ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳಿಗೆನ್ನೆ ದೇವತೆಯ ದೈವಭಕ್ತಿ!

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇಂದು (ಸೆ.15) ರಚಿತಾ ರಾಮ್‌ ಅವರು ನಾಯಕಿಯಾಗಿ ನಟಿಸಿರುವ ದ್ರುವ ಸರ್ಜಾ ನಾಯಕನಾಗಿ ನಟಿಸಿರುವ ‘ಭರ್ಜರಿ’ ಚಿತ್ರ ತೆರೆಕಾಣುತ್ತಿದೆ. ಈ ನೆಪದಲ್ಲಿ ರಚಿತಾ ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಚಂದನವನದ ‘ಡಿಂಪಲ್‌ ಕ್ವೀನ್‌’ ಅಂದಾಕ್ಷಣ ನಮಗೆ ಮನದುಂಬಿ ನಗುವ, ಹಾಗೆ ನಕ್ಕಾಗೆಲ್ಲ ಕೆನ್ನೆಯ ಮೇಲೆ ಒಂದು ಹೂಗಿಡ ನೆಟ್ಟು ಬೆಳೆಸುವಷ್ಟು ಆಳದ ಗುಳಿ ಬೀಳುವ ಬೆಡಗಿ ರಚಿತಾ ರಾಮ್‌ ಕಣ್ಮುಂದೆ ಬರುತ್ತಾರೆ.

‘ಗುಳಿಗೆನ್ನೆ’ಯನ್ನು ತನ್ನ ಸಿಗ್ನೇಚರ್‌ ಮಾರ್ಕ್‌ ಆಗಿಸಿಕೊಂಡಿರುವ ಈ ಹುಡುಗಿಯ ಬಗ್ಗೆ ಗಾಂಧಿನಗರದಲ್ಲಿ ‘ತಾರಾನಟರ ಜತೆ ಮಾತ್ರ ನಟಿಸುವವಳು’ ಎಂಬ ಮಾತು ಆಗೀಗ ಕೇಳಿಬರುತ್ತಿರುತ್ತದೆ.

ಈ ಮಾತನ್ನು ಕೆಲವರು ಅಭಿಮಾನದಿಂದಲೂ ಇನ್ನು ಕೆಲವರು ಅಸಮಾಧಾನದಿಂದಲೂ ಹೇಳುವುದುಂಟು. ಆದರೆ ರಚಿತಾ ಮಾತ್ರ ಅವರಿಬ್ಬರಿಗೂ ಒಂದು ಮುಗ್ಧನಗುವಿನ ಉತ್ತರ ನೀಡುತ್ತಾರಷ್ಟೆ.

‘ಸ್ಟಾರ್‌ ನಟರ ಸಿನಿಮಾಗಳಲ್ಲಿ ನನ್ನನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡುವುದು ಹೆಮ್ಮೆಯ ವಿಷಯ ಅಲ್ವಾ?’ ಎಂದು ಪ್ರಶ್ನಿಸುತ್ತಾರೆ ಅವರು. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ರಚಿತಾ ಅವರನ್ನು ಹಿರಿತೆರೆಗೆ ಪರಿಚಯಿಸಿದ್ದು 2013ರಲ್ಲಿ ತೆರೆಕಂಡ ದರ್ಶನ್‌ ಅಭಿನಯದ ‘ಬುಲ್‌ ಬುಲ್‌’ ಸಿನಿಮಾ. ಈ ಸಿನಿಮಾದ ಯಶಸ್ಸು ಅವರಿಗೆ ‘ಬುಲ್‌ ಬುಲ್‌ ಹುಡ್ಗಿ’ ಎಂಬ ವಿಶೇಷಣ ಅಂಟಿಸಿದ್ದೂ ನಿಜ.

ನಂತರ ಸಾಲು ಸಾಲಾಗಿ ನಟಿಸಿದ್ದು ಗಣೇಶ್‌, ಸುದೀಪ್‌, ಪುನೀತ್‌ ರಾಜಕುಮಾರ್‌, ಶ್ರೀಮುರಳಿ, ಧ್ರುವ ಸರ್ಜಾ ಹೀಗೆ ಸ್ಟಾರ್‌ ನಟರ ಜತೆಯಲ್ಲಿಯೇ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ನಟಿಸಿದ್ದು ಕೇವಲ ಎಂಟು ಸಿನಿಮಾಗಳಲ್ಲಿ.

‘ಇದಕ್ಕೆ ಕಾರಣ ಕಥೆಯ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದಿದ್ದೇ ಹೊರತು, ಸ್ಟಾರ್‌ ನಟರ ಸಿನಿಮಾಗಳಲ್ಲಿ ಮಾತ್ರ ನಟಿಸಬೇಕು ಎಂಬ ಕಾರಣಕ್ಕಾಗಿ ಅಲ್ಲ. ನನಗೆ ಸಿಕ್ಕ ಯಶಸ್ಸಿಗೆ ಇಷ್ಟೊತ್ತಿಗೆ ನಾನು ಕನಿಷ್ಠ ಇಪ್ಪತ್ತೈದು ಸಿನಿಮಾ ಮಾಡಬಹುದಿತ್ತು. ಆದರೆ ಸಿನಿಮಾಗಳ ಸಂಖ್ಯೆಯನ್ನಷ್ಟೇ ಹೆಚ್ಚಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ ರಚಿತಾ.

‘ನಾನು ಸ್ಟಾರ್‌ಗಳ ಜತೆ ಮಾತ್ರ ನಟಿಸುವವಳು, ಸಿಕ್ಕಾಪಟ್ಟೆ ದುಬಾರಿ, ಅಹಂಕಾರ ಇದೆ ಹೀಗೆ ನನ್ನ ಬಗ್ಗೆ ಚಿತ್ರರಂಗದಲ್ಲಿ ಹಲವು ಊಹಾಪೋಹಗಳಿವೆ. ಅವೆಲ್ಲವೂ ಹೇಗೆ ಹುಟ್ಟಿಕೊಂಡವೋ ನಂಗೂ ಗೊತ್ತಿಲ್ಲ. ಆದ್ರೆ ನನ್ನನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಆ ಆರೋಪಗಳು ಎಷ್ಟು ಸುಳ್ಳು ಎನ್ನುವುದು ಗೊತ್ತಿರುತ್ತದೆ’ ಎನ್ನುವ ಅವರಿಗೆ ‘ಹೊಸಬರ ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ನಟಿಸಬೇಕು’ ಎಂಬ ಇಂಗಿತವೂ ಇದೆ.

‘ನಾನು ಯಾವಾಗಲೂ ಅತಿಯಾದ ಹಣವನ್ನೇನೂ ಕೇಳುವುದಿಲ್ಲ. ಆದರೆ ಕೆಲವರು ತೀರಾ ಕಡಿಮೆ ಸಂಭಾವನೆಗೆ ನಟಿಸಬೇಕು ಎಂದು ಬಯಸುತ್ತಾರೆ. ಹಾಗಿದ್ದರೆ ನನಗೆ ಹಣ ಕೊಡಲೇಬೇಡಿ ಎನ್ನುತ್ತೇನೆ ನಾನು. ನಾನು ಹಣ ಪಡೆದುಕೊಳ್ಳುತ್ತಿರುವುದು ನನ್ನ ಪ್ರತಿಭೆಗೆ, ನನ್ನ ಶ್ರಮಕ್ಕೆ. ಅದಕ್ಕೆ ಎಷ್ಟು ಬೇಕೋ ಅಷ್ಟನ್ನಾದರೂ ಕೊಡಲೇ ಬೇಕಲ್ಲ’ ಎಂದು ಸಂಭಾವನೆಯ ಕುರಿತೂ ಅವರು ಮುಕ್ತವಾಗಿಯೇ ಮಾತನಾಡುತ್ತಾರೆ.

‘ನಾನ್ಯಾವತ್ತೂ ಹೊಸಬರ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಲ್ಲ. ಅವರಷ್ಟಕ್ಕೆ ಅವರೇ ನಟಿಸುವುದಿಲ್ಲ ಎಂದುಕೊಂಡು ನನ್ನನ್ನು ಕೇಳಲೇ ಬರುವುದಿಲ್ಲ. ನನ್ನನ್ನು ಸಂಪರ್ಕಿಸಿ ಕಥೆ ಹೇಳಿದರಷ್ಟೇ ಅಲ್ಲವೇ ನಾನು ಒಪ್ಪಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ಸಾಧ್ಯವಾಗುವುದು? ನನಗೆ ಕಥೆಯೇ ಮುಖ್ಯ.

ಕಥೆ ಮತ್ತು ನನ್ನ ಪಾತ್ರ ಚೆನ್ನಾಗಿದ್ದರೆ ಹೊಸಬರ ಚಿತ್ರಗಳಲ್ಲಿಯೂ ಖಂಡಿತ ನಟಿಸುತ್ತೇನೆ. ಹಾಗೆಯೇ ಸಂಭಾವನೆಯ ವಿಷಯದಲ್ಲಿಯೂ ರಾಜಿ ಆಗಬಹುದು’ ಎಂದು ಇನ್ನು ಮುಂದೆ ಪ್ರಯೋಗಮುಖಿಯಾಗುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾರೆ.

‘ಹಾಗೆಯೇ ನನ್ನ ಹಣೆಬರಹದಲ್ಲಿ ಯಾವ ಸಿನಿಮಾದಲ್ಲಿ ಮಾಡಬೇಕು ಎಂದು ಬರೆದಿರುತ್ತದೆಯೋ ಅದರಲ್ಲಿ ಮಾತ್ರ ನಟಿಸಲು ಸಾಧ್ಯ’ ಎಂದು ಋಣಸಂಬಂಧದ ಮಾತನ್ನೂ ಆಡುತ್ತಾರೆ.

ಕಳೆದ ನಾಲ್ಕು ವರ್ಷಗಳ ಚಿತ್ರಪಯಣ ಅವರಿಗೆ ಸಾಕಷ್ಟು ಖುಷಿ ಮತ್ತು ತೃಪ್ತಿ ನೀಡಿದೆಯಂತೆ. ‘ನನ್ನನ್ನು ಚಿತ್ರತಂಡ ಸ್ವಾಗತಿಸಿರುವ ರೀತಿ ತುಂಬ ಅದ್ಭುತವಾದದ್ದು. ಎಲ್ಲರಿಗೂ ಇಂಥ ಸ್ವಾಗತ ಸಿಗುವುದಿಲ್ಲ. ನನಗೆ ಸಿಕ್ಕಿದ ಈ ಅವಕಾಶವನ್ನು ತುಂಬಾ ಸಮರ್ಥವಾಗಿ ಬಳಸಿಕೊಂಡಿದ್ದೀನಿ ಎಂಬ ನಂಬಿಕೆ ಇದೆ. ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿಯೇ ಆದರೂ ಒಂದೊಂದು ಸಿನಿಮಾವೂ ನೆನಪಿಟ್ಟುಕೊಳ್ಳುವಂಥದ್ದು’ ಎಂದು ಕೃತಜ್ಞತೆಯಿಂದ ನೆನೆಯುವ ಈ ಚೆಲುವೆ ಅಪಾರ ದೈವಭಕ್ತೆ.

‘ಈ ಎಲ್ಲವೂ ದೇವರ ಕರುಣೆಯ ಫಲವಷ್ಟೆ. ಅವನೇ ನನ್ನನ್ನು ಈ ದಾರಿಯಲ್ಲಿ ಕೈಹಿಡಿದು ನಡೆಸುತ್ತಿದ್ದಾನೆ’ ಎನ್ನುವ ಅವರು ತಮ್ಮ ತಂದೆ, ತಾಯಿ, ಅಕ್ಕ ಮತ್ತು ಎಷ್ಟೋ ಸ್ನೇಹಿತರೂ ಮನುಷ್ಯ ರೂಪದಲ್ಲಿರುವ ದೇವರು ಎಂದೇ ನಂಬುತ್ತಾರೆ. ಚಿತ್ರೀಕರಣದ ಮಧ್ಯ ಎಲ್ಲಾದರೂ ಬಿಡುವುದು ಸಿಕ್ಕರೆ ಅವರು ಒಂದೋ ಕುಟುಂಬದ ಸದಸ್ಯರ ಜತೆ ಸಮಯ ಕಳೆಯುತ್ತಾರೆ ಅಥವಾ ದೇವಸ್ಥಾನಗಳಿಗೆ ಎಡತಾಕುತ್ತಾರೆ.

ಪಾರ್ಟಿ, ಪಬ್ಬು ಸುತ್ತುವುದು ಇವೆಲ್ಲವೂ ಅವರ ಜಾಯಮಾನಕ್ಕೆ ಪೂರ್ತಿ ವಿರುದ್ಧವಾದದ್ದು. ತಂದೆಯಿಂದ ಬಳುವಳಿಯಾಗಿ ಬಂದ ಭರತನಾಟ್ಯವೂ ಅವರಿಗೆ ನಟನೆಯಲ್ಲಿ ಭಾವಾಭಿವ್ಯಕ್ತಿಯ ವಿಷಯದಲ್ಲಿ ಸಾಕಷ್ಟು ಸಹಾಯ ಮಾಡಿದೆ.

ಸದ್ಯಕ್ಕೆ ರಚಿತಾ ತಾವು ನಾಯಕಿಯಾಗಿ ಅಭಿನಯಿಸಿರುವ ‘ಭರ್ಜರಿ’ ಸಿನಿಮಾಕ್ಕೆ ಜನರು ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಧ್ರುವ ಸರ್ಜಾ ನಾಯಕನಾಗಿರುವ ಬಹದ್ದೂರ್‌ ಚೇತನ್‌ ನಿರ್ದೇಶಿಸಿರುವ ‘ಭರ್ಜರಿ’ ಚಿತ್ರ ತಮ್ಮ ವೃತ್ತಿಜೀವನದಲ್ಲಿ ಭರ್ಜರಿ ಯಶಸ್ಸನ್ನೇ ಕೊಡುತ್ತದೆ ಎಂಬುದು ಅವರ ಬಲವಾದ ನಂಬಿಕೆ. ಈ ನಂಬಿಕೆಯಲ್ಲಿಯೇ ಅವರು ಎರಡು ವರ್ಷಗಳನ್ನು ಕಳೆದಿದ್ದಾರೆ.

‘ಭರ್ಜರಿ’ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ಕಥೆ ಕೆನ್ನೆಗುಳಿಯ ಮೇಲೆಯೇ ಕಟ್ಟಲ್ಪಟ್ಟಿದೆ. ನನ್ನ ಕೆನ್ನೆ ಗುಳಿಯ ಮೇಲೆಯೇ ಒಂದು ಹಾಡೂ ಇದೆ. ಈ ಎರಡು ವರ್ಷ ಕಾದಿರುವುದು ವ್ಯರ್ಥ ಅನಿಸುವುದಿಲ್ಲ. ನಾವು ಯಾವುದೋ ಒಂದು ವಸ್ತುವನ್ನು ಕೊಂಡುಕೊಂಡಾಗ ಅದು ದುಬಾರಿಯಾಗಿದ್ದರೂ ಆ ಬೆಲೆಗೆ ತಕ್ಕ ಗುಣಮಟ್ಟ ಇದ್ದರೆ ಖುಷಿಯೇ ಆಗುತ್ತದಲ್ಲ, ಇದೂ ಹಾಗೆಯೇ’ ಎಂದು ಉದಾಹರಣೆ ಸಮೇತ ವಿವರಿಸುತ್ತಾರೆ.

ಭರ್ಜರಿ ನಂತರ ಅವರು ‘ಅಯೋಗ್ಯ’ದಲ್ಲಿ ನೀನಾಸಂ ಸತೀಶ್‌ ಜತೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಅದರ ಜತೆ ಉಪೇಂದ್ರ ಅವರ ಜತೆ ‘ಉಪ್ಪಿ ರುಪ್ಪಿ’ ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಹಾಗೆಯೇ ಇನ್ನೂ ಮೂರು ಹೊಸ ಪ್ರಾಜೆಕ್ಟ್‌ಗಳು ಅವರ ಎದುರಿನಲ್ಲಿವೆ. ಆದರೆ ಅವು ಯಾವವು ಎಂಬುದರ ಸುಳಿವು ನೀಡಲು ರಚಿತಾ ನಿರಾಕರಿಸುತ್ತಾರೆ.

ಇನ್ನು ಮುಂದೆಯೂ ರಚಿತಾ ಇಷ್ಟೇ ಚ್ಯೂಸಿ ಆಗಿರುತ್ತಾರಾ? ಎಂಬ ಪ್ರಶ್ನೆಗೆ ‘ಇಲ್ಲಪ್ಪ, ಈಗ ಸಾಕಾಗಿದೆ. ಕಥೆಯ ವಿಷಯದಲ್ಲಿ ಮುಂದೆಯೂ ರಾಜಿ ಆಗುವುದಿಲ್ಲ. ಆದರೆ ವರ್ಷಕ್ಕೆ ಕನಿಷ್ಠ ನಾಲ್ಕು ಸಿನಿಮಾಗಳಲ್ಲಿಯಾದರೂ ನಟಿಸಬೇಕು ಎಂದುಕೊಂಡಿದ್ದೇನೆ’ ಎಂದು ನಗುವಾಗ ಅವರ ಕೆನ್ನೆಯ ಗುಳಿ ಇನ್ನಷ್ಟು ಆಳವಾಗುತ್ತದೆ.

ಕಾಡುವ ಪಾತ್ರಗಳು
ಸಿನಿಮಾದಲ್ಲಿ ನಟಿಸುವ ಪಾತ್ರಗಳು ಮತ್ತು ತನ್ನ ವೈಯಕ್ತಿಕ ಬದುಕು ಇವೆರಡರ ಮಧ್ಯದ ಅಂತರವನ್ನು ತುಂಬ ಸ್ಪಷ್ಟವಾಗಿಯೇ ಅರಿತಿರುವ ರಚಿತಾ ಅವರಿಗೆ ತಾವು ಅಭಿನಯಿಸಿದ ಕೆಲವು ಪಾತ್ರಗಳು ನಟನೆ ಮುಗಿದ ಮೇಲೂ ಕಾಡಿದ್ದಿದೆ. ಅದರಲ್ಲಿ ಅವರು ವಿಶೇಷವಾಗಿ ನೆನಪಿಸಿಕೊಳ್ಳುವುದು ರಮೇಶ್‌ ಅರವಿಂದ್‌ ನಟನೆಯ ‘ಪುಷ್ಪಕ ವಿಮಾನ’ ಸಿನಿಮಾದ ಪಾತ್ರ.

‘ಪುಷ್ಪಕ ವಿಮಾನದಲ್ಲಿ ನಾನು ತುಂಬ ಪ್ರಬುದ್ಧ ಮಗಳ ಪಾತ್ರದಲ್ಲಿ ನಟಿಸಿದ್ದೆ. ನನಗೂ ನನ್ನ ಅಪ್ಪ ಅಂದ್ರೆ ತುಂಬ ಇಷ್ಟ. ಅಪ್ಪ, ಅಮ್ಮ, ಅಕ್ಕ ಇವರು ನನ್ನ ಜಗತ್ತು. ಅವರಿಲ್ಲದೇ ನನ್ನ ಬದುಕನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ನಮ್ಮ ಈ ಬಾಂಧವ್ಯದ ಕಾರಣಕ್ಕೆ ಆ ಚಿತ್ರದ ಮಗಳ ಪಾತ್ರ ನನ್ನನ್ನು ಈಗಲೂ ಕಾಡುತ್ತಿರುತ್ತದೆ.

ಬೇಸರವಾದಾಗೆಲ್ಲ ಪುಷ್ಪಕ ವಿಮಾನದ ‘ಮುಗಿಲು ಬೆಳ್ಮುಗಿಲು’ ಹಾಡು ಹೇಳುತ್ತಿರುತ್ತೇನೆ’ ಎನ್ನುವಾಗ ಅವರ ಧ್ವನಿಯಲ್ಲಿ ಭಾವುಕತೆಯ ಲೇಪ ಕಾಣಿಸಿಕೊಳ್ಳುತ್ತದೆ. ಈ ಚಿತ್ರವಷ್ಟೇ ಅಲ್ಲ, ಇನ್ನೂ ಹಲವು ಚಿತ್ರಗಳಲ್ಲಿನ ಪಾತ್ರದಲ್ಲಿನ ಹಲವು ಸಕಾರಾತ್ಮಕ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೂ ಇದೆ.

ಸಿನಿಮಾ ಹಾಗೂ ವೈಯಕ್ತಿಕ ಬದುಕು
ಸಿನಿಮಾದಲ್ಲಿ ನಟಿಸುವ ಪಾತ್ರಗಳು ಮತ್ತು ತನ್ನ ವೈಯಕ್ತಿಕ ಬದುಕು ಇವೆರಡರ ಮಧ್ಯದ ಅಂತರವನ್ನು ತುಂಬ ಸ್ಪಷ್ಟವಾಗಿಯೇ ಅರಿತಿರುವ ರಚಿತಾ ಅವರಿಗೆ ತಾವು ಅಭಿನಯಿಸಿದ ಕೆಲವು ಪಾತ್ರಗಳು ನಟನೆ ಮುಗಿದ ಮೇಲೂ ಕಾಡಿದ್ದಿದೆ. ಅದರಲ್ಲಿ ಅವರು ವಿಶೇಷವಾಗಿ ನೆನಪಿಸಿಕೊಳ್ಳುವುದು ರಮೇಶ್‌ ಅರವಿಂದ್‌ ನಟನೆಯ ‘ಪುಷ್ಪಕ ವಿಮಾನ’ ಸಿನಿಮಾದ ಪಾತ್ರ.

‘ಪುಷ್ಪಕ ವಿಮಾನದಲ್ಲಿ ನಾನು ತುಂಬ ಪ್ರಬುದ್ಧ ಮಗಳ ಪಾತ್ರದಲ್ಲಿ ನಟಿಸಿದ್ದೆ. ನನಗೂ ನನ್ನ ಅಪ್ಪ ಅಂದ್ರೆ ತುಂಬ ಇಷ್ಟ. ಅಪ್ಪ, ಅಮ್ಮ, ಅಕ್ಕ ಇವರು ನನ್ನ ಜಗತ್ತು. ಅವರಿಲ್ಲದೇ ನನ್ನ ಬದುಕನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ನಮ್ಮ ಈ ಬಾಂಧವ್ಯದ ಕಾರಣಕ್ಕೆ ಆ ಚಿತ್ರದ ಮಗಳ ಪಾತ್ರ ನನ್ನನ್ನು ಈಗಲೂ ಕಾಡುತ್ತಿರುತ್ತದೆ.

ಬೇಸರವಾದಾಗೆಲ್ಲ ಪುಷ್ಪಕ ವಿಮಾನದ ‘ಮುಗಿಲು ಬೆಳ್ಮುಗಿಲು’ ಹಾಡು ಹೇಳುತ್ತಿರುತ್ತೇನೆ’ ಎನ್ನುವಾಗ ಅವರ ಧ್ವನಿಯಲ್ಲಿ ಭಾವುಕತೆಯ ಲೇಪ ಕಾಣಿಸಿಕೊಳ್ಳುತ್ತದೆ. ಈ ಚಿತ್ರವಷ್ಟೇ ಅಲ್ಲ, ಇನ್ನೂ ಹಲವು ಚಿತ್ರಗಳಲ್ಲಿನ ಪಾತ್ರದಲ್ಲಿನ ಹಲವು ಸಕಾರಾತ್ಮಕ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೂ ಇದೆ.

*
ನಾನು ಸಂಪೂರ್ಣ ನಿರ್ದೇಶಕರ ನಟಿ. ಸೆಟ್‌ಗೆ ಹೋಗುವಾಗ ಯಾವ ರೀತಿ ಸಿದ್ಧತೆಯನ್ನೂ ಮಾಡಿಕೊಳ್ಳುವುದಿಲ್ಲ. ಪೂರ್ತಿ ಖಾಲಿ ಮನಸ್ಸಿನಲ್ಲಿ ಹೋಗುತ್ತೇನೆ. ಅಲ್ಲಿ ಹೋಗಿ ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ತನ್ಮಯಳಾಗಿ ಮಾಡುತ್ತೇನೆ.
-ರಚಿತಾ ರಾಮ್‌, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT