ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಗಳ ಸಾಲಿನ ಶರದೃತುವಿನಲ್ಲಿ ಆರೋಗ್ಯ ಪಾಲನೆ

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇಂತಹ ಋತುರಾಜನ ದೆಸೆಯಿಂದ ನಮ್ಮ ಆರೋಗ್ಯದ ಏರುಪೇರುಗಳೇನು? ಅದನ್ನು ಸರಿದೂಗಿಸಲು ಸಾಧ್ಯವೇ? ಆಯುರ್ವೇದ ಸಂಹಿತೆಗಳ ಪ್ರಕಾರ ನಮ್ಮ ಋತು ಚರ್ಯೆ ಹೇಗಿರಬೇಕು? – ಎಂಬುದನ್ನು ತಿಳಿಯಿರಿ.

ವೇದವಾಕ್ಯವನ್ನು ಕೇಳಿದ್ದೀರಲ್ಲ: ‘ಜೀವೇತ್‌ ಶರದಃ ಶತಮ್| ಪಶ್ಯೇಮ ಶರದಃ ಶತಮ್||. ಅದರರ್ಥ ‘ಈತನು ನೂರು ಶರದೃತುಗಳಷ್ಟು ಬಾಳಲಿ. ನೂರು ಶರದೃತುಗಳನ್ನು ಕಾಣಲಿ’ ಎಂದು. ಆರು ಋತುಗಳ ಪೈಕಿ ಯಾವುದೇ ಋತುವಿನ ಹೆಸರು ಪ್ರಸ್ತಾಪಿಸದೆ ವೇದದ್ರಷ್ಟಾರರು ಉಲ್ಲೇಖ ಮಾಡಿದ್ದು ಶರದೃತುವನ್ನು! ಎಂದರೆ ಅದು ಶಿಶಿರ, ವಸಂತ, ಗ್ರೀಷ್ಮ, ವರ್ಷ ಮತ್ತು ಹೇಮಂತ ಋತುಗಳಿಗಿಂತ ಹೆಚ್ಚು ಪ್ರಸಿದ್ಧ ಎಂದಾಯಿತು. ವೇದಕಾಲದಿಂದ ಶರದೃತುವಿಗೆ ಏಕೆ ಇಂತಹ ಪ್ರಸಿದ್ಧಿ ಬಂತು ತಿಳಿಯೋಣ.

ಭಾರತೀಯ ಪಂಚಾಂಗದ ಪ್ರಕಾರ ಶರದೃತುವು ದಕ್ಷಿಣಾಯನದ ಋತು. ನಮ್ಮ ಕಾಲಮಾನಾನುಸಾರ ಕನ್ಯಾ ಮತ್ತು ತುಲಾ ಮಾಸದ್ವಯಗಳಿಗೆ ಶರದೃತು ಎನ್ನುತ್ತಾರೆ.

ಅತ್ತ ಅತಿ ಸೆಖೆಯೂ ಇಲ್ಲ; ಇತ್ತ ಚಳಿಯೂ ಶುರುವಾಗಿರದು. ಮಳೆಯ ಅಬ್ಬರದ ದಿನಗಳು ಕಳೆದಿರುತ್ತವೆ. ಸೆಖೆಯ ದಿನಗಳು ಎಂದರೆ ಒಣ, ಒಣ, ರಣ, ರಣ, ಭಣ ಭಣ ಬಿಸಿಲು. ಚಳಿಗಾಲ ಎಂದರೆ ಅತಿ ಚಳಿ ಇದ್ದೀತು. ಅವು ಗಡ ಗಡ ನಡುಗುವ, ಮಂಜು ಮುಸುಕಿದ ದಿನಗಳಾದಾವು. ಮಳೆಯ ದಿನಗಳಂತೂ ಕೇಳಲೇಬೇಡಿ.

ಉಬ್ಬರ, ಅಬ್ಬರದ ಗಾಳಿ, ಚಳಿ, ಮಳೆಯ ಪಾಡು ಅನುಭವಿಸಲು ಅಶಕ್ಯ. ಎಲ್ಲೆಲ್ಲೂ ಹೊಸ ನೀರು. ಆದರೆ ಶರದೃತುವಿನಲ್ಲಿ ಅಂತಹ ಅತಿಯೋಗದ ಭಯ ಇಲ್ಲ. ಎಲ್ಲವೂ ಸೌಮ್ಯ. ಆಗ ಪ್ರಕೃತಿಮಾತೆಯು ಒಂದಿಷ್ಟು ಸಂತಸ ತರುತ್ತಾಳೆ ಅಲ್ಲವೇ? ಹಾಗಾಗಿ ನಮ್ಮ ಪೂರ್ವಿಕರು ಶರದೃತುವನ್ನು ಸಂತಸದ ಹಬ್ಬಗಳ ಋತು ಎಂದು ಭಾವಿಸಿದರು. ವೇದಯುಗದಲ್ಲಿಯೂ ಅದು ಹೆಸರಾಂತ ಋತು ಎನಿಸಿರಬಹುದು.

ಇನ್ನು ಆಯುರ್ವೇದ ಯುಗಕ್ಕೆ ಬರೋಣ. ಈ ಋತುವಿನ ವಿಶೇಷತೆ ಏನು? ಯಾವ ದೋಷಗಳು ಕಾಡುತ್ತವೆ? ಯಾವ ಕಾಯಿಲೆಗಳು ಉಲ್ಬಣಿಸುತ್ತವೆ? ಅಂತಹ ಕಾಯಿಲೆಗಳನ್ನು ದೂರ ಇಡುವ ಉಪಾಯ ಏನು? ಇಂತಹ ವಿಚಾರಗಳನ್ನು ಮೂರು ಸಾವಿರ ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರು ನಿರೀಕ್ಷಿಸಿದರು.

ಅದನ್ನು ದಾಖಲಾತಿ ಮಾಡಿರಿಸಿದರು. ಅಂತಹ ಸಂಹಿತೆಗಳ ಪೈಕಿ ಚರಕಸಂಹಿತೆಯೇ ಮೂಲ ಆಧಾರ. ಆ ಸಂಹಿತೆಯ ಕೆಲವು ಸಂಗತಿಗಳು ಇಂದಿಗೂ ಪ್ರಸ್ತುತ. ರೋಗ ಬರುವ ಮೊದಲೇ ತಡೆಯುವ ಎಲ್ಲ ಉಪಾಯಗಳನ್ನು ಅಂದು ಋಷಿಗಳು ಕಂಡುಕೊಂಡರು. ‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಮ್’ ಎಂದು ಅದನ್ನು ಕರೆದರು.

ಅಂದರೆ ನಿರೋಗಿಯ ರೋಗ ತಡೆಯುವ ಹಾದಿ ಅದು. ಆಯುರ್ವೇದದ ಮೂಲ ತಳಹದಿ ಇಂತಹದೇ ಆಗಿದೆ. ಎರಡನೆಯ ವಿಭಾಗ ‘ಆತುರಸ್ಯ ರೋಗ ಶಮನಂ’; ಎಂದರೆ ರೋಗ ಉಂಟಾದಾಗ ಅದನ್ನು ಚಿಕಿತ್ಸೆ ಮಾಡುವ ವಿಧಾನ. ಇವೆರಡಕ್ಕೂ ಸಮಾನ ಮಹತ್ವ ನೀಡಿದ್ದು ಆಯುರ್ವೇದದ ಗರಿಮೆ. ಹಾಗಾಗಿ ನೀವು ಒಂದು ಮಾತು ನೆನಪಿಡಿ.

ವೈದ್ಯರನ್ನು ಕಾಯಿಲೆ ಬಂದಾಗಲಷ್ಟೆ ಕಾಣುವುದಲ್ಲ. ಆಯುರ್ವೇದ ವೈದ್ಯರನ್ನು ಖಂಡಿತವಾಗಿ ಕಾಯಿಲೆ ಬರದಂತೆ ತಡೆಯುವ ವಿಧಾನ ತಿಳಿದುಕೊಳ್ಳಲೂ ನೀವು ಭೇಟಿ ಮಾಡಿರಿ. ಅಂತಹ ಸಲಹೆಗಳನ್ನು ಪಡೆಯಿರಿ.

ಆಯುರ್ವೇದದ ಪ್ರಕಾರ ಶರದೃತುವು ವಿಸರ್ಗ ಕಾಲ. ಅಂದರೆ ನಮ್ಮ ದೇಹದ ಬಲವು ಸ್ವಾಭಾವಿಕವಾಗಿಯೇ ಅಧಿಕವಾಗಿರುತ್ತದೆ. ಹಾಗಾಗಿ ಈ ಕಾಲದಲ್ಲಿ ಸಂಭವಿಸಿದ ಕಾಯಿಲೆ ಸುಲಭವಾಗಿ ಜಯಿಸಲಾದೀತು. ಒಟ್ಟಿನಲ್ಲಿ ದೇಹಾರೋಗ್ಯ ಸುಧಾರಿಸಿಕೊಳ್ಳಲು ಮತ್ತು ಸಹಜ ದೇಹ ಬಲ ಪಡೆದುಕೊಳ್ಳಲು ಶರದೃತು ಸಹಕಾರಿ.

ಈ ಋತುವಿನಲ್ಲಿ ನಮ್ಮ ಆರೋಗ್ಯ ಕಾಪಾಡುವ ಮತ್ತು ಸುಧಾರಿಸಿಕೊಳ್ಳುವ ಉಪಾಯಗಳೇನು?
ಮಳೆಗಾಲದ ಜಡಿಮಳೆಯ ಶೀತಲತೆಯಿಂದ ಕಂಗೆಟ್ಟ ದೇಹಕ್ಕೆ ಏಕಾಏಕಿ ಸೂರ್ಯನ ಪ್ರಖರ ರಶ್ಮಿ ಬೀಳಲಾರಂಭಿಸುತ್ತದೆ. ಆಗ ದೇಹದ ಪಿತ್ತಾಂಶವು ಕರಗಿ ಏಕಾಏಕಿ ಪ್ರಕೋಪ ಹೊಂದತೊಡಗುತ್ತದೆ. ಹಾಗಾಗಿ ಪಿತ್ತ ಕೆದಕುವ ಆಹಾರ ಉಣಬಾರದು. ಅಂದರೆ ಖಾರ, ಹುಳಿ ಮತ್ತು ಉಪ್ಪಿನ ಅಂಶ ಖಂಡಿತ ಕಡಿಮೆ ಮಾಡಬೇಕು. ಷಡ್ರಸಗಳ ಪೈಕಿ ಉಳಿದವು ಮೂರು ರಸ. ಸಿಹಿ, ಕಹಿ ಮತ್ತು ಒಗರು. ಉಷ್ಣ ಉಂಟು ಮಾಡುವ ಆಹಾರಸೇವನೆ ನಿಷಿದ್ಧ. ಶೀತಲ ಆಹಾರವನ್ನು ಸೇವಿಸಿದರೆ ಪಿತ್ತ ಉಪಶಮನವಾಗುತ್ತದೆ.

ನೀವು ಮಾಂಸಾಹಾರಿಗಳೇ? ಹಗುರವಾಗಿ ಜೀರ್ಣವಾಗುವ, ಲಘು ಸ್ವಭಾವದ ಮೇಕೆಮಾಂಸದ ಬಳಕೆ ಸೈ. ಸಸ್ಯಾಹಾರಿಗಳಿಗೆ ಅನೇಕ ಆಯ್ಕೆಗಳಿವೆ. ಹಾಲು ಮತ್ತು ಅದರ ಉತ್ಪನ್ನಗಳ ಯಥೋಚಿತ ಬಳಕೆಗೆ ಅಡ್ಡಿಯಿಲ್ಲ. ಬೇಗ ಜೀರ್ಣವಾಗುವ ಅಕ್ಕಿ ಬಳಸಿರಿ. ಬಾರ್ಲಿ ಮತ್ತು ಗೋಧಿ ಬಳಸಿರಿ. ಹಸಿವೆ ಹೆಚ್ಚು ಇದ್ದೀತು. ಹಾಗಾಗಿ ತುಪ್ಪದ ಧಾರಾಳ ಬಳಕೆ ಸರಿ.

ಬಹುತೇಕ ಮೋಡ ಕವಿದ ದಿನಗಳೇ ಇರಬಹುದು. ಅಂತಹ ದಿನಗಳಲ್ಲಿ ದೇಹದ ಬಲ ಸ್ವಾಭಾವಿಕವಾಗಿ ಕುಸಿಯುತ್ತದೆ. ಮೋಡದ ನಡುವಿನ ಸೂರ್ಯನಿಗೆ ಒಡ್ಡಿಕೊಳ್ಳದಿರಿ. ಕಹಿರಸಕ್ಕೆ ಹೆಚ್ಚಿನ ಒತ್ತು ನೀಡಿರಿ. ಜಿಗಣೆ ಮೂಲಕ ರಕ್ತ ಹೀರಿಸುವ ಚಿಕಿತ್ಸೆ ಈ ದಿನಗಳಿಗೆ ಹೇಳಿ ಮಾಡಿಸಿದ್ದು. ಅದನ್ನು ರಕ್ತದಾನದ ಮೂಲಕವೂ ಅರ್ಹರು ಮಾಡಲು ಶಕ್ಯವಿದೆ.

ಹಗಲಿನಲ್ಲಿ ನಿದ್ದೆ ಮಾಡಬೇಡಿರಿ. ಇದು ಪಿತ್ತೋದ್ರೇಕಕ್ಕೆ ದಾರಿ. ಹೆಚ್ಚಾಗಿ ಮೊಸರು ತಿನ್ನದಿರಿ. ರಾತ್ರಿಗಂತೂ ಮೊಸರು ಸೇವನೆ ಸದಾ ನಿಷಿದ್ಧವೇ ಸೈ. ಪೂರ್ವ ದಿಕ್ಕಿನಿಂದ ಅತಿಯಾದ ಗಾಳಿ ಬೀಸುವ ಸಾಧ್ಯತೆ ಈ ಕಾಲದಲ್ಲಿದೆ. ಆಗ ಅಂತಹ ಬೀಸುಗಾಳಿಗೆ ಮೈ ಒಡ್ಡದಿರಿ. ಬಿಳಿಯ ಹಾಗೂ ಶುಭ್ರ ಬಟ್ಟೆ ಸದಾಕಾಲ ಧರಿಸಿರಿ. ಬಗೆ ಬಗೆಯ ಸಹಜವಾದ ಸುಗಂಧ ವಸ್ತು ಮತ್ತು ಹೂಮಾಲೆಗಳ ಪರಿಮಳ ಅನುಭವಿಸಿರಿ. ಅದು ಮನಸ್ಸು ಮತ್ತು ದೇಹದ ಕಾವು, ಖಿನ್ನತೆ ಕಳೆಯುತ್ತದೆ.

ನೀವು ಸುಮನಸ್ಕರಾಗುತ್ತೀರಿ. ದೇಹಾರೋಗ್ಯ ಸಹಜವಾಗಿ ಹೆಚ್ಚುತ್ತದೆ. ಹಬ್ಬಗಳ ಸಾಲಿನ ಶರದೃತುವಿನ ಹಬ್ಬಗಳು ಮುಖ್ಯವಾಗಿ ಶರನ್ನವರಾತ್ರಿ ಮತ್ತು ದೀಪಾವಳಿ. ಅಂತಹ ಹಬ್ಬದ ಸಡಗರದಲ್ಲಿ ನಾವು ಮಾಡುವ ವಿವಿಧ ಭಕ್ಷ್ಯ ಭೋಜ್ಯಗಳು ಋತುವಿಗನುಗುಣವಾದವು. ಸಿಹಿಯಡುಗೆಯಿಂದ, ತುಪ್ಪದ ತಿಂಡಿಗಳಿಂದ ಕೆರಳಿದ ಪಿತ್ತದ ಉಪಶಮನ ಖಂಡಿತ. ತುಳಸಿಹಬ್ಬದ ನೆಲ್ಲಿಯ ಅಡುಗೆಯೂ ತ್ರಿದೋಷಹರ. ಇನ್ನು ವೃಶ್ಚಿಕಮಾಸ ಶುರುವಾಗುವುದು ಈ ಬಾರಿಯ ನವೆಂಬರ್ ಹದಿನಾರರಂದು. ಅಲ್ಲಿಯ ತನಕ ಇಂತಹ ಆಹಾರ ಉಪಚಾರ ಕ್ರಮ ಕೈಗೊಳ್ಳಿರಿ; ನಿರೋಗಿಗಳಾಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT