ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಕ್ಯಾಂಪಸ್

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಳೆ ನೀರು ಸಂಗ್ರಹ, ಕಟ್ಟಡದ ಸುತ್ತಮುತ್ತ ನೂರಾರು ಮರಗಳು, ಸ್ವಚ್ಛಂದ ಗಾಳಿಯ ಜೊತೆಗೆ ಸರಾಗವಾಗಿ ಒಳಬರುವ ಬೆಳಕಿನ ವ್ಯವಸ್ಥೆ, ನೀರಿನ ಮರುಬಳಕೆ, ಸೋಲಾರ್‌ ಅಳವಡಿಕೆ...

ಪರಿಸರ ನಾಶಕ್ಕೆ ಕಾರಣವಾಗಿರುವ ಅಂಶಗಳನ್ನು ಮನಗಂಡು ಹಲವರು ಪರಿಸರಸ್ನೇಹಿ ಮನೆಯತ್ತ ಮುಖ ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ವಿದ್ಯಾಸಂಸ್ಥೆ ಪರಿಸರಸ್ನೇಹಿ ಕಟ್ಟಡ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ಮಾದರಿ ಎನಿಸಿದೆ.

ಹೀಗೆ ಪರಿಸರ ಕಾಳಜಿ ವಹಿಸಿರುವ ವಿದ್ಯಾಸಂಸ್ಥೆ ಮಾಗಡಿ ರಸ್ತೆಯ ಆಚಾರ್ಯ ಇನ್‌ಸ್ಟಿಟ್ಯೂಷನ್‌. ಪರಿಸರದ ಒಳಿತಿನ ಜೊತೆಗೆ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಮಹತ್ವ ತಿಳಿಸಿದರೆ, ಮುಂದಿನ ಅನಾಹುತಗಳನ್ನು ತಪ್ಪಿಸಬಹುದು ಎಂಬ ಉದ್ದೇಶ ಸಂಸ್ಥೆಯದ್ದು.

ನಾಲ್ಕು ಲಕ್ಷ ಚದರ ಅಡಿಯಲ್ಲಿ ಗ್ರೀನ್‌ ಬಿಲ್ಡಿಂಗ್‌ ಪರಿಕಲ್ಪನೆಯ ಮೂಲಕ 2008ರಲ್ಲಿ ಕಟ್ಟಡ ನಿರ್ಮಿಸಲಾಗಿದೆ. ನೈಸರ್ಗಿಕ ಗಾಳಿ–ಬೆಳಕಿನ ಬಳಕೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. 2011ರಲ್ಲಿ ಮಳೆ ನೀರಿನ ಕೊಯ್ಲು, 2012 ವರ್ಮಿ ಕಂಪೋಸ್ಟ್‌, 2017ರಲ್ಲಿ ಸೋಲಾರ್‌ ಅಳವಡಿಕೆ... ಹೀಗೆ ಹಂತಹಂತವಾಗಿ ಹಸಿರು ಕಟ್ಟಡಕ್ಕೆ ಒಗ್ಗಿಸಿಕೊಂಡಿರುವ ಕಾಲೇಜು, ಬೆಂಗಳೂರಿನ ಕಾಂಕ್ರೀಟ್ ಕಾಡಿನಿಂದ ತುಸು ಹೊರಗುಳಿದ ಅನುಭವ ನೀಡುತ್ತದೆ.

‘ಇಲ್ಲಿಯವರೆಗೂ ಕಟ್ಟಡದಲ್ಲಿ ಒಂದು ಎ.ಸಿ.ಯೂ ಇರಲಿಲ್ಲ. ಕಳೆದ ವರ್ಷ ವ್ಯವಸ್ಥಾಪಕರಿಗೆ ಒಂದು ಏರ್‌ ಕೂಲರ್‌ ಹಾಕಿಸಿದ್ದೇವೆ. ಇಲ್ಲಿ ಗಾಳಿ ಚೆನ್ನಾಗಿ ಬರುವುದರಿಂದ ಫ್ಯಾನ್‌ನ ಅವಶ್ಯಕತೆಯೇ ಬಂದಿಲ್ಲ. ಕಾಲೇಜಿನ ಪಕ್ಕದಲ್ಲಿಯೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಒಂದು ಕೆರೆಯ ಅಭಿವೃದ್ಧಿ ಮಾಡಿದೆ. ಇದರಿಂದ ಕೂಡ ಅನುಕೂಲವಾಗಿದೆ ಎನ್ನುತ್ತಾರೆ’ ಸಂಸ್ಥೆ ನಿರ್ದೇಶಕ ವೆಂಕಟೇಶ್‌.

ಹಸಿರಿನ ಮಹತ್ವ ಅರಿತಿಸುವ ಸಂಸ್ಥೆ ವಿದ್ಯಾರ್ಥಿಗಳ ಸಹಾಯದಿಂದ ಕಾಲೇಜಿನ ಕ್ಯಾಂಪಸ್‌ನಲ್ಲಿ 500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದೆ. ಹಾಗೆಯೇ ಪ್ರತಿವರ್ಷ ವಿದ್ಯಾರ್ಥಿಗಳಿಂದಲೇ ಗಿಡ ನೆಡುವ ಕಾರ್ಯಕ್ರಮ ಆಯೋಜಿಸುತ್ತದೆ. ಕಟ್ಟಡದ ಸೀಲಿಂಗ್‌ಗೆ ಪ್ಲಾಸ್ಟರಿಂಗ್‌ ಮಾಡಿಲ್ಲ.

ನೀರಿನ ಮಹತ್ವ ಅರಿತಿರುವ ಸಂಸ್ಥೆ, ಒಂದು ಹನಿ ನೀರು ಸಹ ವ್ಯರ್ಥವಾಗದಂತೆ ಮುತುವರ್ಜಿ ವಹಿಸುತ್ತದೆ. ಮಳೆ ನೀರಿನ ಕೊಯ್ಲು, ನೀರಿನ ಪುನರ್ಬಳಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗೆ ಸಂಗ್ರಹವಾದ ನೀರನ್ನು ಗಿಡಕ್ಕೆ, ಬಸ್‌ ತೊಳೆಯಲು, ಶೌಚಾಲಯದ ಫ್ಲಶ್‌ಗೆ ಬಳಸಲಾಗುತ್ತದೆ.

ಈ ವರ್ಷ ಸೊಲಾರ್‌ ಅಳವಡಿಸಿರುವುದು ಸಂಸ್ಥೆಯ ಹಸಿರು ಪರಿಕಲ್ಪನೆಯ ಮತ್ತೊಂದು ಹೆಜ್ಜೆ. ಇಲ್ಲಿಯ ವ್ಯವಸ್ಥಾಪಕ ನಿರ್ದೇಶಕ ಅಜಿತೇಶ್‌ ಬಸಾನಿ, ಸೋಲಾರ್‌ ವಿಷಯದಲ್ಲಿಯೇ ಅಮೆರಿಕದಲ್ಲಿ ಎಂ.ಎಸ್‌. ಮಾಡಿದ್ದಾರೆ. ಹಾಗಾಗಿ ಅವರ ನಿರ್ದೇಶನದಂತೆ ಇಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಲಾಗಿದೆ.

‘ಸೋಲಾರ್‌ ಅಳವಡಿಕೆಯ ಮೊದಲು ಪ್ರತಿತಿಂಗಳು ವಿದ್ಯುತ್‌ ಬಿಲ್‌ ಒಂದು ಲಕ್ಷಕ್ಕಿಂತ ಹೆಚ್ಚು ಬರುತ್ತಿತ್ತು. ಆದರೆ ಈಗ 200 ಕಿಲೋ. ವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತೇವೆ. ಇಷ್ಟೊಂದು ನಮಗೂ ಅಗತ್ಯವಿಲ್ಲದ ಕಾರಣ, ಸರ್ಕಾರಕ್ಕೆ ಮಾರುತ್ತೇವೆ. ಹಣ ಉಳಿಸುತ್ತೇವೆ ಎನ್ನುವುದಕ್ಕಿಂತ ಶಿಕ್ಷಣ ವ್ಯವಸ್ಥೆಯಲ್ಲಿ ಈ ರೀತಿಯ ಬೆಳವಣಿಗೆಗೆ ನಾಂದಿ ಹಾಡಿರುವುದಕ್ಕೆ ಖುಷಿ ಇದೆ’ ಎಂದು ಹೆಮ್ಮೆ ಪಡುತ್ತಾರೆ ವೆಂಕಟೇಶ್‌.

ಕಾಲೇಜು ಕ್ಯಾಂಟೀನ್‌ ತ್ಯಾಜ್ಯಗಳನ್ನು ಸಾಮಾನ್ಯವಾಗಿ ತಿಪ್ಪೆಗೆ ಸುರಿಯಲಾಗುತ್ತದೆ. ಆದರೆ ಇಲ್ಲಿ ತ್ಯಾಜ್ಯಗಳಿಂದ ಗೊಬ್ಬರ ತಯಾರಿಸಲಾಗುತ್ತದೆ. ಅದನ್ನು ಇಲ್ಲಿಯೇ ನೆಟ್ಟಿರುವ ಗಿಡಗಳಿಗೆ ಹಾಕಲಾಗುತ್ತದೆ. ರಾಸಾಯನಿಕ ಮುಕ್ತವಾದ ಗಿಡಗಳು ಸೊಂಪಾಗಿ ಬೆಳೆದಿವೆ.

‘ನಮ್ಮ ಜೀವನಶೈಲಿ ಸಾಕಷ್ಟು ಪ್ರಮಾಣದಲ್ಲಿ ಪರಿಸರ ಹಾನಿ ಮಾಡುತ್ತಿದೆ. ನಗರವನ್ನು ಐಷಾರಾಮಿಯಾಗಿಸುವ ಉದ್ದೇಶದಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಕಡೆಗಣಿಸುತ್ತಿದ್ದೇವೆ. ಇದಕ್ಕಿರುವ ಆಯ್ಕೆ ಎಂದರೆ ಸಂಪನ್ಮೂಲಗಳಿಗೆ ಪೂರಕವಾಗಿ ನಗರವನ್ನು ಬೆಳೆಸುವುದು. ಪರಿಸರಕ್ಕೆ ಇಂಗಾಲ ನೀಡುವ ಪ್ರಮಾಣಕ್ಕಿಂತ ಹೆಚ್ಚು ರಕ್ಷಣೆಗೆ ಆದ್ಯತೆ ನೀಡುವ (ಕಾರ್ಬನ್‌ ನ್ಯೂಟ್ರಾಲಿಟಿ) ಯೋಜನೆಯನ್ನು ಹೊಂದಿದ್ದೇವೆ’ ಎನ್ನುತ್ತಾರೆ ವೆಂಕಟೇಶ್‌.

‘ಮುಂದಿನ ದಿನಗಳಲ್ಲಿ ಕ್ಯಾಂಟಿನ್‌ಗಳಲ್ಲಿ ಅವರು ಬಯೋ ಗ್ಯಾಸ್‌ ಉಪಯೋಗಿಸಲು ಯೋಜನೆ ರೂಪಿಸಿದ್ದೇವೆ. ನೀರನ್ನು ಪಂಪ್‌ನಿಂದ ಎತ್ತಲೇಬಾರದು, ಮಳೆ ನೀರಿನ ಕೊಯ್ಲನ್ನೇ ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂಬ ಗುರಿ ಇದೆ’ ಎಂದು ಭವಿಷ್ಯದ ಚಿಂತನೆ ತಿಳಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT