ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡಗಳಿಗೆ ಬಿಸಿ ಮುಟ್ಟಿಸಿದ ನಗರಸಭೆ

Last Updated 15 ಸೆಪ್ಟೆಂಬರ್ 2017, 6:45 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಅಂಬೇಡ್ಕರ್‌ ವೃತ್ತದ ಬಳಿಯ ಫುಟ್‌ಪಾತ್‌ ಮೇಲೆ ನಿರ್ಮಿಸಿದ್ದ ‘ತಾಜ್‌’ ಫಾಸ್ಟ್‌ಫುಡ್‌ ಕೇಂದ್ರವನ್ನು ಗುರುವಾರ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು. ಅಲ್ಲದೇ ಒಂದೆರಡು ಕಡೆಗಳಲ್ಲಿ ಪಾರ್ಕಿಂಗ್‌ ಸ್ಥಳವನ್ನು ಸಹ ಖುಲ್ಲಾಪಡಿಸಿದರು.

ಪೌರಾಯುಕ್ತ ಎಸ್‌.ಯೋಗೇಶ್ವರ್‌ ನೇತೃತ್ವದಲ್ಲಿ ಅಧಿಕಾರಿಗಳು ಬೆಳಿಗ್ಗೆ 7 ಗಂಟೆಗೆ ಜೆಸಿಬಿ ಮೂಲಕ ತೆರವು ಕಾರ್ಯಕ್ಕೆ ಇಳಿದರು. ಪೊಲೀಸ್‌ ಸರ್ಪಗಾವಲಿನಲ್ಲಿ ಮೊದಲಿಗೆ ಫಾಸ್ಟ್‌ಫುಡ್‌ ಕೇಂದ್ರದ ತೆರವಿಗೆ ಕೈ ಹಾಕಿದರು. ಆದರೆ ಕೇಂದ್ರದ ಮಾಲೀಕರು ಯಾವುದೇ ಪ್ರತಿರೋಧ ತೋರಲಿಲ್ಲ. ಬಳಿಕ ಸಿಬ್ಬಂದಿ ಒಳಗಿದ್ದ ಅಡುಗೆ ಸಾಮಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ನಂತರ ಕಟ್ಟಡದ ಮೇಲ್ಚಾವಣಿ ಹಾಗೂ ಗೋಡೆಗಳನ್ನು ಕೆಡವಲಾಯಿತು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು.

ಪಾರ್ಕಿಂಗ್‌ ಸ್ಥಳ ತೆರವು: ಪಿಕಳೆ ರಸ್ತೆಯಲ್ಲಿದ್ದ ಆದಿತ್ಯಾ ಬಿರ್ಲಾ ಗ್ರೂಪ್‌ ‘ಮೋರ್‌’ ಮಳಿಗೆ ಪಕ್ಕದಲ್ಲಿದ್ದ ಪಾರ್ಕಿಂಗ್‌ ಸ್ಥಳವನ್ನು ಖುಲ್ಲಾಪಡಿಸಲಾಯಿತು. ಆ ಜಾಗದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಎಟಿಎಂ ಕೇಂದ್ರ ಸ್ಥಾಪನೆ ಮಾಡಲಾಗಿತ್ತು. ಕೇಂದ್ರ ಬಾಗಿಲನ್ನು ಮುರಿದು ಹಾಕಲಾಯಿತು. ಆದರೆ ಮೆಶಿನ್‌ ಒಳಗೆ ಲಕ್ಷಾಂತರ ರೂಪಾಯಿ ಹಣ ಇದ್ದುದ್ದರಿಂದ ಕೂಡಲೇ ತೆರವು ಮಾಡಲು ಅಧಿಕಾರಿ ಸೂಚಿಸಿದರು.

ವಾಹನ ನಿಲುಗಡೆಗೆ ಸ್ಥಳ ಬಿಡದೇ ನಿರ್ಮಿಸುತ್ತಿದ್ದ ದೋಬಿಘಾಟ್‌ ರಸ್ತೆಯಲ್ಲಿನ ಕಟ್ಟಡವೊಂದನ್ನು ತೆರವು ಮಾಡಲು ಮುಂದಾದಾಗ ಕಟ್ಟಡದ ಮಾಲೀಕರು ತಾವೇ ಅದನ್ನು ಖುಲ್ಲಾಪಡಿಸುತ್ತೇವೆ ಎಂದು ಹೇಳಿದ್ದರಿಂದ ಅಧಿಕಾರಿಗಳು ಸುಮ್ಮನಾದರು.

‘ನಗರದಲ್ಲಿ ಅನೇಕ ಕಟ್ಟಡಗಳನ್ನು ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ. ನೀಲನಕ್ಷೆಗೆ ತದ್ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಅಮರನಾರಾಯಣ ಜಿಲ್ಲಾಧಿಕಾರಿ ಇದ್ದಾಗ ನಿಯಮ ಬಾಹಿರವಾದ ಒಟ್ಟು 32 ಕಟ್ಟಡಗಳನ್ನು ಗುರುತಿಸಿದ್ದರು.

ಇದೀಗ ಹೊಸದಾಗಿ 8 ಕಟ್ಟಡಗಳನ್ನು ಗುರುತಿಸಿದ್ದು, ಎಲ್ಲರಿಗೂ ಅತಿಕ್ರಮಣವನ್ನು ತೆರವುಗೊಳಿಸಲು ನೋಟಿಸ್‌ ನೀಡಲಾಗಿತ್ತು. ಮೂವರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದ್ದರು. ಇನ್ನಿಬ್ಬರು ನೀಲನಕ್ಷೆಗೆ ಬದಲಾವಣೆ ಕೋರಿ ಕಾರವಾರ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಡಿಎ) ಅರ್ಜಿ ಸಲ್ಲಿಸಿದ್ದಾರೆ. ಉಳಿದ ಮೂರು ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಎಸ್‌.ಯೋಗೇಶ್ವರ್‌  ತಿಳಿಸಿದರು.

ಪಾರ್ಕಿಂಗ್‌ ಸ್ಥಳವನ್ನು ಬಿಡದೇ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ಉಲ್ಲಂಘನೆ ಮಾಡಿ ನಿರ್ಮಿಸಿದ ಎಲ್ಲ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವು ಮಾಡಲಿದ್ದೇವೆ’ ಎಂದು ತಿಳಿಸಿದರು.

* * 

ನಿಯಮ ಬಾಹಿರವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ತೆರವುಗೊಳಿಸಲಾಗುವುದು.
ಎಸ್‌.ಯೋಗೇಶ್ವರ್‌
ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT