ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 15–9–1967

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಾಥುಲಾ ಬಳಿ ಮತ್ತೆ ಚೀನಿ ದಾಳಿ: ಆದರೆ ಮೊದಲಿನ ತೀಕ್ಷ್ಣತೆಯಿಲ್ಲ

ನವದೆಹಲಿ, ಸೆ. 14– ಸಿಕ್ಕಿಂ ಟಿಬೆಟ್‌ ಗಡಿಯ ನಾಥುಲಾ ಬಳಿ ಪರಿಸ್ಥಿತಿಯು ನಿನ್ನೆಗಿಂತ ಇಂದು ಶಾಂತವಾಗಿದ್ದಿತಾದರೂ, ಚೀನಿ ಸೈನಿಕರು ಅಲ್ಪ ಪ್ರಮಾಣದಲ್ಲಿ ಆರ್ಟಿಲರಿ ಮತ್ತು ಸಣ್ಣ ಪ್ರಮಾಣದ ಗುಂಡಿನ ದಾಳಿಯನ್ನು ಭಾರತೀಯ ಠಾಣ್ಯಗಳ ಮೇಲೆ ನಡೆಸಿದರು.

**

ಧರ್ಮಪ್ರಕಾಶ: ಎಸ್‌.ವಿ. ಶ್ರೀನಿವಾಸ ಶೆಟ್ಟಿ ಅವರ ನಿಧನ

ಬೆಂಗಳೂರು, ಸೆ. 14– ಧರ್ಮಪ್ರಕಾಶ ಶ್ರೀ ಎಸ್‌.ವಿ. ಶ್ರೀನಿವಾಸ ಶೆಟ್ಟಿ ಅವರು ಗುರುವಾರ ಬೆಳಿಗ್ಗೆ ಸುಮಾರು 4.30ರ ಸಮಯದಲ್ಲಿ ವಿಶ್ವೇಶ್ವರಪುರದ ಕನಕಪುರ ರಸ್ತೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ದಿವಂಗತರಿಗೆ 68 ವರ್ಷ ವಯಸ್ಸಾಗಿತ್ತು. ಪತ್ನಿ, ಐದು ಮಂದಿ ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ.

**

ಅಯೂಬರ ಆತ್ಮಕಥೆಯಲ್ಲಿ ನೆಹರೂಗೆ ಅಪಚಾರ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಸೆ. 14– ರಾವಲ್ಪಿಂಡಿಗೆ ತಾವು 1964ರಲ್ಲಿ ಭೇಟಿ ಕೊಟ್ಟಿದ್ದಾಗ ಕಾಶ್ಮೀರ ವಿವಾದದ ಪರಿಹಾರಕ್ಕಾಗಿ ತಾವು ಮತ್ತು ಮಿರ್ಜಾ ಅಫ್‌ಜಲ್‌ ಬೇಗ್‌ರವರು ಯಾವುದೇ ನಿರ್ದಿಷ್ಟ ಸೂಚನೆಯನ್ನೂ ತಂದಿರಲಿಲ್ಲವೆಂದು ಷೇಕ್‌ ಅಬ್ದುಲ್ಲಾರವರು ಅಧ್ಯಕ್ಷ ಅಯೂಬ್‌ಖಾನರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ದಿವಂಗತ ಜವಾಹರಲಾಲ್‌ ನೆಹರೂರವರು 1964 ರಲ್ಲಿ ಷೇಕ್‌ ಅಬ್ದುಲ್ಲಾ ಮತ್ತು ಮಿರ್ಜಾ ಅಫಜಲ್‌ ಬೇಗ್‌ರೊಡನೆ ರಾವಲ್ಪಿಂಡಿಗೆ ಸೂಚನೆಯೊಂದನ್ನು ಕಳುಹಿಸಿ, ಭಾರತ, ಪಾಕಿಸ್ತಾನ ಮತ್ತು ಕಾಶ್ಮೀರಗಳನ್ನೊಳಗೊಂಡ ಒಕ್ಕೂಟವೊಂದನ್ನು ರಚಿಸುವ ಬಗ್ಗೆ ತಿಳಿಸಿದ್ದರೆಂದು ಅಧ್ಯಕ್ಷ ಅಯೂಬ್‌ಖಾನರು ತಮ್ಮ ಆತ್ಮಕಥೆಯಾದ ‘ಮಿತ್ರರು, ಒಡೆಯರಲ್ಲ’ ಎಂಬ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಸಹ ಷೇಖ್‌ ಅಬ್ದುಲ್ಲಾರವರು ತಮ್ಮ ಪತ್ರದಲ್ಲಿ ನಿರಾಕರಿಸಿದ್ದಾರೆ.

**

ವಿದೇಶಿ ಉದ್ಯಮಶೀಲರಿಗೆ ಭಾರತ ಅತ್ಯುತ್ತಮ ಕಾರ‍್ಯ ಕ್ಷೇತ್ರ– ಮುರಾರಜಿ

ನ್ಯೂಯಾರ್ಕ್‌, ಸೆ. 15– ‘ಭಾರತದ ವ್ಯಾವಸಾಯಿಕ ಉತ್ಪಾದನೆ ಚೇತರಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರ ಫಲಶ್ರುತಿಯಾಗಿ ನಮ್ಮ ನಾಡಿನಲ್ಲಿ ಕೈಗಾರಿಕೆಯ ಪ್ರಗತಿಯೂ ಆಗಿಯೇ ತಿರುವುದು. ಅಂದಮೇಲೆ ವಿದೇಶಿ ಬಂಡವಾಳಗಾರರ ಸಾಹಸ ಶೀಲತೆಗೆ ಇದೊಳ್ಳೆ ಸದವಕಾಶ.’

ದೂರಪ್ರಾಚ್ಯ ಅಮೆರಿಕ ಮಂಡಲಿಯ ಭೋಜನಕೂಟ ಸಮಾರಂಭದಲ್ಲಿ ಭಾರತದ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಮಾತನಾಡುತ್ತಾ ಅಮೆರಿಕದ ಬಂಡವಾಳಗಾರರಿಗೆ ನೀಡಿದ ಆಕರ್ಷಣೆಯ ಆಹ್ವಾನವಿದು.

**

ಭಾರತದಲ್ಲಿ 70 ಕೋಟಿ ಜನರ ಬೃಹತ್‌ ನಗರ

ಓಸ್ಲೊ, ಸೆ. 15– ಚೀನದ ಈಗಿನ ಜನಸಂಖ್ಯೆ 70 ಕೋಟಿ. ಇದೇ 70 ಕೋಟಿ ಜನಸಂಖ್ಯೆಯುಳ್ಳ ನಗರವೊಂದು ಇನ್ನೂ 100 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ನಿರ್ಮಾಣವಾಗಬಹುದು.

ಇದು ಅಮೆರಿಕದ ವಿಜ್ಞಾನಿ ಪ್ರೊಫೆಸರ್‌ ರಿಚರ್ಡ್‌ ಮೈರ್‌ ಅವರ ಅಭಿಪ್ರಾಯ.

ಅಂಕಿ ಅಂಶಗಳ ಪ್ರಕಾರ, 2050ನೇ ಇಸವಿಯಲ್ಲಿ ಭಾರತದ ಜನಸಂಖ್ಯೆ 150 ಕೋಟಿಯಾಗುತ್ತದೆ. ಈ ಪೈಕಿ 70 ಕೋಟಿ ಜನರು ಬಂಗಾಳಕೊಲ್ಲಿಯ ಬಳಿ ಕಲ್ಕತ್ತವೇ ಕೇಂದ್ರವಾಗಿರುವ ಬೃಹತ್‌ ನಗರದಲ್ಲಿ ವಾಸಿಸಬೇಕಾಗುತ್ತದೆ ಎಂದು ಅವರು ಇಲ್ಲಿನ ವಿಜ್ಞಾನಿಗಳ ಸಮ್ಮೇಳನದಲ್ಲಿ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT