ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ಗಟ್ಟಿಯಾಗಿದೆ ಭಾರತ– ಜಪಾನ್‌ ಸಂಬಂಧ

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರ ಭಾರತ ಭೇಟಿ ಎರಡೂ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಒಯ್ದಿದೆ. ವಿವಿಧ ಕ್ಷೇತ್ರಗಳಲ್ಲಿ ಸುಮಾರು 15 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಬಂಡವಾಳ ಹೂಡಿಕೆ ಮಾತ್ರವಲ್ಲದೆ ರಾಜತಾಂತ್ರಿಕ ದೃಷ್ಟಿಯಿಂದಲೂ ಈ ಭೇಟಿ ಮಹತ್ವ ಪಡೆದುಕೊಂಡಿದೆ. ನಮ್ಮ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ, ಹಗೆ ಸಾಧಿಸುತ್ತಿರುವ ಪಾಕಿಸ್ತಾನ ಮತ್ತು ಚೀನಾಕ್ಕೆ ತಿರುಗೇಟು ನೀಡುವ ಉದ್ದೇಶದ ಕೆಲ ಘೋಷಣೆ, ಹೆಜ್ಜೆಗಳನ್ನೂ ಇಲ್ಲಿ ಗುರುತಿಸಬಹುದು.

ಚೀನಾದ ಮಹತ್ವಾಕಾಂಕ್ಷಿ ‘ಒಂದು ವಲಯ ಒಂದು ರಸ್ತೆ’ ಯೋಜನೆಗೆ ಪ್ರತಿಯಾಗಿ ಭಾರತ– ಆಫ್ರಿಕಾ– ಪೆಸಿಫಿಕ್‌ ವಲಯದಲ್ಲಿ ಸಂಪರ್ಕ ಜಾಲ ರಚಿಸುವ ಪ್ರಧಾನಿ ಮೋದಿ ಮತ್ತು ಶಿಂಜೊ ಅವರ ನಿರ್ಧಾರ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರಭಾವ ಹೆಚ್ಚಿಸಲು ನೆರವಾಗಲಿದೆ. ಎರಡನೇ ವಿಶ್ವ ಯುದ್ಧದಲ್ಲಿ ಸೋತು ಸುಣ್ಣವಾದರೂ ಫೀನಿಕ್ಸ್‌ ಹಕ್ಕಿಯಂತೆ ಮೇಲೆದ್ದು ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿ ಎನಿಸಿಕೊಂಡಿರುವ ಜಪಾನ್‌ನ ಅನುಭವದ ಲಾಭ ನಮಗೂ ದೊರೆಯಲಿದೆ.

ಶಿಂಜೊ ಅವರ ಈ ಭೇಟಿ ಅಹಮದಾಬಾದ್‌– ಮುಂಬೈ ನಡುವಿನ ಅತಿವೇಗದ ಬುಲೆಟ್‌ ರೈಲು ಯೋಜನೆಯ ಕಾಮಗಾರಿಗೆ ಚಾಲನೆ ಕೊಟ್ಟಿದೆ. ಇದರ ಒಟ್ಟೂ ವೆಚ್ಚದ ಶೇ 81.5ರಷ್ಟು ಅಂದರೆ ₹ 88 ಸಾವಿರ ಕೋಟಿಯಷ್ಟು ಮೊತ್ತ ಕಡಿಮೆ ಬಡ್ಡಿದರದಲ್ಲಿ ಜಪಾನ್‌ನಿಂದ ಸಾಲದ ರೂಪದಲ್ಲಿ ದೊರೆಯಲಿದೆ. ಈ ಯೋಜನೆಗೆ ಕೇಂದ್ರ, ಗುಜರಾತ್‌ ಮತ್ತು ಮಹಾರಾಷ್ಟ್ರ ಸರ್ಕಾರಗಳು ವಿನಿಯೋಗಿಸುವ ಮೊತ್ತ ₹ 20 ಸಾವಿರ ಕೋಟಿ ಮಾತ್ರ. ‘ಈಗಿರುವ ರೈಲುಗಳ ಸೇವೆ ಮತ್ತು ಸುರಕ್ಷತೆಯೇ ಸಮಾಧಾನಕರವಾಗಿಲ್ಲ. ಹೀಗಿರುವಾಗ ಭಾರತದಂತಹ ದೇಶಕ್ಕೆ ದುಬಾರಿ ಬುಲೆಟ್‌ ರೈಲಿನ ಅಗತ್ಯವಿದೆಯೇ’ ಎಂಬ ಪ್ರಶ್ನೆಗಳನ್ನೂ ಕೆಲವರು ಕೇಳುತ್ತಿದ್ದಾರೆ. ಆದರೆ ವೇಗಕ್ಕೂ ಪ್ರಗತಿಗೂ ಸಂಬಂಧ ಇದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಜಟಕಾ ಗಾಡಿಗಳಂತೆ ಓಡುತ್ತಿದ್ದ ಪ್ಯಾಸೆಂಜರ್‌ ರೈಲುಗಳ ಕಾಲ ಹೋಗಿ ರಾಜಧಾನಿ, ಶತಾಬ್ದಿಯಂತಹ ಅಧಿಕ ವೇಗದ ರೈಲುಗಳ ಕಾಲದಲ್ಲಿ ನಾವಿದ್ದೇವೆ. ಸಂಚಾರ ಸಮಯದ ಉಳಿತಾಯವು ನಮ್ಮ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ಜಪಾನ್‌ನ ಉದಾಹರಣೆಯನ್ನೇ ನೋಡುವುದಾದರೆ, 1964ರಲ್ಲಿ ಆರಂಭವಾದ ಶಿಂಖಾನ್ಸೆನ್‌ (ಬುಲೆಟ್‌ ರೈಲು) ಓಡಾಟ ಆ ದೇಶವನ್ನು ಮುಂದುವರಿದ ರಾಷ್ಟ್ರಗಳಿಗೆ ಸರಿಸಾಟಿಯಾಗಿ ತಂದು ನಿಲ್ಲಿಸುವಲ್ಲಿ ದೊಡ್ಡ ಕೊಡುಗೆ ನೀಡಿದೆ. ನಮಗೂ ಅಂತಹುದೇ ಪ್ರಯೋಜನ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದೇನೂ ತಪ್ಪಲ್ಲ.

ಇನ್ನು, ಪಾಕಿಸ್ತಾನದ ನೆಲದಲ್ಲಿ ಎಲ್ಲ ರೀತಿಯ ನೆರವು ಪಡೆದು ನಮ್ಮ ದೇಶದೊಳಕ್ಕೆ ನುಗ್ಗಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವ ಲಷ್ಕರ್‌–ಎ–ತಯಬಾ ಮತ್ತು ಜೈಷ್‌–ಎ–ಮೊಹಮ್ಮದ್‌ನಂತಹ ಸಂಘಟನೆಗಳನ್ನು ಮಟ್ಟ ಹಾಕುವ ಅಗತ್ಯವಿದೆ ಎನ್ನುವುದು ಜಪಾನ್‌ಗೂ ಮನವರಿಕೆ ಆಗಿದೆ. ಭಯೋತ್ಪಾದನೆ ತಡೆ ವಿಚಾರದಲ್ಲಿ ರಾಜಿ ಇಲ್ಲ, ಭಯೋತ್ಪಾದಕರ ಸುರಕ್ಷಿತ ತಾಣಗಳು ಮತ್ತು ಮೂಲ ಸೌಕರ್ಯಗಳನ್ನು ನಾಶಪಡಿಸಬೇಕು, ಈ ವಿಷಯದಲ್ಲಿ ಎಲ್ಲ ದೇಶಗಳು ನೆರವಾಗಬೇಕು ಎನ್ನುವ ಅದರ ನಿಲುವು ನಮ್ಮ ಪಾಲಿಗೆ ದೊಡ್ಡ ರಾಜತಾಂತ್ರಿಕ ಜಯ.

ಇತ್ತೀಚೆಗೆ ಚೀನಾದಲ್ಲಿ ನಡೆದ ಬ್ರಿಕ್ಸ್‌ ಸಮಾವೇಶದಲ್ಲಿಯೂ ಪಾಕಿಸ್ತಾನದ ಮೇಲೆ ಇಂತಹುದೇ ಒತ್ತಡ ಹೇರಲಾಗಿತ್ತು. ತನ್ನ ಆಪ್ತ ದೇಶವಾದ ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳಲು ಆ ಸಭೆಯಲ್ಲಿ ಚೀನಾಗೂ ಕಷ್ಟವಾಗಿತ್ತು. ಇಡೀ ಏಷ್ಯಾ ವಲಯದಲ್ಲಿ ಮೇಲುಗೈಗೆ ಚೀನಾ ನಡೆಸುತ್ತಿರುವ ಪ್ರಯತ್ನ ಮತ್ತು ಅದರಿಂದ ಆಗಬಹುದಾದ ಅಪಾಯಗಳನ್ನು ಭಾರತ– ಜಪಾನ್‌ಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ. ಜಪಾನ್‌ ಕೂಡ ಚೀನಾದಿಂದ ಕೀಟಲೆ ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಭಾರತದ ಬೆಂಬಲ ಜಪಾನ್‌ಗೆ ಅನಿವಾರ್ಯ. ಎರಡೂ ದೇಶಗಳ ನಡುವಿನ ದೃಢ ಸಂಬಂಧ, ಆರ್ಥಿಕ ಮತ್ತು ಸೇನಾ ಶಕ್ತಿಗಳ ಮೂಲಕ ಚೀನಾದ ಓಟಕ್ಕೆ ತಡೆ ಹಾಕಲು ಸಾಧ್ಯವಿದೆ. ಚೀನಾದ ಪಾಳೇಗಾರಿಕೆ ಧೋರಣೆಗೆ ಪ್ರತಿಯೇಟು, ಏಷ್ಯಾದಲ್ಲಿ ಸ್ಥಿರತೆ ಸ್ಥಾಪನೆ ಮತ್ತು ಸಣ್ಣ ದೇಶಗಳ ಸಾರ್ವಭೌಮತ್ವ ರಕ್ಷಣೆ ವಿಚಾರದಲ್ಲಿ ಭಾರತ– ಜಪಾನ್‌ ನಿರ್ಣಾಯಕ ಪಾತ್ರ ನಿರ್ವಹಿಸಬಲ್ಲವು. ಶಿಂಜೊ– ಮೋದಿ ಮಾತುಕತೆ ಆ ಪಾತ್ರವನ್ನು ನೆನಪು ಮಾಡಿಕೊಟ್ಟಿದೆ ಮತ್ತು ಗಟ್ಟಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT