ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡ ನಿಲುವು ಪರಿತ್ಯಾಗ ಆರ್‌ಎಸ್‌ಎಸ್ ಮಹತ್ವದ ನಡೆ

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬದಲಾವಣೆಗಳಿಗೆ ಆರ್ಎಸ್‌ಎಸ್ ತೆರೆದುಕೊಳ್ಳುತ್ತಿದೆಯೇ? ನವದೆಹಲಿಯಲ್ಲಿ ರಾಜತಾಂತ್ರಿಕರ ಜೊತೆ ನಡೆಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ಸಹಿಷ್ಣುತೆ ಬಗ್ಗೆ ಆರ್‍ಎಸ್‍‍ಎಸ್ ಮುಖ್ಯಸ್ಥ ಮೋಹನ ಭಾಗವತ್ ನೀಡಿರುವ ಸಂದೇಶಗಳನ್ನು ಗಮನಿಸಿದಲ್ಲಿ ಈ ಅನುಮಾನ ಮೂಡುತ್ತದೆ. ಸುಮಾರು 50 ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರ ಜೊತೆ ಈ ಸಂವಾದ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಸಂದೇಶ ಹರಡುವುದನ್ನು (ಟ್ರಾಲ್‌) ಆರ್‌ಎಸ್‌ಎಸ್‌ ಒಪ್ಪುವುದಿಲ್ಲ ಎಂದು ಭಾಗವತ್ ಅಲ್ಲಿ ಹೇಳಿರುವುದು ಮಹತ್ವದ್ದು. ಬಿಜೆಪಿ ಆಡಳಿತವನ್ನು ಟೀಕಿಸಿದವರನ್ನೆಲ್ಲಾ ಕೀಳು ಭಾಷೆಯಲ್ಲಿ ಅವಹೇಳನ ಮಾಡುವುದು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಾಲ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿಹೋಗಿದೆ. ಬಲಪಂಥೀಯ ರಾಜಕಾರಣದ ಕಟು ಟೀಕಾಕಾರರಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಇತ್ತೀಚೆಗೆ ಅಂತರ್ಜಾಲದಲ್ಲಿ ಸಂಭ್ರಮಿಸಿದಂತಹ ವಿಕೃತಿಯೂ ಪ್ರದರ್ಶಿತವಾಗಿತ್ತು. ವಿಭಿನ್ನ ದೃಷ್ಟಿಕೋನ ಹೊಂದಿದ ವ್ಯಕ್ತಿಗಳ ಮೇಲೆ ನಡೆಸುವ ಇಂತಹ ಟ್ರಾಲ್ ಪ್ರಹಾರ ಅಸಹನೀಯ.

ಭಾರತದ ಗೌರವ, ಪ್ರತಿಷ್ಠೆ ಕಾಪಾಡುವ ಕೆಲಸ ತಮ್ಮ ಮೇಲೇ ಇದೆ ಎಂಬಂತೆ ಸೆಕ್ಯುಲರ್ ಹಾಗೂ ಉದಾರ ಚಿಂತನೆಗಳನ್ನು ಖಂಡಿಸುವ ವಿಧಾನವು ಸಂವಾದಗಳನ್ನೇ ಹತ್ತಿಕ್ಕುವಂತಹದ್ದಾಗಿದೆ. ಲೇಖಕ ರಾಮಚಂದ್ರ ಗುಹಾ ಅವರಿಗೆ ಬಿಜೆಪಿ ರಾಜ್ಯ ಯುವ ಘಟಕ ಕಾನೂನು ನೋಟಿಸ್ ಕಳುಹಿಸಿದ ಕ್ರಮವೂ ಈ ದನಿಯನ್ನು ಉುಡುಗಿಸುವ ಯತ್ನಕ್ಕೆ ಮತ್ತೊಂದು ಉದಾಹರಣೆ. ‘ಗೌರಿ ಗತಿಯೇ ಬರುಬಹುದೆಂಬ ಬಗ್ಗೆ ಸೆಕ್ಯುಲರ್ ಲೇಖಕರಿಗೆ ಎಚ್ಚರವಿರಲಿ’ ಎಂದು ಕೇರಳದಲ್ಲಿ ಹಿಂದೂ ಐಕ್ಯ ವೇದಿ ನಾಯಕಿ ಕೆ.ಪಿ. ಶಶಿಕಲಾ ಅವರು ಹೇಳಿದ ಮಾತುಗಳು ಅಸಹಿಷ್ಣುತೆಯ ಅತಿರೇಕದ ನುಡಿಗಳು. ಗೌರಿ ಲಂಕೇಶ್ ಹತ್ಯೆ, ವಿಶ್ವಸಂಸ್ಥೆಯಲ್ಲೂ ಪ್ರಸ್ತಾಪಗೊಂಡು ‘ಚಳವಳಿಗಾರರಿಗೆ ಭಾರತದಲ್ಲಿ ಬೆದರಿಕೆಯ ವಾತಾವರಣ ಇದೆ’ ಎಂಬಂತಹ ಟೀಕೆ ವ್ಯಕ್ತವಾಗಿತ್ತು. ಇಂತಹ ಸನ್ನಿವೇಶದಲ್ಲಿ ಭಾಗವತ್ ಅವರ ಮಾತುಗಳು ಅತ್ಯಂತ ಪ್ರಸ್ತುತವಾಗುತ್ತವೆ. ಇಂತಹ ಟ್ರಾಲಿಂಗ್‌ಗಳ ಬಗ್ಗೆ ಆರ್‌ಎಸ್‌ಎಸ್ ನಿಜಕ್ಕೂ ಗಂಭೀರವಾಗಿದ್ದಲ್ಲಿ ಅಂತರ್ಜಾಲದಲ್ಲಿ ಈ ವಿಷಕಾರುವಿಕೆ ಕಡಿಮೆಯಾಗಬಹುದು ಎಂದು ಆಶಿಸಬಹುದು.

ತಿನ್ನುವ ಆಹಾರ ಹಾಗೂ ಧರಿಸುವ ಉಡುಪಿನ ಮೇಲೆ ಯಾವುದೇ ನಿರ್ಬಂಧವನ್ನು ಹಿಂದುತ್ವ ಹೇರುವುದಿಲ್ಲ ಎಂದು ಭಾಗವತ್ ಸ್ಪಷ್ಟ ಪಡಿಸಿರುವುದಂತೂ ಅತ್ಯಂತ ಮುಖ್ಯವಾದದ್ದು. ಅಷ್ಟೇ ಅಲ್ಲ ‘ಆರ್‌ಎಸ್‌ಎಸ್‌, ಬಿಜೆಪಿಯನ್ನೇನೂ ನಡೆಸುವುದಿಲ್ಲ. ಬಿಜೆಪಿಯೂ ಸಂಘವನ್ನು ನಡೆಸುವುದಿಲ್ಲ. ಸ್ವಯಂಸೇವಕರಾಗಿ ನಾವು ಸಮಾಲೋಚನೆ ಮಾಡಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಆದರೆ ಕಾರ್ಯ ನಿರ್ವಹಣೆಯಲ್ಲಿ ಸ್ವತಂತ್ರರಾಗಿದ್ದೇವೆ’ ಎಂದು ಭಾಗವತ್ ಹೇಳಿರುವುದು ಮತ್ತೊಂದು ಮಹತ್ವದ ಸಂಗತಿ. ಅದರಲ್ಲೂ ತಮ್ಮದೇ ಆಯ್ಕೆಯ ಯಾವುದೇ ರಾಜಕೀಯ ಪಕ್ಷದಲ್ಲಿ ಕೆಲಸ ಮಾಡಲೂ ಆರ್‌ಎಸ್‌ಎಸ್ ಸದಸ್ಯರಿಗೆ ಅವಕಾಶ ಇದ್ದೇ ಇದೆ ಎಂದು ಹೇಳಿರುವುದಂತೂ ವಿಶೇಷ. ಆರ್‌ಎಸ್‌ಎಸ್ ಸ್ವಯಂಘೋಷಿತ ಸಾಂಸ್ಕೃತಿಕ ಸಂಘಟನೆ. ಇದು ಬಿಜೆಪಿ ಮೇಲೆ ಪ್ರಭಾವ ಹೊಂದಿದೆ. ಬಿಜೆಪಿಯ ಅನೇಕ ಉನ್ನತ ನಾಯಕರು ಆರ್‌ಎಸ್‌ಎಸ್ ಹಿನ್ನೆಲೆ ಹೊಂದಿದ್ದಾರೆ ಎಂಬುದು ಗೊತ್ತಿರುವ ಸಂಗತಿ. ಆದರೆ ಈಗ ಭಾಗವತ್ ಅವರು ಬೇರೆಯದೇ ಮಾತುಗಳನ್ನು ಹೇಳುತ್ತಿದ್ದಾರೆ. ಈ ಉದಾರ ದೃಷ್ಟಿಕೋನ ಹಾಗೂ ಚಿಂತನೆಯು ಆರ್‌ಎಸ್‌ಎಸ್ ಆಲೋಚನಾ ಧಾಟಿಯಲ್ಲಿ ಆಗಿರುವ ಬದಲಾವಣೆಗಳಿಗೆ ಸೂಚಕವೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕು.

ಆರ್‌ಎಸ್‌ಎಸ್‌ಗೆ ಇರುವುದು ಒಂದೇ ಕಾರ್ಯಸೂಚಿ. ಅದು ಹಿಂದೂ ರಾಷ್ಟ್ರ ನಿರ್ಮಾಣ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಈಗ ಈ ಕಾರ್ಯಸೂಚಿಗೆ ವಿರುದ್ಧವಾಗಿರುವಂತಿವೆ ಆರ್‌ಎಸ್‌ಎಸ್ ಮುಖ್ಯಸ್ಥರ ಮಾತುಗಳು. ಹೀಗಾಗಿ ಈ ಚಿಂತನೆ ಬದಲಾದಲ್ಲಿ ಅದು ಸಕಾರಾತ್ಮಕ. ಜಡ ಸಿದ್ಧಾಂತಗಳಿಗೆ ವಿದಾಯ ಹೇಳುವಂತಹದ್ದು. ಕೈಗಾರಿಕಾ ಬೆಳವಣಿಗೆ ಕುಸಿತ, ವಿದೇಶಿ ಹೂಡಿಕೆ ಕುಸಿತವನ್ನು ರಾಷ್ಟ್ರ ಎದುರಿಸುತ್ತಿರುವ ಸಂದರ್ಭದಲ್ಲಿ ದ್ವೇಷ ರಾಜಕಾರಣ ಸಲ್ಲದು. ಎಲ್ಲರನ್ನೂ ಒಳಗೊಳ್ಳುವ ಭಾಗವತ್ ಅವರ ಈ ಸಂದೇಶಗಳು ಎಲ್ಲರನ್ನೂ ತಲುಪಬೇಕು. ‘ಕಾನೂನು ಕೈಗೆತ್ತಿಕೊಳ್ಳುವುದನ್ನು ಕ್ಷಮಿಸಲಾಗದು’ ಎಂದು ಪ್ರಧಾನಿ ನರೇಂದ್ರ ಮೋದಿಯವರೂ ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ. ಈಗ ಭಾಗವತ್ ಅವರ ಮಾತು ಆರ್‌ಎಸ್‌ಎಸ್‌ನ ಅಧಿಕೃತ ನಿಲುವನ್ನು ಹೇಳುತ್ತಿದೆ. ಇದು ವಿಎಚ್‌ಪಿ ಹಾಗೂ ಬಜರಂಗ ದಳದಂತಹ ಹಿಂದುತ್ವ ಸಂಘಟನೆಗಳಿಗೆ ಎಚ್ಚರಿಕೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT