿದ್ದಾರೆ. 2023ರ ವೇಳೆಗೆ 2500 ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ಕೊಡುವ ಯೋಜನೆಯನ್ನು ಮೇಘನಾ ರೂಪಿಸಿದ್ದಾರೆ. ಮಕ್ಕಳಿಗೆ ಮಾತ್ರವಲ್ಲದೆ ಒಂಟಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಹಣಕಾಸು ನೆರವು ನೀಡುತ್ತಿದ್ದಾರೆ.

ಕೆಲ ವಿದೇಶಿ ಸಂಸ್ಥೆಗಳಿಂದ ಧನ ಸಹಾಯ ಪಡೆದು ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ದೂರ ಶಿಕ್ಷಣದಲ್ಲಿ ಬಿಬಿಎ ಪದವಿ ಅಭ್ಯಾಸ ಮಾಡುತ್ತಿರುವ ಮೇಘನಾ ಮಕ್ಕಳ ಶಿಕ್ಷಣ ಕುರಿತಂತೆ ಅಭಿಯಾನ ಹಾಗೂ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಮಾತ್ರ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯ. ಇದರಿಂದ ದೇಶ ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ನಮ್ಮೂರಿನಲ್ಲಿ ನಾನು ಓದುವಾಗ ಬಡತನದ ಕಾರಣದಿಂದಾಗಿ ಎಷ್ಟೋ ಮಕ್ಕಳು ಶಾಲೆಗೆ ಬರದೇ ಕೆಲಸಕ್ಕೆ ಹೋಗುತ್ತಿದ್ದರು. ಅವರನ್ನು ನೋಡಿ ನನಗೆ ಬೇಸರವಾಗುತ್ತಿತ್ತು. ಈಗ ಅಂತಹ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಎಂದು ಮೇಘನಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT