ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ಮಾ, ಹಜೊಂಗ್‌ ನಿರಾಶ್ರಿತರಿಗೆ ಶೀಘ್ರ ಪೌರತ್ವ ಸಾಧ್ಯತೆ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಮ್ಯಾನ್ಮಾರ್‌ನಿಂದ ವಲಸೆ ಬಂದಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಮರನ್ನು ಗಡಿಪಾರು ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವುದರ ನಡುವೆಯೇ ಐದು ದಶಕಗಳ ಹಿಂದೆ ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾ ದೇಶ) ವಲಸೆ ಬಂದ ಸುಮಾರು ಒಂದು ಲಕ್ಷ ಚಕ್ಮಾ ಮತ್ತು ಹಜೊಂಗ್‌ ನಿರಾಶ್ರಿತರಿಗೆ ಪೌರತ್ವ ನೀಡುವ ಕುರಿತು ಭಾರತ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ.

ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಕ್ಮಾ–ಹಜೊಂಗ್‌ ನಿರಾಶ್ರಿತರ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿದೆ. ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಸಭೆಯಲ್ಲಿ ಭಾಗವಹಿಸಿದ್ದರು.

ಚಕ್ಮಾ ಮತ್ತು ಹಜೊಂಗ್‌ ನಿರಾಶ್ರಿತರಿಗೆ ಪೌರತ್ವ ನೀಡುವಂತೆ ಸುಪ್ರೀಂ ಕೋರ್ಟ್‌ 2015ರಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಿರಾಶ್ರಿತರಲ್ಲಿ ಹೆಚ್ಚಿನವರು ಅರುಣಾಚಲ ಪ್ರದೇಶದಲ್ಲಿರುವ ಶಿಬಿರಗಳಲ್ಲಿ ನೆಲೆಸಿದ್ದಾರೆ.

ಈ ನಿರಾಶ್ರಿತರಿಗೆ ಪೌರತ್ವ ನೀಡಬಾರದು ಎಂದು ಅರುಣಾಚಲ ಪ್ರದೇಶದ ಹಲವು ಸಂಘಟನೆಗಳು ಒತ್ತಾಯಿಸುತ್ತಿವೆ. ಪೌರತ್ವ ನೀಡುವುದರಿಂದ ಅರುಣಾಚಲ ಪ್ರದೇಶದ ಜನಸಂಖ್ಯಾ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆ ಬದಲಾಗುತ್ತದೆ ಎಂಬುದು ಇವರ ವಿರೋಧಕ್ಕೆ ಕಾರಣ. ಆದರೆ ಸರ್ವಸಮ್ಮತವಾದ ಕಾರ್ಯಯೋಜನೆಯೊಂದನ್ನು ರೂಪಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ.

ವಲಸೆಗೆ ಕಾರಣ: ಚಕ್ಮಾ ಮತ್ತು ಹಜೊಂಗ್‌ ಬುಡಕಟ್ಟು ಜನರು ಹಿಂದಿನ ಪೂರ್ವ ಪಾಕಿಸ್ತಾನದ ಚಿತ್ತಗಾಂಗ್‌ ಗುಡ್ಡಗಾಡು ಪ್ರದೇಶದಲ್ಲಿ ನೆಲೆಯಾಗಿದ್ದರು. 1960ರ ದಶಕದಲ್ಲಿ ಕಪ್ತಾಯ್‌ ಅಣೆಕಟ್ಟು ಯೋಜನೆಯಿಂದಾಗಿ ಅವರ ಹುಟ್ಟೂರು ಮುಳುಗಿ ಹೋಯಿತು. ಚಕ್ಮಾಗಳು ಬೌದ್ಧರಾದರೆ, ಹಜೊಂಗ್‌ ಜನರು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಆದುದರಿಂದ ಧರ್ಮದ ನೆಲೆಯಲ್ಲಿಯೂ ಅವರು ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣದಿಂದ ಅವರು ಮಿಜೋರಂನ ಲುಷಾಯ್‌ ಗುಡ್ಡಗಾಡು ಪ್ರದೇಶದ ಮೂಲಕ ಭಾರತಕ್ಕೆ ಪ್ರವೇಶಿಸಿದರು.

ಸರ್ವಸಮ್ಮತ ಯೋಜನೆ?:

*ಅರುಣಾಚಲ ಪ್ರದೇಶದಲ್ಲಿ ವಸತಿ, ಪ್ರಯಾಣ ಮತ್ತು ಕೆಲಸ ಮಾಡುವ ಪರವಾನಗಿ

*ಅರುಣಾಚಲ ಪ್ರದೇಶದಲ್ಲಿ ಜಮೀನು ಖರೀದಿಸಲು ಅವಕಾಶ ಇಲ್ಲ

*ದೇಶದ  ಇತರ ಭಾಗಗಳಲ್ಲಿ ಆಸ್ತಿ ಖರೀದಿಗೆ ಅವಕಾಶ

ಈಗ ಇವರೆಲ್ಲರೂ ಅರುಣಾಚಲ ಪ್ರದೇಶದಲ್ಲಿ ನೆಲೆಯಾಗಿದ್ದಾರೆ.

ಜನಸಂಖ್ಯೆ: 5,000

(1964–69ರ ನಡುವೆ )

ಈಗಿನ ಜನಸಂಖ್ಯೆ -1ಲಕ್ಷ

1960ರ ದಶಕದಲ್ಲಿ ಭಾರತಕ್ಕೆ ವಲಸೆ

ಪೌರತ್ವ ನೀಡುವಂತೆ 2015ರಲ್ಲಿ ಸುಪ್ರೀಂ ಕೋರ್ಟ್‌ ಸೂಚನೆ

ಆದೇಶ ಪುನರ್‌ ಪರಿಶೀಲಿಸುವಂತೆ ಅರುಣಾಚಲ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾ

ಕೇಂದ್ರ ಮತ್ತು ಅರುಣಾಚಲ ‍ಪ್ರದೇಶ ಸರ್ಕಾರ ಸಮಾಲೋಚನೆ ನಡೆಸಿ ಪೌರತ್ವ ನೀಡುವ ಬಗ್ಗೆ ಚಿಂತನೆ

‘ಭಾರತದ ವಿರುದ್ಧ ಅಪಪ್ರಚಾರ ಬೇಡ’

ರೋಹಿಂಗ್ಯಾ ಸಮುದಾಯಕ್ಕೆ ಸೇರಿದ ನಿರಾಶ್ರಿತರಿಗೆ ಆಶ್ರಯ ನೀಡುವ ವಿಚಾರದಲ್ಲಿ ಭಾರತದ ವರ್ಚಸ್ಸನ್ನು ಕುಂದಿಸುವ ಯೋಜಿತ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ರೋಹಿಂಗ್ಯಾ ಸಮುದಾಯದ ಜನರನ್ನು ಗಡಿಪಾರು ಮಾಡುವ ಭಾರತ ಸರ್ಕಾರದ ಯೋಜನೆಯನ್ನು ವಿಶ್ವಸಂಸ್ಥೆ ಟೀಕಿಸಿದೆ. ಆದರೆ ರೋಹಿಂಗ್ಯಾ ಸಮುದಾಯದ ಜನರನ್ನು ಅಕ್ರಮ ವಲಸಿಗರು ಎಂದು ಭಾರತ ಪರಿಗಣಿಸಿದೆ. ‘ಈ ಸಮುದಾಯ ಭಾರತದ ಸುರಕ್ಷತೆಗೆ ಅಪಾಯ ಒಡ್ಡಬಹುದು’ ಎಂದು ಕಿರಣ್‌ ರಿಜಿಜು ಅವರು ಇತ್ತೀಚೆಗೆ ಹೇಳಿದ್ದರು.

ಭಾರತದಷ್ಟು ವಲಸಿಗರನ್ನು ಸೇರಿಸಿಕೊಂಡ ಇನ್ನೊಂದು ದೇಶ ಇಲ್. ಹೀಗಾಗಿ, ರೋಹಿಂಗ್ಯಾ ಸಮುದಾಯಕ್ಕೆ ಸೇರಿದ ವಲಸಿಗರ ವಿಚಾರದಲ್ಲಿ ಭಾರತವನ್ನು ಯಾರೂ ಕೆಟ್ಟದಾಗಿ ಚಿತ್ರಿಸಬಾರದು. ಯಾಕೆಂದರೆ ಭಾರತವು ಅವರನ್ನು ಸಮುದ್ರಕ್ಕೆ ತಳ್ಳುತ್ತಿಲ್ಲ ಅಥವಾ ಅವರಿಗೆ ಗುಂಡು ಹಾರಿಸುತ್ತಿಲ್ಲ. ಕಾನೂನು ಪ್ರಕಾರವೇ ಅವರನ್ನು ಗಡಿಪಾರು ಮಾಡಲಾಗುವುದು ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT