ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿಗೆ ಟಿಕೆಟ್‌ ಖಚಿತ: ಸಿ.ಎಂ ಅಭಯ

Last Updated 15 ಸೆಪ್ಟೆಂಬರ್ 2017, 10:18 IST
ಅಕ್ಷರ ಗಾತ್ರ

ಬೆಳಗಾವಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ (ಗ್ರಾಮೀಣ) ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.ತಾಲ್ಲೂಕಿನ ಸುಳೇಬಾವಿಯಲ್ಲಿ ಗುರುವಾರ ನಡೆದ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಲಕ್ಷ್ಮಿ ಅವರ ಹೆಸರನ್ನು ಪ್ರಕಟಿಸಿದರು.

ಇದಕ್ಕೂ ಮುಂಚೆ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ (ಉತ್ತರ ಕರ್ನಾಟಕ) ಎಸ್‌.ಆರ್‌. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಅವರು ಲಕ್ಷ್ಮೀ ಪರ ಧ್ವನಿ ಎತ್ತಿದ್ದರು.

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ ಗುಂಪಿನ ನಡುವೆ ಮುಸುಕಿನ ಗುದ್ದಾಟ ನಡೆದಿರುವುದು ಮತ್ತೊಮ್ಮೆ ಸಮಾವೇಶದಲ್ಲಿ ಪರೋಕ್ಷವಾಗಿ ಚರ್ಚೆಯಾಯಿತು. 

ಸಹೋದರ ಟಾಂಗ್‌: ಕಳೆದ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ಪಕ್ಷದ ಕೆಲವು ಮುಖಂಡರೇ ಕುತಂತ್ರ ಮಾಡಿ, ಸೋಲಿಸಿದ್ದರು. ಈ ಬಾರಿಯೂ ಅಂತಹ ಕುತಂತ್ರ ನಡೆಯುತ್ತಿದೆ. ಅವರು ಎಷ್ಟೇ ದೊಡ್ಡ ಲೀಡರ್ ಆದರೂ ಅವರ ಆಟ ಜನರ ಮುಂದೆ ನಡೆಯಲಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪರೋಕ್ಷವಾಗಿ ಸಹೋದರ ಸತೀಶ ಜಾರಕಿಹೊಳಿ ಅವರನ್ನು ಟೀಕಿಸಿದರು.

‘ಅವರು (ಸತೀಶ) ಗೋಕಾಕ ಕ್ಷೇತ್ರದಲ್ಲೂ ಪ್ರಯೋಗ ಮಾಡಲು ಹೋಗಿ ಹಾಳಾಗಿದ್ದಾರೆ. ಅವರ ಗಂಡಸ್ತನ ಎಷ್ಟಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಕಾರ್ಯಕರ್ತರು ಹೆದರಬಾರದು. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು’ ಎಂದು ಜಾರಕಿಹೊಳಿ ಹೇಳಿದರು.

ಹೊರಹಾಕಿ: ಕಳೆದ ಬಾರಿ ಇದೇ ಕ್ಷೇತ್ರದಿಂದ ಲಕ್ಷ್ಮಿ ಸ್ಪರ್ಧಿಸಿದ್ದರು. ಕೆಲವರ ಕುತಂತ್ರದಿಂದ ಕೆಲವೇ ಮತಗಳ ಅಂತರದಿಂದ ಸೋಲುಂಡರು. ಈ ಬಾರಿ ಅದಕ್ಕೆ ಅವಕಾಶವಿಲ್ಲ. ಇಲ್ಲಿ ಭಿನ್ನಮತ ಸರಿಯಲ್ಲ, ಭಿನ್ನಮತ ಸೃಷ್ಟಿಸುವವರನ್ನು ಪಕ್ಷದಿಂದ ಹೊರ ಹಾಕ್ತೀವಿ ಎಂದು ಸಚಿವ ಆರ್.ವಿ. ದೇಶಪಾಂಡೆ ಎಚ್ಚರಿಕೆ ನೀಡಿದರು.

ಸೀರೆ ವಿಷಯಕ್ಕೆ ಹೋಗ್ಬೇಡಿ:  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾತನಾಡಿ, ಇಲ್ಲಿನ ಕೆಲವು ನಾಯಕರು ಸೀರೆ ಹಂಚುವಿಕೆ ಕುರಿತು ಮಾತನಾಡುತ್ತಿದ್ದಾರೆ. ಸೀರೆ ವಿಷಯ ಕೆಟ್ಟದ್ದು, ಅದರಿಂದ ದೂರವಿರುವುದೇ ಒಳಿತು. ಸೀರೆಗೆ ಕೈಹಾಕಿದ ದುಶ್ಯಾಸನ ಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಚಾಟಿ ಬೀಸಿದರು.

‘ಈ ಬಾರಿ ಲಕ್ಷ್ಮಿಗೆ ಟಿಕೆಟ್ ಸಿಗುವುದಿಲ್ಲವೆಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಇವರ ಮಾತಿಗೆ ಕಿವಿಗೊಡಬೇಡಿ. ಲಕ್ಷ್ಮೀ ಅವರ ಸ್ಪರ್ಧೆ ಖಚಿತ. ಅವರನ್ನು ಗೆಲ್ಲಿಸಿ.
ವಿಧಾನಸೌಧದ ಮೆಟ್ಟಿಲು ಹತ್ತುವಂತೆ ಮಾಡಿ’ ಎಂದು ಮನವಿ ಮಾಡಿದರು.

ಸಿ.ಎಂ. ಭರವಸೆ: ಅಂತಿಮವಾಗಿ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈ ಕ್ಷೇತ್ರದ ಜನರು ಯಾರನ್ನು ಅಭ್ಯರ್ಥಿಯನ್ನಾಗಿ ಬಯಸುತ್ತಾರೆಯೋ ಅವರಿಗೆ ಟಿಕೆಟ್‌ ನೀಡುತ್ತೇವೆ. ನಿಮಗೆ ಯಾರು ಇಷ್ಟ?’ ಎಂದು ಸಭಿಕರನ್ನು ಪ್ರಶ್ನಿಸಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು ‘ಲಕ್ಷ್ಮೀ’ ಎಂದು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಲಕ್ಷ್ಮಿ ಈ ಬಾರಿಯೂ ಅಭ್ಯರ್ಥಿಯಾಗಲಿದ್ದಾರೆ. ಇವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು’ ಎಂದರು.

ಸತೀಶ ಗೈರು
ಸಮಾರಂಭದಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹಾಗೂ ಅವರ ಬಣದ ಮುಖಂಡರು ಗೈರಾಗಿದ್ದು ಎದ್ದುಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT