ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಬಂಪರ್‌ ಬೆಳೆ ನಿರೀಕ್ಷೆ

Last Updated 14 ಸೆಪ್ಟೆಂಬರ್ 2017, 7:10 IST
ಅಕ್ಷರ ಗಾತ್ರ

ಕಲಬುರ್ಗಿ: ಹದಿನೈದು ದಿನಗಳ ಅವಧಿಯಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಜಿಲ್ಲೆಯ ತೊಗರಿ ಬೆಳೆಗೆ ಜೀವಕಳೆ ಬಂದಿದೆ. ಬೆಳೆ ಹುಲುಸಾಗಿ ನಳನಳಿಸುತ್ತಿದ್ದು, ಈ ಬಾರಿಯೂ ಉತ್ತಮ ಇಳುವರಿಯ ನಿರೀಕ್ಷೆ ಇದೆ.

ಎರಡು ವರ್ಷಗಳ ಹಿಂದೆ ತೊಗರಿ ದರ ನಿರೀಕ್ಷೆಗೂ ಮೀರಿ ಗಗನಮುಖಿಯಾಗಿತ್ತು. ಕೆ.ಜಿ. ತೊಗರಿ ದರ ₹100ರ ಗಡಿ ದಾಟಿದ್ದರಿಂದ ಖುಷಿಯಾದ ರೈತರು ಮರು ವರ್ಷವೂ ಹೆಚ್ಚಿನ ಪ್ರದೇಶದಲ್ಲಿ ತೊಗರಿಯನ್ನೇ ಬಿತ್ತನೆ ಮಾಡಿದ್ದರು. ಆದರೆ, ದರ ಕುಸಿದು, ಸರ್ಕಾರದ ಬೆಂಬಲ ಬೆಲೆಗೆ ಅಂಗಲಾಚಬೇಕಾಯಿತು. ತೊಗರಿ ಮಾರಾಟ ಮಾಡಲು ಪರದಾಟವೂ ನಡೆಯಿತು.

ಹೀಗಾಗಿ ಈ ವರ್ಷ ಕೆಲ ರೈತರು ತೊಗರಿ ಬೆಳೆಯಿಂದ ವಿಮುಖರಾದರು. ಜಿಲ್ಲೆಯಲ್ಲಿ ತೊಗರಿ ಬಿತ್ತನೆಯ ಕ್ಷೇತ್ರ 3.60 ಲಕ್ಷ ಹೆಕ್ಟೇರ್‌. ಈ ವರ್ಷ ತೊಗರಿ ಬಿತ್ತನೆಯಾಗಿದ್ದು 3.22 ಲಕ್ಷ ಹೆಕ್ಟೇರ್‌. 38 ಸಾವಿರ ಹೆಕ್ಟೇರ್‌ ತೊಗರಿ ಬಿತ್ತನೆ ಪ್ರದೇಶ ಕಡಿಮೆಯಾಯಿತು.

ಜೇವರ್ಗಿ ತಾಲ್ಲೂಕಿನ ಬಹುಪಾಲು ರೈತರು ಹತ್ತಿ ಬೆಳೆಯತ್ತ ವಾಲಿದರೆ, ಚಿತ್ತಾಪುರ ತಾಲ್ಲೂಕಿನ ಹೆಚ್ಚಿನ ರೈತರು ಹೆಸರು ಮತ್ತು ಉದ್ದು ಬಿತ್ತನೆ ಮಾಡಿದರು. ಆ ಎರಡು ತಾಲ್ಲೂಕುಗಳಲ್ಲಿ ತೊಗರಿ ಬಿತ್ತನೆ ಗಣನೀಯ ಪ್ರಮಾಣದಲ್ಲಿ ಕುಸಿಯಿತು.

ಜಿಲ್ಲೆಯಲ್ಲಿ ಜೂನ್‌ 7ರಂದು ಉತ್ತಮ ಮಳೆಯಾಯಿತು. ಜೂನ್‌ ಎರಡನೇ ವಾರದಲ್ಲಿ ತೊಗರಿ ಬಿತ್ತನೆಯನ್ನು ರೈತರು ಆರಂಭಿಸಿದರು. ಹೀಗಾಗಿ ಇಲ್ಲಿ ಅವಧಿಗೆ ಮುನ್ನವೇ ಬಿತ್ತನೆಯಾಗಿದ್ದು, ಈಗ ಎರಡೂವರೆಯಿಂದ ಮೂರು ತಿಂಗಳ ಅವಧಿಯ ಬೆಳೆ ಇದೆ.

‘ಹೂವಾಡುವ–ಕಾಯಿ ಕಟ್ಟುವ ಈ ಹಂತದಲ್ಲಿ ತೊಗರಿ ಬೆಳೆಗೆ ಮಳೆ ಬೇಕಿತ್ತು. ಈ ಅವಧಿಯಲ್ಲಿ ಉತ್ತಮ ಮಳೆಯಾಗಿರುವುದು ನಮ್ಮ ಪುಣ್ಯ. ಈ ಮಳೆ ಮತ್ತು ತೇವಾಂಶವು ರಾಶಿಯ ಅವಧಿಯ ವರೆಗೂ ತೊಗರಿಯ ಕೈ ಹಿಡಿಯಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು ಜೇವರ್ಗಿ ತಾಲ್ಲೂಕು ಮಂದೇವಾಲ ಗ್ರಾಮದ ರೈತ ಸೋಮಣ್ಣ. ‘ಒಡ್ಡುಗಳ ಬದಿ ಹಾಗೂ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಸ್ವಲ್ಪ ಬೆಳೆ ಹಾನಿಯಾಗಿದ್ದು ನಿಜ. ಒಡ್ಡು ಇಲ್ಲದ ಹೊಲ ಗೊಡ್ಡು ಎಮ್ಮೆ ಸಾಕಿದಂತೆ ಎಂಬ ನಾಣ್ಣುಡಿ ಇದೆ. ಹೀಗಾಗಿ ಈ ಹಾನಿ ನಗಣ್ಯ’ ಎಂದು ಸೊನ್ನ ಗ್ರಾಮದ ರೈತ ಶರಣಪ್ಪ ಹೇಳಿದರು.

‘ಕಳೆ ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕಾಗಿ ಹದ ಬಂದ ತಕ್ಷಣ ರೈತರು ಎಡೆ ಹೊಡಿಯಬೇಕು. ಇದರಿಂದ ಕಳೆ ನಿಯಂತ್ರಣಕ್ಕೆ ಬರುವುದಷ್ಟೇ ಅಲ್ಲ, ಭೂಮಿಯಲ್ಲಿ ತೇವಾಂಶವನ್ನೂ ಕಾಪಾಡಿಕೊಳ್ಳಬಹುದು’ ಎಂದು ನದಿ ಸಿನ್ನೂರ ಗ್ರಾಮದ ಹಿರಿಯ ರೈತ ಸಂಗಪ್ಪಣ್ಣ ಸಲಹೆ ನೀಡಿದರು.

‘ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ತೊಗರಿ ಬೆಳೆ ಅತ್ಯುತ್ತಮವಾಗಿದೆ. ಬಿತ್ತನೆ ಕ್ಷೇತ್ರ ಕಡಿಮೆಯಾಗಿದ್ದರೂ ಅಧಿಕ ಇಳುವರಿಯ ನಿರೀಕ್ಷೆ ಇದೆ. ಸದ್ಯ ತೊಗರಿ ದರವೂ ಉತ್ತಮವಾಗಿದೆ. ಹೀಗಾಗಿ ರೈತರ ಉತ್ಸಾಹ ಇಮ್ಮಡಿಗೊಂಡಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ಪ್ರತಿಕ್ರಿಯಿಸಿದರು.

‘ಕೆಲವೆಡೆ ತಗ್ಗು ಪ್ರದೇಶದಲ್ಲಿ ಜಮೀನು ಹೊಂದಿರುವ ರೈತರ ನಾಲ್ಕೈದು ಗುಂಟೆಯಷ್ಟು ಪ್ರದೇಶದಲ್ಲಿ ನೀರು ನಿಂತು ಬೆಳೆ ಬಾಡಿದೆ. ಇದು ಸಾಮಾನ್ಯ, ಇದನ್ನು ಹೊರತು ಪಡಿಸಿದರೆ ಮಳೆಯಿಂದಾಗಿ ಹಾನಿ ಸಂಭವಿಸಿಲ್ಲ. ಈ ಮಳೆ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT