ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟಕ್ಕೆ ‘ಸಾರವರ್ಧಿತ ಅಕ್ಕಿ’ ಬಳಕೆ

Last Updated 15 ಸೆಪ್ಟೆಂಬರ್ 2017, 7:02 IST
ಅಕ್ಷರ ಗಾತ್ರ

ಬೆಳಗಾವಿ: ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟಕ್ಕೆ ಒದಗಿಸುವ ಅಕ್ಕಿಯೊಂದಿಗೆ ‘ಸಾರವರ್ಧಿತ ಅಕ್ಕಿ’ (ಫೋರ್ಟಿಫೈಡ್‌ ರೈಸ್) ಮಿಶ್ರಣ ಮಾಡಿ ಬಳಸುವ ಪ್ರಯೋಗವನ್ನು ಜಿಲ್ಲೆಯಲ್ಲೂ ಆರಂಭಿಸಲು ಸಿದ್ಧತೆ ನಡೆದಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಸ್ಕಾನ್‌ನ ಅಕ್ಷಯಪಾತ್ರೆ ಪ್ರತಿಷ್ಠಾನದಿಂದ ಪೂರೈಸುವ ಬಿಸಿಯೂಟದಲ್ಲಿ ಬಳಸುವ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿ ಹಾಕಲಾಗುತ್ತಿದೆ. ಇದೀಗ, ರಾಜ್ಯ ಸರ್ಕಾರವೂ ಬಳಸುವುದಕ್ಕೆ ಉದ್ದೇಶಿಸಿದೆ. ಇದಕ್ಕಾಗಿ ಬೆಳಗಾವಿ, ಕೊಪ್ಪಳ, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಕೇಂದ್ರೀಕೃತ ಅಡುಗೆ ಮನೆ ನಿರ್ಮಿಸಿ, ಅಲ್ಲಿ ಸಾರವರ್ಧಿತ ಅಕ್ಕಿ ಬಳಕೆ ಮಾಡಲಾಗುವುದು. ಇದಕ್ಕಾಗಿ,  ₹ 25 ಕೋಟಿ ಅನುದಾನ ನೀಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ದೊರೆತಿದೆ.

ಏನಿದು ಸಾರವರ್ಧಿತ ಅಕ್ಕಿ?
ದೇಹಕ್ಕೆ ಅಗತ್ಯವಿರುವ ವಿಟಮಿನ್‌ ಮತ್ತು ಕಬ್ಬಿಣದ ಅಂಶಗಳನ್ನು ಒಳ­ಗೊಂಡಿರುವ ಅಕ್ಕಿಯನ್ನು ಸಾರವರ್ಧಿತ ಅಕ್ಕಿ ಎಂದು ಕರೆಯಲಾಗುತ್ತದೆ. ಭತ್ತದಿಂದ ಅಕ್ಕಿ ಸಿದ್ಧ ಮಾಡುವಾಗಲೇ ವಿಟಮಿನ್‌­ಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತದೆ. ಈ ಅಕ್ಕಿಯನ್ನು ನಿತ್ಯ ಬಳಕೆಯ ಅಕ್ಕಿಯೊಂದಿಗೆ ಇಂತಿಷ್ಟು ಪ್ರಮಾಣದಲ್ಲಿ ಬೆರೆಸಿ ಅನ್ನ ಮಾಡಿ ಬಡಿಸಲಾಗುತ್ತದೆ. ಸಾರವರ್ಧಿತ ಅಕ್ಕಿಯನ್ನು ಸಾಮಾನ್ಯ ಅಕ್ಕಿ­ಯೊಂದಿಗೆ ಮಿಶ್ರಣ ಮಾಡುವುದ­ಕ್ಕಾಗಿಯೇ ಅಡುಗೆ ಮನೆ­ಗಳಲ್ಲಿ ಯಂತ್ರಗಳನ್ನು ಅಳವ­­­ಡಿಸಲಾಗುತ್ತದೆ. ಇದಕ್ಕಾಗಿಯೇ ಕೇಂದ್ರೀಕೃತ ಅಡುಗೆ ಮನೆ ನಿರ್ಮಿಸಲಾಗುವುದು.

ವಿಟಮಿನ್‌ ಮತ್ತು ಕಬ್ಬಿಣದ ಅಂಶ ಒಳಗೊಂಡ ಈ ಅಕ್ಕಿ ಬಳಕೆಯ ಪ್ರಯೋಗದಿಂದ ಮಕ್ಕಳಲ್ಲಿ ಪೌಷ್ಟಿಕಾಂಶಗಳ ಕೊರತೆ ಹೋಗಲಾಡಿಸುವ ಉದ್ದೇಶವನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ ಮುಂಬೈನ ‘ಪಾಥ್’ ಸಂಸ್ಥೆಯ ಜತೆಗೂಡಿ ಸಾರವರ್ಧಿತ ಅಕ್ಕಿಯನ್ನು ಒದಗಿಸಲಾಗುವುದು.

ಪರೀಕ್ಷಿಸುವ ಉದ್ದೇಶ: ‘ಪ್ರಸ್ತುತ ಇಸ್ಕಾನ್‌ನಿಂದ ಬಿಸಿಯೂಟ ಪೂರೈಸುವಲ್ಲಿ ಸಾರವರ್ಧಿತ ಅಕ್ಕಿ ಬಳಸಲಾಗುತ್ತಿದೆ. ಸರ್ಕಾರದಿಂದಲೂ ಈ ಯೋಜನೆ ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಬೆಳಗಾವಿಯನ್ನೂ ಆಯ್ಕೆ ಮಾಡಲಾಗಿದೆ.

ಈ ಸಂಬಂಧ ಚರ್ಚಿಸಲು ಮುಂಬೈನ ಎನ್‌ಜಿಒ ‘ಪಾಥ್‌’ನ ಪ್ರತಿನಿಧಿಗಳು, ಬೆಂಗಳೂರು ಹಾಗೂ ನವದೆಹಲಿಯ ಅಧಿಕಾರಿಗಳು ಆಗಮಿಸಿದ್ದರು. ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಅಪೌಷ್ಟಿಕತೆ ನಿವಾರಿಸಲು ಬಿಸಿಯೂಟಕ್ಕೆ ಬಳಸುವ ಅಕ್ಕಿ ಜತೆಗೆ ಸಾರವರ್ಧಿತ ಅಕ್ಕಿಯನ್ನೂ ಬಳಸಲಾಗುವುದು. ಜನವರಿ ವೇಳೆಗೆ ಇದು ಆರಂಭವಾಗಬಹುದು’ ಎಂದು ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿಕಾರಿ ಬಸವರಾಜ ಎಚ್‌. ಮಿಲ್ಲಾನಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬಿಸಿಯೂಟಕ್ಕೆ ಬಳಸುವ ಕ್ವಿಂಟಲ್‌ ಅಕ್ಕಿಯೊಂದಿಗೆ ಒಂದು ಕೆ.ಜಿ. ಸಾರವರ್ಧಿತ ಅಕ್ಕಿ ಮಿಶ್ರಣ ಮಾಡಲಾಗುವುದು. ಅದನ್ನು ಸೇವಿಸುವ ಮಕ್ಕಳ ದೈಹಿಕ ಬೆಳವಣಿಗೆ, ತೂಕ ಹಾಗೂ ಎತ್ತರವನ್ನು ಪರೀಕ್ಷಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಹೇಳಿದರು.

ಎರಡು ಗೋದಾಮುಗಳಲ್ಲಿ:  ‘ಪ್ರಸ್ತುತ ಆಹಾರ ನಿಗಮದಿಂದ ಪೂರೈಕೆಯಾದ ಅಕ್ಕಿಯನ್ನು ಜಿಲ್ಲಾಧಿಕಾರಿ ಹಂಚಿಕೆ ಮಾಡಿದ ನಂತರ ಗೋದಾಮಿಗೆ ಕಳುಹಿಸಲಾಗುತ್ತದೆ. ಅಲ್ಲಿ, ಶಾಲೆಗಳ ಅವಶ್ಯಕತೆಗೆ ಅನುಗುಣವಾಗಿ ಸರಬರಾಜು ಮಾಡಲಾಗುತ್ತದೆ. ಸಾರವರ್ಧಿತ ಅಕ್ಕಿ ಮಿಶ್ರಣ ಕಾರ್ಯಕ್ರಮ ಆರಂಭವಾದಲ್ಲಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಐದು ತಾಲ್ಲೂಕುಗಳಿಗೆ ನಿಪ್ಪಾಣಿ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ತಾಲ್ಲೂಕುಗಳಿಗೆ ಬೆಳಗಾವಿ ಎಪಿಎಂಸಿ ಗೋದಾಮಿನಿಂದ ಕೇಂದ್ರೀಕೃತವಾಗಿ ಪೂರೈಸಲು ಯೋಜಿಸಲಾಗಿದೆ. ಅಲ್ಲಿಂದ ತಾಲ್ಲೂಕು ಗೋದಾಮುಗಳ ಮೂಲಕ ಶಾಲೆಗಳಿಗೆ ರವಾನಿಸಲಾಗುವುದು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಪ್ರಯೋಜನ ದೊರೆಯಲಿದೆ’ ಎನ್ನುತ್ತಾರೆ ಅವರು.

ಜಿಲ್ಲೆಯಲ್ಲಿ ಒಟ್ಟು 4,049 ಅಡುಗೆ ಕೇಂದ್ರಗಳಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 6,30,681 ಮಕ್ಕಳು ದಾಖಲಾಗಿದ್ದಾರೆ. ಸರಾಸರಿ 5,85,953 ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ನಿತ್ಯ 5,58,501 ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದಾರೆ.

* * 

ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಸಾರವರ್ಧಿತ ಅಕ್ಕಿ ಬಳಸುವ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ
ಬಸವರಾಜ ಎಚ್‌. ಮಿಲ್ಲಾನಟ್ಟಿ
ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT