ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿ.ವಿ. ಸ್ವಾಯತ್ತ ಸಂಸ್ಥೆಯಂತಾಗಲಿ

Last Updated 14 ಸೆಪ್ಟೆಂಬರ್ 2017, 6:54 IST
ಅಕ್ಷರ ಗಾತ್ರ

ಹೊಸಪೇಟೆ: ‘ಕೇಂದ್ರೀಯ ಸ್ವಾಯತ್ತ ಸಂಸ್ಥೆಯ ಮಾದರಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಬೆಳೆಸಬೇಕಾಗಿದೆ. ಇದಕ್ಕಾಗಿ ಸರ್ಕಾರ ಪ್ರತ್ಯೇಕ ಕಾಯ್ದೆಯನ್ನು ರೂಪಿಸಬೇಕು. ಎಲ್ಲ ನಿಯಮಗಳನ್ನು ರೂಪಿಸುವ ಅಧಿಕಾರ ವಿ.ವಿ.ಗೆ ಕೊಡಬೇಕು’ ಎಂದು ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಅಂಗವಾಗಿ ಬುಧವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ‘ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ’ ವಿಚಾರ ಸಂಕಿರ ಣವನ್ನು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರ ಅನುಪಸ್ಥಿತಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

‘ಬೆಂಗಳೂರಿನಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅರ್ಥಶಾಸ್ತ್ರ ಶಾಲೆ ಸ್ಥಾಪಿಸಿದ್ದು, ಅದಕ್ಕೆ ಸರ್ಕಾರ ಪೂರ್ಣ ಸ್ವಾಯತ್ತತೆ ನೀಡಿದೆ. ಆರ್ಥಿಕ ವಿಚಾರ ಸೇರಿದಂತೆ ಎಲ್ಲ ವಿಷಯಗಳಲ್ಲಿ ಅದಕ್ಕೆ ಅಧಿಕಾರ ಕೊಟ್ಟಿದೆ. ಅದೇ ರೀತಿ ಹಂಪಿ ಕನ್ನಡ ವಿ.ವಿ.ಗೂ ಸ್ವಾಯತ್ತತೆ ಕೊಡಬೇಕು’ ಎಂದರು.

‘ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿಲ್ಲ. ವಿಶ್ವವಿದ್ಯಾಲಯಗಳ ಉತ್ತರದಾಯಿತ್ವದ ಬಗ್ಗೆಯೂ ಚರ್ಚೆಗಳು ಆಗುತ್ತಿಲ್ಲ. ಹಾಗಾಗಿಯೇ ಇತರ ವಿಶ್ವವಿದ್ಯಾಲಯ ಗಳಂತೆ ಕನ್ನಡ ವಿ.ವಿ.ಯನ್ನು ಸರ್ಕಾರ ನೋಡುತ್ತಿದೆ’ ಎಂದು ಹೇಳಿದರು.

‘ನಮ್ಮ ಸಂಶೋಧನೆಯ ಫಲಿತಗಳು ಎಷ್ಟು ಜನರಿಗೆ ತಲುಪಿದೆ ಎನ್ನುವುದರ ಬಗ್ಗೆ ಸಮೀಕ್ಷೆ ಅಥವಾ ಮರು ಮೌಲ್ಯ ಮಾಪನ ಮಾಡಿದರೆ ಮುಂದಿನ ಹೆಜ್ಜೆ ಇಡಲು ಗೊತ್ತಾಗುತ್ತದೆ. ಕನ್ನಡ ವಿ.ವಿ.ಯ ಶಕ್ತಿ ಹಾಗೂ ದೌರ್ಬಲ್ಯಗಳು ಯಾವುದು ಎನ್ನುವುದು ತಿಳಿಯುತ್ತದೆ. ಇದರ ಜತೆಗೇ ಅಂತರ್‌ಶಿಸ್ತೀಯ ವಿಷಯಗಳಿಗೆ ಸಂಬಂಧಿಸಿದಂತೆ ಬೇಸಿಗೆ ಶಿಬಿರದ ಮಾದರಿಯಲ್ಲಿ ಶಿಬಿರಗಳನ್ನು ಹಮ್ಮಿ ಕೊಳ್ಳಬೇಕು. ಸಂಶೋಧನೆಗಳ ಮುಖ್ಯ ಸಂಗತಿಗಳ ಕುರಿತು ಸಂವಾದ ನಡೆಯ ಬೇಕು. ಜನಸಾಮಾನ್ಯರ ಒಳಗೊಳ್ಳುವಿಕೆ ಇರಬೇಕು’ ಎಂದರು.

‘ಶಾಸ್ತ್ರೀಯ ಪಠ್ಯಗಳನ್ನು ಇಂಗ್ಲಿಷ್‌ ಸೇರಿದಂತೆ ಅನ್ಯ ಭಾಷೆಗಳಿಗೆ ತರ್ಜುಮೆ ಮಾಡಬೇಕು. ವೆಬ್‌ಸೈಟ್‌ನಲ್ಲಿ ಎಲ್ಲ ಪುಸ್ತಕಗಳ ಮಾಹಿತಿ ಸಿಗಬೇಕು. ಯಾವ ವಿಷಯಗಳಲ್ಲಿ ಸಂಶೋಧನೆಗಳಾಗಿ ವೆಯೋ ಅವುಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು. ಇದರಿಂದ ಹೊಸಬರು ಸಂಶೋಧನೆ ಮಾಡುವಾಗ ಪುನರಾವರ್ತನೆ ಆಗುವುದು ತಪ್ಪುತ್ತದೆ’ ಎಂದು ಸಲಹೆ ನೀಡಿದರು.

ವಿಶ್ರಾಂತ ಕುಲಪತಿ ಎ. ಮುರಿಗೆಪ್ಪ ಮಾತನಾಡಿ, ‘ಅಳಿವಿನ ಅಂಚಿನ ಭಾಷೆ ಗಳ ಸಾಲಿನಲ್ಲಿ ಕನ್ನಡ ಇಲ್ಲ. ಏಕೆಂದರೆ ಕನ್ನಡ ಭಾಷೆಯೂ ಎಲ್ಲ ಹಂತದಲ್ಲಿ ಪ್ರಚಲಿತದಲ್ಲಿದೆ. ಆದರೆ, ಅದರ ಉಪ ಭಾಷೆಗಳಿಗೆ ಸಂಬಂಧಿಸಿದಂತೆ ಹಾಗೆ ಹೇಳಲು ಆಗುವುದಿಲ್ಲ’ ಎಂದರು.

‘ಕನ್ನಡದ ಎಲ್ಲ ಉಪಭಾಷೆಗಳ ದಾಖಲೀಕರಣ ಕೆಲಸ ಆಗಬೇಕು. ಅಳಿವಿ ನಂಚಿನಲ್ಲಿರುವ ಭಾಷೆಗಳನ್ನು ಗುರುತಿಸಿ ಅವುಗಳನ್ನು ದಾಖಲಿಸಬೇಕು. ವೃತ್ತಿಪರ ಕೋರ್ಸ್‌ಗಳನ್ನು ಕನ್ನಡ ಮಾಧ್ಯಮದಲ್ಲಿ ಕೊಡಬೇಕು. ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಪಠ್ಯ ರಚಿಸ ಬೇಕು. ಹಸ್ತಪ್ರತಿ, ಶಾಸನಗಳನ್ನು ಗಣಕೀ ಕರಣ ಮಾಡಬೇಕು. ವಿ.ವಿ.ಯಲ್ಲಿ ನಡೆ ಯುವ ಪ್ರತಿಯೊಂದು ಕೆಲಸ ವೆಬ್‌ಸೈಟಿ ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

ವಿಶ್ರಾಂತ ಕುಲಪತಿ ಕೆ.ವಿ. ನಾರಾ ಯಣ ಮಾತನಾಡಿ, ‘ಹಂಪಿ ಕನ್ನಡ ವಿ.ವಿ.ಗೆ ಸ್ಥಿರ ಸ್ವರೂಪ ಸಿಕ್ಕಿದೆ. ಈಗ ಅದು ಚರ ಆಗಬೇಕು. ಎಲ್ಲರನ್ನೂ ಒಳ ಗೊಂಡಂತೆ ಅದರ ಕೆಲಸಗಳು ನಡೆಯ ಬೇಕು’ ಎಂದರು. ಈ ಹಿಂದಿನ ಕುಲಪತಿ ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ‘ಜಿಲ್ಲೆ ಗೊಂದು ವಿ.ವಿ.ಗಳು ಆಗುತ್ತಿವೆ. ಹಾಗಾಗಿ ಕನ್ನಡ ವಿ.ವಿ. ಪದವಿ ಕೊಡುವ ವಿ.ವಿ. ಆಗಬಾರದು. ಅದು ಸಂಶೋಧನೆ ಗಾಗಿಯೇ ಇರುವಂತ ಹದ್ದು. ಅದೇ ಕೆಲಸ ಮುಂದುವರೆಸಿ ಕೊಂಡು ಹೋಗ ಬೇಕು’ ಎಂದು ಹೇಳಿದರು. ಆಡಳಿತ ಮಂಡಳಿ ಸದಸ್ಯ ಸರಜೂ ಕಾಟ್ಕರ್‌ ಮಾತನಾಡಿ, ‘ಹಂಪಿ ಕನ್ನಡ ವಿ.ವಿ. 1,400 ಪುಸ್ತಕಗಳನ್ನು ಹೊರ ತಂದಿದೆ. ಅವುಗಳಿಗೆ ಓದುಗರನ್ನು ಸೃಷ್ಟಿಸುವ ಕೆಲಸ ಕೂಡ ಮಾಡಬೇಕು’ ಎಂದರು.

‘ಸೂಟ್‌ಕೇಸ್‌ನಲ್ಲಿ ಹಣ ಕೊಂಡೊಯ್ಯಬೇಕಿದೆ’
‘ಚಂದ್ರಶೇಖರ ಕಂಬಾರ ಅವರು ಕುಲಪತಿಯಾಗಿದ್ದಾಗ ಅಂದಿನ ರಾಜಕಾರಣಿಗಳು ವಿ.ವಿ.ಗೆ ಸಂಬಂಧಿಸಿದ ವಿಚಾರಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು. ಏನೇ ಕೆಲಸಗಳಿದ್ದರೂ ಅಧಿಕಾರಿಗಳಿಗೆ ಸೂಚನೆ ಕೊಟ್ಟು ತಕ್ಷಣವೇ ಆಗುವಂತೆ ನೋಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಸೂಟ್‌ಕೇಸ್‌ನಲ್ಲಿ ಹಣ ಕೊಟ್ಟು ಕಳುಹಿಸುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದೆ. ನಾವೇ ಸೂಟ್‌ಕೇಸ್‌ನಲ್ಲಿ ಹಣ ಕೊಂಡೊಯ್ಯಬೇಕಿದೆ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಹೇಳಿದರು.

‘ಇಂದಿನ ರಾಜಕಾರಣಿಗಳಿಗೆ ಕೇಳಿಸಿಕೊಳ್ಳುವ ವ್ಯವಧಾನವಿಲ್ಲ. ಯಾವ ಕೆಲಸಗಳು ಸುಲಭವಾಗಿ ಆಗುವುದಿಲ್ಲ. ಅಧಿಕಾರಿಗಳು ನಮ್ಮ ಮಾತನ್ನು ತಲೆಗೆ ಹಾಕಿಕೊಳ್ಳುವುದಿಲ್ಲ’ ಎಂದರು.

‘ಅಂಬೇಡ್ಕರ್‌, ಜಗಜೀವನರಾಂ ಪೀಠಕ್ಕೆ ₹2 ಕೋಟಿ’
‘ಹಂಪಿ ಕನ್ನಡ ವಿಶ್ವವಿದ್ಯಾಲಯ ದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ.ಬಾಬು ಜಗಜೀವನರಾಂ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರದಿಂದ ತಲಾ ₹2 ಕೋಟಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ‘ಕನ್ನಡ ವಿ.ವಿ.ಯಲ್ಲಿ 180 ಹುದ್ದೆಗಳು ಖಾಲಿ ಇವೆ ಎಂದು ಕುಲಪತಿ ತಿಳಿಸಿದ್ದಾರೆ.

ಸದ್ಯ ಎಷ್ಟು ಹುದ್ದೆಗಳ ಅಗತ್ಯವಿದೆಯೋ ಅದರ ಬಗ್ಗೆ ಪ್ರಸ್ತಾವ ಕಳುಹಿಸಿದರೆ ಅವುಗಳನ್ನು ಮಂಜೂರು ಮಾಡಿಕೊಡಲಾಗುವುದು. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ವಿಸ್ತರಣಾ ಕೇಂದ್ರಕ್ಕೆ ಒಟ್ಟು 17 ಎಕರೆ ಜಮೀನು ಮಂಜೂರಾಗಿದ್ದು, ಈ ಪೈಕಿ ಏಳು ಎಕರೆ ಈಗಾಗಲೇ ವಿ.ವಿ.ಗೆ ಹಸ್ತಾಂತರಿಸಲಾಗಿದೆ. ಶೀಘ್ರದಲ್ಲೇ ಇನ್ನುಳಿದ ಜಾಗ ನೀಡಲಾಗುವುದು. ಬೆಳ್ಳಿಹಬ್ಬಕ್ಕೆ ಬಜೆಟ್‌ನಲ್ಲಿ ₹25 ಕೋಟಿ ಘೋಷಿಸಿದ್ದೆ. ಅಷ್ಟೂ ಹಣ ಕೊಡುತ್ತೇನೆ. ಯಾವುದೇ ಹಿಂಜರಿಕೆ ಬೇಡ’ ಎಂದು ಅಭಯ ನೀಡಿದರು.

‘ಕನ್ನಡ ವಿ.ವಿ. ಅನನ್ಯತೆ ಉಳಿಯಲಿ’
‘ವಿಶ್ವವಿದ್ಯಾಲಯಗಳ ನಿಯಂತ್ರಣ ಮಸೂದೆಯ ವ್ಯಾಪ್ತಿಗೆ ಹಂಪಿ ಕನ್ನಡ ವಿ.ವಿ.ಯನ್ನು ಸೇರಿಸಲು ಸರ್ಕಾರ ಹೊರಟಿರುವುದು ಸರಿಯಲ್ಲ. ನಿಜಕ್ಕೂ ಇದು ದೊಡ್ಡ ದುರಂತ’ ಎಂದು ವಿಶ್ರಾಂತ ಕುಲಪತಿ ಕೆ.ವಿ. ನಾರಾಯಣ ಅಭಿಪ್ರಾಯಪಟ್ಟರು.

‘ಕನ್ನಡ ವಿ.ವಿ.ಯ ಪ್ರತ್ಯೇಕತೆ, ಅನನ್ಯತೆ ಉಳಿಯಬೇಕು. ಕನ್ನಡದ ಭಾಷೆಗಾಗಿಯೇ ಹುಟ್ಟಿಕೊಂಡಿರುವ ವಿ.ವಿ. ಅಸ್ಮಿತೆ ಉಳಿಯಬೇಕೆಂದರೆ ನಾಡಿನ ಪ್ರಜ್ಞಾವಂತರು ಗಟ್ಟಿಯಾಗಿ ಧ್ವನಿ ಎತ್ತಬೇಕು’ ಎಂದರು.

ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಮಾತನಾಡಿ, ‘ಕನ್ನಡ ವಿ.ವಿ. ಕೆಲಸ ಏನೆಂಬು ದನ್ನು ಉನ್ನತ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಅದರ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾ ಗಿದೆ. ಈ ಕುರಿತು ಹಿರಿಯರು ಧ್ವನಿ ಎತ್ತಬೇಕು. ಒಂದುವೇಳೆ ವಿ.ವಿ. ನಿಯಂತ್ರಣ ಮಸೂದೆ ವ್ಯಾಪ್ತಿಗೆ ಕನ್ನಡ ವಿ.ವಿ. ಸೇರಿಸಿದರೆ ನಂತರದಲ್ಲಿ ಅದನ್ನು ಸರಿಪಡಿ ಸಲು ಆಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಮಾತ ನಾಡಿದ ಈ ಹಿಂದಿನ ಕುಲಪತಿ ಬಿ.ಎ.ವಿವೇಕ ರೈ, ಹಿ.ಚಿ. ಬೋರ ಲಿಂಗಯ್ಯ ಕೂಡ ಇದೇ ವಾದ ಪ್ರತಿಪಾದಿಸಿದರು.

* * 

ರಾಜ್ಯದಲ್ಲಿ 20ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಅವುಗಳೊಂದಿಗೆ ಹಂಪಿ ಕನ್ನಡ ವಿ.ವಿ.ಯನ್ನು ಸಮೀಕರಿಸಿ ನೋಡುವುದು ಸರಿಯಲ್ಲ
ಬಿ.ಎ.ವಿವೇಕ ರೈ
ವಿಶ್ರಾಂತ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT