ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕೇಂದ್ರವಾದ ಅರಸೀಕೆರೆ ಪ್ರೌಢಶಾಲೆ

Last Updated 14 ಸೆಪ್ಟೆಂಬರ್ 2017, 9:17 IST
ಅಕ್ಷರ ಗಾತ್ರ

ಪಾವಗಡ: ಸ್ಮಾರ್ಟ್ ಕ್ಲಾಸ್, ಟೆಲಿ ಎಜುಕೇಷನ್, ಮಿನಿ ವಿಜ್ಞಾನ ಕೇಂದ್ರ, ಸುಸಜ್ಜಿತ ಪ್ರಯೋಗಾಲಯಗಳು– ಇದು ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಹೆಜ್ಜೆ ಇಟ್ಟ ಕೂಡಲೇ ಕಾಣ ಸಿಗುವ ಚಿತ್ರಣ. ಆಂಧ್ರಪ್ರದೇಶದ ಗಡಿ ಹಂಚಿಕೊಂಡಿರುವ ಕಟ್ಟ ಕಡೆಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಸೌಲಭ್ಯಗಳನ್ನು ನೋಡಿದವರು ಮನಸ್ಸು ತುಂಬಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.

ಪ್ರಾಯೋಗಿಕವಾಗಿ ಭೌತ ವಿಜ್ಞಾನ ಕಲಿಸಲು ಸಹಕಾರಿಯಾಗುವ ವಿಜ್ಞಾನ ಉದ್ಯಾನವನ್ನು ಶಾಲೆಯಲ್ಲಿ ನಿರ್ಮಿಸಿರುವುದು ವಿಶೇಷ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿ ₹ 25 ಲಕ್ಷ ವೆಚ್ಚದಲ್ಲಿ ಮಿನಿ ವಿಜ್ಞಾನ ಕೇಂದ್ರ ನಿರ್ಮಿಸಿದೆ.

ಭೌತ ವಿಜ್ಞಾನದಲ್ಲಿನ ನ್ಯೂಟನ್‌ನ ಮೂರನೇ ನಿಯಮ, ದೃಷ್ಠಿ ಭ್ರಮೆ, ನ್ಯೂಟನ್‌ ಬಣ್ಣಗಳ ಚಕ್ರ, ನಾದಕೊಳಲು, ಬೆಳಕಿನ ಭ್ರಮೆ, ಗಾಳಿಯ ವೇಗ ಅಳೆಯುವ ಅನಿ ಮೆರೀ ಮೀಟರ್ ಸೇರಿದಂತೆ 28 ಪರಿಕರಗಳು ವಿಜ್ಞಾನ ಉದ್ಯಾನದಲ್ಲಿವೆ.

ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ ಇರುವಂತೆ ಶಾಲೆಯಲ್ಲಿ ಪ್ರತ್ಯೇಕ ರಸಾಯನ ವಿಜ್ಞಾನ, ಜೀವ ವಿಜ್ಞಾನ, ಭೌತವಿಜ್ಞಾನದ ಸುಸಜ್ಜಿತ ಪ್ರಯೋಗಾಲಯಗಳು ಇವೆ. ಮಕ್ಕಳಲ್ಲಿ ವಿಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಸಹಕಾರಿಯಾಗಿವೆ.

ಪ್ರಯೋಗಾಲಯದಲ್ಲಿ ಅಗತ್ಯ ಪರಿಕರಗಳ ಜೊತೆಗೆ ಎಲ್‌ಸಿಡಿ ಟಿ.ವಿ, ಪ್ರೊಜೆಕ್ಟರ್ ಪರದೆಯಲ್ಲಿ ವಿಜ್ಞಾನ ಪಾಠಗಳನ್ನು ಬಹು ಮಾಧ್ಯಮಗಳ ಸಹಾಯದಿಂದ ಬೋಧಿಸಲಾಗುತ್ತಿದೆ.

ಇಂಡಿಯನ್ ಲಿಟ್ರಸಿ ಪ್ರಾಜೆಕ್ಟ್ ಸಂಸ್ಥೆ ₹ 1.5 ಲಕ್ಷ ವೆಚ್ಚದಲ್ಲಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಸೌಕರ್ಯ ಕಲ್ಪಿಸಿದೆ. ಇಲ್ಲಿ ಕಪ್ಪು ಹಲಗೆ, ಸೀಮೆ ಸುಣ್ಣ ಬಳಸದೆ ಆಧುನಿಕ ತಂತ್ರಜ್ಞಾನ ಬಳಸಿ ಮಕ್ಕಳಲ್ಲಿನ ಜ್ಞಾನ ದಾಹವನ್ನು ತಣಿಸಬಹುದಾಗಿದೆ.

ಐ.ಐ.ಬಿ.ಎಂ. ಸಂಸ್ಥೆ ಶಾಲೆಗೆ ನೀಡಿರುವ ಟೆಲಿ ಎಜುಕೇಷನ್ ಸೌಕರ್ಯದಿಂದ ಬೆಂಗಳೂರಿನಲ್ಲಿ ಪರಿಣಿತ ಶಿಕ್ಷಕರು ಮಾಡುವ ಪಾಠಗಳನ್ನು ಶಾಲೆಯಲ್ಲಿ ಕುಳಿತೇ ಕೇಳಬಹುದು.
ಸೌಕರ್ಯಗಳ ಸದುಪಯೋಗ ಪಡೆದು ಮಕ್ಕಳು ವಿಜ್ಞಾನ ವಿಷಯದಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದ್ದಾರೆ. ರಾಜ್ಯ ಮಟ್ಟದಲ್ಲಿ ಎಚ್.ಜಿ.ಗೋವಿಂದೇಗೌಡ ಉತ್ತಮ ಶಾಲೆ ಪ್ರಶಸ್ತಿಗೆ ಕಳೆದ ಬಾರಿ ಶಾಲೆ ತೀವ್ರ ಪೈಪೋಟಿ ನೀಡಿದೆ.

‘ವಿಜ್ಞಾನ ಪಾಠಗಳನ್ನು ಪ್ರಾಯೋಗಿಕವಾಗಿ ಕಲಿಯಲು ವಿಜ್ಞಾನ ಉದ್ಯಾನ ಸಹಕಾರಿಯಾಗಿದೆ. ಆಧುನಿಕ ತಂತ್ರಜ್ಞಾನ ಆಧಾರಿತ ಬೋಧನೆಯಿಂದ ಉತ್ತಮ ಅಂಕ ಗಳಿಸಲು ಅನುಕೂಲವಾಗಿದೆ’ ಎಂದು 10ನೇ ತರಗತಿ ವಿದ್ಯಾರ್ಥಿ ಮಲ್ಲೇಶ್ ತಿಳಿಸುತ್ತಾನೆ.

‘ಪ್ರಾಯೋಗಿಕವಾಗಿ ವಿಜ್ಞಾನ ವಿಷಯಗಳನ್ನು ಕಲಿಯುವುದರಿಂದ ಸುಲಭವಾಗಿ ಅರ್ಥವಾಗುತ್ತಿದೆ’ ಎಂದು ಶಾಲೆ ವಾತಾವರಣದ ಬಗ್ಗೆ ಸಂತದಲ್ಲಿ ಮಾಹಿತಿ ನೀಡುತ್ತಾಳೆ 10 ನೇ ತರಗತಿ ವಿದ್ಯಾರ್ಥಿನಿ ಷಾ ತಾಜ್ ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT