ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಾಗುತ್ತಾರೆ ‘ಕುಸುಮಕ್ಕ’

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಗೌರಿ ಲಂಕೇಶರ ಹತ್ಯೆ ನಾಡಿನ ಪ್ರಜ್ಞೆಯನ್ನು ತಲ್ಲಣಗೊಳಿಸಿದೆ. ಮಾಧ್ಯಮಗಳು ಅದಕ್ಕೆ ಏನೇ ಅರ್ಥ ಕೊಡಲಿ, ಒಬ್ಬ ಪ್ರಗತಿಪರ, ಸಮಾನತೆಪರ ವ್ಯಕ್ತಿಯ ಹತ್ಯೆ ಆಗಿರುವುದಂತೂ ನಿಜ. ದಾಭೋಲ್ಕರ್, ಪಾನ್ಸರೆ ಹಾಗೂ ಕಲಬುರ್ಗಿ ಸಾವಿನ ಸರಣಿಯಲ್ಲಿ ಇದೂ ಒಂದು ಎಂದು ಹೋಲಿಸಲಾಗುತ್ತಿದೆ. ಮಹಾತ್ಮ ಗಾಂಧಿ ಹತ್ಯೆಯ ಜೊತೆ ಕೂಡ ಗೌರಿಯವರ ಹತ್ಯೆಯನ್ನು ಸಮೀಕರಿಸಲಾಗುತ್ತಿದೆ.

ವಿಚಾರವಾದಿಗಳ ಹತ್ಯೆಯ ಸರಣಿಯಲ್ಲಿ ಇನ್ನೂ ಒಂದು ಕೊಂಡಿ ಇದೆ. ಅದು, ಹೊನ್ನಾವರದ ಬಳಿ ಕಾಸರಕೋಡು ಎಂಬಲ್ಲಿ ‘ಸ್ನೇಹಕುಂಜ’ ಎಂಬ ಸಂಸ್ಥೆ, ಸಂಸ್ಥೆಯೊಳಗೊಂದು ಆಸ್ಪತ್ರೆ ಸ್ಥಾಪಿಸಿ ಮುಂದೆ ಸಮಾಜದ ಆರೋಗ್ಯಕ್ಕಾಗಿ, ಪರಿಸರದ ಆರೋಗ್ಯಕ್ಕಾಗಿ ಅನವರತ ದುಡಿದ, ಹೋರಾಡಿದ ಧೀಮಂತ ಮಹಿಳೆ ಡಾ. ಕುಸುಮಾ ಸೊರಬ ಅವರದ್ದು.

ಡಾ. ಕುಸುಮಾ ವೃತ್ತಿಯಿಂದ ವೈದ್ಯೆ, ಒಬ್ಬ ಸರ್ಜನ್. ಆಸ್ಪತ್ರೆ ಸ್ಥಾಪಿಸಿ ಹಳ್ಳಿಗಳ ಜನರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆಯನ್ನು ಕೊಡಲು ಬಂದವರು. ಆದರೆ ಹಳ್ಳಿಗಳಲ್ಲಿರುವ ಬಡತನ, ನಿರಕ್ಷರತೆ, ಮದ್ಯ ವ್ಯಸನ, ನಿರುದ್ಯೋಗಗಳನ್ನು ನೋಡಿ ರೋಗದ ಮೂಲ ಎಲ್ಲಿದೆ ಎಂದು ಹುಡುಕಿ ಚಿಕಿತ್ಸೆ ಕೊಡಲು ಸಮಾಜ ಕಾರ್ಯಕ್ಕೆ ಮುಂದಾದರು. ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಉತ್ತರ ಕನ್ನಡದ ಬಹುತೇಕ ತಾಲ್ಲೂಕುಗಳಲ್ಲಿ ಡೇರಿ, ಚಾಪೆ ಹೆಣಿಕೆ, ಕೃಷಿ ಮುಂತಾದ ಗ್ರಾಮೋದ್ಯೋಗಗಳತ್ತ ಜನರನ್ನು ಸಂಘಟಿಸಿದರು. ಗದ್ದೆಯ ಮಣ್ಣನ್ನು ಹೆಂಚಿನ ಕಾರ್ಖಾನೆಗೆ ಸಾಗಿಸುವುದನ್ನು ವಿರೋಧಿಸುವಲ್ಲಿಂದ ಅವರ ಪರಿಸರ ಹೋರಾಟ ಆರಂಭವಾಯಿತು. ಉತ್ತರ ಕನ್ನಡದ ಸಮೃದ್ಧ ಪ್ರಕೃತಿಯನ್ನು ಉಳಿಸಿಕೊಳ್ಳಲು ಅವಿಶ್ರಾಂತವಾಗಿ ದುಡಿದರು. ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಧ್ಯೆ ಕೈಗಾ ಅಣುಸ್ಥಾವರವನ್ನು, ಅಲ್ಲಿನ ಒಂದೊಂದು ನದಿಗೂ ಒಂದರ ಮೇಲೊಂದು ಅಣೆಕಟ್ಟೆ ಕಟ್ಟುವುದನ್ನು, ನದಿಯ ಮೇಲೆ ಉಷ್ಣ ಸ್ಥಾವರವನ್ನು, ನಾಡಿನ ಯುವಜನರನ್ನು ನಾಶ ಮಾಡುತ್ತಿದ್ದ ಮದ್ಯ ಮಾರಾಟವನ್ನು ಕಟುವಾಗಿ ವಿರೋಧಿಸಿದವರು ಡಾ. ಕುಸುಮಾ. ಅಷ್ಟೇ ಅಲ್ಲ, ಭಟ್ಕಳದಲ್ಲಿ ಪದೇ ಪದೇ ಭುಗಿಲೇಳುತ್ತಿದ್ದ ಕೋಮು ದಳ್ಳುರಿಯಲ್ಲಿ ಬೆಂದು ನೊಂದವರಿಗೆ ಸಾಂತ್ವನ ಹೇಳಲು, ಪುನರ್ವಸತಿ ಕಲ್ಪಿಸಲು, ಕೋಮು ಸೌಹಾರ್ದವನ್ನು ಮೂಡಿಸಲು ಪದೇ ಪದೇ ಧಾವಿಸುತ್ತಿದ್ದರು. ಪರಿಸರ ಉಳಿಸಿಕೊಳ್ಳಲು ಉತ್ತರ ಕನ್ನಡ ಜಿಲ್ಲೆಯವರನ್ನಷ್ಟೇ ಅಲ್ಲದೆ ಕರ್ನಾಟಕದವರನ್ನೆಲ್ಲ ಒಟ್ಟುಗೂಡಿಸಿದ್ದರು. ಮೇಧಾ ಪಾಟ್ಕರ್, ಸುಂದರಲಾಲ ಬಹುಗುಣ ಇವರನ್ನೆಲ್ಲ ಪಶ್ಚಿಮ ಘಟ್ಟದುದ್ದಕ್ಕೂ ಓಡಾಡಿಸಿದ್ದರು. ಪರಿಸರ ವಿಚಾರವು ಮುನ್ನೆಲೆಗೆ ಬರಲೆಂದು ಡಾ. ಶಿವರಾಮ ಕಾರಂತರನ್ನು ಸಂಸತ್ ಚುನಾವಣೆಗೆ ಕೂಡ ನಿಲ್ಲಿಸುವ ಧೈರ್ಯ ಮೆರೆದಿದ್ದರು.

ಲಿಂಗನಮಕ್ಕಿ ಅಣೆಕಟ್ಟು ಮೂಲಕ ನಾಡಿಗೇ ವಿದ್ಯುತ್ ಕೊಡುತ್ತಿರುವ ಶರಾವತಿಗೆ ದಟ್ಟ ಕಾಡಿನ ಮಧ್ಯೆ ಮತ್ತೊಂದು ಅಣೆಕಟ್ಟಿನ ಪ್ರಸ್ತಾಪ ಬಂದಾಗ ಸಿಡಿದೆದ್ದ ಕುಸುಮಕ್ಕ ‘ಶರಾವತಿ ಟೇಲ್‌ರೇಸ್’ ಅಣೆಕಟ್ಟನ್ನು ನಿಲ್ಲಿಸಲು ಶತಾಯ ಗತಾಯ ಹೋರಾಡಿದರು. ಸುಪ್ರೀಂ ಕೋರ್ಟ್ ಮೆಟ್ಟಿಲನ್ನೇರಿತು ಶರಾವತಿ ಟೇಲ್‌ರೇಸ್ ಪ್ರಕರಣ. ಜಗತ್ತಿನ ಅತ್ಯಪೂರ್ವ 18 ಜೀವವೈವಿಧ್ಯ ಸಂಪತ್ತಿನ ಶರಾವತಿ ಕೊಳ್ಳದಲ್ಲಿ ಅಣೆಕಟ್ಟಿನಿಂದಾಗಿ ಜೈವಿಕ ಸಂಪತ್ತಿನ ನಾಶ ಆಗಬಾರದೆಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.

ಶರಾವತಿಗೆ ಅಣೆಕಟ್ಟು, ಒಬ್ಬ ಗುತ್ತಿಗೆದಾರ ಕಂಡ ಕನಸು. ರಾಜಕಾರಣಿಗಳನ್ನು, ರಾಜ್ಯ-ಕೇಂದ್ರ ಮಂತ್ರಿಗಳನ್ನು ಒಪ್ಪಿಸುವುದು ಕಷ್ಟವಾಗಿರಲಿಲ್ಲ. ಕಾಡು, ಜೈವಿಕ ಸಂಪತ್ತು, ಜೀವವೈವಿಧ್ಯ ಇವೆಲ್ಲ ಆತನ ನಿಘಂಟಿನಲ್ಲಿ ಇರಲಿಲ್ಲ. ಈ ಒಬ್ಬ ಸಣಕಲು ಹೆಂಗಸು- ಗೌರಿಯವರಿಗಿಂತ ಸಣಕಲು ಇದ್ದರು ಕುಸುಮಕ್ಕ- ಆ ಕಾಡಿಗೆ ಕಾವಲುಗಾರಳಾಗಿ ನಿಲ್ಲುತ್ತಾಳೆಂದರೆ ಸಹಿಸುವುದೆಂತು? ಗುತ್ತಿಗೆದಾರರಿಗೆ, ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದರು ಕುಸುಮಕ್ಕ. ಅಂತೆಯೇ ಮದ್ಯ ಮಾರಾಟ ಮಾಡುವ ರಾಜ್ಯ ಸರ್ಕಾರಕ್ಕೂ ತಲೆನೋವಾಗಿದ್ದರು. ಕೋಮುವಾದದ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವವರದ್ದೂ ನಿದ್ದೆಗೆಡಿಸಿದ್ದರು. ಎತ್ತ ದೃಷ್ಟಿ ಹಾಯಿಸಿದರೂ ದುಷ್ಟರಿಗೆ ಎದುರು ನಿಲ್ಲುವ ಮಹಾ ಮಾಯೆಯಾಗಿ ಕಾಣಲಾರಂಭಿಸಿದ್ದರವರು. ಈ ಶಕ್ತಿಯ ಹುಟ್ಟಡಗಿಸದೇ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡಿತ್ತು ವ್ಯವಸ್ಥೆ.

‘ಶರಾವತಿ ಟೇಲ್‌ರೇಸ್’ ರಾತ್ರೋ ರಾತ್ರಿ ‘ಗೇರುಸೊಪ್ಪ ಹೈಡಲ್ ಪ್ರಾಜೆಕ್ಟ್’ ಎಂಬ ಮರು ಹೆಸರಿನೊಂದಿಗೆ ಹೊಸರೂಪ ಪಡೆಯಿತು. ಪ್ರಾಜೆಕ್ಟಿಗೆ ಒಪ್ಪಿಗೆಯೂ ದೊರೆತು ಕಾಡಿನಲ್ಲಿ ಮರ ಕಡಿಯುವುದು ಆರಂಭವಾಗಿಯೇ ಬಿಟ್ಟಿತು. ಅವಾಕ್ಕಾದ ಕುಸುಮಕ್ಕ ಕಾಡಿಗೆ ಓಡಿದರು. 49 ದಿನಗಳ ಸತ್ಯಾಗ್ರಹ ಮಾಡಿ ಅರಣ್ಯ ನಾಶವನ್ನು ತಡೆಯುವಲ್ಲಿ ಸಫಲರಾದರು. ಇವರಿಗೆ ಮತ್ತೆ ಅನುಮತಿ ಸಿಕ್ಕಿತೇಕೆ ಎಂದು ಕೋರ್ಟಿನ ಕಾಗದ ಪತ್ರಗಳನ್ನು ಜೋಡಿಸಿಕೊಂಡು ಬೆಂಗಳೂರಿಗೆ ದೌಡಾಯಿಸಿದರು.

ಕೋರ್ಟಿನಲ್ಲಿ ಗೆಲವು ತಂದುಕೊಟ್ಟಿದ್ದ ವಕೀಲರು ಕಾರ್ ಅಪಘಾತದಲ್ಲಿ ವಿಧಿವಶರಾಗಿದ್ದರು, ಅವರ ಸಹಾಯಕರಿಗೆ ತೀವ್ರ ಪೆಟ್ಟಾಗಿತ್ತು. ಕೋರ್ಟ್ ಮೂಲಕ ಹೋರಾಡುವುದೇ, ಜನರನ್ನು ಒಗ್ಗೂಡಿಸಲೇ, ಆಮರಣ ಉಪವಾಸ ಸತ್ಯಾಗ್ರಹ ಮಾಡಲೇ ಎಂಬ ಚಿಂತೆಯಲ್ಲೇ ರಾತ್ರಿ ಬಸ್ ಏರಿದ್ದರು. ಮಧ್ಯ ರಾತ್ರಿ ಬಸ್ ನಿಲ್ಲಿಸಿದಾಗ ಮೂತ್ರ ಬಾಧೆ ತೀರಿಸಿಕೊಳ್ಳಲು ರಸ್ತೆ ದಾಟುತ್ತಿದ್ದ ಕುಸುಮಾ ಅವರನ್ನು ವೇಗವಾಗಿ ಬಂದ ಜೀಪೊಂದು ನೆಲಕ್ಕುರುಳಿಸಿ ಕ್ಷಣಾರ್ಧದಲ್ಲಿ ಮಾಯವಾಯಿತು. ಕುಸುಮಕ್ಕ ಜೀಪಿನಿಂದ ಹೊಡೆಸಿಕೊಂಡು ಬಿದ್ದಿದ್ದನ್ನು ನೋಡಿದವ ಆ ರಾತ್ರಿಯಲ್ಲಿ ಬಸ್ಸಿನವರಿಗೆ ಚಹಾ ಮಾರುತ್ತಿದ್ದ ಪುಟ್ಟ ಬಾಲ ಕಾರ್ಮಿಕ ಮಾತ್ರ. ಅದು ಕೊಲೆಯೆನ್ನಲು ನಮ್ಮ ಬಳಿ ಯಾವ ಪುರಾವೆಯೂ ಇಲ್ಲ. ಆದರೆ ಅದೊಂದು ಸಾಧಾರಣ ಅಪಘಾತ ಎಂದು ಯಾವೊಬ್ಬರ ಮನಸ್ಸೂ ಒಪ್ಪುವುದಿಲ್ಲ.

ಇಂದು ಶರಾವತಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣವಾಗಿದೆ, ಕೈಗಾಕ್ಕೆ ಪ್ರತಿವರ್ಷ ಹೆಚ್ಚೆಚ್ಚು ಗುಮ್ಮಟಗಳ ಜೋಡಣೆ ಆಗುತ್ತಿದೆ. ಅಣೆಕಟ್ಟು ಕಟ್ಟಲು ಇನ್ನು ಒಂದೂ ನದಿ ಬಾಕಿ ಉಳಿದಿಲ್ಲ, ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ, ಮದ್ಯವಂತೂ ಪಶ್ಚಿಮ ಘಟ್ಟದ ಮೇಲೆ ಕೆಳಗೆ ಸೇರಿಯೇ ನದಿಯಾಗಿ ಹರಿಯುತ್ತಿದೆ. ನಮ್ಮ ಸಮಾಜದ ಅಭಿವೃದ್ಧಿಯಾಗುತ್ತಿರುವುದರ ಸಂಕೇತ ಇವೆಲ್ಲ. ಪ್ರಗತಿ, ಅಭಿವೃದ್ಧಿ ಎಂಬ ಹೆಸರಿನಲ್ಲಿ ಬರುತ್ತಿರುವ ವಿನಾಶವನ್ನು ಪ್ರಶ್ನೆ ಮಾಡುತ್ತಿರುವವರನ್ನು, ಪ್ರತಿರೋಧ ತೋರಿಸುವವರನ್ನು, ಪ್ರತಿಭಟನೆ ಮಾಡಬೇಕೆನ್ನುವವರನ್ನು, ವಿರುದ್ಧ ಮಾತಾಡುವವರನ್ನು ಹೊಸಕಿ ನೊಣೆಯುತ್ತದೆ ಈ ವ್ಯವಸ್ಥೆ. ಜನರಲ್ಲಿ ವೈಚಾರಿಕತೆ ಬೆಳೆಯಬೇಕೆನ್ನುವ, ಸಂತ್ರಸ್ತರ ಪರ ನಿಲ್ಲುವ, ತಾರತಮ್ಯ ಬೇಡ ಎನ್ನುವ, ಸಂಪತ್ತಿನ ಸಮಾನ ಹಂಚಿಕೆ ಆಗಬೇಕೆನ್ನುವ ಯಾರನ್ನೂ ಉಳಿಯಗೊಡುವುದಿಲ್ಲ ಇದು. ಇದು ಕಾರ್ಪೊರೇಟ್ ವ್ಯವಸ್ಥೆ. ಕೋಮುವಾದದಲ್ಲಿ ಜನ ಮುಳುಗಿರಬೇಕು, ಭ್ರಷ್ಟಾಚಾರ ವಿಜೃಂಭಿಸುತ್ತಿರಬೇಕು. ಅವೆರಡನ್ನೂ ತನ್ನೆರಡು ರಾಕ್ಷಸ ಹೆಜ್ಜೆಗಳಾಗಿರಿಸಿಕೊಂಡು ಬೆಳೆಯುತ್ತಿರುವ ಕಾರ್ಪೊರೇಟ್ ವ್ಯವಸ್ಥೆ ಇದು. ಕುಸುಮಕ್ಕ ಅವರಿಗೆ ಕಾಣಿಸಿದರು, ಅವರನ್ನು ಮುಗಿಸಲಾಯಿತು. ಗೌರಿಯ ದನಿ ಅವರಿಗೆ ಕೇಳಿಸಿತು, ಅವರ ಸೊಲ್ಲಡಗಿಸಲಾಯಿತು. ನಾವಿನ್ನೂ ಬದುಕಿದ್ದೇವೆಂದರೆ ನಮ್ಮ ಧ್ವನಿ ಇನ್ನೂ ‘ಅವರ’ ಕಿವಿಗೆ ಬಿದ್ದಿಲ್ಲ, ನಾವು ಇನ್ನೂ ಅವರಿಗೆ ಕಾಣಿಸಿಲ್ಲ ಎಂದೇ ಅರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT