ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಯ ಹೊಸ ತಾಣ ಸ್ಟೂಡೆಂಟ್‌ ಹೌಸಿಂಗ್‌

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ಟೂಡೆಂಟ್‌ ಹೌಸಿಂಗ್‌. ದೇಶದಾದ್ಯಂತ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸ ಅಲೆ ಸೃಷ್ಟಿಸುತ್ತಿರುವ ಪರಿಕಲ್ಪನೆ ಇದು. ಬೆಂಗಳೂರು, ಪುಣೆ, ದೆಹಲಿ, ಮುಂಬೈ, ಹೈದರಾಬಾದ್‌ ಸೇರಿದಂತೆ ಅನೇಕ ನಗರಗಳಲ್ಲಿ ಈಗ ತಾನೆ ಕಣ್ಣು ಬಿಡುತ್ತಿದೆ. ಆದಾಗ್ಯೂ ಭವಿಷ್ಯದಲ್ಲಿ ಭದ್ರ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ‘ಸ್ಟೂಡೆಂಟ್‌ ಹೌಸಿಂಗ್‌’ ರಿಯಲ್‌ ಎಸ್ಟೇಟ್‌ ಉದ್ಯಮದ ಭಾಗವಾಗಿ ಬೆಳೆದಿದೆ. ಭಾರತದಲ್ಲಿ ಈ ವಲಯದ ಬಗ್ಗೆ ಇತ್ತೀಚೆಗಷ್ಟೇ ಆಸಕ್ತಿ ಕಾಣಿಸಿಕೊಳ್ಳುತ್ತಿದೆ. ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಮೂಗುದಾರ ಹಾಕುವ ಕೆಲವು ಮಹತ್ವದ ಬದಲಾವಣೆಗಳು ಜಾರಿಗೆ ಬಂದ ಮೇಲೆ ಭಾರತದ ದೊಡ್ಡ ದೊಡ್ಡ ಡೆವೆಲಪರ್‌ಗಳು ಪರ್ಯಾಯ ಆಯ್ಕೆಗಾಗಿ ಕಾಯುತ್ತಿದ್ದರು. ಈ ಹುಡುಕಾಟದಲ್ಲಿ ಸಿಕ್ಕ ಊರುಗೋಲು ಸ್ಟೂಡೆಂಟ್‌ ಹೌಸಿಂಗ್‌.

ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳು ಹಾಗೂ ಸರ್ಕಾರದ ನಿರ್ಧಾರಗಳು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪೂರಕವಾಗಿದ್ದರೂ, ಆರಂಭದಲ್ಲಿ ವಹಿವಾಟಿಗೆ ಹಿನ್ನಡೆ ಉಂಟಾಗಿದ್ದು ಸತ್ಯ. ಇದರಿಂದಾಗಿ ವಾಣಿಜ್ಯ ಹಾಗೂ ವಸತಿ ಯೋಜನೆಗಳಿಗೆ ಬೇಡಿಕೆ ಕುಸಿದಿತ್ತು. ಇದೀಗ ಮತ್ತೆ ವಹಿವಾಟಿಗೆ ಚಾಲನೆ ಸಿಕ್ಕಿದ್ದರೂ ಮೊದಲಿನ ವೇಗ ಪಡೆದುಕೊಂಡಿಲ್ಲ. ಈ ಅಂಶವೂ ಸ್ಟೂಡೆಂಟ್‌ ಹೌಸಿಂಗ್‌ನತ್ತ ಆಕರ್ಷಣೆ ಹೆಚ್ಚಿಸಿದೆ.

ಬೆಂಗಳೂರು ಆದ್ಯತೆಯ ನಗರ
ಪ್ರಸ್ತುತ ಭಾರತದಲ್ಲಿ 18 ರಿಂದ 24ರ ನಡುವಿನ ವಯೋಮಾನದ 3.4 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುತ್ತದೆ ಜೆಎಲ್‌ಎಲ್‌ ರಿಯಲ್‌ ಎಸ್ಟೇಟ್‌ ಸಂಸ್ಥೆಯ ವರದಿ. 2003ರಿಂದ 2016 ಅವಧಿಯಲ್ಲಿ ಈ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 9.2ರಷ್ಟು ಹೆಚ್ಚಳ ಕಂಡುಬಂದಿದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಮುಂದಿವೆ. ಈ ಎರಡು ರಾಜ್ಯಗಳಲ್ಲಿ ತಲಾ ಸುಮಾರು 11 ಲಕ್ಷ ವಿದ್ಯಾರ್ಥಿಗಳಿಗೆ ವಸತಿ ಲಭ್ಯವಿದೆ.

ಸ್ಟೂಡೆಂಟ್‌ ಹೌಸಿಂಗ್‌ ವಿಭಾಗದಲ್ಲಿ ಪುಣೆ ಹಾಗೂ ಬೆಂಗಳೂರು ಹೂಡಕೆದಾರರ ಆದ್ಯತೆಯ ನಗರಗಳಾಗಿವೆ ಎಂದೂ ಜೆಎಲ್‌ಎಲ್‌ ಹೇಳುತ್ತದೆ. ಮುಂಬೈ ಮತ್ತು ದೆಹಲಿಯಲ್ಲಿ ಆಸ್ತಿಯ ಬೆಲೆಗಳು ದುಬಾರಿಯಾಗಿರುವ ಕಾರಣ ಅನೇಕ ಡೆವಲಪರ್‌ಗಳು ಈ ಎರಡು ನಗರಗಳ ಮೇಲೆ ಗಮನ ಹರಿಸುತ್ತಿವೆ.

‘ವರ್ಷದಿಂದ ವರ್ಷಕ್ಕೆ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣವಾಗುತ್ತಿದೆ. ಈ ಬೆಳವಣಿಗೆ ದೇಶಾದ್ಯಂತ ಸ್ಟೂಡೆಂಟ್‌ ಹೌಸಿಂಗ್‌ ಗಮನಾರ್ಹವಾದ ಬೇಡಿಕೆ ದಾಖಲಿಸಲು ಕಾರಣವಾಗಿದೆ. ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಬಾಡಿಗೆ ವಸತಿಗಳು ಬಳಕೆದಾರ ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ.’ ಎನ್ನುತ್ತಾರೆ ಟಾಟಾ ಹೌಸಿಂಗ್‌ನ ಕಾರ್ಪೊರೇಟ್ ಮಾರ್ಕೆಟಿಂಗ್ ಮುಖ್ಯಸ್ಥ ರಾಜೀಬ್ ಡ್ಯಾಶ್.

ವಿದ್ಯಾರ್ಥಿ ವಸತಿಯ ಸವಾಲು
ಅವಕಾಶಗಳು ಹೆಚ್ಚಿವೆ ಎಂದ ಮಾತ್ರಕ್ಕೆ ದಾರಿ ಸುಗಮವಾಗಿದೆ ಎಂದು ಅರ್ಥವಲ್ಲ. ಈ ವಿಭಾಗದಲ್ಲಿ ಹೂಡಿಕೆ ಮಾಡಿ, ಯಶಸ್ವಿಯಾಗಲು ನಮ್ಮಲ್ಲಿ ಕೆಲವು ತೊಡಕುಗಳೂ ಇವೆ.

ಹೆಚ್ಚಿನ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ವಸತಿ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಅಗತ್ಯ ಹಾಗೂ ಪೂರೈಕೆಯ ನಡುವೆ ಸಾಕಷ್ಟು ಅಂತರವಿರುತ್ತದೆ. ಈ ಅಂತರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಅಧಿಕ. ಇದಕ್ಕೆ ಪರ್ಯಾಯವಾಗಿ ಅನೇಕ ನಗರಗಳಲ್ಲಿ ಪಿ.ಜಿ. ಎನ್ನುವ ವಸತಿ ವ್ಯವಸ್ಥೆಗಳಿವೆ. ಅಲ್ಲದೇ, ಬಾಡಿಗೆ ಮನೆ ಪಡೆದು ಶೇರಿಂಗ್‌ ಮಾಡಿಕೊಂಡು ವಾಸಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಸಾಕಷ್ಟಿದೆ.

ಈ ಎಲ್ಲಾ ಆಯ್ಕೆಗಳ ನಡುವೆ ಸ್ಟೂಡೆಂಟ್‌ ಹೌಸಿಂಗ್‌ ಒಂದು ವಿಭಿನ್ನ, ಆಕರ್ಷಕ ಮತ್ತು ಆಶಾದಾಯಕ ಆಯ್ಕೆಯಾಗಿ ಹೇಗೆ ಹೊರಹೊಮ್ಮುತ್ತದೆ ಎನ್ನುವುದು ಮುಖ್ಯ. ಹಾಸ್ಟೆಲ್‌ಗಳಲ್ಲಿ ಸರಿಯಾದ ಸೌಕರ್ಯಗಳಿರುವುದಿಲ್ಲ. ಪಿ.ಜಿ.ಗಳಲ್ಲಿ ಸೂಕ್ತ ರಕ್ಷಣೆ ಇರುವುದಿಲ್ಲ. ಶೇರಿಂಗ್‌ ವ್ಯವಸ್ಥೆಯಲ್ಲಿ ಹೊಂದಾಣಿಕೆಯ ಸಮಸ್ಯೆ ಎದ್ದು ಕಾಣುತ್ತದೆ. ಇವೆಲ್ಲವುಗಳಿಗಿಂತ ಸ್ಟೂಡೆಂಟ್‌ ಹೌಸಿಂಗ್‌ ಅನ್ನು ಹೇಗೆ ಭಿನ್ನವಾಗಿ ರೂಪಿಸಬಹುದು ಎನ್ನುವ ಸವಾಲು ಇಲ್ಲಿದೆ.

ಈ ವಲಯದಲ್ಲಿ ಕಣಕ್ಕಿಳಿಯಲು ಸಾಕಷ್ಟು ಕಂಪೆನಿಗಳು ತುದಿಗಾಲ ಮೇಲೆ ನಿಂತಿವೆ. ಆದ್ದರಿಂದ ಈ ಬಗ್ಗೆ ಸ್ಪಷ್ಟ ನಿಯಮಗಳನ್ನು ಮಾಡಬೇಕಾದ ಅಗತ್ಯವಿದೆ. ಈ ಮೂಲದಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬಹುದೇ ಎಂಬ ಬಗ್ಗೆಯೂ ಚರ್ಚೆಯಾಗಬೇಕಿದೆ.

*


ಬೆಳವಣಿಗೆ ಕಾಣಲಿದೆ
ವಿದ್ಯಾರ್ಥಿ ವಸತಿ ವಿಭಾಗ ಭವಿಷ್ಯದಲ್ಲಿ ರಿಯಾಲ್ಟಿ ಉದ್ಯಮಿಗಳ ಪಾಲಿಗೆ ಹೊಸ ಸಾಧ್ಯತೆ ತೆರೆದಿಡುತ್ತಿದೆ. ಭವಿಷ್ಯದಲ್ಲಿ ಇದು ಸ್ಥಿರವಾದ ಮತ್ತು ಸುಭದ್ರವಾದ ಹೂಡಿಕೆಯಾಗಬಹುದು. ಬೆಂಗಳೂರು, ಮೈಸೂರು ಮತ್ತು ಮಂಗಳೂರು ಕರ್ನಾಟಕದ ಪ್ರಮುಖ ಶೈಕ್ಷಣಿಕ ಕೇಂದ್ರಗಳಾಗಿವೆ. ಉತ್ತಮ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳಿರುವ ನಗರಗಳಿಗೆ ವಲಸೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದೆ. ಇಂಥ ವಿದ್ಯಾರ್ಥಿಗಳ ವಸತಿ ಅಗತ್ಯದ ವಿಚಾರದಲ್ಲಿ ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಾಕಷ್ಟು ಅಂತರವಿದೆ. ಈ ಅಂತರವನ್ನು ತುಂಬಲು ಖಾಸಗಿ ರಿಯಲ್‌ ಎಸ್ಟೇಟ್‌ ವಲಯ ಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಸ್ಟೂಡೆಂಟ್‌ ಹೌಸಿಂಗ್‌ ಪ್ರಮುಖ ವಲಯವಾಗಿ ಬೆಳೆಯಲಿದೆ.
–ಆಶಿಶ್‌ ಪುರವಂಕರ‌,
ವ್ಯವಸ್ಥಾಪಕ ನಿರ್ದೇಶಕರು, ಪುರವಂಕರ ಪ್ರಾಜೆಕ್ಟ್‌ ಲಿಮಿಟೆಡ್‌

*
ವಿದ್ಯಾರ್ಥಿ ವಸತಿ ಬಗ್ಗೆ ಒಂದಿಷ್ಟು...
ವಿದ್ಯಾರ್ಥಿ ವಸತಿ (ಸ್ಟೂಡೆಂಟ್‌ ಹೌಸಿಂಗ್‌) ಭಾರತಕ್ಕೆ, ಅದರಲ್ಲೂ ಬೆಂಗಳೂರಿನ ಮಾರುಕಟ್ಟೆಗೆ ಇನ್ನೂ ಸಂಪೂರ್ಣ ಹೊಸದೇ. ಬಹಳಷ್ಟು ಡೆವೆಲಪರ್‌ಗಳು ಇನ್ನೂ ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ. ಖಾಲಿ ಉಳಿದ ಅಪಾರ್ಟ್‌ಮೆಂಟುಗಳನ್ನು ಮಾರಾಟವಾಗುವವರೆಗೆ ವಿದ್ಯಾರ್ಥಿಗಳಿಗೆ ಬಾಡಿಗೆ ಕೊಡುವುದೇ ಸ್ಟೂಡೆಂಟ್‌ ಹೌಸಿಂಗ್‌ ಅಲ್ಲ.

ಅಲ್ಲಿ ವಿದ್ಯಾರ್ಥಿ ಸ್ನೇಹಿ ವಾತಾವರಣವನ್ನು ತುಂಬುವ ಮತ್ತು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಹೊಣೆಯೂ ಹೆಗಲಿಗಿರುತ್ತದೆ. ಮೊದಲನೆಯದಾಗಿ ವಿದ್ಯಾರ್ಥಿಯ ವಸತಿಯು ಶಿಕ್ಷಣ ಸಂಸ್ಥೆಗಳಿಗೆ ಭೌಗೋಳಿಕವಾಗಿ ಹತ್ತಿರವಿರಬೇಕು.

ಊಟ–ತಿಂಡಿಯ ವ್ಯವಸ್ಥೆ ಆಯ್ಕೆಗೆ ಬಿಟ್ಟಿದ್ದು. ಅಧ್ಯಯನಕ್ಕೆ ಪ್ರತ್ಯೇಕ ಹಾಲ್‌, ನಿವಾಸದ ಹೊರಗೆ ಗುಂಪು ಚರ್ಚೆ, ಸಂವಾದಕ್ಕೆ ಅವಕಾಶವಿರುವ ವರಾಂಡಾ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಮನರಂಜನೆಗೆ ವ್ಯವಸ್ಥೆ, ವೈಫೈ ಸಂಪರ್ಕ, ಭದ್ರತೆ, ಆರೋಗ್ಯ ಸೇರಿದಂತೆ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಾದ ಸೌಲಭ್ಯಗಳು ಇರಬೇಕು. ಈ ಸೇವೆಗಳನ್ನಾಧರಿಸಿ ಬಾಡಿಗೆ ನಿರ್ಧಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT