ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮದು ನೀತಿ: ಸಂಸದರೊಂದಿಗೆ ಚರ್ಚೆ

Last Updated 15 ಸೆಪ್ಟೆಂಬರ್ 2017, 8:55 IST
ಅಕ್ಷರ ಗಾತ್ರ

ಮಡಿಕೇರಿ: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿ ವಿರುದ್ಧದ ಆರೋಪ ಸಾಬೀತಾಗುವ ಮೊದಲೇ ಒಬ್ಬರ ಮೇಲೆ ಗೂಬೆ ಕೂರಿಸಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸಕ್ಕೆ ಕಾಂಗ್ರೆಸ್‌ ಕೈಹಾಕಿದ್ದು, ಅವರ ನಿರ್ಧಾರ ಸರಿಯಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್ ಎಚ್ಚರಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಯೆಟ್ನಾಂನಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಮದಾಗುತ್ತಿರುವ ಕಾಳುಮೆಣಸನ್ನು ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಗೆ ಪಕ್ಷದಿಂದ ಎಲ್ಲ ಸಹಕಾರವನ್ನೂ ನೀಡಲಾಗುವುದು ಎಂದರು.

ಕಾಂಗ್ರೆಸ್‌ ನಾಯಕರು ರಾಜಕೀಯ ದುರುದ್ದೇಶದಿಂದ ಆರೋಪ ಮಾಡುವುದು ಸರಿಯಲ್ಲ; ಬೆಳೆಗಾರರ ಹಿತದೃಷ್ಟಿಯಿಂದ ತನಿಖೆಗೆ ಅವಕಾಶ ಆಗಬೇಕು. ಸೂಕ್ತ ತನಿಖೆಗೆ ಪಕ್ಷ ಮರೆತು ಎಲ್ಲರೂ ಸಹಕಾರ ನೀಡಬೇಕು ಎಂದು ಭಾರತೀಶ್‌ ಮನವಿ ಮಾಡಿದರು.

ರೈತರ ಪರವಾಗಿ ಆಡಳಿತ ಮಂಡಳಿಯಿದೆ: ವಿರೋಧ ಪಕ್ಷದ ಸದಸ್ಯರು ಆಡಳಿತ ಮಂಡಳಿಯನ್ನು ಕೆಳಗಿಳಿಸುವ ತಂತ್ರಗಾರಿಕೆಯ ಸಲುವಾಗಿ ರೈತರಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಆಮದು ಪ್ರಕ್ರಿಯೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿಯೇ ನಡೆದಿತ್ತು.

ರಾಷ್ಟ್ರೀಯ ಆಮದು ನೀತಿ ಸಂಬಂಧ ಕಾನೂನಾತ್ಮಕ ಸಲಹೆ, ಮಾಹಿತಿಗಳನ್ನು ಪಡೆಯುವ ಮುನ್ನ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆದ್ದರಿಂದ, ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳೀಯ ಶಾಸಕರ ಸಹಕಾರದಲ್ಲಿ ಕೇಂದ್ರದ ಆಮದು ನೀತಿಯ ಬಗ್ಗೆ ಇರುವ ಗೊಂದಲಗಳಿಗೆ ಮುಕ್ತ ಚರ್ಚೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕಂಠಿ ಕಾರ್ಯಪ್ಪ ಅವರು ಈಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆಪಾದಿಸಿ ಅವರ ಸದಸ್ಯತ್ವ ರದ್ದತಿಗೆ ಕೆಲವು ಹಿಂದೂ ವಿರೋಧಿ ಸಂಘಟನೆಗಳು ಆಗ್ರಹಿಸುತ್ತಿವೆ. ಭಾಷಣ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ದಾರಿ ಮಾಡುವ ಹುನ್ನಾರಗಳು ನಡೆಯುತ್ತಿವೆ. ಇಂತಹ ಕೆಲಸಕ್ಕೆ ಯಾರೂ ಕೈಹಾಕಬಾರದು ಎಂದು ಕೋರಿದರು.

24 ಗಂಟೆಯ ಗಡುವು: ತಾಲ್ಲೂಕಿನ ನಾಪೋಕ್ಲು ಸಮೀಪದ ಕಕ್ಕಬ್ಬೆಯ ಭಗವತಿ ದೇವಾಲಯದ ಪ್ರವೇಶ ದ್ವಾರಕ್ಕೆ ದನದ ಕಾಲು ನೇತು ಹಾಕಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಬಂಧನಕ್ಕೆ 24 ಗಂಟೆ ಗಡುವು ನೀಡಲಾಗುವುದು; ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ, ಪಕ್ಷದ ಜಿಲ್ಲಾ ವಕ್ತಾರ ಸುಬ್ರಮಣಿ ಉಪಾಧ್ಯಾಯ, ಲೋಕೇಶ್, ರವಿ ಕಾಳಪ್ಪ, ರಾಬಿನ್ ದೇವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT