ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೂ ₹ 60 ಲಕ್ಷ ಅನುದಾನ ನಿಗದಿ

Last Updated 14 ಸೆಪ್ಟೆಂಬರ್ 2017, 8:52 IST
ಅಕ್ಷರ ಗಾತ್ರ

ಮಡಿಕೇರಿ: ‘ಮಡಿಕೇರಿ ಜನೋತ್ಸವ’ಕ್ಕೆ ₨ 1 ಕೋಟಿ ಅನುದಾನ ನೀಡುವಂತೆ ಕೋರಿ ದಸರಾ ಸಮಿತಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಮಂಗಳವಾರ ₨ 30 ಲಕ್ಷ ಮಾತ್ರ ನಿಗದಿ ಪಡಿಸಿದ್ದು, ದಸರಾ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿತ್ತು. ವೈಭವದಿಂದ ದಸರಾ ನಡೆಸಬೇಕು ಎನ್ನುವ ಕನಸಿಗೆ ಆರಂಭದಲ್ಲಿ ಹಿನ್ನಡೆ ಉಂಟಾಗಿದೆ ಎಂದು ಅಲವತ್ತುಕೊಂಡಿದ್ದ ಸಮಿತಿ ಸದಸ್ಯರು, ಸರ್ಕಾರದ ಮೇಲೆ ಒತ್ತಡ ಹೇರಿ ಕಳೆದ ವರ್ಷದಷ್ಟೇ ₨ 60 ಲಕ್ಷ ಅನುದಾನ ಪಡೆಯಲು ಯಶಸ್ವಿ ಆಗಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್‌. ತಮ್ಮಯ್ಯ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ಪಡೆಯಲು ಸಫಲವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರು ದಸರಾ ಮಾದರಿಯಲ್ಲೇ ನವರಾತ್ರಿಗಳು ನಡೆಯುವ ಸಂಭ್ರಮಕ್ಕೆ ಈ ಬಾರಿ ಅನುದಾನ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ದಸರಾ ಸಮಿತಿ ಆತಂಕ ವ್ಯಕ್ತಪಡಿಸಿತ್ತು. ಸರ್ಕಾರ ನಾವು ಕೇಳಿದಷ್ಟು ಅನುದಾನ ಕೊಟ್ಟರೆ, ಉಳಿದ ₨ 1 ಕೋಟಿಯನ್ನು ವಂತಿಗೆ ಮೂಲಕ ಸಂಗ್ರಹಿಸಿ ಕರಗೋತ್ಸವ, ದಶಮಂಟಪಗಳ ಶೋಭಾಯಾತ್ರೆಯನ್ನು ಅತ್ಯಂತ ವೈಭವದಿಂದ ನಡೆಸಬಹುದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ, ಬರೀ ₨ 30 ಲಕ್ಷ ನಿಗದಿ ಪಡಿಸಿದ್ದು ಸಮಿತಿಯ ಲೆಕ್ಕಾಚಾರವನ್ನು ಉಲ್ಟಾ ಮಾಡಿತ್ತು. ಬುಧವಾರ ನೀಡಿದ ಭರವಸೆಯಿಂದ ಸಮಿತಿ ಸ್ವಲ್ಪ ಸಮಾಧಾನಗೊಂಡಿದ್ದು, ದಸರಾ ಸಿದ್ಧತೆಯಲ್ಲಿ ಕಾರ್ಯೋನ್ಮುಖಗೊಳ್ಳುವಂತೆ ಮಾಡಿದೆ.

ಇದೇ 21ರಂದು ಶಕ್ತಿ ದೇವತೆಗಳ ಕರಗೋತ್ಸವಕ್ಕೆ ಚಾಲನೆ ನೀಡುವ ಮೂಲಕ ಈ ಬಾರಿಯ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ. ಅದು ಮಾತ್ರವಲ್ಲದೇ ಕೊನೆಯ ದಿವಸ ನಡೆಯುವ ದಶಮಂಟಪಗಳ ಶೋಭಾಯಾತ್ರೆ ಇಡೀ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಜತೆಗೆ, ಕ್ರೀಡಾಕೂಟ, ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ದಸರಾ, ಜಾನಪದ ಕ್ರೀಡಾಕೂಟ, ಮಹಿಳಾ ದಸರಾ, ಕವಿಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ₨ 60 ಲಕ್ಷವೂ ಅನುದಾನ ಸಾಲದು; ಕನಿಷ್ಠ ₨ 80 ಲಕ್ಷದಿಂದ ₨ 1 ಕೋಟಿಯಾದರೂ ಬೇಕಿತ್ತು ಎನ್ನುತ್ತಾರೆ ಪದಾಧಿಕಾರಿಗಳು.

2015ರಲ್ಲಿ ಬರ ಮತ್ತಿತರ ಕಾರಣ ನೀಡಿ ಕೇವಲ ₨ 50 ಲಕ್ಷ ಅನುದಾನ ನೀಡಲಾಗಿತ್ತು. 2016ರ ದಸರಾಕ್ಕೆ ₨ 75 ಅನುದಾನ ಘೋಷಣೆ ಮಾಡಲಾಗಿತ್ತು. ದಸರಾ ಕಾರ್ಯಕ್ರಮಗಳೂ ಮುಗಿದರೂ ಅನುದಾನ ಮಾತ್ರ ಜಿಲ್ಲಾಧಿಕಾರಿ ಖಾತೆಗೆ ಬಂದಿರಲಿಲ್ಲ; ಕೊನೆಗೂ ಉಸ್ತುವಾರಿ ಸಚಿವರ ಮೂಲಕ ಒತ್ತಡ ಹೇರಿ ಅನುದಾನ ತರಿಸಲಾಯಿತು. ಕೊನೆಗೂ ಸರ್ಕಾರ ನೀಡಿದ್ದು ಮಾತ್ರ ₨ 60 ಲಕ್ಷ! ಅಷ್ಟರಲ್ಲಿ ₨ 80 ಲಕ್ಷದಷ್ಟು ಖರ್ಚಾಗಿತ್ತು ಎನ್ನುತ್ತಾರೆ ಸಮಿತಿ ಮುಖಂಡರು.

ಕಳೆದ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಸಮಿತಿಯ ಸದಸ್ಯರೊಬ್ಬರು ಬಜೆಟ್‌ನಲ್ಲಿ ಮಡಿಕೇರಿ ದಸರಾಕ್ಕೆ ಅನುದಾನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ.

ಕಳೆದ ವರ್ಷದ ಎಡವಟ್ಟು: ಕಳೆದ ವರ್ಷ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದ ಕಲಾವಿದರಿಗೆ ಮಡಿಕೇರಿ; ಗೋಣಿಕೊಪ್ಪಲು ದಸರಾ ಸಮಿತಿ ಸರಿಯಾಗಿ ಸಂಭಾವನೆಯನ್ನೇ ನೀಡಿರಲಿಲ್ಲ ಎಂಬ ಆರೋಪಗಳಿವೆ. ಕೆಲವು ಕಲಾವಿದರಿಗೆ ನೀಡಿದ್ದ ಚೆಕ್‌ ಸಹ ಬೌನ್ಸ್‌ ಆಗಿತ್ತು. ಇದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಗಮನಕ್ಕೆ ಬಂದಿತ್ತು. ಗರಂಗೊಂಡಿದ್ದ ಸಚಿವರು, ಸಮಿತಿ ಪದಾಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದರು. ನಗರದಲ್ಲಿ ತಿಂಗಳ ಹಿಂದೆ ನಡೆದ ಸಭೆಯಲ್ಲೂ ಇದೇ ವಿಷಯ ಪ್ರಸ್ತಾಪಿಸಿದ್ದ ಸೀತಾರಾಂ, ಅನುದಾನ ಕೊಡಿಸುವ ವಿಚಾರದಲ್ಲಿ ನಿರಾಸಕ್ತಿ ತೋರಿಸಿದ್ದರು ಎನ್ನಲಾಗಿದೆ.

ನಡೆಯದ ಸಿದ್ಧತೆ: ದಸರಾ ಆರಂಭಕ್ಕೆ ಎಂಟು ದಿನಗಳು ಮಾತ್ರ ಬಾಕಿ ಉಳಿದಿದ್ದು, ಸಿದ್ಧತೆಗಳು ಮಾತ್ರ ಇನ್ನೂ ನಡೆದಿಲ್ಲ. ಗಾಂಧಿ ಮೈದಾನದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಬಣ್ಣ ಬಳಿಯುತ್ತಿರುವುದನ್ನು ಬಿಟ್ಟರೆ ಬೇರೆ ಸಿದ್ಧತೆಗಳು ನಡೆದಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಯಾವುದೇ ಸಭೆಯೂ ನಡೆದಿಲ್ಲ. ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯವೂ ಆಗಿಲ್ಲ. ಸಮಿತಿಯ ಪದಾಧಿಕಾರಿಗಳು ಚಂದಾ ವಸೂಲಿಯಲ್ಲಿ ಮಾತ್ರ ತೊಡಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಗರದ ಹತ್ತು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮಾತ್ರ ಆಸಕ್ತಿ ತೋರಿಸಿದ್ದು ಇಡೀ ನಗರದಾದ್ಯಂತ ಸುತ್ತಾಡಿ ವಂತಿಗೆ ಸಂಗ್ರಹಿಸುತ್ತಿದ್ದಾರೆ. ಜತೆಗೆ, ಮೂಲೆ ಸೇರಿದ್ದ ದಶಮಂಟಪಗಳ ಮೂರ್ತಿಗಳೂ ಹೊರ ಬಂದಿವೆ. ಸಮಿತಿಗಳು ಗುಟ್ಟಾಗಿ ಪೌರಾಣಿಕ ಕಥೆಯ ಆಯ್ಕೆಯಲ್ಲಿ ನಿರತವಾಗಿವೆ. ಮಕ್ಕಳ ದಸರಾ, ಮಕ್ಕಳ ಸಂತೆ, ಜಾನಪದ ಕ್ರೀಡೆಗಳು ನಡೆಯುವ ದಿನಾಂಕ ಗೊತ್ತುಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ ಅಂತಿಮವಾಗಿಲ್ಲ. ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಉಳಿದ ಸಿದ್ಧತೆಗಳು ಇನ್ನಷ್ಟೇ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT