ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆಳಿಗೆ ಜೀವ ಕಳೆ ತಂದ ವರುಣ

Last Updated 15 ಸೆಪ್ಟೆಂಬರ್ 2017, 8:52 IST
ಅಕ್ಷರ ಗಾತ್ರ

ಅರಸೀಕೆರೆ: ಮೂರು ವರ್ಷಗಳಿಂದ ಬರದಿಂದ ಕಂಗಾಲಾಗಿದ್ದ ರೈತರ ಬದುಕಿಗೆ ಈ ಬಾರಿ ರಾಗಿ ಬೆಳೆಯ ಮೂಲಕ ಸುಗ್ಗಿ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿದೆ. ವರಣ ಕೃಪೆ ತೋರಿದರೆ ದೀಪಾವಳಿಯ ಬೆಳಕು ರೈತರ ಮೊಗದಲ್ಲಿ ಮಿನುಗುವ ಸಾಧ್ಯತೆ ಇದೆ.

ತಾಲ್ಲೂಕಿನಾದ್ಯಂತ ಮಳೆಯ ಅಭಾವದಿಂದ ಎರಡು ವರ್ಷಗಳಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಲ್ಲದೆ ರೈತರು ತೊಂದರೆ ಅನುಭವಿಸಿದರು. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕೃಷಿ ಕೂಲಿ ಕಾರ್ಮಿಕರು ಕೆಲಸ ಅರಸಿ ನಗರ ಪ್ರದೇಶಗಳತ್ತ ವಲಸೆ ಹೋದರೆ, ಜಾನುವಾರುಗಳನ್ನು ಕಾಪಾಡಿಕೊಳ್ಳಲಾಗದೇ ಬಹಳಷ್ಟು ರೈತರು ಜಾನುವಾರುಗಳನ್ನು ಮಾರಾಟ ಮಾಡಿದ್ದರು.

ಇಂತಹ ಸಂದರ್ಭದಲ್ಲಿ ಅರಸೀಕೆರೆ ತಾಲ್ಲೂಕಿನಾದ್ಯಂತ ಸೆಪ್ಪೆಂಬರ್‌ ಮೊದಲ ವಾರ 4–5 ದಿನ ಸುರಿದ ಮಳೆಗೆ ಬಳಲಿ ಬಾಡಿ ಹೋಗಿದ್ದ ರಾಗಿ, ಸಾವೆ, ಅವರೆ ಮೊದಲಾದ ಬೆಳೆಗಳಿಗೆ ಜೀವಕಳೆ ತುಂಬಿತು. ಈ ಬಾರಿ ರೈತರ ಜೇಬಿಗೆ ಕಾಸು ಹೊಟ್ಟೆಗೆ ಹಿಟ್ಟು ಮತ್ತು ಜಾನುವಾರುಗಳಿಗೆ ಮೇವು ಸಿಗುವ ಭರವಸೆ ಮೂಡಿಸಿದೆ.

ಪ್ರಕೃತಿಯ ಅವಕೃಪೆಗೆ ತುತ್ತಾಗಿ ತೆಂಗು ಬೆಳೆ ಇಡೀ ತಾಲ್ಲೂಕಿನಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮುಂಗಾರು ವೈಫಲ್ಯದಿಂದ ಹೆಸರು ಜೋಳ, ಸೂರ್ಯಕಾಂತಿ, ಎಳ್ಳು ಬಿತ್ತಿದ್ದ ರೈತರು ಬೆಳೆ ಬಾರದೇ ಅವುಗಳನ್ನು ಉಳುಮೆ ಮಾಡಿ ರಾಗಿ ಬಿತ್ತನೆ ಮಾಡಿದ್ದರು. ಆದರೆ ರಾಗಿ ಬಿತ್ತನೆಯಾದ ಸಂದರ್ಭದಲ್ಲಿ ಬೆಳೆ ಎದ್ದು ನಿಂತಿತ್ತು. ವಾರದಿಂದ ಸುರಿದ ಹುಬ್ಬಾ ಮಳೆ ರೈತರ ಆತಂಕ ದೂರ ಮಾಡಿ ಹೊಸ ಭರವಸೆ ಮೂಡಿಸಿದೆ.

‘ಉತ್ತರೆ ಮಳೆ ಬಂದರೆ ರಾಗಿ ಬೆಳೆ ರೈತರ ಕಣ ಸೇರುವುದು ನಿಶ್ಚಿತ’ ಎಂದು ಬೊಮ್ಮೆನಹಳ್ಳಿಯ ಹಿರಿಯ ರೈತ ಪರಮಶಿವಯ್ಯ ಹೇಳುತ್ತಾರೆ. ‘ತಾಲ್ಲೂಕಿನಲ್ಲಿ 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ತೆಂಗು, ಅಡಿಕೆ ಇದೆ. ರೈತರ ಬಳಿ ತಿನ್ನಲು ರಾಗಿ ಇಲ್ಲ, ಅಲ್ಲದೆ ಜಾನುವಾರುಗಳಿಗೆ ಮೇವಿನ ಅಭಾವ ಇರುವುದರಿಂದ ಈ ಬಾರಿ ರಾಗಿ ಬೆಳೆ ಕಡೆ ರೈತರು ಮುಖ ಮಾಡಿದ್ದಾರೆ. ಅಲ್ಪ, ಸ್ವಲ್ಪ ಬಿದ್ದ ಮಳೆಗೆ ಗುರಿ ಮೀರಿ ರಾಗಿ ಬಿತ್ತನೆ ಮಾಡಿದ್ದಾರೆ’ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT