ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಗಾಳಿ ಹಾನಿ ಪ್ರದೇಶಕ್ಕೆ ಶಾಸಕ ರಾಘವೇಂದ್ರ ಭೇಟಿ; ಪರಿಶೀಲನೆ

Last Updated 14 ಸೆಪ್ಟೆಂಬರ್ 2017, 9:55 IST
ಅಕ್ಷರ ಗಾತ್ರ

ಶಿಕಾರಿಪುರ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಗಾಳಿಗೆ ಹಾನಿಗೊಳಗಾದ ಪ್ರದೇಶಗಳಿಗೆ ಬುಧವಾರ ಶಾಸಕ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.= ಶಿಕಾರಿಪುರ ಪಟ್ಟಣ ಹಾಗೂ ತಾಲ್ಲೂಕಿನ ಹೊಸನಗರ, ಹೊಸಗೊದ್ದನಕೊಪ್ಪ, ಹಳೇಗೊದ್ದನಕೊಪ್ಪ, ಹೊಸಮುಗಳಗೆರೆ, ಹಳೇಮುಗಳಗೆರೆ, ನಿಂಬೆಗೊಂದಿ, ಸುರಗಿಹಳ್ಳಿ, ತುಮರಿಹೊಸೂರು ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ವೈ. ರಾಘವೇಂದ್ರ, ‘ತಾಲ್ಲೂಕಿನಲ್ಲಿ ನೂರಾರು ಹೆಕ್ಟೇರ್‌ ಮೆಕ್ಕೆಜೋಳ, ಬಾಳೆ, ಅಡಿಕೆ ತೋಟಗಳು ಹಾನಿಗೊಳಗಾಗಿವೆ. 15ಕ್ಕೂ ಹೆಚ್ಚಿನ ಟ್ರಾನ್ಸ್‌ಫಾರ್ಮರ್‌ಗಳು ಮತ್ತು 80ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲವು ಮನೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಮನೆ ಜಖಂಗೊಂಡಿದ್ದು, ನಿವಾಸಿಗಳಿಗೆ ಗಾಯಗಳಾಗಿವೆ. ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಲೋಕೇಶ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ರಾಘವೇಂದ್ರ, ತಾಲ್ಲೂಕಿನಲ್ಲಿ ಮಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಮುಖಂಡರಾದ ಕೆ.ಎಸ್. ಗುರುಮೂರ್ತಿ, ಕೆ. ಹಾಲಪ್ಪ, ವಸಂತಗೌಡ, ನಾಗರಾಜಗೌಡ, ಜೆ. ಸುಕೇಂದ್ರಪ್ಪ, ಚಾರಗಲ್ಲಿ ಪರಶುರಾಮ್, ಎಪಿಎಂಸಿ ಉಪಾಧ್ಯಕ್ಷ ಹಾಲೇಶ್, ಉಪ ತಹಶೀಲ್ದಾರ್ ಕೆ.ಜಿ. ಕೂಲೇರ್, ರಾಜಸ್ವ ನಿರೀಕ್ಷಕ ಮಂಜುನಾಥ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬೆಣ್ಣೆ ಪರಶುರಾಮ್‌ ಉಪಸ್ಥಿತರಿದ್ದರು.

ಮನೆಗಳಿಗೂ ಹಾನಿ: ಪಟ್ಟಣದ ಆಶ್ರಯ ಬಡಾವಣೆ ಹಾಗೂ ವಿನಾಯಕ ನಗರದ ಹಲವು ಮನೆಗಳಿಗೆ ಹಾನಿಯಾಗಿದೆ. ಈ ಬಡಾವಣೆಗಳಲ್ಲಿ ಮನೆಗಳ ಚಾವಣಿಗೆ ಹಾಕಿದ್ದ ತಗಡಿನ ಶೀಟುಗಳು ಹಾರಿಹೋಗಿವೆ. ಮನೆಯ ಚಾವಣಿ ಕುಸಿದ ಪರಿಣಾಮ ಪಾರ್ವತಮ್ಮ ಎಂಬುವರಿಗೆ ಗಾಯಗಳಾಗಿವೆ. ಆಶ್ರಯ ಬಡಾವಣೆಗೆ ತೆರಳುವ ರಸ್ತೆಯಲ್ಲಿ ಮರ ಬಿದ್ದ ಕಾರಣ ಸಂಚಾರಕ್ಕೆ ಅಡ್ಡಿಯಾಯಿತು. ಹೊಸನಗರ ಗ್ರಾಮದ ರಾಮಚಂದ್ರಪ್ಪ ಅವರ ಮನೆ ಮೇಲೆ ಮರಬಿದ್ದು, ಅವರ ಪತ್ನಿ ಗೀತಾ ಅವರಿಗೆ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT