ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಇಳಿಮುಖ– ಪುಷ್ಪ ಬೆಳೆಗಾರರಿಗೆ ಸಂಕಷ್ಟ

Last Updated 14 ಸೆಪ್ಟೆಂಬರ್ 2017, 10:01 IST
ಅಕ್ಷರ ಗಾತ್ರ

‌ದೇವನಹಳ್ಳಿ: ಕಳೆದ ಹದಿನೈದು ದಿನಗಳಿಂದ ಸುರಿದ ಮಳೆಯಿಂದಾಗಿ ಅರಳಿ ನಿಂತ ಪುಷ್ಪಗಳು ಗಿಡದಲ್ಲೇ ಕೊಳೆಯುತ್ತಿವೆ. ಬೆಲೆಯೂ ಇಳಿಮುಖವಾಗಿ ಕಂಗಾಲಾಗಿರುವ ರೈತರು ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ.

ತಾಲ್ಲೂಕು ಎರಡು ದಶಕಗಳ ಹಿಂದೆ ಸುಗಂಧರಾಜ ಪುಷ್ಪ ಉದ್ಯಮಕ್ಕೆ ಖ್ಯಾತಿ ಪಡೆದಿತ್ತು. ಬೆಂಗಳೂರು ನಗರದ ಮಾರುಕಟ್ಟೆಗೆ ಶೇ 40ರಷ್ಟು ವಿವಿಧ ಜಾತಿಯ ಹೂವುಗಳನ್ನು ಪೂರೈಕೆ ಮಾಡಿ ವಹಿವಾಟಿನ ಪಾರಮ್ಯ ಮೆರೆದಿತ್ತು.

ವಿಮಾನ ನಿಲ್ದಾಣಕ್ಕೆ ಫಲವತ್ತಾದ ಭೂಮಿ ಸ್ವಾಧೀನ ಮತ್ತು ವಿಮಾನ ನಿಲ್ದಾಣದ ನಂತರ ಹೆಚ್ಚಿದ ರಿಯಲ್ ಎಸ್ಟೇಟ್ ವ್ಯವಹಾರದಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಜತೆಗೆ ಪುಷ್ಪ ಉದ್ಯಮದ ಪ್ರದೇಶ ಕಡಿಮೆಯಾಗುತ್ತಿದೆ. ಜತೆಗೆ ಬೆಲೆ ಇಳಕೆಯಿಂದಾಗಿ ಬೆಳೆಗಾರರು ಆತಂಕವನ್ನು ಎದುರಿಸುವಂತಾಗಿದೆ.

ನಾಲ್ಕು ವರ್ಷಗಳಿಂದ ತಾಲ್ಲೂಕಿನ ಕೆರೆಗಳಲ್ಲಿ ಹನಿ ನೀರಿಲ್ಲದೆ ಅಂತರ್ಜಲ ಬತ್ತಿ ಹೋಗುತ್ತಿದೆ. ಇರುವ ಕೊಳವೆ ಬಾವಿಗಳಲ್ಲೂ ನೀರಿಲ್ಲ. ಲಕ್ಷಾಂತರ ಬಂಡವಾಳ ಸುರಿದು ಕೊಳವೆ ಬಾವಿ ಕೊರೆಯಿಸಿದರೂ ಅಂತರ್ಜಲ ಸಿಗುತ್ತದೆ ಎಂಬ ಖಾತರಿ ಇಲ್ಲ ಎಂಬ ಅಳಲು ರೈತರದು.

ಕೊಳವೆ ಬಾವಿಯಲ್ಲಿರುವ ಅಲ್ಪ ಸ್ವಲ್ಪ ನೀರಿನಿಂದ ಹನಿ ನೀರಾವರಿ ಅಳವಡಿಸಿಕೊಂಡು ಬೆಳೆಯುವ ಹೂವಿಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ರೈತರು. ಕನಕಾಂಬರ, ಮಲ್ಲಿಗೆ, ಸುಗಂಧರಾಜ, ಸಂಪಿಗೆ ಹೂವಿಗೆ ಕೆ.ಜಿ. ಲೆಕ್ಕದಲ್ಲಿ ಕೃಷಿ ಕಾರ್ಮಿಕರಿಗೆ ಕೂಲಿ ನೀಡಬೇಕು. ಸೇವಂತಿಗೆ, ಗುಲಾಬಿ, ಜರ್ಬೇರಾ, ಚೆಂಡು ಹೂ ಬಿಡಿಸಲು ದಿನದ ಲೆಕ್ಕದಲ್ಲಿ ಕೂಲಿ ನೀಡಬೇಕು.

ಕಡಿಮೆ ಕೂಲಿ ಎಂದರೆ ₹200, ಊಟ, ಬಸ್ ಪ್ರಯಾಣದರ ಇತರೆ ಖರ್ಚು ಸೇರಿ ₹300 ನೀಡಲೇ ಬೇಕು. 50ಕೆ.ಜಿ. ಒಂದು ಹೂವಿನ ಚೀಲ ಮಾರುಕಟ್ಟೆಗೆ ಸಾಗಿಸಲು ₹150 ನೀಡಬೇಕು. ಒಂದು ಕೆ.ಜಿ.ಸೇವಂತಿಗೆ ಹೂ ಕಳೆದ ಒಂದು ವಾರದಿಂದ ಹತ್ತು ರೂಪಾಯಿ ದಾಟಿಲ್ಲ ಎಂಬ ಬೇಸರ ರೈತರದು. ‘ಮಾರುಕಟ್ಟೆಯಲ್ಲಿ ಹೂವಿನ ಚೀಲ ಕೇಳುವವರೇ ಇಲ್ಲ. ಬಲವಂತವಾಗಿ ನಾವೇ ಕೈಹಿಡಿದು ನೀಡಬೇಕು’ ಎನ್ನುತ್ತಾರೆ ಬೆಳೆಗಾರರು.

‘ಗೊಬ್ಬರ, ಹೂವಿನ ಸಸಿ ಖರೀದಿ ಮತ್ತು ನಾಟಿ ಸೇರಿ ₹1.5 ಲಕ್ಷ ಬಂಡವಾಳ ಹಾಕಿ ಒಂದು ಎಕರೆಯಲ್ಲಿ ರಾಜ ವೈಟ್ ತಳಿಯ ಸೇವಂತಿಗೆ ಬೆಳೆಸಿದ್ದೇನೆ. ಗೌರಿ ಹಬ್ಬ ಆರಂಭಕ್ಕೆ ಹದಿನೈದು ಇದ್ದಾಗ ಕೊಯ್ಲು ಆರಂಭಿಸಲಾಗಿದೆ. ಆರಂಭದಲ್ಲಿ ಪ್ರತಿ ಕೆ.ಜಿ.ಗೆ ₹15ರಿಂದ 20 ಇತ್ತು. ಈಗ ಕೇಳುವವರೇ ಇಲ್ಲ’ ಎನ್ನುತ್ತಾರೆ ನೊಂದ ಬೆಳೆಗಾರ ರೈತ ಮೇಲಿನ ತೋಟದ ಗುರುಲಿಂಗಪ್ಪ.

ಅಂತರ್ಜಲ ಸಮಸ್ಯೆ ನಿರಂತರವಾಗಿದೆ. ಬೆಳೆಗಾರರು ಮಿಶ್ರ ಪುಷ್ಪ ಬೆಳೆ ಬೆಳೆಯಬೇಕು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿಯ ತಳಿಯನ್ನು ಬೆಳೆದರೂ ಬೆಲೆ ಏರಿಳಿತದ ಸಮಸ್ಯೆಯಿಂದ ಪಾರಾಗಿ ನಷ್ಟ ತಪ್ಪಿಸಬಹುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್ ಹೇಳುತ್ತಾರೆ.

ಮುಂದಿನ ಐದಾರು ತಿಂಗಳು ಯಾವ ಪುಷ್ಪಕ್ಕೆ ಬೇಡಿಕೆ ಇದೆ, ಯಾವ ಹೂವು ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದೆ ಎಂಬ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಸಲಹೆ ಪಡೆಯಬೇಕು. ನಾವು ಸೂಕ್ತವಾಗಿ ಸ್ಪಂದಿಸುತ್ತೇವೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT