ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮನಸ್ಸಿನಲ್ಲಿ ಕೆಟ್ಟ ಯೋಚನೆಗಳೇ ಹುಟ್ಟುತ್ತವೆ...'

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1. ನಾನು ವಿಜಯಪುರದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಡಿಪ್ಲೊಮಾ ಮುಗಿಸಿ, ಎಂಜಿನಿಯರಿಂಗ್‌ಗೆ ಸೇರಿದ್ದು. ಈಗ ನನಗೆ ಎಂಜಿನಿಯರಿಂಗ್‌ನಲ್ಲಿ ಪಾಸ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಓದುವಾಗ ತಲೆಯಲ್ಲಿ ಬೇರೆ ಬೇರೆ ಯೋಚನೆಗಳು ಹುಟ್ಟಿಕೊಳ್ಳುತ್ತವೆ.  ಎಂಜಿನಿಯರಿಂಗ್ ಮುಗಿಸಬೇಕೋ ಅಥವಾ ಡಿಪ್ಲೊಮಾ ಪದವಿಯ ಮೇಲೆ ಕೆಲಸಕ್ಕೆ ಸೇರಬೇಕೋ ಎಂಬುದು ತಿಳಿಯುತ್ತಿಲ್ಲ. ನಾನೇನು ಮಾಡಬೇಕೆಂದು ‍ತಿಳಿಸಿ.
ನೀವು ಪ್ರಸ್ತುತ ಯಾವ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೀರಿ. ಎಂಜಿನಿಯರಿಂಗ್ ಓದುತ್ತಿದ್ದು, ಹಿಂದಿನ ಸೆಮಿಸ್ಟರ್‌ನ ಕೆಲವು ಸಬ್ಜೆಕ್ಟ್‌ಗಳು ಬಾಕಿ ಇವೆಯೇ? ಅಥವಾ ಎಂಜಿನಿಯರಿಂಗ್ ಮುಗಿದ ಮೇಲೆ ಕೆಲವು ಸಬ್ಜೆಕ್ಟ್‌ಗಳನ್ನು ಪಾಸ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೇ ಎಂಬುದನ್ನು ನೀವು ಸರಿಯಾಗಿ ತಿಳಿಸಿಲ್ಲ. ಅದೇನೇ ಇರಲಿ. ಮೊದಲು ನೀವು ಎಂಜಿನಿಯರಿಂಗ್ ಮುಗಿಸಿ. ನಂತರ ಕೆಲಸಕ್ಕೆ ಪ್ರಯತ್ನಿಸಿ. ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಏಕೆಂದರೆ ನಿಮಗೆ ಡಿಪ್ಲೊಮಾದಲ್ಲಿಯೇ ತಾಂತ್ರಿಕ ವಿಷಯಗಳ ಕುರಿತು ಜ್ಞಾನವಿರುತ್ತದೆ. ಚಿಂತಿಸಬೇಡಿ.

ನಿಮ್ಮಿಂದ ಎಂಜಿನಿಯರಿಂಗ್ ಪಾಸ್ ಮಾಡಲು ಸಾಧ್ಯವಿದೆ. ನೀವು ನಿಮ್ಮ ಮನಸ್ಸು ಅನ್ನು ಅಣಿಗೊಳಿಸಿ, ಓದಿನ ಮೇಲೆ ಗಮನ ಹರಿಸಿ. ಶಿಸ್ತಿನ ಜೀವನಕ್ಕೆ ನಿಮ್ಮನ್ನು ಒಗ್ಗಿಸಿಕೊಂಡು ಹೋಗುವಂತಹ ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ನಿಮಗೆ ಯಾವುದು ತೊಂದರೆ ನೀಡುತ್ತಿದೆ ಮತ್ತು ನಿಮ್ಮ ಓದಿಗೆ ಏನು ಅಡ್ಡಿಯಾಗುತ್ತಿದೆ ಎಂಬುದನ್ನು ತಿಳಿದುಕೊಂಡು ಪರೀಕ್ಷೆಯ ಸಮಯದಲ್ಲಿ ಅವುಗಳಿಂದ ದೂರು ಇರಲು ಪ್ರಯ್ನತಿಸಿ. ನಿಮ್ಮ ಓದಿನ ಮಾದರಿಯನ್ನು ತಿಳಿದುಕೊಳ್ಳಲು ಸೀನಿಯರ್ಸ್‌ಗಳ ಸಹಾಯ ಪಡೆದುಕೊಳ್ಳಿ. ‘ಇದು ನನ್ನಿಂದ ಸಾಧ್ಯ’ ಎಂದು ಮನಸ್ಸಿನಲ್ಲೇ ಅಂದುಕೊಂಡರೆ ಆಗ ಅಸಾಧ್ಯ ಎಂಬುದು ಯಾವುದು ಇರುವುದಿಲ್ಲ.

2. ನನ್ನ ಮನಸ್ಸು ಯಾವಾಗಲೂ ಮಂಕಾಗಿರುತ್ತದೆ. ಕೆಲಸ ಮಾಡಲು ಆಸಕ್ತಿ ಇಲ್ಲ. ಕೆಟ್ಟ ಯೋಚನೆಗಳು ಮನಸ್ಸಿನಲ್ಲಿ ಹುಟ್ಟುತ್ತಿರುತ್ತವೆ. ಯಾವಾಗಲೂ ಸುಸ್ತಾಗುತ್ತದೆ. ದಯವಿಟ್ಟು ನನಗೆ ಸಹಾಯ ಮಾಡಿ.
ನಿಮ್ಮನ್ನು ನೀವು ಗಮನಿಸಿಕೊಂಡು, ನಿಮ್ಮಲ್ಲಿ ಬದಲಾವಣೆ ಕಂಡುಕೊಳ್ಳಬೇಕು ಎಂದು ಬಯಸಿದ್ದು ಶಾಘ್ಲನೀಯ. ಅದೇ ಮೊದಲ ಧನಾತ್ಮಕ ಹೆಜ್ಜೆ. ಇದರಿಂದ ಹೊರ ಬರಲು ಮೊದಲು ನೀವು ಮಾಡಬೇಕಿರುವುದು ನಿಯಮಿತ ವ್ಯಾಯಾಮ. ಇದು ನಿಮ್ಮನ್ನು ದೈಹಿಕವಾಗಿ ಕ್ರಿಯಾಶೀಲರನ್ನಾಗಿಸಿ, ಸಧೃಡರಾಗಿರುವಂತೆ ನೋಡಿಕೊಳ್ಳುತ್ತದೆ. ನಿಮಗೆ ವ್ಯಾಯಾಮ ದಿನನಿತ್ಯದ ಜೀವನಕ್ಕೆ ಒಗ್ಗಿಕೊಳ್ಳುವವರೆಗೂ ಒತ್ತಾಯಪೂರ್ವಕವಾಗಿ ವ್ಯಾಯಾಮಕ್ಕೆ ದೂಡುವಂತೆ ನಿಮ್ಮ ಮನೆಯವರ ಸಹಾಯ ಪಡೆದುಕೊಳ್ಳಿ. ಸಮಾಜ‌ದೊಂದಿಗೆ ಬೆರೆಯಿರಿ. ನಿಮ್ಮ ಬಿಡುವಿನ ವೇಳೆಯನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿ. ಸ್ವಪ್ರೇರಣೆಗೆ ಸಹಾಯವಾಗುವ ಪುಸಕ್ತಗಳನ್ನು ಓದುವುದು, ಹಾಡು ಕೇಳುವುದು, ಆಟ ಆಡುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಇವುಗಳ ನಡುವೆ ನಿಮ್ಮ ಮನಸ್ಸಿನಲ್ಲಿ ಕೆಟ್ಟ ಯೋಚನಗೆಳು ಬರಲು ಸಮಯವಿರುವುದಿಲ್ಲ. ಆಗ ನಿಧಾನವಾಗಿ ಮನಸ್ಸು ಕ್ರಿಯಾಶೀಲವಾಗಿ, ಸಂತೋಷದ ಭಾವನೆಗಳು ಹುಟ್ಟಿಕೊಳ್ಳುತ್ತವೆ.

3. ನನಗೆ ಮನಸ್ಸಿನ ಚಂಚಲತೆ ಹೆಚ್ಚು. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಲು ಸಾಧ್ಯವಾಗುವುದಿಲ್ಲ. ಒಮ್ಮೆ ಮಾಡಬೇಕು ಎಂದು ದೃಢ ನಿರ್ಧಾರ ಮಾಡುತ್ತೇನೆ. ಆದರೆ ಮತ್ತೆ ಅದನ್ನು ಮರೆತು ಬಿಡುತ್ತೇನೆ. ಗುರಿ ಇರಿಸಿಕೊಂಡರೂ ಅದನ್ನು ತಲುಪಲು ಶ್ರಮಿಸುವುದಿಲ್ಲ. ಕೋಪ ಜಾಸ್ತಿ. ನಾನು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಇತ್ತೀಚೆಗೆ ಕಾಡುತ್ತಿದೆ. ಏನು ಮಾಡಲಿ?
ನಿಮ್ಮ ಮನಸ್ಸನ್ನು ನೀವಲ್ಲದೇ ಬೇರೆ ಯಾರೂ ನಿಯಂತ್ರಣದಲ್ಲಿರಿಸಲು ಸಾಧ್ಯವಿಲ್ಲ. ಮನಸ್ಸನ್ನು ನಿಯಂತ್ರಿಸುವುದು ಸುಲಭವಾದ ಟಾಸ್ಕ್ ಅಲ್ಲ. ಇದಕ್ಕೆ ನೀವಿರಿಸಬೇಕಾದ ಮೊದಲ ಹೆಜ್ಜೆ ಎಂದರೆ, ದೇಹದಿಂದ ಬೇವರಿಳಿಯುವಂತಹ ಜಾಗಿಂಗ್‌, ಜಿಮ್‌ ಅಥವಾ ಚುರುಕಾದ ನಡಿಗೆ – ಹೀಗೆ ಕಠಿಣ ವ್ಯಾಯಾಮಗಳಿಗೆ ನಿಮ್ಮನ್ನು ಒಗ್ಗಿಸಿಕೊಳ್ಳಿ. ಇದು ನಿಮ್ಮನ್ನು ಎಲ್ಲಾ ಸಮಯದಲ್ಲಿ ಕ್ರಿಯಾಶೀಲರಾಗಿ, ಚುರುಕಾಗಿ ಹಾಗೂ ಸದೃಢರಾಗಿ ಇರುವಂತೆ ನೋಡಿಕೊಳ್ಳುತ್ತದೆ. ನಂತರದ ಹೆಜ್ಜೆ ನಿಮ್ಮ ಮನಸ್ಸಿಗೆ ವ್ಯಾಯಾಮ ನೀಡುವುದು. ಅದಕ್ಕಿರುವ ಒಂದೇ ದಾರಿ ಎಂದರೆ ಧ್ಯಾನ. ಪ್ರತಿದಿನ 45 ನಿಮಿಷ ಧ್ಯಾನ ಮಾಡಿ.

ಧ್ಯಾನ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಕೋಪವನ್ನು ಕಡಿಮೆ ಮಾಡುತ್ತದೆ. ಇದೊಂದೇ ದಾರಿಯಿಂದ ನೀವು ಎಲ್ಲಾ ವಿಷಯದ ಮೇಲೆ ಗಮನ ಹರಿಸಲು ಸಾಧ್ಯ ಮತ್ತು ನಿಮ್ಮ ಗುರಿ ತಲುಪಲು ಸಾಧ್ಯ. ಇದರಲ್ಲಿ ಬೇರೆ ಹೊಂದಾಣಿಕೆಗಳಿಗೆ ಅವಕಾಶವಿಲ್ಲ. ನಿಮ್ಮ ಮನಸ್ಸನ್ನು ಸಿದ್ಧಗೊಳಿಸಿದರೆ ಯಾವುದು ಅಸಾಧ್ಯವಲ್ಲ

4. ನನ್ನ ಹೆಸರು ಆಶಾ, ಚಿತ್ರದುರ್ಗ. ವಯಸ್ಸು 21. ನಾನು ಬಿ.ಇ. ನಾಲ್ಕನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಗರ್ಭಕೋಶದ ತೊಂದರೆ ಇದೆ. ನನಗೆ ಋತುಚಕ್ರ ಎಲ್ಲರಂತೆ ಆಗುವುದಿಲ್ಲ. ಹಾಗಾಗಿ ನಾನು ಮುಂದೆ ಓದು ಮುಂದುವರಿಸಬೇಕಾ? ಅಥವಾ ಯಾವುದಾದರೂ ಉದ್ಯೋಗ ಮಾಡಬೇಕಾ? ತಿಳಿಯುತ್ತಿಲ್ಲ. ನಾನು ಪಿಯುಸಿ ಮುಗಿಸಿದಾಗಿನಿಂದ ಅಪ್ಪ ನನಗೆ ಕೆಲಸಕ್ಕೆ ಅಪ್ಲಿಕೇಶನ್ ಹಾಕಲು ಹೇಳುತ್ತಿದ್ದರು. ಆದರೆ ನನಗೆ ಈ ಸಮಸ್ಯೆ ಇರುವುದರಿಂದ ನಾನು ಹಿಂದೇಟು ಹಾಕುತ್ತಿದ್ದೇನೆ. ನನಗೆ ಜೀವನ ಬೇಡ ಎನ್ನಿಸುತ್ತಿದೆ. ಈ ರೋಗ ಇಟ್ಟುಕೊಂಡು ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
ನೀವು ನನಗೆ ತಿಳಿಸಿದ ಆರೋಗ್ಯ ಸಮಸ್ಯೆ ನಿಮ್ಮ ಓದಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಈಗಲೂ ನೀವು ಓದು ಮುಂದುವರೆಸಿ. ಸೂಕ್ತ ಎನ್ನಿಸುವ ಕೆಲಸ ಹುಡುಕಿಕೊಳ್ಳಿ. ನಿಮಗಿರುವ ಆರೋಗ್ಯಸಮಸ್ಯೆಯ ಪರಿಹಾರಕ್ಕೆ ನೀವು ಒಬ್ಬ ಉತ್ತಮ ಸ್ತ್ರಿರೋಗತಜ್ಞೆಯನ್ನು ಭೇಟಿ ಮಾಡಿ. ಇಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳಿಗೆ ಒಳ್ಳೆಯ ಚಿಕಿತ್ಸೆಗಳು ಲಭ್ಯವಿದೆ. ಹಾಗಾಗಿ ತಲೆ ಕೆಡಿಸಕೊಳ್ಳಬೇಡಿ. ನಿಮ್ಮ ಓದಿನ ಮೇಲೆ ಗಮನ ನೀಡಿ. ನಿಮ್ಮ ಓದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ. ಒಳ್ಳೆಯ ಉದ್ಯೋಗ ಪಡೆದು, ಸುಂದರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT