ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಕ್ಕೇ ಸವಾಲು ಹಾಕಿ ಗೆದ್ದ ರೈತ

Last Updated 15 ಸೆಪ್ಟೆಂಬರ್ 2017, 8:42 IST
ಅಕ್ಷರ ಗಾತ್ರ

ಚಾಮರಾಜನಗರ: ಏಪ್ರಿಲ್‌ ತಿಂಗಳಿನಲ್ಲಿ ಬಿದ್ದ ಮಳೆ ನಂಬಿ ಸೂರ್ಯಕಾಂತಿ ಮತ್ತು ಜೋಳ ಬೆಳೆದ ಜಿಲ್ಲೆಯ ಬಹುತೇಕ ರೈತರು ನಷ್ಟ ಅನುಭವಿಸಿದ್ದಾರೆ. ಆದರೆ, ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ ಗ್ರಾಮದ ಹಿರಿಯ ಕೃಷಿಕ ಮದ್ದಾನಪ್ಪ ಬರದ ನಡುವೆಯೂ ಸೂರ್ಯಕಾಂತಿ ಬೆಳೆದು ಮಾದರಿಯಾಗಿದ್ದಾರೆ.

ಪಕ್ಕದ ರೈತರ ಹೊಲದಲ್ಲಿನ ಸೂರ್ಯ ಕಾಂತಿ ಕಾಳುಕಟ್ಟದೆ ಬಿಸಿಲ ಝಳಕ್ಕೆ ಸುಟ್ಟುಹೋಗಿದ್ದರೆ, ಮದ್ದಾನಪ್ಪನ ಜಮೀನಿನಲ್ಲಿ ಸೂರ್ಯಕಾಂತಿ ಜೀವಕಳೆ ತುಂಬಿಕೊಂಡು ನಳನಳಿಸುತ್ತಿತ್ತು. ತಾಲ್ಲೂಕಿನ ರೈತರು ನೀರಿಲ್ಲದೆ ಬೆಳೆ ಒಣಗಿದೆ ಎಂದು ಪರಿತಪಿಸುತ್ತಿರುವಾಗ ಬಿದ್ದ ಅಲ್ಪಸ್ವಲ್ಪ ಮಳೆ ನೀರನ್ನೇ ಹಿಡಿದಿಟ್ಟುಕೊಂಡ ಮದ್ದಾನಪ್ಪ ಬಂಪರ್‌ ಬೆಳೆ ಬೆಳೆದಿದ್ದಾರೆ. ಅಲ್ಲದೇ, 4 ಎಕರೆ ಜಮೀನಿನಲ್ಲಿ 32 ಕ್ವಿಂಟಲ್‌ ಬೆಳೆ ನಿರೀಕ್ಷಿಸಿದ್ದಾರೆ ಅವರು.

ಸೂರ್ಯಕಾಂತಿ ಮಾತ್ರವಲ್ಲದೆ, ಸುಮಾರು 16 ಎಕರೆ ಜಮೀನಿನಲ್ಲಿ  ಬೆಳೆದಿರುವ ಅರಿಸಿನ, ಬಾಳೆ, ಮುಸುಕಿನ ಜೋಳ, ತೆಂಗಿನ ಜತೆಗೆ ಮನೆಗೆ ಸಾಲುವಷ್ಟು ಮೆಣಸಿನ ಕಾಯಿ, ಉದ್ದು, ಹುರುಳಿ, ತೊಗರಿ, ರಾಗಿ, ಹೀಗೆ ವೈವಿಧ್ಯಮಯ ಸಮ್ಮಿಶ್ರ ಬೆಳೆಗಳು ಈ ಬಾರಿ ಮದ್ದಾನಪ್ಪ ಅವರ ಮುಖವನ್ನರಳಿಸಿವೆ. ಸದ್ಯಕ್ಕೆ ಮಳೆಬಾರದೆ ಇದ್ದರೂ ಜೋಳ ಮತ್ತು ರಾಗಿ ಬೆಳೆ ತೆಗೆಯಲು ಅಡ್ಡಿಯಿಲ್ಲ. ಅದಕ್ಕೆ ಸಾಲುವಷ್ಟು ನೀರಿದೆ ಎಂಬ ನೆಮ್ಮದಿ ಅವರಲ್ಲಿದೆ.

ನೆರವಾದ ಕೃಷಿ ಹೊಂಡ: ತಾಲ್ಲೂಕಿನ ಇತರೆ ರೈತರಂತೆ ಮದ್ದಾನಪ್ಪ ಕೂಡ ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದವರು. ಬರಗಾಲದ ಭೀಕರತೆಗೆ ಸಾಕ್ಷಿಯಾಗಿ ಒಣಗಿನಿಂತ ಅವರ ತೆಂಗಿನ ತೋಟವಿದೆ. ಅದರ ನಡುವೆಯೇ ಈಗ ಬಾಳೆ, ಅರಿಸಿನಗಳು ತಲೆ ಎತ್ತಿವೆ. ಇತ್ತೀಚಿನ ದಿನದವರೆಗೂ ಅವರು ಬ್ಯಾಂಕ್‌ ಒಳಹೊಕ್ಕವರಲ್ಲ. ಕೃಷಿ ಇಲಾಖೆಯಿಂದ ದೊರಕುವ ಸಹಾಯ ಧನ ಪಡೆದುಕೊಳ್ಳುವ ಸಲುವಾಗಿ ಬ್ಯಾಂಕ್‌ ಖಾತೆ ಮಾಡಿಸಿಕೊಂಡಿದ್ದಾರೆ.

21*21 ಮೀಟರ್‌ ಅಳತೆಯ 10 ಅಡಿ ಆಳದ ಕೃಷಿ ಹೊಂಡ ಈ ಬಾರಿ ಅವರ ನೀರಿನ ಅಭಾವವನ್ನು ನೀಗಿಸಿದೆ. ಕೃಷಿ ಇಲಾಖೆಯಿಂದ ಹೊಂಡ ನಿರ್ಮಾಣ, ಪಾಲಿಥಿನ್‌ ಹೊದಿಕೆ, ಡೀಸೆಲ್‌ ಪಂಪ್‌ಸೆಟ್‌ ಮತ್ತು ಸಲಕರಣೆಗಳ ಖರೀದಿಗೆ ದೊರೆಯುವ ಸಹಾಯಧನವನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

ಇನ್ನೊಂದು ಭಾಗದಲ್ಲಿ ನೀರಿಲ್ಲದೆ ಸಂಪೂರ್ಣ ಬತ್ತಿದ್ದ ತೆರೆದ ಬಾವಿಯನ್ನೂ ಮದ್ದಾನಪ್ಪ ನೀರು ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅಂತರ್ಜಲಮಟ್ಟ ವೃದ್ಧಿಸಿದ್ದು, ಕೊಳವೆಬಾವಿಗಳಲ್ಲಿಯೂ ಉತ್ತಮ ನೀರು ಸಿಗುತ್ತಿದೆ ಎನ್ನುತ್ತಾರೆ ಅವರು. ಚರಂಡಿಯಲ್ಲಿ ಹರಿಯುವ ಮಳೆ ನೀರನ್ನು ತಮ್ಮ ಜಮೀನಿನೊಳಗಿನ ತೆರೆದ ಬಾವಿ ಮತ್ತು ಕೃಷಿಹೊಂಡಕ್ಕೆ ಹರಿಯುವಂತೆ ವ್ಯವಸ್ಥೆ ಮಾಡಿದ್ದಾರೆ.

ರಾಸಾಯನಿಕದಿಂದ ಸಾವಯವಕ್ಕೆ: 40 ವರ್ಷಕ್ಕೂ ಅಧಿಕ ಕೃಷಿ ಅನುಭವ ಹೊಂದಿರುವ ಮದ್ದಾನಪ್ಪ, ಬಹುತೇಕ ರೈತರಂತೆ ಹಿಂದೆ ರಸಗೊಬ್ಬರ, ಕೀಟನಾಶಕಗಳ ಬಳಕೆ ಮಾಡಿದ್ದರು. ‘ಆಗ ಮಳೆ ಚೆನ್ನಾಗಿ ಆಗುತ್ತಿ ದ್ದರಿಂದ ರಸಗೊಬ್ಬರಗಳ ದುಷ್ಪರಿ ಣಾಮ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಮಳೆ ಕೈಕೊಟ್ಟ ಬಳಿಕ ರಾಸಾಯ ನಿಕಗಳು ಬೆಳೆಯನ್ನು ಸಂಪೂರ್ಣ ಸುಡತೊಡಗಿದವು. ಈಗ ಹಂತಹಂತ ವಾಗಿ ಸಾವ ಯವಕ್ಕೆ ಮರಳುತ್ತಿದ್ದೇವೆ. ಜೀವಾಮೃತ, ಪಂಚಗವ್ಯ, ಎರೆಹುಳುಗೊಬ್ಬರಗಳನ್ನು ನಾವೇ ತಯಾರಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಒಂದು ಕಾಲದಲ್ಲಿ ಹಿಪ್ಪುನೇರಳೆ ಬೆಳೆಗೆ ಈ ಭಾಗದಲ್ಲಿ ಭಾರಿ ಬೇಡಿಕೆ ಇತ್ತು. ನಿಧಾನವಾಗಿ ರೇಷ್ಮೆ ಉತ್ಪಾದನೆಯೇ ಇಲ್ಲಿ ಮರೆಯಾಯಿತು. ನಾನು ನೋಡುತ್ತಿರುವಂತೆಯೇ ಕೃಷಿ ಚಟುವಟಿಕೆಗಳಲ್ಲಿ ಇಲ್ಲಿ ದೊಡ್ಡ ಬದಲಾವಣೆಯೇ ಆಗುತ್ತಿದೆ’ ಎಂದು ಹೇಳಿದರು.

‘ಮದ್ದಾನಪ್ಪ ಅವರಿಗೆ ಇಲಾಖೆಯಿಂದ ಕೃಷಿ ಹೊಂಡ ನಿರ್ಮಾಣಕ್ಕೆ ₹52,300, ಟಾರ್ಪಲ್‌ಗೆ ₹53,500, ಸ್ಪ್ರಿಂಕ್ಲರ್‌ಗೆ ₹17,640 ಮತ್ತು ಡೀಸೆಲ್‌ ಪಂಪ್‌ಸೆಟ್‌ಗೆ ₹15,000 ಸಹಾಯಧನ ನೀಡಲಾಗಿದೆ. ಅವರು ಸ್ವಂತದಿಂದ ₹33,000 ಖರ್ಚು ಮಾಡಿದ್ದಾರಷ್ಟೆ’ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಜಿ.ಎಚ್‌. ಯೋಗೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT