ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ವೀರ್ಯಧಾರಣೆ: ಸಮಯ ಬಹುಮುಖ್ಯ

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹಿಂದಿನ ಸಂಚಿಕೆಯಿಂದ...
ಕೃತಕ ವೀರ್ಯಧಾರಣೆಯ ವಿಫಲತೆಗೆ ಹಲವು ಅಂಶಗಳು ಕಾರಣವಾಗುತ್ತವೆ. ಅದರಲ್ಲಿ ಕೆಲವನ್ನು ಕಳೆದ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ವೀರ್ಯಧಾರಣೆಯನ್ನು ವಿಫಲಗೊಳಿಸುವ ಇನ್ನಷ್ಟು ಕಾರಣಗಳು ಇಂತಿವೆ...

ನಿರ್ಬಂಧಿತ ಡಿಂಬನಾಳ
ಡಿಂಬನಾಳ ನಿರ್ಬಂಧಿತವಾಗಲು ಹಲವು ಅಂಶಗಳು ಕಾರಣವಾಗುತ್ತವೆ. ಲೈಂಗಿಕ ಸಂಬಂಧಿ ಸಮಸ್ಯೆಯಿಂದ ಉಂಟಾಗುವ ಸೋಂಕು, ಗರ್ಭಕೋಶದ ಸೋಂಕು, ಗರ್ಭಪಾತ ಹಾಗೂ ಸಮಸ್ಯೆಗೀಡಾದ ಅಪೆಂಡಿಕ್ಸ್‌ ಅಥವಾ ಈ ಮುನ್ನ ಉದರಸಂಬಂಧಿ ಶಸ್ತ್ರಚಿಕಿತ್ಸೆ ನಡೆದಿದ್ದರೆ, ಎಂಡೋಮಿಟ್ರಿಯೋಸಿಸ್‌ ಇದ್ದರೆ, ಈ ಎಲ್ಲಾ ಕಾರಣಗಳಿಂದಾಗಿ ಡಿಂಬನಾಳ ನಿರ್ಬಂಧಗೊಳ್ಳುವ ಸಾಧ್ಯತೆಗಳಿರುತ್ತವೆ.

ಈ ನಾಳ ನಿರ್ಬಂಧಿತಗೊಂಡರೆ, ಅಂಡಾಣು ಹಾಗೂ ವೀರ್ಯಾಣು ಸೇರುವ ಪ್ರಕ್ರಿಯೆಯನ್ನು ಅಡೆತಡೆಗೊಳಿಸುತ್ತದೆ.

ಅದೃಷ್ಟವಶಾತ್ ಈ ಸಮಸ್ಯೆಯನ್ನು ಕಂಡುಕೊಳ್ಳಲು ‘ಎಚ್‌ಎಸ್‌ಜಿ’ ಪರೀಕ್ಷೆ ಲಭ್ಯವಿದೆ. ಈ ಪ್ರಕ್ರಿಯೆಯಲ್ಲಿ ಕೆಲವು ಬಾರಿ ಗರ್ಭದ ಒಳನುಗ್ಗಿಸುವ ದ್ರಾವಣವು ಡಿಂಬನಾಳವನ್ನು ಮುಕ್ತಗೊಳಿಸಬಹುದು. ಅದೂ ವಿಫಲಗೊಂಡರೆ, ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಸಮಸ್ಯೆಯುಳ್ಳ ಅಂಗಾಂಶವನ್ನು ತೆಗೆದುಹಾಕಬಹುದು.

ಸಮರ್ಪಕವಲ್ಲದ ಸಮಯ
ಈ ವಿಷಯದಲ್ಲಿ ಸಮಯವು ಬಹು ಮುಖ್ಯಪಾತ್ರ ವಹಿಸುತ್ತದೆ. ಅಂಡಾಶಯದಿಂದ ಅಂಡಾಣುವು ಬಿಡುಗಡೆಯಾದ ನಂತರ ಅದು ಫಲವತ್ತುಗೊಳ್ಳಲು ಕೇವಲ 12 ಗಂಟೆ ಸಮಯ ಇರುತ್ತದೆ. ಫಲವತ್ತತೆಯಲ್ಲಿ ವಿಫಲಗೊಂಡರೆ, ಅಂಡಾಣು ವಿಭಜನೆಯಾಗುತ್ತದೆ. ಈ ಕನಿಷ್ಠ ಸಮಯದಲ್ಲಿ ಅಂಡಾಣು ಫಲಿಸಿ ಗರ್ಭಧಾರಣೆ ಸಾಧ್ಯವಾಗುವ ಪ್ರಕ್ರಿಯೆ ನಿಜಕ್ಕೂ ಅಚ್ಚರಿ ತರುವಂಥದ್ದು.

ಒಳ್ಳೆಯ ಸುದ್ದಿ ಎಂದರೆ, ವೀರ್ಯವು ಮಹಿಳೆಯ ಗರ್ಭದಲ್ಲಿ ಕೆಲವು ದಿನಗಳವರೆಗೆ ಉಳಿದುಕೊಳ್ಳಲು ಸಾಧ್ಯವಿದೆ. ಫಲೀಕರಣಗೊಳ್ಳುವ ಕೆಲವೇ ದಿನಗಳ ಹಿಂದೆ ಸಂಭೋಗ ಸಾಧ್ಯವಾದರೆ, ಈಗಾಗಲೇ ಅಲ್ಲಿರುವ ವೀರ್ಯವು ಅಂಡಾಣುವನ್ನು ಸಂಧಿಸಲು ಕಾಯಬಹುದು. ಆದರೆ ಕೆಲವು ಬಾರಿ ಸಂಭೋಗದ ನಂತರ ಡಿಂಬನಾಳದಲ್ಲಿ ವೀರ್ಯದ ಪ್ರವೇಶವು ಸಾಧ್ಯವಾಗದೇ ಇರಬಹುದು. ಇದು ವೀರ್ಯವು ಸರಾಗವಾಗಿ ಗರ್ಭವನ್ನು ತಲುಪಲು ಸಾಧ್ಯವಾಗದೇ ತಡೆ ಹಿಡಿದಿಡಬಹುದು. ಹೀಗಾದಾಗ ಅಂಡಾಣುವನ್ನು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೇ ಗರ್ಭಧಾರಣೆ ಸಾಧ್ಯವಾಗುವುದಿಲ್ಲ.

ಜೊತೆಗೆ ಕೃತಕ ವೀರ್ಯಾಣುಧಾರಣೆ ಈ ಹನ್ನೆರಡು ಗಂಟೆಯ ಅವಧಿಯೊಳಗೆ ಸಾಗಬೇಕು. ಅತಿ ಬೇಗನೆ ಅಥವಾ ಅತಿ ತಡವಾಗಿ ವೀರ್ಯಧಾರಣೆ ಮಾಡಿದರೆ, ವೀರ್ಯವು ಅಂಡಾಣುವನ್ನು ತಲುಪಿ ಫಲಿಸುವ ಸಾಧ್ಯತೆ ಅತಿ ಕಡಿಮೆ ಇರುತ್ತದೆ.

‘ಐಯುಐ’ (ಕೃತಕ ವೀರ್ಯಾಣು ಧಾರಣೆ) ಪ್ರಕ್ರಿಯೆಯು, ವೀರ್ಯವನ್ನು ಅಂದುಕೊಂಡ ಜಾಗಕ್ಕೆ ತಲುಪಲು ಸಹಾಯ ಮಾಡುತ್ತದೆ. ಆದರೆ ಆಗ ಅಂಡವು ಇನ್ನೂ ಫಲಿತಗೊಳ್ಳದಿದ್ದರೆ ಅಥವಾ ಜೀವಂತವಲ್ಲದಿದ್ದರೆ ಈ ಪ್ರಕ್ರಿಯೆಯೂ ವಿಫಲಗೊಳ್ಳುವುದು ಸಹಜ. ಹೀಗಾಗದಂತೆ ತಡೆಯಲು, ಮಹಿಳೆಯು ಹಲವು ರೀತಿಯ ರಕ್ತಪರೀಕ್ಷೆಗೆ ಒಳಪಡಬೇಕಾಗುತ್ತದೆ. ಅಂಡೋತ್ಪತ್ತಿಗಾಗಿ ಹಾರ್ಮೋನಿನ ಮಟ್ಟದ ಬಗ್ಗೆ ತಿಳಿದುಕೊಳ್ಳಲು, ಅಂಡೋತ್ಪತ್ತಿಯ ನಿಖರ ಸಮಯವನ್ನು ಕಂಡುಕೊಳ್ಳಲು ರಕ್ತಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಅತಿ ಅಗತ್ಯವಾಗುತ್ತದೆ.

ಇತ್ತೀಚಿಗೆ ವೈದ್ಯರು ತಾಯಿಯಾಗ ಬಯಸುವವರಿಗೆ, ಅಂಡೋತ್ಪತ್ತಿಯನ್ನು ಚುರುಕುಗೊಳಿಸುವ ಎಚ್‌ಸಿಜಿ ಹಾರ್ಮೋನು ಇಂಜೆಕ್ಷನ್‌ಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತಾರೆ. ಹೀಗೆ ಮಾಡುವುದು ಅಂಡೋತ್ಪತ್ತಿಯ ಸಮಯವನ್ನು ಸಮರ್ಪಕಗೊಳಿಸುತ್ತದೆ. ಆದರೆ ಇದರಲ್ಲೂ ಸಮಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಅತಿ ಬೇಗ ಮಾಡಿದರೆ ಫಲಿತಗೊಳ್ಳದ ಅಂಡಾಣುವಿನಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ತಡವಾಗಿ ನೀಡಿದರೂ ಪ್ರಯೋಜನವಿಲ್ಲ.

ಅಂಡೋತ್ಪತ್ತಿಯಾಗದಿರುವುದು
ಒಬ್ಬ ಮಹಿಳೆಗೆ ಅಂಡೋತ್ಪತ್ತಿಯಾಗುತ್ತಿಲ್ಲ ಎಂದರೆ, ಅಂಡಾಣುವಿನ ಕೊರತೆ ಇದೆ ಎಂದರ್ಥ. ಹಾರ್ಮೋನಿನಿಂದ ಪ್ರಚೋದಿತಗೊಂಡು ಅಂಡೋತ್ಪತ್ತಿಯಾಗದೇ ಇದ್ದರೆ ವೈದ್ಯರು ಕೃತಕ ವೀರ್ಯಧಾರಣೆಯನ್ನು ನಡೆಸಲು ಸಾಧ್ಯವೇ ಇಲ್ಲ.

ಗುಣಮಟ್ಟದ ವೀರ್ಯದ ಕೊರತೆ
ಇತ್ತೀಚೆಗೆ ಈ ಸಂಗತಿ ಹೆಚ್ಚು ಪ್ರಕರಣಗಳಲ್ಲಿ ಕಂಡುಬರುತ್ತಿದೆ. ವೀರ್ಯಾಣುವಿನ ಪ್ರಮಾಣವು ಸಾಕಷ್ಟಿದ್ದರೂ ಅವು ಸರಿಯಾಗಿ ರೂಪಿತಗೊಂಡಿಲ್ಲವೆಂದರೆ, ದೋಷಪೂರಿತವಾಗಿದ್ದರೆ ಅಂಡಾಣುವನ್ನು ಛೇದಗೊಳಿಸಿ ಫಲವತ್ತುಗೊಳಿಸಲು ಸಾಧ್ಯವಾಗುವುದಿಲ್ಲ. ಈ ವಿರೂಪದಿಂದ ಗರ್ಭಧಾರಣೆ ಸಾಧ್ಯತೆಯೂ ಕ್ಷೀಣಗೊಂಡಂತೆ.

ಕೃತಕ ವೀರ್ಯಧಾರಣೆ ಯಶಸ್ಸು ಕಾಣದ ಹಲವು ಪ್ರಕರಣಗಳಲ್ಲಿ ವೀರ್ಯಾಣುವಿನ ಗುಣಮಟ್ಟದಲ್ಲಿನ ಕೊರತೆಯೇ ಪ್ರಮುಖ ಕಾರಣವಾಗಿರುವುದಾಗಿ ಸಾಕಷ್ಟು ಅಧ್ಯಯನಗಳು ತಿಳಿಸಿಕೊಟ್ಟಿವೆ. ವೀರ್ಯದ ಸಮಸ್ಯೆಯು ಅತಿ ಸಂಕೀರ್ಣವಾಗಿದ್ದು, ಇದಕ್ಕೆ ಪರಿಣತ ಆ್ಯಂಡ್ರೋಲಜಿಸ್ಟ್‌ ಅವಶ್ಯಕತೆಯಿರುತ್ತದೆ.

ಕ್ಷೀಣಗೊಂಡ ವೀರ್ಯಾಣುವಿನ ಸಂಖ್ಯೆ ಹಾಗೂ ಐಯುಐ: ವೀರ್ಯವು ನಿಧಾನವಾಗಿ ಚಲಿಸಬಹುದು ಅಥವಾ ಚಲಿಸಲು ಸಾಧ್ಯವಾಗದೆಯೂ ಉಳಿದುಬಿಡಬಹುದು. ಎಲ್ಲಿಗೂ ಚಲಿಸದೇ ವೃತ್ತಾಕಾರದಲ್ಲಿ ತಿರುಗುತ್ತಿದ್ದರೆ ಸರಾಗ ಚಲನೆಗೆ ಅನುವಾಗುವುದಿಲ್ಲ. ವೀರ್ಯವು ಅಂಡಾಣುವನ್ನು ಸರಿಯಾದ ಸಮಯಕ್ಕೆ ಕೂಡಲಿಲ್ಲ ಎಂದರೆ, ಫಲಿತಗೊಳ್ಳಲು ಸಾಧ್ಯವೇ ಇಲ್ಲ.

ಅದೃಷ್ಟವೆಂದರೆ, ಕೃತಕ ವೀರ್ಯಧಾರಣೆ ಇಂಥ ಸಮಯದಲ್ಲಿ ಸಹಾಯಕ್ಕೆ ಬರುತ್ತದೆ. ಗರ್ಭಕೋಶಕ್ಕೆ ನೇರವಾಗಿ ವೀರ್ಯವನ್ನು ಒಳನುಗ್ಗಿಸುವುದರಿಂದ ಈ ಸಮಸ್ಯೆ ಕಂಡುಬರುವುದಿಲ್ಲ. ವೀರ್ಯವು ಆರೋಗ್ಯವಂತವಾಗಿದ್ದು, ಸಂಖ್ಯೆಯಲ್ಲಿ ಕಡಿಮೆ ಇದ್ದರೆ, ಈ ಸಮಯದಲ್ಲೂ ಐಯುಐ ಯಶಸ್ವಿಯಾಗುವ ಸಾಧ್ಯತೆ ಇರುತ್ತದೆ.
(ಮುಂದುವರೆಯುತ್ತದೆ)

*


ಡಾ. ಬೀನಾ ವಾಸನ್‌, ಮುಖ್ಯಸ್ಥರು ಮಣಿಪಾಲ್‌ ಅಂಕುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT