ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕ್ರೀಡಾಂಗಣದಲ್ಲಿ ಶೌಚಾಲಯವೇ ಇಲ್ಲ!

Last Updated 15 ಸೆಪ್ಟೆಂಬರ್ 2017, 10:03 IST
ಅಕ್ಷರ ಗಾತ್ರ

ಹೊಸನಗರ: ಸಾವಿರಾರು ಕ್ರೀಡಾಪಟುಗಳು ಆಟವಾಡುವ ಪಟ್ಟಣದ ಹೃದಯ ಭಾಗದಲ್ಲಿರುವ ನೆಹರೂ ಕ್ರೀಡಾಂಗಣದಲ್ಲಿ ಸಾಮೂಹಿಕ ಶೌಚಾಲಯವೇ ಇಲ್ಲ!
ಸುಮಾರು 40 ಕಿ.ಮೀ ದೂರದ ಯಡೂರು, ಅರಸಾಳು, ಕೆಂಚನಾಳ, ನಿಟ್ಟೂರು ಗ್ರಾಮಗಳಿಂದ ಮಕ್ಕಳು ಬೆಳಿಗ್ಗೆ 6 ಗಂಟೆ ಬಸ್‌ ಹತ್ತಿ ಕ್ರೀಡಾಕೂಟಕ್ಕೆ ಬಂದಿದ್ದಾರೆ. ಆದರೆ, ಬೆಳಗಿನ ನಿತ್ಯವಿಧಿಗೆ ಹೋಗಲು ಶೌಚಾಲಯವೇ ಇಲ್ಲ ಎಂಬುದು ಹೊರಗಿನಿಂದ ಬಂದ ಬಹುತೇಕ ಶಿಕ್ಷಕರ ಹಾಗೂ ಕ್ರೀಡಾಪಟುಗಳ ದೂರು.

ರಾಜ್ಯಮಟ್ಟದಿಂದ ಹಿಡಿದು ತಾಲ್ಲೂಕು, ವಲಯ ಮಟ್ಟದ ಕ್ರೀಡಾಕೂಟ ಇಲ್ಲಿ ನಡೆಯುತ್ತದೆ. ಆದರೆ, ಕೀಡಾಪಟುಗಳು ಆಡುವುದನ್ನು ಬಿಟ್ಟು ಶೌಚಾಲಯ ಹುಡುಕಿಕೊಂಡು ದೂರದ ಖಾಸಗಿ ಬಸ್ ನಿಲ್ದಾಣಕ್ಕೆ ಓಡುವ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಶಿಕ್ಷಕ ಹರೀಶ.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿ ಒಳಗೆ ಒಂದೇ ಶೌಚಾಲಯವಿದ್ದು, ಅದೂ ಗಬ್ಬೆದ್ದು ನಾರುತ್ತಿದೆ. ಅದನ್ನು ಬಳಸಲು ಆಟಗಾರರು ಸರದಿಯಲ್ಲಿ ನಿಲ್ಲಬೇಕಾಗಿದೆ.

ಕುಡುಕರ ಅಡ್ಡೆ:
ಕ್ರೀಡಾಂಗಣವು ಹಗಲು ಹೊತ್ತಿನಲ್ಲಿ ಕ್ರೀಡಾಪಟುಗಳಿಂದ ಕೂಡಿದ್ದರೆ, ಸಂಜೆಯ ಬಳಿಕ ಇದು ಕುಡುಕರ ಅಡ್ಡೆ ಆಗುತ್ತಿದೆ ಎಂಬುದು ನಾಗರಿಕರ ದೂರು. ವೀಕ್ಷಕರ ಗ್ಯಾಲರಿ ಮೇಲೆ ಹಾಗೂ ಸುತ್ತಲಿನ ಮರಗಳ ಕೆಳಗೆ ಕುಡುಕರು ಬಂದು ಮೋಜು ಮಸ್ತಿ ಮಾಡುತ್ತಾರೆ. ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಉಪಯೋಗವಾಗಿಲ್ಲ ಎಂಬುದು ಸುತ್ತಲಿನ ಮನೆಯವರ ಆರೋಪ.ಕ್ರೀಡಾಂಗಣದ ಒಳಗೆ ಬಿದ್ದಿರುವ ಒಡೆದ ಮದ್ಯ ಬಾಟಲಿಗಳ ಚೂರುಗಳಿಂದ ಕ್ರೀಡಾಪಟುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ನಿದರ್ಶನವೂ ಇದೆ.

ಕ್ರೀಡಾಂಗಣ ಯಾರಿಗೆ ಸೇರಿದ್ದು?:
ಪಟ್ಟಣದ ನೆಹರೂ ಕ್ರೀಡಾಂಗಣವು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೇರಿದೆಯೇ ಅಥವಾ ಪಟ್ಟಣ ಪಂಚಾಯ್ತಿಗೆ ಸೇರಿದೆಯೇ ಎಂಬುದರ ಬಗ್ಗೆ ಇನ್ನೂ ಜಿಜ್ಞಾಸೆ ಇದೆ. ಕ್ರೀಡಾಂಗಣದ ಸುತ್ತಲೂ ದೀಪ ಇಲ್ಲ. ರಾತ್ರಿ ಇಲ್ಲಿ ಸಂಪೂರ್ಣ ಕತ್ತಲೆಮಯ. ಬೇಲಿ ಮುರಿದು ಹೋಗಿದೆ. ಕ್ರೀಡಾಕೂಟ ನಡೆದಾಗ ಮೈದಾನವೆಲ್ಲಾ ಐಸ್‌ ಕ್ರೀಂ, ತಿಂಡಿ, ತಿನಿಸುಗಳ ಖಾಲಿ ಪ್ಯಾಕೇಟ್‌ಗಳ ರಾಶಿ ಬಿದ್ದಿರುತ್ತದೆ. ಇವುಗಳನ್ನು ಯಾರು ನಿಯಂತ್ರಿಸಬೇಕು ಎಂಬುದು ನಾಗರಿಕರನ್ನು ಕಾಡುತ್ತಿರುವ ಪ್ರಶ್ನೆ.

ಕ್ರೀಡಾಂಗಣಕ್ಕೆ ಮಹಿಳೆಯರ ಹಾಗೂ ಪುರುಷರ ಪ್ರತ್ಯೇಕ ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರು ಸೇರಿದಂತೆ ಆಟಗಾರರಿಗೆ ಮೂಲ ಸೌಕರ್ಯ ಒದಗಿಸುವಂತೆ ಕ್ರೀಡಾಪಟುಗಳು, ದೈಹಿಕ ಶಿಕ್ಷಣ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT