ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಡಿದ್ದೀರಾ ಬಾರ್ಬರೋಸ್ ಚೆರಿ

Last Updated 14 ಸೆಪ್ಟೆಂಬರ್ 2017, 9:32 IST
ಅಕ್ಷರ ಗಾತ್ರ

ಸುಮಾರು ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆ ದಿರುವ ಮರ. ಅಷ್ಟೇ ಅಗಲವಾಗಿ ಹರಡಿ ಕೊಂಡಿರುವ ನೀಳವಾದ ಕೊಂಬೆಗಳು, ಬೇವಿನೆಲೆಯಂತಿರುವ ದಟ್ಟ ಎಲೆಗಳು. ಕೊಂಬೆಗಳುದ್ದಕ್ಕೂ ಕಿತ್ತಳೆ ವರ್ಣದ ಪುಟ್ಟ ಪುಟ್ಟ ಹಣ್ಣುಗಳು, ಹಸಿರಾದ ಕಾಯಿಗಳು. ಹುಳಿಮಿಶ್ರಿತ ಸಿಹಿಯಾಗಿರುವ ಈ ಸೇಬಿನಾಕೃತಿಯ ಹಣ್ಣು ಬಾರ್ಬಡೋಸ್ ಚೆರಿ.

ಗುರುವಾಯನಕೆರೆಯ ಬಳಿಯ ಕಂಡಿಗದ ಪ್ರಗತಿಪರ ಹೈನುಗಾರ ವಿಶ್ವ ನಾಥ ನಾಯ್ಕರ ಮನೆಯಂಗಳದಲ್ಲಿ ಈ ಅಪರೂಪದ ತಳಿಯ ಹಣ್ಣಿನ ಮರ ತುಂಬ ವರ್ಷಗಳಿಂದ ಫಲ ನೀಡುತ್ತಿದೆ.

ದಕ್ಷಿಣ ಅಮೆರಿಕದಿಂದ ಬಂದ ಈ ಚೆರಿಗೆ ವೆಸ್ಟ್ ಇಂಡಿಯನ್ ಚೆರಿ, ಗಾರ್ಡನ್ ಚೆರಿ, ಫ್ರೆಂಚ್ ಚೆರಿ ಹೀಗೆ ಹಲವು ಹೆಸರುಗಳಿವೆ. ವೈಜ್ಞಾನಿಕವಾಗಿ ಮಾಲ್ಪಿಘಿಯ ಎರ್ಗಿನೇಟಾ ಎಂಬ ಹೆಸರಿರುವ ಅದು ಯಾವುದೇ ಮಣ್ಣಿನಲ್ಲಿಯೂ ಬೆಳೆಯುತ್ತದೆ.

ಬರ ಸಹಿಷ್ಣು ಗುಣವಿರುವುದರಿಂದ ಬೆಳೆದ ಮರ ಗೊಬ್ಬರ ಮತ್ತು ಬೇಸಿಗೆಯಲ್ಲಿ ನೀರನ್ನು ಬಯಸದೆ ಹಣ್ಣು ಕೊಡುತ್ತದೆ. ಹೂಗಳ ವರ್ಣ ಗುಲಾಬಿ. ಉಭಯಲಿಂಗಿ ಹೂಗಳಿರುವ ಕಾರಣ ಪರಾಗ ಸ್ಪರ್ಶದ ಸಮಸ್ಯೆಯಿಲ್ಲ. ನೆರಳಿಗಿಂತ ಬಿಸಿಲನ್ನೆ ಹೆಚ್ಚು ಇಷ್ಟಪಡುವ ಈ ಚೆರಿ ಮರ ಮೇ ತಿಂಗಳಿಂದ ನವಂಬರ್‌ ತನಕ ಮೂರರಿಂದ ಐದು ಸಲ ಹೂ ಬಿಟ್ಟು ಹಣ್ಣುಗಳನ್ನು ಕೊಡುತ್ತದೆ. ಒಂದು ಮರದಿಂದ ಮೂವತ್ತೈದು ಕಿಲೋ ಹಣ್ಣುಗಳನ್ನು ಕೊಯ್ಯಬಹುದು ಎನ್ನುತ್ತವೆ ಮಾಹಿತಿಗಳು.

ಬಾರ್ಬಡೋಸ್ ಚೆರಿಯಲ್ಲಿ ವಿಪುಲವಾಗಿ ಸಿ ಜೀವಸತ್ವ ಹಾಗೂ ಸ್ವಲ್ಪಾಂಶ ಎ ಜೀವಸತ್ವವಿದೆ. ನೂರು ಗ್ರಾಮ್ ಹಣ್ಣಿನಲ್ಲಿ ಒಂದರಿಂದ ಎರಡು ಸಾವಿರ ಮಿಲಿಗ್ರಾಮ್ ಸಿ ಜೀವಸತ್ವ ಸಿಗುವುದಂತೆ. ಪ್ರೋಟೀನ್, ನಾರು, ಕೊಬ್ಬು, ಸುಣ್ಣ, ಕಾರ್ಬೋಹೈಡ್ರೇಟ್ಸ್, ರಂಜಕ, ಕಬ್ಬಿಣ, ಕ್ಯಾರೋಟಿನ್, ಥೈಯಾಮಿನ್, ರೈಬೋಫ್ಲೇವಿನ್, ನಿಯಾಸಿನ್ ಅಡಕವಾಗಿರುವ ಹಣ್ಣಿನಿಂದ ಜಾಮ್, ಜೆಲ್ಲಿ, ಸಿರಪ್ ತಯಾರಿಸಬಹುದು. ಸಕ್ಕರೆಯ ಕಡುಪಾಕದಲ್ಲಿ ಅದ್ದಿದರೆ ಹಣ್ಣಿನ ಬಣ್ಣ ರಕ್ತಗೆಂಪಿಗೆ ಬದಲಾಗುತ್ತದೆ.

ಸಿಹಿತಿಂಡಿಗಳ ಅಲಂಕರಣಕ್ಕೆ ಅದನ್ನು ಬಳಸಬಹುದು. ಹಣ್ಣಿನ ಸಿಪ್ಪೆ ಬಹು ಮೃದುವಾಗಿದೆ. ಕಾಯಿಗಳನ್ನು ಕೌಳಿ ಅಥವಾ ಕರಂಡೆಯ ಹಾಗೆ ಉಪ್ಪಿನಕಾಯಿಗೂ ಉಪಯೋಗಿಸಬಹುದು ಎನ್ನುತ್ತಾರೆ ವಿಶ್ವನಾಥ ನಾಯ್ಕರು.

ಭೇದಿ, ಅತಿಸಾರ, ಯಕೃತ್ತಿನ ತೊಂದರೆಗಳಿಗೆ ಈ ಹಣ್ಣಿನಿಂದ ಮಾಡುವ ಚಿಕಿತ್ಸೆಗಳಿದ್ದರೂ ಅತಿರೇಕ ಸೇವನೆ ಹಿತಕರವಲ್ಲ ಎನ್ನುವ ಮಾಹಿತಿಗಳಿವೆ. ಹಣ್ಣಿನೊಳಗಿರುವ ಪುಟ್ಟ ಬೀಜ ಬಿತ್ತಿದರೆ ಗಿಡವಾಗುತ್ತದಾದರೂ ತೀರ ಕಡಿಮೆ ಸಂಖ್ಯೆಯಲ್ಲಿರುತ್ತದೆ.

ಗೂಟಿ ಕಸಿ ವಿಧಾನದ ಕಸಿ ಗಿಡ ನೆಟ್ಟರೆ ಒಂದೆರಡು ವರ್ಷಗಳಲ್ಲಿ ಫಲ ಕೊಯ್ಯಬಹುದು. ನೂರಾರು ವರ್ಷ ಬದುಕುವ ಮರ ತುಂಬ ದೃಢವಾಗಿದ್ದು ಬೆಂಕಿಯ ಆಘಾತವನ್ನೂ ಸಹಿಸಿಕೊಳ್ಳುತ್ತದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT