ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಗೊಂಬೆ’ಗೆ ಆಶ್ಲೀಲತೆಯ ಕೆಸರು

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1964ರಲ್ಲಿ ತೆರೆಕಂಡ ಬಿ.ಆರ್‌. ಪಂತುಲು ನಿರ್ದೇಶನದ ‘ಚಿನ್ನದ ಗೊಂಬೆ’ ಎಂಬ ಸದಭಿರುಚಿಯ ಸಿನಿಮಾದ ಬಗ್ಗೆ ಗೊತ್ತಿಲ್ಲದವರು ಕಡಿಮೆ. ಈಗ ಅದೇ ಹೆಸರಿನ ಇನ್ನೊಂದು ಸಿನಿಮಾ ಬರುತ್ತಿದೆ. ಆದರೆ ಈ ಎರಡು ಚಿತ್ರಗಳಲ್ಲಿನ ಹೆಸರಿನಲ್ಲಿನ ಸಾಮ್ಯತೆ ಹೂರಣದಲ್ಲಿಯೂ ಇರುತ್ತದೆ ಎಂದು ಭಾವಿಸುವಂತಿಲ್ಲ.

ಇದು ಹೆಸರಿಗಷ್ಟೇ ‘ಚಿನ್ನದ ಗೊಂಬೆ’. ಆದರೆ ಪೋಸ್ಟರ್‌ನಲ್ಲಿ ಹೆಣ್ಣೊಬ್ಬಳ ವಿಕಾರಗೊಂಡ ಮುಖ ಕಾಣಿಸುತ್ತಿತ್ತು. ಜತೆಗೆ ಗಡ್ಡಪ್ಪ ಮತ್ತು ಗಡ್ಡಪ್ಪ ಮತ್ತು ಸೆಂಚ್ಯೂರಿ ಗೌಡ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ನಿಂತಿದ್ದರು. ಅಷ್ಟೇ ಅಲ್ಲ, ರೊಮ್ಯಾನ್ಸ್‌ನಲ್ಲಿ ಮೈಮರೆತಿರುವ ನಾಯಕ ನಾಯಕಿ, ಇನ್ನೊಂದಿಷ್ಟು ಭಯ ತುಂಬಿರುವ ಮುಖಗಳು... ಹೀಗೆ ಪೋಸ್ಟರ್‌ನಲ್ಲಿಯೇ ಇದು ಹಾರರ್, ಪ್ರೇಮ, ಹಾಸ್ಯ ಎಲ್ಲದರ ಮಿಸಳ್ ಬಾಜಿ ಎಂಬುದಕ್ಕೆ ಸಾಕಷ್ಟು ಪುರಾವೆಗಳಿದ್ದವು. 

ನಂತರ ತೋರಿಸಲಾದ ಚಿತ್ರದ ಟ್ರೈಲರ್, ಈ ಸಿನಿಮಾ ಅಸಲಿ ಚಿನ್ನದ ಗೊಂಬೆಯ ಹೆಸರಿಗೆ ಕೆಸರು ಎರಚುವ ಕೆಲಸ ಮಾತ್ರವೇ ಮಾಡಬಲ್ಲದು ಎಂಬುದನ್ನು ಸಾಬೀತುಗೊಳಿಸಿತು.

ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಲು ತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಕಾರ್ಯಕ್ರಮ ಶುರುವಾಗಿದ್ದು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ. ಕಾದು ಕಾದು ಸುಸ್ತಾದವರ ಗಾಯದ ಮೇಲೆ ಬರೆ ಎಳೆದಂತೆ ಚಿತ್ರದ ಟ್ರೈಲರ್ ಅನ್ನು ಎರಡೆರಡು ಪ್ರದರ್ಶಿಸಲಾಯಿತು. ಜತೆಗೆ ಎರಡು ಹಾಡುಗಳು!

ಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿರುವ ಪಿ. ಕೃಷ್ಣಪ್ಪ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಹಿಂದೊಮ್ಮೆ ಚಿನ್ನದ ಗೊಂಬೆ ಚಿತ್ರ ಹಿಂದೊಮ್ನೆ ಬಂದಿತ್ತು. ಅದರಷ್ಟೇ ಯಶಸ್ಸು ಸಿಕ್ಕಲಿ ಅಂತ ಮಾಡಿದ್ದೇವೆ' ಎಂದು ಅವರು ಹೇಳಿದರು. ಆದರೆ ಟ್ರೈಲರ್‌ನಲ್ಲಿನ ಆಶ್ಲೀಲ ಭಾಷೆಯ ಬಗ್ಗೆ ಕೇಳಿದಾಗ ‘ನಾನೂ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದೆ. ಆದರೆ ನೀವು ಈ ಕ್ಷೇತ್ರಕ್ಕೆ ಹೊಸಬರು. ನಿಮಗೆ ಏನೂ ತಿಳಿಯುವುದಿಲ್ಲ. ನಾವು ಸಿನಿಮಾ ಗೆಲ್ಲಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಸುಮ್ಮನಾದೆ’ ಎಂದು ಅಸಹಾಯಕತೆ ತೋಡಿಕೊಂಡರು.

ನಿರ್ಮಾಪಕರ ಮಗ ಕೀರ್ತಿ ಕೃಷ್ಣ ಅವರೇ ಈ ಚಿತ್ರದ ನಾಯಕ. ಮಗನ ಪರದಾಟ ನೋಡಲಾಗದೆ ಈ ಸಿನಿಮಾ ಮಾಡಲು ಮುಂದಾದೆ ಎಂಬುದನ್ನೂ ಕೃಷ್ಣಪ್ಪ ಒಪ್ಪಿಕೊಂಡರು. ಲೀನಾ ಖುಷಿ ಮತ್ತು ಅಂಜುಶ್ರೀ ಇಬ್ಬರು ನಾಯಕಿಯರು.

ಕನ್ನಡ ಬರದ ನಿರ್ದೇಶಕ ಪಂಕಜ್ ಬಾಲನ್ ಇಂಗ್ಲಿಷ್‌ ಮತ್ತು ತೆಲುಗಿನಲ್ಲಿಯೇ ಮಾತನಾಡಿದರು. ‘ಒಳ್ಳೆಯ ಕಥೆ ಇದೆ. ಇದು ಸಿನಿಮಾ ಕುರಿತಾಗಿಯೇ ಇರುವ ಸಿನಿಮಾ. ಐವತ್ತರಷ್ಟು ಭಾಗ ಶೂಟಿಂಗ್‌ನಲ್ಲಿ ನಡೆಯುವ ಘಟನೆಗಳನ್ನೇ ಇಟ್ಟುಕೊಂಡು ಮಾಡಿದ್ದೇವೆ’ ಎಂದರು.

ಡಿ. ಧನಶೀಲನ್‌ ಸಂಗೀತ, ವೆಂಕಿ ದರ್ಶನ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT